ಬುಧವಾರ, ಜುಲೈ 8, 2020

ಭರವಸೆ

(ಉದಯವಾಣಿ 2020ರ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ)

"ನಾನು ಬದುಕುತ್ತೇನಾ ಡಾಕ್ಟ್ರೇ? ನನ್ನ ಮೊಮ್ಮಗುವಿನ ಮುಖ ನೋಡುತ್ತೇನಾ ಡಾಕ್ಟ್ರೇ?"

ಜಗತ್ತಿನ ದೈನ್ಯತೆಯೆಲ್ಲಾ ಮಾತಾಗಿ ಹರಿಯುತ್ತಿರುವಂತೆ ಅವಳು ಕೇಳಿದಳು.

"ಹೆದರಬೇಡಿ. ಒಂದಲ್ಲ, ಮೂರು ಮೊಮ್ಮಕ್ಕಳನ್ನು ನೋಡವಷ್ಟು ಗಟ್ಟಿಯಿದೆ ನಿಮ್ಮ ಆಯಸ್ಸು. ಅದಕ್ಕೆ ನಾನೇ ಗ್ಯಾರಂಟಿ!"

ಅವಳ ಮುಖದಲ್ಲಿ ಧೈರ್ಯದ ಗೆರೆಯೊಂದು ಮೂಡುವ ತನಕ ಸಮಾಧಾನ ಹೇಳಿದ ಡಾಕ್ಟರು ತಮ್ಮ ಕ್ಯಾಬಿನ್ ಗೆ ಹೋಗಿ ರಿಪೋರ್ಟೊಂದನ್ನು ಹಿಡಿದು ಮನೆಗೆ ಹೊರಟರು. ಕೆಲವೇ ದಿನಗಳ ಕೆಳಗೆ ತಮ್ಮದೇ ಅನಾರೋಗ್ಯವನ್ನು ತಪಾಸಣೆ ಮಾಡಿಸಿ ಪಡೆದ ಅದರಲ್ಲಿನ ಸಾರಾಂಶ ಸ್ಪಷ್ಟವಾಗಿತ್ತು:

ನಾಲ್ಕನೇ ಹಂತದ ಕ್ಯಾನ್ಸರ್ ತಲುಪಿರುವ ಈ ರೋಗಿಯಿನ್ನು ಹೆಚ್ಚೆಂದರೆ ಆರು ತಿಂಗಳು ಬದುಕಬಹುದು.

ಆಸೆಯೆಂಬ ತಳ ಒಡೆದ ದೋಣಿಯಲಿ...


ದಾಗೆ ನದಾ ತಿರಕಿಟ ದಾಗೆ ನದಾ ತಿರಕಿಟ...

ಆ ನವಿರು ನಾದ ನೇರ ತನ್ನ ಭವಿತವ್ಯದ ಪುಟಗಳಿಂದಲೇ ತೇಲಿ ಬರುತ್ತಿರುವಂತೆ ವಿಶಿಷ್ಠ ಭಾವೋನ್ಮಾದದಲ್ಲವಳು ತಬಲ ವಾದನದಲ್ಲಿ ತಲ್ಲೀನಳಾಗಿದ್ದಳು.

"ಗಂಡಿನ ಕಡೆಯವರಿಗೆ ನೀನು ಒಪ್ಪಿಗೆಯಾಗಿದ್ದೀಯಂತೆ!"

ಹಾಗೆನ್ನುತ್ತಾ ಅಮ್ಮ ಕೋಣೆಯ ಹೊಸ್ತಿಲಿನಲ್ಲಿ ಕಾಣಿಸಿಕೊಂಡಳು.

ತಬಲದ ಮೇಲಿನ ಕೈ ಮೆಲ್ಲನೆ ಸ್ತಬ್ಧವಾಯಿತು.

"ಇನ್ನಾದರೂ ಆ ಹಾಳಾದ್ದನ್ನು ಬಡಿಯೋದನ್ನ ನಿಲ್ಲಿಸಿ ಅಡುಗೆ ಮನೆಗೆ ಹೋಗಲಿಕ್ಕೆ ಹೇಳು ಅವಳಿಗೆ. ಅವರದು ಸಂಪ್ರದಾಯಸ್ಥ ಕುಟುಂಬ. ಕಟ್ಟುಕಟ್ಟಳೆ ಜಾಸ್ತಿ. ಅವರು ಒಪ್ಪಿರೋದು ಇವಳನ್ನ ಮಾತ್ರ. ಇವಳ ಈ ಹುಚ್ಚುಗಳನ್ನಲ್ಲ"

ಅಪ್ಪ ಜಗುಲಿಯಿಂದಲೇ ಭುಸುಗುಟ್ಟಿದ, ಚಿಕ್ಕವಳಿದ್ದಾಗ ಏನನ್ನಾದರೂ ಕುತೂಹಲಕ್ಕೆಂದು ಮುಟ್ಟಲು ಹೋದಾಗ ಕಿರುಚುತ್ತಿದ್ದನಲ್ಲಾ, ಥೇಟ್ ಹಾಗೇ.

"ನಾನು ಮಾತ್ರ ಬೇಕು, ನನ್ನ ಭಾವನೆಗಳು ಬೇಡ ಎನ್ನುವವರನ್ನು ನಾನೇಕೆ ಒಪ್ಪಬೇಕು?"

ಹಠದಿಂದೆಂಬಂತೆ ಕೇಳಿದರೂ ಅದು ಸರಿಯಾದ ಪ್ರೆಶ್ನೆಯೇ ಅನ್ನಿಸಿತವಳಿಗೆ.

"ಹೀಗೆ ಮೊಂಡು ಮಾಡಿದ್ದಕ್ಕೇ ವಯಸ್ಸು ಮೊವ್ವತ್ತಾದರೂ ಮದುವೆಯಾಗದೇ ಕೂತಿರೋದು. ನಿನ್ನ ಅಕ್ಕಂದಿರಿಬ್ಬರೂ ತೋರಿಸಿದವರನ್ನ ಮದುವೆಯಾಗಿಲ್ವಾ? ಅವರೀಗ ಬದುಕಿಕೊಂಡಿಲ್ವಾ?"

"ಬರಿದೆ ಉಸಿರಾಡಿಕೊಂಡಿದ್ದರೆ ಅದನ್ನು ಬದುಕು ಎನ್ನಲಾಗುವುದಿಲ್ಲ"

ಅಷ್ಟಂದವಳು ಅಪ್ಪನ ಮುಂದಿನ ಮಾತು ತನ್ನನ್ನಿರಿಯುವ ಮುನ್ನವೇ ಹೊರನಡೆದಳು.

"ಏನಮ್ಮಾ, ಮೊನ್ನೆ ಗಂಡು ಬಂದಿದ್ದನಲ್ಲಾ, ಏನಾಯ್ತದು?"

ಕಸ ಎಸೆಯಲು ಹೊರ ಬಂದಿದ್ದ ಸೀತಕ್ಕ ಕೇಳಿದರು.

"ಗಂಡಿಗೆ ಕೊಂಚ ವಯಸ್ಸಾದಂತಿದೆ. ಕಟ್ಟುನಿಟ್ಟಿನ ಕುಟುಂಬವಂತೆ. ನೀನೇ ಸ್ವಲ್ಪ ಹೊಂದಿಕೊಳ್ಳಬೇಕು. ಇದನ್ನಾದರೂ ಒಪ್ಪು. ಇನ್ನು ಮುಂದೆ ಇಂಥಾದ್ದೂ ಸಿಗೋದಿಲ್ಲ ಅಷ್ಟೇ"

ಕಸದಷ್ಟೇ ಸುಲಭದಲ್ಲಿ ಕಿವಿಮಾತನ್ನೂ ಎಸೆದು ಹೊರಟುಹೋದರು ಸೀತಕ್ಕ.

ಯಾಕೆ ತನಗೆ ಸಿಕ್ಕಿದ್ದನ್ನೊಪ್ಪುವಂಥಹಾ ಅನಿವಾರ್ಯ ಸೃಷ್ಟಿಯಾಯಿತು?

"ಅದನ್ನು ಸೃಷ್ಟಿಸಿದವನೇ ನಿನ್ನಪ್ಪ. ಮೊದಲೇ ಗಂಡು ನೋಡಬಹುದಿತ್ತು. ಆದರೆ ದುಡಿಯುತ್ತಿರುವವಳಿಗೆ ಮದುವೆ ಮಾಡಿದರೆ ತಾನು ಕೆಲಸಕ್ಕೆ ಹೋಗಬೇಕಾಗುತ್ತದೆಂದು ಸುಮ್ಮನಿದ್ದ. ಈಗ ಮಗ ದುಡಿಯಲಾರಂಭಿಸಿರುವಾಗ ಇದ್ದಕ್ಕಿದಂತೆಯೇ ನೀನು ಆದಷ್ಟು ಬೇಗ ಕಳೆದುಕೊಳ್ಳಬೇಕಾದ ಹೊರೆಯಂತೆ ಕಾಣುತ್ತಿದ್ದೀಯ"

ಹಾಗೆಂದ ಅಕ್ಕರೆಯ ಚಿಕ್ಕಪ್ಪನ ಮಾತು ನಿಜವೇ ಆಗಿತ್ತು. ಮೂರನೇ ಹೆಣ್ಣುಮಗಳಾದ ತಾನು ಹುಟ್ಟಿದ ದಿನವೇ ಅಪ್ಪ ಕುಪಿತನಾಗಿ ತಂಗಿಯ ಮನೆಗೆ ಹೋಗಿ ಕುಳಿತಿದ್ದನಂತೆ. ಆಮೇಲಾದರೂ ಮಕ್ಕಳ ಪೈಕಿ ಯಾರೇ ತಂಟೆ ಮಾಡಿದರೂ ಅವನ ಬಾರುಕೋಲು ಎರಗುತ್ತಿದ್ದುದು ತನ್ನ ಮೇಲೇ. ತಾನು ದುಡಿದು ಮನೆಗೊಂದಿಷ್ಟು ಕೊಡಲಾರಂಭಿಸಿದ ಮೇಲಾದರೂ ಅದು ಬದಲಾಗಿರಲಿಲ್ಲ.

ಯೋಚಿಸುತ್ತಾ ನಡೆಯುತ್ತಿದ್ದವಳು ಪಕ್ಕದ ರಂಗಮಂದಿರದಲ್ಲಿನ ಸಂಗೀತಲಹರಿ ಕೇಳಿ ಗಕ್ಕನೆ ನಿಂತಳು. ಹಿನ್ನಲೆಯಲ್ಲಿ ಕೇಳಿಬರುತ್ತಿರುವ ತಬಲದ ತಾಳವನ್ನು ಗುರುತಿಸಲು ಪ್ರಯತ್ನಿಸಿದಳು.

"ಸಂಗೀತಲಹರಿಯಲ್ಲಿ ಬಾರಿಸುವಷ್ಟು ತಬಲ ಕಲಿತರೆ ಸಾಕು ನಾನು"

ಅಪ್ಪನ ಭಾರೀ ವಿರೋಧದ ನಡುವೆಯೂ ಚಿಕ್ಕಪ್ಪನ ಬೆಂಬಲದೊಂದಿಗೆ ಅಂದು ತಬಲದ ತರಗತಿಗೆ ಹೋಗಿ ನಿಂತವಳು ಗುರುಗಳೆದುರು ಮುಗ್ಧವಾಗಿ ನುಡಿದಿದ್ದಳು.

"ನಿನಗಿರುವ ಆಸಕ್ತಿಗೆ ಬರೀ ಭಜನೆಗೆ ಮಾತ್ರವಲ್ಲ, ಊರಿನ ವಾರ್ಷಿಕೋತ್ಸವದಲ್ಲೇ ತಬಲ ಬಾರಿಸುತ್ತೀಯ"

ಗುರುಗಳು ಮೆಚ್ಚುಗೆಯ ಮಾತಂದಾಗ ಹಿಂದಲೆಯನ್ನು ಪ್ರೀತಿಯಿಂದ ಸವರಿದ್ದ ಚಿಕ್ಕಪ್ಪ. ಇಡೀ ಕುಟುಂಬದಲ್ಲಿ ತನ್ನನ್ನು ಹೆಣ್ಣುಮಗಳಾಗಿ ಅಲ್ಲದೇ ಕೇವಲ ಮಗುವಾಗಿ ನೋಡುವ ಏಕೈಕ ಬಂಧು ಆತ. ಅದೇಕೋ ಅವನೊಂದಿಗೆ ಮಾತನಾಡಬೇಕೆನ್ನಿಸಿ ಫೋನು ಆಚೆ ತೆಗೆಯಬೇಕೆನ್ನುವಷ್ಟರಲ್ಲಿ ಅದು ತಾನಾಗಿಯೇ ರಿಂಗಣಿಸತೊಡಗಿತು. ನೋಡಿದರೆ ಸ್ಕ್ರೀನಿನಲ್ಲಿ ಚಿಕ್ಕನದೇ ಹೆಸರು!

"ನೋಡು ಚಿಕ್ಕಾ, ಅಪ್ಪ ಹೇಗೆ ಮಾತಾಡ್ತಾನೆ ಅಂತ. ನನ್ನ ಭಾವನೆಗಳಿಗೆ, ಹವ್ಯಾಸಗಳಿಗೆ ಬೆಲೆ ಕೊಡದ ಯಾರಿಗೋ ನನ್ನನ್ನ ಮದುವೆಮಾಡಿಕೊಡ್ತೀನಿ ಅಂತಿದ್ದಾನೆ"

ನೊಂದ ಮಗುವೊಂದು ಅಪ್ಪನ ಬಳಿ ಅಹವಾಲು ಹೇಳುವಂತೆ ಹೇಳಿದವಳ ಕಣ್ಣಲ್ಲಿ ಮಗುವಿನ ಕಣ್ಣಿನಲ್ಲಿರುವಷ್ಟೇ ಮುಗ್ಧವಾದ ಹನಿಯಿತ್ತು.

"ಬದುಕಿನಲ್ಲಿ ಆಯ್ಕೆಯ ಸ್ವತಂತ್ರ ಸದಾ ನಮ್ಮದೇ ಆಗಿರುವುದಿಲ್ಲ ಕುಸುಮಾ..."

ಚಿಕ್ಕನ ಮಾತು ಹಿಂದೆಂದಿಗಿಂತ ಗಂಭೀರವಾಗಿತ್ತು.

"ಅಪ್ಪನ ಮಾತು ಸರಿಯಾಗಿದೆ. ಪರಿಸ್ಥಿತಿ ಬದಲಾಗಿದೆ. ನೀನಾಗಿ ಆಯ್ಕೆ ಮಾಡಿಕೊಳ್ಳುವ ವಯಸ್ಸು ದಾಟಿಯಾಗಿದೆ. ಇದೊಂದು ಬಾರಿ ಹಠಮಾಡದೆ...."

ಆ ಕೊನೆಯ ಮಾತು ಕೇಳಿಸಲೇ ಇಲ್ಲ. ಬದಲಿಗೆ ರಂಗಮಂದಿರದಲ್ಲಿ ಹಾಡುತ್ತಿದ್ದ ಹಾಡಿನ ಸಾಲೊಂದು ಅದೇ ಮಾತಿನ ಇನ್ನೊಂದು ರೂಪದಂತೆ ತೇಲಿಬಂತು:

"ಆಸೆಯೆಂಬ ತಳ ಒಡೆದ ದೋಣಿಯಲಿ
ದೂರ ತೀರ ಯಾನ..
ಯಾರ ಲೀಲೆಗೋ ಯಾರೋ ಏನೋ
ಗುರಿಯಿರದೆ ಬಿಟ್ಟ ಬಾಣ..."

(ವಿಜಯ ಕರ್ನಾಟಕದ ಲವಲವಿಕೆ ಸಾಪ್ತಾಹಿಕದಲ್ಲಿ ಪ್ರಕಟಿತ)

ಬ್ಯಾಚುಲರ್ ಆಫ್ ಕೊರೋನಾ


ದೂರದ ಚೀನಾದಲ್ಲೆಲ್ಲೋ ಹುಟ್ಟಿದೆಯಂತೆ ಎಂಬ ಸುದ್ದಿ ಕಿವಿಯಿಂದ ತೂರಿ ಮೆದುಳನ್ನು ತಲುಪುವುದರೊಳಗೇ ಕೊರೋನಾ ಅದ್ಯಾವುದೋ ಫ್ಲೈಟಿನಿಂದಿಳಿದು ಇಡೀ ಬೆಂಗಳೂರಿನ ತುಂಬಾ ಓಡಾಡುತ್ತಿದೆ. ಪರಿಣಾಮವಾಗಿ ಜಪ್ಪಯ್ಯ ಎಂದರೂ ರಜೆ ನೀಡದ ಕಠಿಣ ಮ್ಯಾನೇಜ್ಮೆಂಟಿನವರೂ ಮುಖಕ್ಕೊಂದು ಮಾಸ್ಕ್ ಧರಿಸಿಕೊಂಡು ಬಂದು ತುರ್ತು ಮೀಟಿಂಗ್ ನಡೆಸಿ, ಒಂದು ವಾರ 'ವರ್ಕ್ ಫ್ರಂ ಹೋಂ' ಮಾಡಿರೆಂದು ಘೋಷಿಸಿ, ಎರೆಡೆರಡು ಬಾರಿ ಕೈತೊಳೆದುಕೊಂಡು ಹೋಗಿಯೇಬಿಟ್ಟರು.

ಯಾವ ವಿಮಾನದ ಸಮೀಪಕ್ಕೂ ಹೋಗದ, ಕೆಮ್ಮು-ಸೀನುಗಳನ್ನೂ ತಾಕಿಸಿಕೊಳ್ಳದ ನನ್ನ ಬಾಳಲ್ಲಿ ನಿಜವಾದ ಕೊರೋನಾ ಅಟ್ಟಹಾಸ ಶುರುವಾಗಿದ್ದೇ ಆಗ. ರಜೆ ಘೋಷಣೆಯಾದ ಸಂಜೆಯೇ ಹೋಟೆಲ್ ಗೆ ನುಗ್ಗಿದವನು ಸಣ್ಣ ಪಾರ್ಟಿಯ ಮಾದರಿಯಲ್ಲೊಂದಷ್ಟು ತಿಂದು, ನೆತ್ತಿಗೆ ಸಿಲುಕಿ, ಕೋಲ್ಡ್ ವಾಟರ್ ಕುಡಿದುಬಿಟ್ಟೆ. ತಣ್ಣೀರೆಂಬುದು ಕೊರೋನಾ ಕಣ್ತೆರೆಯುವ ಮೊದಲಿನಿಂದಲೇ ಕೆಮ್ಮಿಗೆ ತಾಯಿ. ಇನ್ನು ಇಡೀ ಪ್ರಪಂಚವೇ ಕೆಮ್ಮುತ್ತಿರುವ ಹೊತ್ತಿನಲ್ಲಿ ಅದು ಸುಮ್ಮನ್ನಿದ್ದೀತೇ? ಕುಡಿದು ಕೆಳಗಿಟ್ಟು ಬಿಲ್ ಪಾವತಿಸುವುದರೊಳಗೆ ಕೆಮ್ಮು ಪ್ರತ್ಯಕ್ಷವಾಯಿತು. ಮರುದಿನ ಬೆಳಗ್ಗೆ ಖೊಕ್ ಖೊಕ್ ಎನ್ನುತ್ತಾ ಎದ್ದವನಿಗೆ ನಮ್ಮ ಏರಿಯಾದಲ್ಲೇ ಕೊರೋನಾ ಸೋಂಕಿತನೊಬ್ಬ ಪತ್ತೆಯಾಗಿದ್ದಾನೆಂಬ ಆಘಾತಕಾರಿ ಸುದ್ದಿ ತಿಳಿಯಿತು. ಹೊರಗೆಲ್ಲೂ ತಿನ್ನಬಾರದು, ಕುರುಕಲು ತಿಂಡಿಗಳದಂತೂ ಹೆಸರೂ ಹೇಳಬಾರದು, ಥಂಡಿ ಪಾನೀಯಗಳಿಂದ ಕನಿಷ್ಟ ಒಂದು ಮೈಲಿ ದೂರವನ್ನಾದರೂ ಕಾಯ್ದುಕೊಳ್ಳಬೇಕು ಎಂಬೆಲ್ಲ ಕಟ್ಟಾಜ್ಞೆಗಳನ್ನು ಅಮ್ಮ ಫೋನಿನಲ್ಲೇ ಹೊರಡಿಸಿದಳು. ಅಲ್ಲಿಗೆ ನನ್ನ ಮುಂದಿನ ಒಂದು ವಾರ ವನವಾಸ-ಅಜ್ಞಾತವಾಸಗಳೆರೆಡರ ಭೀಕರ ಮಿಶ್ರಣದಂತಿರುತ್ತದೆಂಬುದು ನನಗೆ ಅರ್ಥವಾಗಿಹೋಯಿತು. ಸಾಲದ್ದಕ್ಕೆ ಆಫೀಸಿಗೆ ಕರೆ ಮಾಡಿದರೆ ಆಕಳಿಸುತ್ತಾ ಫೋನೆತ್ತಿಕೊಂಡ ಆಫೀಸ್ ಬಾಯ್ "ನಮ್ಮ ಏರಿಯಾದಲ್ಲಿ ಜೋರಾಗಿ ಕೆಮ್ಮುತ್ತಿದ್ದ ಮೂವರನ್ನು ಕಾರ್ಪೋರೇಷನ್ ಗಾಡಿಯಲ್ಲಿ ತುಂಬಿಕೊಂಡು ಹೋದ್ರು ಸಾ. ನೀವೂ ಜಾಸ್ತಿ ಕೆಮ್ಬೇಡಿ ಸಾ" ಎಂದುಬಿಟ್ಟ. ಸತ್ಯವೂ ಆಗಿರಬಹುದಾದ ಆ ಸಂಗತಿಯನ್ನು ಕೇಳಿ ಫೋನಿಟ್ಟ ನನಗೆ ಇಲ್ಲೇ ಎಲ್ಲೋ ಕಾರ್ಪೋರೇಷನ್ ಗಾಡಿಯ ಸದ್ದು ಕೇಳಿದಂತಾಗಿ ಕೆಮ್ಮು ಉಬ್ಬರಿಸಿ ಬಂತು.

ಸರಿ, ಈಗ ತಿಂಡಿಯ ಶಾಸ್ತ್ರವಾಗಬೇಕಲ್ಲ? ಅಮ್ಮನಂತೂ ಹೋಟಲ್ ಗಳನ್ನು ಕೊರೋನಾ ಗೆಸ್ಟ್ ಹೌಸ್ ಮಾಡಿಕೊಂಡಿದೆಯೆಂಬಂತೆ ಹೆದರಿಸಿದ್ದಳು. ಅಡುಗೆ ಸೌಟನ್ನು ಬಾಹ್ಯಗ್ರಹದ ಏಲಿಯನ್ ನ ಅಸ್ತ್ರದಂತೆ ನೋಡುತ್ತಿದ್ದ ನನಗೆ ಗೊತ್ತಿದ್ದುದು ಉಪ್ಪಿಟ್ಟು, ಚಿತ್ರಾನ್ನಗಳು ಮಾತ್ರ. ಅದನ್ನೇ ಮಾಡೋಣವೆಂದು ಮುಖಕ್ಕೊಂದು ಕರ್ಚೀಫು ಸುತ್ತಿಕೊಂಡು ಸಮೀಪದ ಅಂಗಡಿಗೆ ಹೊರಟೆ. ಕೆಮ್ಮನ್ನು ಆದಷ್ಟೂ ಗಂಟಲಿನಲ್ಲೇ ತಡೆಹಿಡಿದು ಉಪ್ಪಿಟ್ಟು ಮಿಕ್ಸ್ ಕೊಡುವಂತೆ ಅಂಗಡಿಯಾತನಿಗೆ ಕೇಳಿದೆ. ಆದರೆ ಬಹಳ ಗಿರಾಕಿಗಳಿದ್ದರಿಂದ ಅಂಗಡಿಯಾತ ನನ್ನತ್ತ ಅಷ್ಟು ಬೇಗನೆ ತಿರುಗಲೇ ಇಲ್ಲ. ಗಂಟಲಿನಲ್ಲೇ ಒತ್ತಿ ಹಿಡಿದಿದ್ದ ಕೆಮ್ಮಾಗಲೇ ಸುನಾಮಿಯ ರೂಪ ತಾಳಿತ್ತು. ಇನ್ನೂ ತಡವಾದರೆ ಕಷ್ಟವೆಂದು "ಬೇಗ ಕೊಡಿ" ಎಂದು ಕೇಳಲು ಬಾಯಿತೆರೆದದ್ದೇ ತಡ, ತಡೆಹಿಡಿದಿದ್ದ ಕೆಮ್ಮು ಖೊಕ್ ಖೊಕ್ ಎಂಬ ಭೀಕರ ಸದ್ದಿನೊಂದಿಗೆ ಹೊರಬಂದೇ ಬಿಟ್ಟಿತು‌. ಅಷ್ಟೇ! ಸುತ್ತ ನಿಂತವರೆಲ್ಲಾ ಹುಲಿಯ ಘರ್ಜನೆಯನ್ನು ಕೇಳಿದಂತೆ ಕಂಗಾಲಾಗಿ ನನ್ನತ್ತ ನೋಡತೊಡಗಿದರು. ಅಂಗಡಿಯವನಂತೂ ಸಾಕ್ಷಾತ್ ಕೊರೋನಾ ವೈರಸ್ಸೇ ಐದಡಿ ಎತ್ತರಕ್ಕೆ ಬೆಳೆದು ಎದುರು ನಿಂತಿರುವಂತೆ ಬೆಚ್ಚಿಬಿದ್ದು ಉಪ್ಪಿಟ್ಟು ಮಿಕ್ಸ್ ನ ಪ್ಯಾಕೇಟಿನೊಂದಿಗೆ ಓಡೋಡಿಬಂದ. ಇನ್ನೊಂದು ಕೆಮ್ಮು ಕೆಮ್ಮಿದರೂ ಇವರೆಲ್ಲಾ ಸೇರಿ ನನ್ನನ್ನು ಮುನ್ಸಿಪಾಲಿಟಿಯ ಗಾಡಿಗೆ ಹತ್ತಿಸುವುದು ಗ್ಯಾರಂಟಿಯೆಂದು ಹೆದರಿ ರೂಮಿನತ್ತ ಓಟಕಿತ್ತೆ.

ಒಲೆಯ ಮೇಲೆ ಮುಚ್ಚಿಟ್ಟ ಬಾಂಡ್ಲಿಯೊಳಗೆ ಉಪ್ಪಿಟ್ಟು ತಕತಕ ಬೇಯುತ್ತಾ ಸಿದ್ಧವಾಯಿತು. ತಟ್ಟೆಗೆ ಬಡಿಸಿಕೊಳ್ಳಲೆಂದು ಸೌಟು ಹಾಕಿ ನೋಡಿದರೆ ಉಪ್ಪಿಟ್ಟು ಎದುರುಗಡೆ ರಸ್ತೆಯಲ್ಲಿ ಮನೆಕಟ್ಟಲು ಕಲಸುತ್ತಿರುವ ಕಾಂಕ್ರೀಟಿನಂತೆ ಗಟ್ಟಿಗಟ್ಟಿ! ಕೊರೋನಾಗೆ ವ್ಯಾಕ್ಸಿನ್ನಾದರೂ ಸಿಗಬಹುದು, ಆದರೆ 'ಒಂದು ಲೋಟ ರವೆಗೆ ಎಷ್ಟು ನೀರು ಹಾಕಬೇಕು?' ಎಂಬ ಬ್ಯಾಚುಲರ್ ಜೀವನದ ಮಿಲಿಯನ್ ಡಾಲರ್ ಪ್ರೆಶ್ನೆಗೆ ಉತ್ತರ ದೊರಕಲಾರದೇನೋ ಎಂದುಕೊಳ್ಳುತ್ತಲೇ ಉಪ್ಪಿಟ್ಟನ್ನು ಬಾಯಿಗಿಟ್ಟುಕೊಂಡೆ. ಮೊದಲೇ ಕಿಚಕಿಚ ಎನ್ನುತ್ತಿದ್ದ ಗಂಟಲು ಕಾಂಕ್ರೀಟಿನಂತಹಾ ಉಪ್ಪಿಟ್ಟು ತನ್ನ ಮೂಲಕ ಹಾದುಹೋಗುವಾಗ ಖೊಕ್ ಖೊಕ್ ಎಂದು ಪ್ರತಿಭಟಿಸತೊಡಗಿತು.

ಹೀಗೆ ಬೆಳಗಿನ ತಿಂಡಿಯಲ್ಲಿ ಅಮೋಘವಾಗಿ ಹೋದ ಮರ್ಯಾದೆಯನ್ನು ಮಧ್ಯಾಹ್ನದೂಟದಲ್ಲಿ ಚಿತ್ರಾನ್ನ ಮಾಡುವ ಮೂಲಕ ಮರಳಿ ಗಳಿಸಬೇಕೆಂದು ದೃಢನಿರ್ಧಾರ ಮಾಡಿದೆ. ಒಂದು ಕೈಯಲ್ಲಿ ಬೋಂಡಾ ಕರಿಯುತ್ತಾ ಇನ್ನೊಂದು ಕೈಯಲ್ಲಿ ಚಪಾತಿ ಹಿಟ್ಟಿನ ಕತ್ತು ಹಿಸುಕುವ ನಮ್ಮೂರಿನ ನುರಿತ ಅಡುಗೆ ಭಟ್ಟರೊಬ್ಬರನ್ನು ಮನಸ್ಸಿನಲ್ಲೇ ನೆನೆಯುತ್ತಾ ಒಗ್ಗರಣೆ ಬಾಂಡಲಿಯನ್ನು ಒಲೆಯ ಮೇಲಿಟ್ಟೆ. ಅದ್ಯಾವ ಜನ್ಮದ ಸಿಟ್ಟಿತ್ತೋ ಏನೋ, ನಾನು ಒಂದೊಂದೇ ಪದಾರ್ಥವನ್ನು ಹಾಕಿದಾಗಲೂ ಬಾಂಡಲಿ ಫಿರಂಗಿಯಂತೆ ಢಮಾರೆಂದು ಸಿಡಿಯುತ್ತಾ ಬಿಸಿಯೆಣ್ಣೆಯಲ್ಲಿ ಬೆಂದ ಸಾಸಿವೆ ಕಾಳುಗಳನ್ನು ನನ್ನತ್ತ ಉಗುಳುತ್ತಿತ್ತು. ಅದರಿಂದ ಪಾರಾಗುತ್ತಾ ಅಂತೂಇಂತೂ ಒಗ್ಗರಣೆ ಮುಗಿಸಿ ಅಕ್ಕಿ ತೊಳೆಯಲೆಂದು ನೋಡಿದರೆ ನೀರು ಇಷ್ಟೇ ಇಷ್ಟಿದೆ! ಸರಿ, ಹೆಂಡತಿ ಗಂಡನಿಗೆ ಅಡ್ಜಸ್ಟ್ ಆಗದಿದ್ದರೆ ಗಂಡನೇ ಹೆಂಡತಿಗೆ ಹೊಂದಿಕೊಳ್ಳಬೇಕು ತಾನೇ? ಅಂತೆಯೇ ನೀರಿಗೆ ತಕ್ಕಷ್ಟು ಅಕ್ಕಿಯಿಟ್ಟು ಅಂತೂಇಂತೂ (ವಿ)ಚಿತ್ರಾನ್ನವೊಂದು ತಯಾರಾಯಿತು. ಆ ಕಡೆಯಿಂದ ಉಪ್ಪಿಟ್ಟಿನಂತೆ, ಈ ಕಡೆಯಿಂದ ಬಿಸಿಬೇಳೆ ಬಾತಿನಂತೆ ಕಾಣುತ್ತಿದ್ದ ಅದನ್ನು ನೋಡಿದಾಗ ಬಹುಷಃ ಮನುಷ್ಯ ಮೊಟ್ಟಮೊದಲಬಾರಿಗೆ ತಯಾರಿಸಿದ ಚಿತ್ರಾನ್ನ ಹೀಗೇ ಇದ್ದಿರಬಹುದೇನೋ ಎಂಬ ಅನುಮಾನವುಂಟಾಯಿತು. ಇಂತಹಾ ವಿಚಿತ್ರ ಸೃಷ್ಟಿಗೆ ಕಾರಣವಾದ ಕೊರೋನಾದ ಮೇಲೆ ಕೋಪವುಕ್ಕಿ ಬಂತು.
ಹೀಗೆ ಉಪ್ಪಿಟ್ಟು, ವಿಚಿತ್ರಾನ್ನಗಳ ತಿಂದು ಕೆಮ್ಮುತ್ತಿದ್ದವನಿಗೆ ಟೆರಾಸಿನಲ್ಲೇನೋ ಸದ್ದು ಕೇಳಿ ಹೊರಬಂದರೆ ತನ್ನ ಹುಡುಗಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿರುವ ಕೆಳಗಿನ ಮನೆಯ ನಾರ್ಥೀ ಹುಡುಗ ಕಣ್ಣಿಗೆ ಬಿದ್ದ. ಕೆಮ್ಮಿದಾಗ ಸಿರಪ್ ಕುಡಿಸಲಿಕ್ಕಾದರೂ ನನಗೊಬ್ಬ ಗೆಳತಿಯಿಲ್ಲವಲ್ಲಾ ಎಂದು ಹತಾಷೆಯಿಂದ ಮೊಬೈಲ್ ನೋಡಿಕೊಂಡವನಿಗೆ ಅಲ್ಲಿ ಅಮ್ಮ ಫಾರ್ವರ್ಡ್ ಮಾಡಿದ್ದ 'ಶುಂಠಿಕಷಾಯ ಮಾಡಿಕೊಳ್ಳುವ ಬಗೆ' ಎಂಬ ಮೆಸೇಜ್ ಕಣ್ಣಿಗೆ ಬಿತ್ತು. ಅಮ್ಮನೆಂಬ ಅಮ್ಮನೇ ಆರೈಕೆಗೆ ನಿಂತಿರುವಾಗ ಯಾವ ಕೊರೋನಾ ತಾನೇ ಏನು ಮಾಡೀತೆಂದು ಧೈರ್ಯಹೇಳಿಕೊಳ್ಳುತ್ತಾ ರೂಮಿನೊಳಗೆ ನಡೆದೆ.

(ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ)

ಗಾಯಕ


"ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು.."

ವೇದಿಕೆಯಲ್ಲಿ ಮೈಮರೆತು ಹಾಡುತ್ತಿದ್ದವನ ಮುಚ್ಚಿದ ಕಣ್ಣೊಳಗೆ ಅಮ್ಮನ ಚಿತ್ರ ಮೆಲ್ಲನೆ ಕದಲುತ್ತಿತ್ತು. ಯಾರದೋ ತಾಯಿಯೊಬ್ಬರ ಅರವತ್ತು ವರ್ಷದ ಶಾಂತಿಗೆ ಆಯೋಜಿಸಿದ ಕಾರ್ಯಕ್ರಮಕ್ಕೆ ಗಾಯಕನಾಗಿ ಅವನನ್ನು ಆಹ್ವಾನಿಸಿದ್ದರು. ತನ್ನಮ್ಮ ಬದುಕಿದ್ದರೆ ಅವಳಿಗೂ ಈಗ ಬಹುಷಃ ಇಷ್ಟೇ ವಯಸ್ಸಾಗಿರುತ್ತಿತ್ತು. ತಾನೂ ಇಂಥಾದ್ದೊಂದು ಕಾರ್ಯಕ್ರಮ ಆಯೋಜಿಸಿ ಅವಳೆದುರು ಹಾಡುತ್ತಿದ್ದೆ:
"ಅಮ್ಮಾ.. ಯಾರೇನೇ ಅಂದರೂ.. ನೀ ನನ್ನಾ ದೇವರು…"

ಯೋಚನೆಗೆ ಜಾರಿದವನನ್ನು ಚಪ್ಪಾಳೆಯ ಸದ್ದು ಎಚ್ಚರಗೊಳಿಸಿತು. ಹೋಗುವಂತಹಾ ವಯಸ್ಸಾಗಿರಲಿಲ್ಲ. ಅವಳಾಗಿಯೇ ಹೋಗಲೂ ಇಲ್ಲ. ತಾನೇ ಅವಳನ್ನು ಉಳಿಸಿಕೊಳ್ಳದೇ ಹೋದೆ. ಡಾಕ್ಟರು ಕೇಳಿದ ಹದಿನೈದು ಲಕ್ಷವನ್ನು ಹೊಂದಿಸಿಕೊಟ್ಟಿದ್ದರೆ ಇಂದಿನ ಈ ಚಪ್ಪಾಳೆಗಳ ಪೈಕಿ ಅವಳದ್ದೂ ಇರುತ್ತಿತ್ತೇನೋ?

ಬಿಟ್ಟುಹೋದ ಅಪ್ಪ ಮನೆಯ ಜೊತೆ ಬದುಕಿನ ಗೋಡೆಯನ್ನೂ ಮುರಿದು ಹೋಗಿದ್ದ. ಸೂರೇ ಇಲ್ಲದ ಬಾಳಿಗೆ ಬಿರುಗಾಳಿ ನುಗ್ಗಿದಾಗೆಲ್ಲಾ ಅಮ್ಮ ಅವನಿಂದ ಹಾಡಿಸುತ್ತಿದ್ದಳು:

"ದೀಪವು ನಿನ್ನದೇ, ಗಾಳಿಯೂ ನಿನ್ನದೇ, ಆರದಿರಲಿ ಬೆಳಕು.."

ಅವನ ಕೈ ಯಾರಿಗೂ ಕಾಣದಂತೆ ಕರವಸ್ತ್ರದತ್ತ ಸಾಗಿತು.

ಹೇಗೆ ಹೇಳಲಿ ಈ ಸಮಾಜಕ್ಕೆ? ತಾನು ಗಾಯನವನ್ನು ಆಯ್ಕೆ ಮಾಡಿಕೊಂಡಿಲ್ಲ. ಗಾಯನವೇ ತನ್ನನ್ನು ಆಯ್ಕೆಮಾಡಿಕೊಂಡಿದೆ. ಇದನ್ನರಿಯದ ಲೋಕದ ತಕ್ಕಡಿಯಲ್ಲಿ ತನಗೆ ತೂಕ ದೊರಕದೇ ಹೋದಾಗ, ವಧು ಪರೀಕ್ಷೆಗಳು ಕುಹಕದ ಕಾರ್ಯಾಗಾರಗಳಾದಾಗ, 'ಕಲೆ ಸವಿಯಲಿಕ್ಕೇ ಹೊರತು ಜೊತೆಗೆ ಬದುಕಲಿಕ್ಕಲ್ಲ' ಎಂಬ ನಿಲುವು ಮತ್ತೆಮತ್ತೆ ವ್ಯಕ್ತವಾದಾಗ, ಧನದಾಹಿ ಸಮಾಜವು ತನ್ನ ಸರತಿ-ಸಾಲುಗಳ ಕೊನೆಯ ಸ್ಥಾನವನ್ನು ಅವನಿಗೆಂದೇ ಮೀಸಲಿಟ್ಟಾಗ.. ಆಗೆಲ್ಲಾ ಅಮ್ಮ ಅವನನ್ನು ಸಮಾಧಾನಪಡಿಸಿದ್ದಳು. ತನ್ನನ್ನು ತನ್ನ ಹಾಡಿನ ಸಮೇತ ಒಪ್ಪಿಕೊಳ್ಳುವ ಜೀವವೊಂದು ಎಲ್ಲೋ ಇದೆಯೆಂಬ ಆಶಾವಾದವನ್ನೂ ಅವಳೇ ಹುಟ್ಟುಹಾಕಿದ್ದಳು.

"ಒಂದು ನೆನಪಿಟ್ಟುಕೋ. ನಾನು ಹೋಗುತ್ತೇನೆ. ಈ ಬಿರುಗಾಳಿಯೂ ಹೋಗುತ್ತದೆ. ಆದರೆ ಈ ದೀಪ ಹಾಗೂ ನಿನ್ನ ಹಾಡು.‌. ಇವೆರೆಡೂ ನಿಲ್ಲಬಾರದು. ದುಃಖಕ್ಕೂ ಅದರದ್ದೇ ರಾಗವಿದೆ. ನಿನ್ನ ಹಾಡಿನಲ್ಲಿ ನಾನಿರುತ್ತೇನೆ. ನಿನ್ನೆದುರಲ್ಲಿ ಕುಳಿತು ತಲೆದೂಗುವ ನನ್ನ ಸೊಸೆಯಿರುತ್ತಾಳೆ. ಅವಳ ಮಡಿಲಿನಲ್ಲಿ ಮಲಗಿರುವ ಕಂದ ನವಿರಾಗಿ ಕನವರಿಸುವಂತೆ ನೀನು ಹಾಡಬೇಕು!"

ಒಂದು ಸಾಂತ್ವನದಲ್ಲಿ ಅದೆಷ್ಟು ಆಶೀರ್ವಾದಗಳು! ಅವಳ ಹಾರೈಕೆ ಫಲಿಸಿತ್ತು. ಹಾಡಿನೊಳಗಿನ ಸುಂದರ ಸಾಲೊಂದು ಜೀವತಳೆದು ಬಂದಂತೆ ಬಾಳಿಗೆ ಬಂದಿದ್ದಳು ಸೌಗಂಧಿ. ಇಷ್ಟು ದಿನ ಬರಿಯ ಮಳೆ ನೀರಷ್ಟೇ ತೊಟ್ಟಿಕ್ಕುತ್ತಿದ್ದ ತನ್ನ ಮನೆಯ ಹರಕು ಮಾಡಿನ ರಂಧ್ರಗಳಿಂದ ಮೊಟ್ಟಮೊದಲ ಬಾರಿಗೆ ನಕ್ಷತ್ರಗಳನ್ನು ತೋರಿಸಿದ್ದಳು. ಹೊತ್ತಲ್ಲದ ಹೊತ್ತಿನಲ್ಲಿ ಕರೆಮಾಡಿ ಹಾಡು ಹಾಡೆಂದು ಹಠಹಿಡಿಯುತ್ತಿದ್ದಳು. ಅವನ ಹಾಡಿನ ಭಾವವನ್ನು ನೇರ ಹೃದಯದಿಂದಲೇ ಕದಿಯುವಂತೆ ಎದೆಗೊರಗಿ ಕಣ್ಮುಚ್ಚುತ್ತಿದ್ದಳು. ವೇದನೆಯೊಂದು ಅವನ ಕೊರಳು ಕಟ್ಟಿದ ಹೊತ್ತಿಗೆ ತಾನೇ ಕೊರಳಿಗೆ ಕೊರಳು ಬೆರೆಸಿ ಹಾಡನ್ನು ಪೂರ್ಣಗೊಳಿಸುತ್ತಿದ್ದಳು. ತನ್ನ ಅಪೂರ್ಣ ಚರಣಗಳಿಗೆ ಅವಳು ಪರಿಪೂರ್ಣ ಪಲ್ಲವಿಗಳ ಪೋಣಿಸುವ ಪರಿಯ ಕಂಡಾಗ ಅವನಿಗೆ ಅಚ್ಚರಿಯಾಗುತ್ತಿತ್ತು. ವಧು ಪರೀಕ್ಷೆಗೆ ಬರುತ್ತಿದ್ದ ಅನ್ಯ ಗಂಡುಗಳನ್ನು ಕಡೆಗಣ್ಣಿನಲ್ಲೂ ನೋಡದೇ ತಿರಸ್ಕರಿಸುತ್ತಿದ್ದಳು. ಇಂದೂ ಸಹಾ ಒತ್ತಾಯಪೂರ್ವಕವಾಗಿ ಅಂಥದೇ ನಾಮಕಾವಸ್ತೆಯ ಶಾಸ್ತ್ರವೊಂದರ ಭಾಗವಾಗಿದ್ದಾಳೆ. ಬಡತನ, ಜಾತಿ, ಸ್ಥಾನಮಾನ.. ಇವುಗಳ ಪೈಕಿ ಸಮಾಜದ ಕಟ್ಟಕಡೆಯ ಕಟ್ಟಳೆಯನ್ನೂ ದಾಟಿ ಅವಳು ಮಡದಿಯಾಗಿ ತನ್ನ ಮನೆತುಂಬುವ ಮಧುರ ಘಳಿಗೆಯ ನಿರೀಕ್ಷೆಯಲ್ಲಿ ಅವನಿದ್ದ.

"ಇನ್ನೊಂದು ಹಾಡು. ಇನ್ನೊಂದು ಹಾಡು"

ಸಭೆ ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹಿಸತೊಡಗಿತು. ತುಂಬಿಬಂದ ಸೌಗಂಧಿಯ ನೆನಪಿನಲ್ಲಿ ಮತ್ತೊಂದು ಮಧುರ ಗೀತೆಯ ಹಾಡಲೆಂದು ಸಾಹಿತ್ಯಕ್ಕಾಗಿ ಮೊಬೈಲನ್ನು ಹೊರತೆಗೆದವನಿಗೆ ಅದರಲ್ಲಿ ಅವಳು ಆಗಷ್ಟೇ ಕಳಿಸಿದ ಸಂದೇಶ ಗೋಚರಿಸಿತು.

"ನನ್ನನ್ನು ಕ್ಷಮಿಸಿ. ದೊಡ್ಡವರೆಲ್ಲ ಸೇರಿ ನಿಶ್ಚಿತಾರ್ಥವನ್ನು ನಿಶ್ಚಯಿಸಿಬಿಟ್ಟರು. ಅರ್ಥಮಾಡಿಸಲು ಬಹಳ ಪ್ರಯತ್ನಿಸಿದೆ. ಆದರೆ ಅಪ್ಪ ಬರಿಯ ಹಾಡನ್ನು ನಂಬಿರುವವನನ್ನು…"

ಕಣ್ಣು ಮಂಜಾಗಿದ್ದರಿಂದಲೋ ಏನೋ, ಮುಂದಿನ ಸಾಲುಗಳು ಕಾಣಲೇ ಇಲ್ಲ. ಅಷ್ಟರಲ್ಲಿ ಶ್ರೋತೃಗಳ ಒತ್ತಾಯ ಮೇರೆಮೀರಿತು.

ಭಾವವೀಣೆಯ ಅತಿ ಸೂಕ್ಷ್ಮ ತಂತಿಯೊಂದು ತುಂಡಾಗುತ್ತಿರುವ ಸದ್ದಿನಂತೆ ಅವನು ಹಾಡಿದ:

"ಬಾಡಿಗೆಗೆ ಬಂದು ಹೋಗೋ ಭೂಮಿಯಲ್ಲಿ
ಆಸೆಗಳ ಮೂಟೆ ಹೊತ್ತ ತಿರುಕರಿಲ್ಲಿ…"

(ವಿಜಯ ಕರ್ನಾಟಕದ 2020ರ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ)

ನಿನ್ನ ಹಾಗೆ ಯಾಕೆ ಯಾರಿಲ್ಲ?

ಈಗಷ್ಟೇ ಬೆಳಗಾಗಿದೆ. ಕಿಟಕಿಯಿಂದ ಹಾದ ಬೆಳಕಿನ ಕೋಲು ಕೋಣೆಯ ತುಂಬಾ ಹರಡಿಕೊಂಡು ಬೆಳಕಾಗಿದೆ. ಪುಟ್ಟನಿಗೆ ಎಚ್ಚರವಾಗಿದೆ. ಅವನ ಕೈ ಅಪ್ರಯತ್ನವಾಗಿ ತಡಕಾಡುತ್ತಿದೆ. ಅವನ ಪಕ್ಕದ ಹಾಸಿಗೆಯೀಗ ಬರಿದಾಗಿದೆ. ಅಲ್ಲೀಗ ಅಪ್ಪ ಇಲ್ಲ! ಎಲ್ಲಿಹೋಗಿಬಿಟ್ಟ? ರಾತ್ರೆ ಇದ್ದನಲ್ಲ? ಗುಮ್ಮಣ್ಣನಿಗೆ ಆಂಜನೇಯ ಚಾಮಿ ತಕ್ಕ ಶಾಸ್ತಿ ಮಾಡಿದ ಕಥೆಯನ್ನು ಹೇಳಿದ್ದನಲ್ಲಾ? ಈಗೆಲ್ಲಿ ಹೋದ? ಪುಟ್ಟನಿಗೆ ಭಯವಾಗಿದೆ. ಅಪ್ಪಾ.. ಊಊಊ. ಅವನೀಗ ಅಳುತ್ತಿದ್ದಾನೆ. ಆ ಅಳು ಆಚೆ ಕೊಟ್ಟಿಗೆಯಲ್ಲಿ ಒಲೆಗೆ ಬೆಂಕಿ ಒಟ್ಟುತ್ತಿರುವ ಅಪ್ಪನಿಗಿಂತ ಮೊದಲು ಅಡುಗೆಮನೆಯಲ್ಲಿರುವ ಅಮ್ಮನನ್ನು ತಲುಪಿದೆ.

"ಬೆಳ್ ಬೆಳಗ್ಗೆ ಏನೋ ನಿಂದು? ಕೋಲು ತರ್ತೇನೆ ನೋಡು"
ಅಮ್ಮ ಗದರುತ್ತಿದ್ದಾಳೆ. ಪುಟ್ಟನಿಗೀಗ ಗುಮ್ಮಣ್ಣನ ಭಯದ ಜೊತೆ ಅಮ್ಮನ ಏಟಿನ ಭಯವೂ ಉಂಟಾಗಿ ಮತ್ತಷ್ಟು ಅಳುತ್ತಿದ್ದಾನೆ.

"ಏಯ್, ನೀನು ಸುಮ್ನಿರೇ‌. ತಡಿ ಪಾಪೂ. ನಾನು ಬಂದೆ"
ಅಮ್ಮನನ್ನು ಗದರಿದ ಅಪ್ಪ ಪುಟ್ಟನನ್ನು ಎತ್ತಿಕೊಂಡು ಹೊರಬಂದಿದ್ದಾನೆ.

"ಓಹೋಹೋ, ಇನ್ನೂ ತೊಟ್ಟಿಲಿನ ಮಗು ಇದು‌. ಆಗ್ಲೇ ನಾಲ್ಕು ವರ್ಷ ಆಗಿದೆ. ಆದ್ರೂ ಎತ್ಕೋಬೇಕು. ಇಳಿ, ಕೆಳಗಿಳಿ"
ಅಪ್ಪನ ತೋಳಿನಲ್ಲಿರುವ ಪುಟ್ಟುವನ್ನು ಅಮ್ಮ ಕೆಣಕುತ್ತಿದ್ದಾಳೆ.

"ಓಗೇ ನೀನು, ಹೊದೀತೀನಿ ನಿಂಗೆ ಅಂಗೆಲ್ಲಾ ಅಂದ್ರೆ"
ಜೊತೆಗೆ ಅಪ್ಪನಿದ್ದಾನೆನ್ನುವ ಧೈರ್ಯದಲ್ಲಿ ಪುಟ್ಟ ಅಮ್ಮನಿಗೆ ಆವಾಸ಼್ ಹಾಕುತ್ತಿದ್ದಾನೆ.

"ಓಹೋ, ಹೌದಾ? ಅಪ್ಪ ಇವತ್ತು ಸಾಗರದ ಅಡಿಕೆ ಮಂಡಿಗೆ ಹೋಗ್ತಾರಲ್ಲಾ, ಆಗೇನು ಮಾಡ್ತೀಯ ನೋಡ್ತೀನಿ ನಾನು"
ಅಮ್ಮ ಮತ್ತೆ ಕೆಣಕಿದ್ದಾಳೆ.

"ನಾನೂ ಅಪ್ಪಂಜೊತೆ ಹೋತೀನಿ. ಬರ್ತಾ ನಿಂಗೇನೂ ತರಲ್ಲ.. ಅಪ್ಪ ಇವತ್ತು ಚಾಗ್ರಕ್ಕೆ ನನ್ನೂ ಕರ್ಕಂಡ್ ಹೋಗಾ.."
ಅಪ್ಪನ ತೆಕ್ಕೆಯಿಂದ ಪುಟ್ಟ ಹೇಳುತ್ತಾನೆ. ಹೇಳಹೇಳುತ್ತಲೇ ಅವನ ಮಾತಿನಿಂದ ಅಳು ತುಳುಕಿದೆ.

"ಆಯ್ತು ಪಾಪು‌. ಅಮ್ಮನ್ನ ಬಿಟ್ಟು ನಾನು ನೀನು ಮಾತ್ರ ಪೇಟೆಗೆ ಹೋಗಣ ಆಯ್ತಾ? ಈಗ ಅಳಬಾರ್ದು. ಮುಖ ತೊಳ್ಕಂಡು ಸಾಮಿ ಚಿತ್ತ ಮಾಡು ಆಯ್ತಾ? ಜಾಣಮರಿ"

ಅಪ್ಪನ ರಮಿಕೆಗೆ ಅಳು ದೂರವಾಗಿದೆ. ಹಾಲು ಕುಡಿದ ಪುಟ್ಟ ತನ್ನ ಆಟಿಕೆಯ ಬುಟ್ಟಿಯತ್ತ ನಡೆದಿದ್ದಾನೆ. ಅದರ ತುಂಬಾ ಅಪ್ಪ ಕೊಡಿಸಿದ ಆಟಿಕೆಗಳು! ಡ್ರಂ ಬಾರಿಸುವ ಬೊಂಬೆ, ಮೋಟಾರ್ ಕಾರು, ತೆಂಡೂಲ್ಕರ್ ಚಿತ್ರವಿರುವ ಪ್ಲಾಸ್ಟಿಕ್ ಬ್ಯಾಟು-ಬಾಲು, ನೀಲಿ ಗೋಲಿ, ಕೆಂಪು ಬುಗುರಿ, ಪ್ಲಾಸ್ಟಿಕ್ ಕೋವಿ.. ಸಾಗರದಿಂದ, ತೀರ್ಥಹಳ್ಳಿಯಿಂದ, ಊರ ಜಾತ್ರೆಯಿಂದ, ಊರಿನ ಯಾವ್ಯಾವುದೋ ಮೂಲೆಯಿಂದೆಲ್ಲಾ ಹುಡುಕಿ ಅಪ್ಪ ತಂದುಕೊಟ್ಟ ಆಟಿಕೆಗಳು. ಪುಟ್ಟನ ಆಟ ಆರಂಭವಾಗಿದೆ. ಅರೆರೇ, ಇದೇನಿದು? ಮೋಟಾರ್ ಕಾರು ಓಡುತ್ತಿಲ್ಲವಲ್ಲಾ? ಹಿಂದೆ ತಿರುಗಿಸಿದರೂ ಇಲ್ಲ, ಮುಂದೆ ತಿರುಗಿಸಿದರೂ ಇಲ್ಲ. ತನಗೆ ಹುಷಾರಿಲ್ಲದಾಗ ಕೋಣಂದೂರು ಡಾಕ್ಟರ ಹತ್ತಿರ ಕರೆದೊಯ್ದ ಅಪ್ಪ ಅಲ್ಲೇ ಪಕ್ಕದ ಆಟಿಕೆಯಂಗಡಿಯಲ್ಲಿ ಕೊಡಿಸಿದ ಕಾರು. ಅದೀಗ ಹಾಳಾಗಿದೆ! ಪುಟ್ಟನಿಗೆ ಮತ್ತೆ ಅಳು ಬಂದಿದೆ.

"ಅಪ್ಪಾ, ಇದು ಹಾಳಾಗಿದೆ ನೋಡಾ. ಚರಿ ಮಾಡ್ಕೊಡಾ"
ಅವನು ಅಳುತ್ತಾ ಅಪ್ಪನ ಬಳಿಗೆ ಓಡಿದ್ದಾನೆ.

"ಅಳ್ಬೇಡ ಪಾಪು. ಸರಿ ಮಾಡ್ತೀನಿ ಅದನ್ನ"
ಸ್ಕ್ರೂ ಡ್ರೈವರ್ ಹಿಡಿದ ಅಪ್ಪ ಕಾರಿನ ಮೋಟಾರ್ ಬಿಚ್ಚಿ ಸರಿಮಾಡಿದ್ದಾನೆ. ಡುರ್ ಡುರ್.. ರಿಪೇರಿಯಾದ ಕಾರೀಗ ಮನೆಯ ತುಂಬಾ ಶಬ್ದ ಮಾಡುತ್ತಾ ಓಡುತ್ತಿದೆ.

"ನನ್ನ ನಿನ್ನ ಕಾರಲ್ಲಿ ಒಂಚೂರು ಸಂತೆಗೆ ಬಿಡೋ ಪಾಪು"
ಅಮ್ಮ ಕೇಳಿದ್ದಾಳೆ.

"ಇಲ್ಲ, ನೀನು ನಂಗೆ ಹೊಡೀತಿ. ನಾನು ಕಾರಲ್ಲಿ ಅಪ್ಪನ್ನ ಮಾತ್ರ ಕರ್ಕೊಂಡ್ ಹೋತೀನಿ"
ಪುಟ್ಟ ದಿಟ್ಟವಾಗಿ ಉತ್ತರಿಸಿದ್ದಾನೆ. ಏನೇ ಆದರೂ ಜೊತೆಗೆ ಅಪ್ಪನಿದ್ದಾನೆನ್ನು ಧೈರ್ಯ ಅವನಿಗೆ.

**************

"ನನ್ ಅಪ್ಪಂಗೆ ಎಷ್ಟು ಶಕ್ತಿ ಇದೆ ಗೊತ್ತಾ? ಅವನು ದೊಡ್ಡ ಹಿಂಡಿ ಮೂಟೇನ ಒಂದೇ ಸಲಕ್ಕೆ ಹೇಗೆ ಎತ್ ತಾನೆ ಗೊತ್ತಾ?"
ಪುಟ್ಟು ತನ್ನ ಗೆಳೆಯನಿಗೆ ಹೇಳುತ್ತಿದ್ದಾನೆ.

"ನನ್ನಪ್ಪಂಗೆ ಇನ್ನೂ ಜಾಸ್ತಿ ಶಕ್ತಿ ಇದೆ. ಅವನು ಇನ್ನೂ ದೊಡ್ಡ ಮೂಟೇನ ಎತ್ ತಾನೆ‌.. ಒಂದೇ ಕೈಯಲ್ಲಿ!"
ಪುಟ್ಟನ ಗೆಳೆಯ ಹಾಗೆಂದು ಹೇಳಿದ್ದಾನೆ.

"ಏಯ್ ಹೋಗಾ! ನನ್ನಪ್ಪ ಅದ್ಕಿಂತ ದೊಡ್ಡ ಬಂಡೇನ ಎತ್ತಿ ಬಿಸಾಕ್ತಾನೆ ಗೊತ್ತಾ? ನನ್ನಪ್ಪಂಗೇ ಜಾಸ್ತಿ ಶಕ್ತಿ!"
ಪುಟ್ಟು ವಾದವನ್ನು ಬಿಗಿಗೊಳಿಸಿದ್ದಾನೆ.

"ಸಾಕು ಸುಮ್ನಿರಾ, ನಮ್ಮಪ್ಪ ಇಡೀ ಭೂಮೀನೇ ಎತ್ತಿ ಹಿಡ್ಕೋತಾನೆ, ಒಂದೇ ಕೈಯಲ್ಲಿ"
ಗೆಳೆಯ ಹಾಗೆಂದಾಗ ಪುಟ್ಟುವಿಗೆ ಗೊಂದಲವಾಗಿದೆ. ಭೂಮಿಗಿಂತ ದೊಡ್ಡದು ಯಾವುದು? ಗೊತ್ತಿಲ್ಲ. ಅವನಿಗೆ ಗೊತ್ತಿರುವುದು ಒಂದೇ. ಈ ಭೂಮಿಯಲ್ಲಿ ಅತ್ಯಂತ ಶಕ್ತಿವಂತನೆಂದರೆ - ಅದು ತನ್ನ ಅಪ್ಪ!

"ಏಯ್, ಹೋಗಾ ನನ್ನಪ್ಪಂಗೇ ಜಾಸ್ತಿ ಶಕ್ತಿ!"

"ನೀನ್ ಹೋಗಾ, ನನ್ನಪ್ಪಂಗೇ ಜಾಸ್ತಿ ಶಕ್ತಿ!"

ವಾದ ವಿವಾದವಾಗಿ, ವಿವಾದ ಜಗಳವಾಗಿ, ಜಗಳ ಕದನವಾಗಿ ಇಬ್ಬರೂ ಕೈಕೈ ಮಿಲಾಯಿಸಿಕೊಂಡು ಬಯಲಿನ ಮಣ್ಣಿನಲ್ಲಿ ಉರುಳಾಡಿ ಹೊಡೆದಾಡಿಕೊಂಡಿದ್ದಾರೆ. ಗೆಳೆಯನನ್ನು ಪುಟ್ಟನೂ, ಪುಟ್ಟನನ್ನು ಗೆಳೆಯನೂ ತಳ್ಳಾಡಿ ಎಳೆದಾಡಿಕೊಂಡಿದ್ದಾರೆ.

ಹೌದು ಮತ್ತೆ, ಅಪ್ಪನಿಗೇ ಕಡಿಮೆ ಶಕ್ತಿ ಅಂದ್ರೆ ಸುಮ್ನೆ ಬಿಡೋಕಾಗತ್ತಾ?

ನಾನು ಓದೋ ಪಾಠದಲಿ
ಅದು ಯಾಕೆ ನಿನ್ನ ಹೆಸರಿಲ್ಲ?
ನಿನ್ನ ಹಾಗೆ ಯಾಕೆ ಯಾರಿಲ್ಲ?
ನೀನು ಇರುವ ಧೈರ್ಯದಲಿ
ಯಾರೊಂದಿಗೂ ನಾ ಸೋಲಲ್ಲ
ನಿನ್ನ ಪ್ರೀತಿ ಮುಂದೆ ಏನಿಲ್ಲ..

**************

ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದುಗಾರ ಅಪ್ಪ..
ಹಗಲು ಬೆವರಿನ ಕೂಲಿಕಾರ
ರಾತ್ರೆ ಮನೆಯಲಿ ಚೌಕಿದಾರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪ..
ಗದರೋಮೀಸೆಗಾರ ಮನಸೇ ಕೋಮಲ
ನಿನ್ನ ಹೋಲೋ ಕರ್ಣ ಯಾರಿಲ್ಲ..

ಅಪ್ಪನೆಂದರೆ ಬಾಲ್ಯದ ಹೀರೋ. ಅವನು ಅಮ್ಮನಂತೆ ವಾಸ್ತವವಾದಿಯಲ್ಲ. ಅವನು ಭಾವುಕ. ಅವನ ಗಂಭೀರ ಮುಖ, ಎತ್ತರದ ನಿಲುವು ನೋಡಿದರೆ ಭಯವಾಗುತ್ತದೆ ನಿಜ, ಆದರೆ ಅವನ ಮನಸ್ಸು ಕೋಮಲ. ಶಾಲೆಯ ಮೊದಲ ದಿನ ತರಗತಿಯಲ್ಲಿ ಬಿಟ್ಟು ಹೊರಟವನ ಹಿಂದೆ "ಅಪ್ಪಾ, ನಾನೂ ನಿಂಜೊತೆ ಬತ್ತೀನಾ, ನಾನು ಚಾಲೆಗೆ ಹೋಗಲ್ವಾ" ಎಂದು ಮಗ ಅಳುತ್ತಾ ಓಡಿಬಂದಾಗ ಅಪ್ಪ ಕರಗಿಹೋಗಿದ್ದ. "ಸರಿ ಪಾಪು. ನಾಳೆಯಿಂದ ಶಾಲೆಗೆ ಹೋಗು ಆಯ್ತಾ" ಎಂದು ಅಳುತ್ತಿದ್ದ ಮಗನನ್ನು ರಮಿಸಿ ಮನೆಗೆ ಕರೆದೊಯ್ದಿದ್ದ‌‌.

ಯಾವ ಜಾತ್ರೆಗೇ ಹೋಗಲಿ, ಪೇಟೆಗೇ ಹೋಗಲಿ, ಜೇಬಿನಲ್ಲಿ ಚಾಕಲೇಟಿಲ್ಲದೇ ಅವನು ಮರಳಿದ್ದೇ ಇಲ್ಲ. ಬೆಳೆಗೆ ಕೊಂಚ ಒಳ್ಳೆಯ ಬೆಲೆ ಸಿಕ್ಕಿದಾಗಲಂತೂ ಮುಗಿದೇ ಹೋಯಿತು. ಬೋಟಿ, ಕಂಬಾರ್ ಕಟ್ಟು, ಡಣಟಣ ಗಾಡಿ.. ಅಪ್ಪ ಚೀಲದ ತುಂಬಾ ಅದೆಷ್ಟೋ ವಿಸ್ಮಯಗಳ ತುಂಬಿಕೊಂಡು ಮರಳುತ್ತಾನೆ. ಬೆಳೆದ ಬೆಳೆಗೆ ತೀರಾ ಅರ್ಧದಷ್ಟು ರೇಟು ಸಿಕ್ಕದೇ ಹೋದಾಗಲೂ ಅವನ ಜೇಬಿನಲ್ಲಿ ಚಾಕಲೇಟು ತಪ್ಪಿಲ್ಲ. ಇನ್ನು ಸಂಜೆ ಊರಿನ ಅಂಗಡಿಗೆ ಕರೆದೊಯ್ದಾಗಲಂತೂ "ಅಮ್ಮನಿಗೆ ಹೇಳ್ಬೇಡ ಆಯ್ತಾ?" ಎಂದು ಹಳದಿ ಪೀಲೆ ಕೊಡಿಸುತ್ತಾನೆ. ಜಗತ್ತಿನ ಸಕಲ ಗುಮ್ಮ, ದೆವ್ವ, ರಾಕ್ಷಸಗಳೆಲ್ಲವನ್ನೂ ಹೆದರಿಸುವ ಅಪ್ಪ ಅಮ್ಮನಿಗೆ ಹೆದರುತ್ತಾನಾ? ಹಾಗೊಂದು ಅನುಮಾನ ಪುಟ್ಟುವಿಗಿದೆ.

ಅಪ್ಪ ಶಕ್ತಿಶಾಲಿ. ಮಣ ಭಾರದ ಒಳಕಲ್ಲನ್ನು ಅನಾಮತ್ತಾಗಿ ಎತ್ತಿ ಸಾಗಿಸುತ್ತಾನೆ. ಅಪ್ಪ ಗಾಯಕ. ಹುಲ್ಲು ಕೊಯ್ಯುವಾಗ "ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು" ಎಂದು ಇಂಪಾಗಿ ಹಾಡುತ್ತಾನೆ. ಅಪ್ಪ ಮೆಕ್ಯಾನಿಕ್. ಕೆಟ್ಟು ನಿಂತ ತೋಟದ ಮೋಟಾರನ್ನು, ಹಾಳಾದ ರೇಡಿಯೋವನ್ನೂ ತಾನೇ ಸರಿಪಡಿಸುತ್ತಾನೆ. ಅಪ್ಪ ಭಾವುಕ. ಟಿವಿಯಲ್ಲಿ ರಾಜ್ ಕುಮಾರ್ "ಎಲ್ಲೂ ಹೋಗೊಲ್ಲ ಮಾಮಾ ಎಲ್ಲೂ ಹೋಗೊಲ್ಲ" ಎಂದು ಅತ್ತಿದ್ದನ್ನು ನೋಡಿ ತಾನೂ ಅಳುತ್ತಾನೆ‌.‌ ಅಪ್ಪ ನಟ. ಊರಿನ ನಾಟಕದಲ್ಲಿ ಗಯ್ಯಾಳಿ ಅತ್ತೆಯ ಪಾತ್ರಮಾಡುತ್ತಾನೆ. ಅಪ್ಪ ಕರುಣಾಮಯಿ. ಕೊಟ್ಟಿಗೆಯಲ್ಲಿ ನರಳುತ್ತಾ ಮಲಗಿರುವ ಎಮ್ಮೆಗೆ ಶ್ರುಶ್ರೂಷೆ ಮಾಡುತ್ತಾನೆ. ಅಪ್ಪ ಮುಗ್ಧ. ಬ್ಯಾಣದ ವಿಚಾರದಲ್ಲಿ ಯಾರಿಂದಲೋ ಮೋಸಹೋಗುತ್ತಾನೆ. ಅಪ್ಪ ಪ್ರೇಮಿ. ಅಮ್ಮನಿಗೆ ಹುಷಾರಿಲ್ಲವೆಂದು ಮನೆಯ ಕೆಲಸಗಳೆಲ್ಲವನ್ನೂ ತಾನೇ ಮಾಡುತ್ತಾನೆ. ಅಪ್ಪ ಎಂದೂ ದಣಿಯದ ಕೆಲಸಗಾರ. ಸಣ್ಣಗೆ ಏದುಸಿರು ಬಿಡುತ್ತಾ, ಒಡೆದ ಹಿಮ್ಮಡಿಗೆ ಎಣ್ಣೆ ಹಚ್ಚುತ್ತಾ, ಸುರಿವ ಬೆವರ ಒರೆಸಿಕೊಳ್ಳುತ್ತಾ ವರುಷಾನುವರುಷ ದುಡಿಯುತ್ತಾನೆ.

ತಾಯಿ ಮಾತ್ರ ತವರಲ್ಲ
ತಂದೆ ಇರದೆ ತಾಯಿಲ್ಲ
ಆಕಾಶದಂತೆ ನಿನ್ನ ಮನಸಪ್ಪಾ..
ನಾನು ಎಂದೂ ಹೇಳಿಲ್ಲ
ಯಾಕಂತ ನಂಗೂ ತಿಳಿದಿಲ್ಲ
ನೀನು ಅಂದ್ರೆ ಅಚ್ಚುಮೆಚ್ಚಪ್ಪ..

ಅಪ್ಪ.‌. ಐ ಲವ್ ಯೂ ಅಪ್ಪಾ..

*************

ಅಪ್ಪನಿಗೀಗ ವೃದ್ದಾಪ್ಯ. ಐವತ್ತು ವರ್ಷಗಳಿಂದ ಬಾಕಿಯಿದ್ದ ಖಾಯಿಲೆಗಳೆಲ್ಲ ಯಾವ ಜನ್ಮದ ಹಗೆಯೋ ಎಂಬಂತೆ ಸಾಲು ಸಾಲಾಗಿ ಬಂದು ಕಾಡುತ್ತಿವೆ. ಹಿಂದೆ ಯುವಕನಾಗಿದ್ದಾಗ ಬಂದಿದ್ದ ರೋಗಗಳಿಗೆ "ನಾನು ನನ್ನ ಹೆಂಡತಿ ಮಕ್ಕಳನ್ನು ಸಾಕಬೇಕು. ದಯವಿಟ್ಟು ಈಗ ಬರಬೇಡಿ" ಎಂದು ಬೇಡಿಕೊಂಡಿದ್ದನೋ ಏನೂ? ಆಗ ಏನೂ ಇಲ್ಲದ್ದು ಈಗ ಎಲ್ಲವೂ ಬಂದು ಒಕ್ಕರಿಸಿವೆ. ಸ್ಟ್ರೋಕ್ ಆಗಿ ಕೈ-ಕಾಲು ಸ್ತಬ್ದವಾಗಿದೆ. ಕಣ್ಣು ಮಂಜಾಗಿದೆ. ದೊಡ್ಡ ಆಪರೇಶನ್ ಗೊಳಗಾದ ತಲೆ ನಿರಂತರ ನೋವಿಗೀಡಾಗಿದೆ. ಒಂದೇ ಸಮನೆ ಕೆಮ್ಮು. ಅಪ್ಪನೀಗ ಮಂಚದ ಮೇಲೆ ಬಂಧಿ.

ಈಗ ಅಪ್ಪನ ಲೋಕವೇ ಬೇರೆ. ಹೊರ ಜಗತ್ತಿನ ಕದಲಿಕೆಗಳು ಕೇವಲ ಶಬ್ದಗಳಾಗಿ ಅವನನ್ನು ತಲುಪುತ್ತಿವೆ. ಹೊರಗೆ ಅಂಗಳದಲ್ಲಿ ಮಳೆ ಬಿದ್ದ ಸದ್ದು. ಅಲ್ಲೆಲ್ಲೋ ಸಿಡಿಲು ಬಡಿದ ಮೊರೆತ. ಅಡಿಗೆ ಮನೆಯಲ್ಲಿ ಅಮ್ಮ ಮಾಡುತ್ತಿರುವ ಪಾತ್ರೆಗಳ ಟಣಟಣ. ಅಂಗಳದಲ್ಲಿ ಮೊಮ್ಮಕ್ಕಳು ಹಚ್ಚಿರುವ ಪಟಾಕಿ. ಪಕ್ಕದ ಕೋಣೆಯಲ್ಲಿ ಮಗ-ಸೊಸೆ ಮಾಡುತ್ತಿರುವ ವಾದ. ಜಗುಲಿಯಲ್ಲಿ ಅದ್ಯಾರೋ ನೆಂಟರು ಹೊಡೆಯುತ್ತಿರುವ ಹರಟೆ. ಕಿಡಕಿಯಿಂದ ನುಸುಳಿ ಬರುತ್ತಿರುವ ಡೇರೆ ಹೂವಿನ ಪರಿಮಳ..

ಅಪ್ಪನ ಲೋಕವೀಗ ಬೇರೆಯಾಗಿದೆ. ಅವನೀಗ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾನೆ. ಯಾವುದೋ ಹಳೆಯ ಹಾಸ್ಯವನ್ನು ನೆನೆದು ತನ್ನಷ್ಟಕ್ಕೇ ನಗುತ್ತಾನೆ. ತನ್ನೊಡನೆ ಮಾತನಾಡಲು ಯಾರಾದರೂ ಬರುವರೇನೋ ಎಂದು ಬಾಗಿಲಿನತ್ತ ನೋಡುತ್ತಾನೆ. ಸ್ನಾನ ಮಾಡಿಸು, ಊಟ ಕೊಡು, ಬಟ್ಟೆ ಬದಲಾಯಿಸು ಎಂದೆಲ್ಲಾ ಕೇಳಿ ಮನೆಯವರಿಂದ ಬೈಸಿಕೊಳ್ಳುತ್ತಾನೆ. ಮತ್ತೆ ಮತ್ತೆ ಎದ್ದು ಕೂರಲು ನೋಡಿ ಬೀಳುತ್ತಾನೆ. ಕೋಣೆಗೆ ಬಂದ ಮೊಮ್ಮಗನನ್ನು ಬಾಚಿತಬ್ಬಲೆಂದು ಕೈಚಾಚುತ್ತಾನೆ.

ಐವತ್ತು ವರ್ಷಗಳ ಕಾಲ ತಾನೇ ದುಡಿದು, ಕಟ್ಟಿ, ಬೆಳೆಸಿದ ಮನೆ, ತೋಟ, ಕುಟುಂಬಗಳಿಂದ ತಾನೇ ಹೊರತಾಗಿ, ಹೊರ ಕುಳಿತು ಒಂಟಿಯಾಗಿ ನರಳುತ್ತಿದ್ದಾನೆ.

ತುಸು ಮೆಲ್ಲ ಬಡಿಯೇ ಸಿಡಿಲೇ
ಇಲ್ಲೊಂದು ನಿದಿರೆ ಜಾರಿಯಲ್ಲಿದೆ;
ತೂಗಿ ದಣಿದು ಮಲಗಿಹನು ಅಪ್ಪ
ಅವನ ನಿದಿರೆಗೆ ಲಾಲಿಯೆಲ್ಲಿದೆ?

ವರುಷಾನುವರುಷ ದುಡಿದ ಅನವರತ
ಈಗಷ್ಟೇ ವಿಶ್ರಾಂತಿ ಶುರುವಾಗಿದೆ;
ಛಳಿಯನೆರಚದಿರು ಓ ಸಂಜೆ ಗಾಳಿ
ನಡುಗುವ ತ್ರಾಣ ಈ ಪ್ರಾಯಕೆಲ್ಲಿದೆ?

ತುತ್ತುಗಳ ತಿನ್ನಿಸಿ ಸವೆದಂಥ ಕೈಯಿದು
ಕತ್ತರಿಸಿದೆಯೇಕೆ ಓ ದೇವರೇ?
ಕಹಿಗಳ ತಾ ನುಂಗಿ ಸಿಹಿಯಷ್ಟೇ ಹಂಚಿದ
ಅವನ ಪಾತ್ರೆಯಲೇಕೆ ನೋವುಳಿದಿದೆ?

ಎಷ್ಟೊಂದು ಪ್ರೀತಿ ಈ ತಂದೆ ಕಣ್ಣಲಿ
ಕೇಳದೆಯೇ ಕೊಟ್ಟನು ಈ ಜೀವಕೆ;
ಏನೆಲ್ಲ ಯಾತನೆಯು ಮಡುವುಗಟ್ಟಿದೆ ಇಂದು
ನಮಗಿನಿತೂ ಕೊಡುತಿಲ್ಲ ಇಂದೇತಕೆ?

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...