ಬುಧವಾರ, ಜುಲೈ 8, 2020

ಗಾಯಕ


"ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು.."

ವೇದಿಕೆಯಲ್ಲಿ ಮೈಮರೆತು ಹಾಡುತ್ತಿದ್ದವನ ಮುಚ್ಚಿದ ಕಣ್ಣೊಳಗೆ ಅಮ್ಮನ ಚಿತ್ರ ಮೆಲ್ಲನೆ ಕದಲುತ್ತಿತ್ತು. ಯಾರದೋ ತಾಯಿಯೊಬ್ಬರ ಅರವತ್ತು ವರ್ಷದ ಶಾಂತಿಗೆ ಆಯೋಜಿಸಿದ ಕಾರ್ಯಕ್ರಮಕ್ಕೆ ಗಾಯಕನಾಗಿ ಅವನನ್ನು ಆಹ್ವಾನಿಸಿದ್ದರು. ತನ್ನಮ್ಮ ಬದುಕಿದ್ದರೆ ಅವಳಿಗೂ ಈಗ ಬಹುಷಃ ಇಷ್ಟೇ ವಯಸ್ಸಾಗಿರುತ್ತಿತ್ತು. ತಾನೂ ಇಂಥಾದ್ದೊಂದು ಕಾರ್ಯಕ್ರಮ ಆಯೋಜಿಸಿ ಅವಳೆದುರು ಹಾಡುತ್ತಿದ್ದೆ:
"ಅಮ್ಮಾ.. ಯಾರೇನೇ ಅಂದರೂ.. ನೀ ನನ್ನಾ ದೇವರು…"

ಯೋಚನೆಗೆ ಜಾರಿದವನನ್ನು ಚಪ್ಪಾಳೆಯ ಸದ್ದು ಎಚ್ಚರಗೊಳಿಸಿತು. ಹೋಗುವಂತಹಾ ವಯಸ್ಸಾಗಿರಲಿಲ್ಲ. ಅವಳಾಗಿಯೇ ಹೋಗಲೂ ಇಲ್ಲ. ತಾನೇ ಅವಳನ್ನು ಉಳಿಸಿಕೊಳ್ಳದೇ ಹೋದೆ. ಡಾಕ್ಟರು ಕೇಳಿದ ಹದಿನೈದು ಲಕ್ಷವನ್ನು ಹೊಂದಿಸಿಕೊಟ್ಟಿದ್ದರೆ ಇಂದಿನ ಈ ಚಪ್ಪಾಳೆಗಳ ಪೈಕಿ ಅವಳದ್ದೂ ಇರುತ್ತಿತ್ತೇನೋ?

ಬಿಟ್ಟುಹೋದ ಅಪ್ಪ ಮನೆಯ ಜೊತೆ ಬದುಕಿನ ಗೋಡೆಯನ್ನೂ ಮುರಿದು ಹೋಗಿದ್ದ. ಸೂರೇ ಇಲ್ಲದ ಬಾಳಿಗೆ ಬಿರುಗಾಳಿ ನುಗ್ಗಿದಾಗೆಲ್ಲಾ ಅಮ್ಮ ಅವನಿಂದ ಹಾಡಿಸುತ್ತಿದ್ದಳು:

"ದೀಪವು ನಿನ್ನದೇ, ಗಾಳಿಯೂ ನಿನ್ನದೇ, ಆರದಿರಲಿ ಬೆಳಕು.."

ಅವನ ಕೈ ಯಾರಿಗೂ ಕಾಣದಂತೆ ಕರವಸ್ತ್ರದತ್ತ ಸಾಗಿತು.

ಹೇಗೆ ಹೇಳಲಿ ಈ ಸಮಾಜಕ್ಕೆ? ತಾನು ಗಾಯನವನ್ನು ಆಯ್ಕೆ ಮಾಡಿಕೊಂಡಿಲ್ಲ. ಗಾಯನವೇ ತನ್ನನ್ನು ಆಯ್ಕೆಮಾಡಿಕೊಂಡಿದೆ. ಇದನ್ನರಿಯದ ಲೋಕದ ತಕ್ಕಡಿಯಲ್ಲಿ ತನಗೆ ತೂಕ ದೊರಕದೇ ಹೋದಾಗ, ವಧು ಪರೀಕ್ಷೆಗಳು ಕುಹಕದ ಕಾರ್ಯಾಗಾರಗಳಾದಾಗ, 'ಕಲೆ ಸವಿಯಲಿಕ್ಕೇ ಹೊರತು ಜೊತೆಗೆ ಬದುಕಲಿಕ್ಕಲ್ಲ' ಎಂಬ ನಿಲುವು ಮತ್ತೆಮತ್ತೆ ವ್ಯಕ್ತವಾದಾಗ, ಧನದಾಹಿ ಸಮಾಜವು ತನ್ನ ಸರತಿ-ಸಾಲುಗಳ ಕೊನೆಯ ಸ್ಥಾನವನ್ನು ಅವನಿಗೆಂದೇ ಮೀಸಲಿಟ್ಟಾಗ.. ಆಗೆಲ್ಲಾ ಅಮ್ಮ ಅವನನ್ನು ಸಮಾಧಾನಪಡಿಸಿದ್ದಳು. ತನ್ನನ್ನು ತನ್ನ ಹಾಡಿನ ಸಮೇತ ಒಪ್ಪಿಕೊಳ್ಳುವ ಜೀವವೊಂದು ಎಲ್ಲೋ ಇದೆಯೆಂಬ ಆಶಾವಾದವನ್ನೂ ಅವಳೇ ಹುಟ್ಟುಹಾಕಿದ್ದಳು.

"ಒಂದು ನೆನಪಿಟ್ಟುಕೋ. ನಾನು ಹೋಗುತ್ತೇನೆ. ಈ ಬಿರುಗಾಳಿಯೂ ಹೋಗುತ್ತದೆ. ಆದರೆ ಈ ದೀಪ ಹಾಗೂ ನಿನ್ನ ಹಾಡು.‌. ಇವೆರೆಡೂ ನಿಲ್ಲಬಾರದು. ದುಃಖಕ್ಕೂ ಅದರದ್ದೇ ರಾಗವಿದೆ. ನಿನ್ನ ಹಾಡಿನಲ್ಲಿ ನಾನಿರುತ್ತೇನೆ. ನಿನ್ನೆದುರಲ್ಲಿ ಕುಳಿತು ತಲೆದೂಗುವ ನನ್ನ ಸೊಸೆಯಿರುತ್ತಾಳೆ. ಅವಳ ಮಡಿಲಿನಲ್ಲಿ ಮಲಗಿರುವ ಕಂದ ನವಿರಾಗಿ ಕನವರಿಸುವಂತೆ ನೀನು ಹಾಡಬೇಕು!"

ಒಂದು ಸಾಂತ್ವನದಲ್ಲಿ ಅದೆಷ್ಟು ಆಶೀರ್ವಾದಗಳು! ಅವಳ ಹಾರೈಕೆ ಫಲಿಸಿತ್ತು. ಹಾಡಿನೊಳಗಿನ ಸುಂದರ ಸಾಲೊಂದು ಜೀವತಳೆದು ಬಂದಂತೆ ಬಾಳಿಗೆ ಬಂದಿದ್ದಳು ಸೌಗಂಧಿ. ಇಷ್ಟು ದಿನ ಬರಿಯ ಮಳೆ ನೀರಷ್ಟೇ ತೊಟ್ಟಿಕ್ಕುತ್ತಿದ್ದ ತನ್ನ ಮನೆಯ ಹರಕು ಮಾಡಿನ ರಂಧ್ರಗಳಿಂದ ಮೊಟ್ಟಮೊದಲ ಬಾರಿಗೆ ನಕ್ಷತ್ರಗಳನ್ನು ತೋರಿಸಿದ್ದಳು. ಹೊತ್ತಲ್ಲದ ಹೊತ್ತಿನಲ್ಲಿ ಕರೆಮಾಡಿ ಹಾಡು ಹಾಡೆಂದು ಹಠಹಿಡಿಯುತ್ತಿದ್ದಳು. ಅವನ ಹಾಡಿನ ಭಾವವನ್ನು ನೇರ ಹೃದಯದಿಂದಲೇ ಕದಿಯುವಂತೆ ಎದೆಗೊರಗಿ ಕಣ್ಮುಚ್ಚುತ್ತಿದ್ದಳು. ವೇದನೆಯೊಂದು ಅವನ ಕೊರಳು ಕಟ್ಟಿದ ಹೊತ್ತಿಗೆ ತಾನೇ ಕೊರಳಿಗೆ ಕೊರಳು ಬೆರೆಸಿ ಹಾಡನ್ನು ಪೂರ್ಣಗೊಳಿಸುತ್ತಿದ್ದಳು. ತನ್ನ ಅಪೂರ್ಣ ಚರಣಗಳಿಗೆ ಅವಳು ಪರಿಪೂರ್ಣ ಪಲ್ಲವಿಗಳ ಪೋಣಿಸುವ ಪರಿಯ ಕಂಡಾಗ ಅವನಿಗೆ ಅಚ್ಚರಿಯಾಗುತ್ತಿತ್ತು. ವಧು ಪರೀಕ್ಷೆಗೆ ಬರುತ್ತಿದ್ದ ಅನ್ಯ ಗಂಡುಗಳನ್ನು ಕಡೆಗಣ್ಣಿನಲ್ಲೂ ನೋಡದೇ ತಿರಸ್ಕರಿಸುತ್ತಿದ್ದಳು. ಇಂದೂ ಸಹಾ ಒತ್ತಾಯಪೂರ್ವಕವಾಗಿ ಅಂಥದೇ ನಾಮಕಾವಸ್ತೆಯ ಶಾಸ್ತ್ರವೊಂದರ ಭಾಗವಾಗಿದ್ದಾಳೆ. ಬಡತನ, ಜಾತಿ, ಸ್ಥಾನಮಾನ.. ಇವುಗಳ ಪೈಕಿ ಸಮಾಜದ ಕಟ್ಟಕಡೆಯ ಕಟ್ಟಳೆಯನ್ನೂ ದಾಟಿ ಅವಳು ಮಡದಿಯಾಗಿ ತನ್ನ ಮನೆತುಂಬುವ ಮಧುರ ಘಳಿಗೆಯ ನಿರೀಕ್ಷೆಯಲ್ಲಿ ಅವನಿದ್ದ.

"ಇನ್ನೊಂದು ಹಾಡು. ಇನ್ನೊಂದು ಹಾಡು"

ಸಭೆ ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹಿಸತೊಡಗಿತು. ತುಂಬಿಬಂದ ಸೌಗಂಧಿಯ ನೆನಪಿನಲ್ಲಿ ಮತ್ತೊಂದು ಮಧುರ ಗೀತೆಯ ಹಾಡಲೆಂದು ಸಾಹಿತ್ಯಕ್ಕಾಗಿ ಮೊಬೈಲನ್ನು ಹೊರತೆಗೆದವನಿಗೆ ಅದರಲ್ಲಿ ಅವಳು ಆಗಷ್ಟೇ ಕಳಿಸಿದ ಸಂದೇಶ ಗೋಚರಿಸಿತು.

"ನನ್ನನ್ನು ಕ್ಷಮಿಸಿ. ದೊಡ್ಡವರೆಲ್ಲ ಸೇರಿ ನಿಶ್ಚಿತಾರ್ಥವನ್ನು ನಿಶ್ಚಯಿಸಿಬಿಟ್ಟರು. ಅರ್ಥಮಾಡಿಸಲು ಬಹಳ ಪ್ರಯತ್ನಿಸಿದೆ. ಆದರೆ ಅಪ್ಪ ಬರಿಯ ಹಾಡನ್ನು ನಂಬಿರುವವನನ್ನು…"

ಕಣ್ಣು ಮಂಜಾಗಿದ್ದರಿಂದಲೋ ಏನೋ, ಮುಂದಿನ ಸಾಲುಗಳು ಕಾಣಲೇ ಇಲ್ಲ. ಅಷ್ಟರಲ್ಲಿ ಶ್ರೋತೃಗಳ ಒತ್ತಾಯ ಮೇರೆಮೀರಿತು.

ಭಾವವೀಣೆಯ ಅತಿ ಸೂಕ್ಷ್ಮ ತಂತಿಯೊಂದು ತುಂಡಾಗುತ್ತಿರುವ ಸದ್ದಿನಂತೆ ಅವನು ಹಾಡಿದ:

"ಬಾಡಿಗೆಗೆ ಬಂದು ಹೋಗೋ ಭೂಮಿಯಲ್ಲಿ
ಆಸೆಗಳ ಮೂಟೆ ಹೊತ್ತ ತಿರುಕರಿಲ್ಲಿ…"

(ವಿಜಯ ಕರ್ನಾಟಕದ 2020ರ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...