ಬುಧವಾರ, ಜುಲೈ 8, 2020

ಅಪ್ಪ.. ಐ ಲವ್ ಯು ಅಪ್ಪಾ.. 4

ಅದು ಐಸಿಯು ಹೊರಗಿನ ನಿರೀಕ್ಷಣಾ ಸ್ಥಳ.

ಇಲ್ಲಿ ಸಮಯ ನಿಮಿಷ -ಗಂಟೆಗಳಾಗಿ ಸರಿಯುವುದಿಲ್ಲ. ಮೆದುಳಿನಲ್ಲಿ ರಕ್ತಸ್ರಾವವಾಗುತ್ತಿದೆ, ಈಗ ಕಡಿಮೆಯಾಗಿದೆ, ಮತ್ತೆ ಜಾಸ್ತಿಯಾಗಿದೆ, ಈಗ ಕೈಯಾಡಿಸುತ್ತಿದ್ದಾರೆ, ನೋಡುತ್ತಿದ್ದಾರೆ, ಈಗೊಂದು ಶಬ್ದ ಮಾತನಾಡಿದರು ಎಂಬ ವಿಲಕ್ಷಣ, ಸೂಕ್ಷ್ಮ ಚಟುವಟಿಕೆಗಳ ರೂಪದಲ್ಲಿ ಚಲಿಸುತ್ತದೆ. ಕೆಲವರ ಪಾಲಿಗದು ಮುಂದಕ್ಕೆ ಚಲಿಸಿದರೆ ಇನ್ನು ಕೆಲವರ ಪಾಲಿಗೆ ಹಿಂದಕ್ಕೆ ನೆಗೆಯುತ್ತದೆ. ಐವತ್ತು ಅರವತ್ತು ವರ್ಷಗಳ ಕಾಲ ಬಾಳಿದ ಜೀವವೊಂದು ಅನಾಮತ್ತು ಮೂರು ನಿಮಿಷದ ಹಿಂದೆ ಹುಟ್ಟಿದ ಮಗುವಾಗಿಬಿಡುತ್ತದೆ. ಕೈ ಆಡಿಸುವುದು, ಕಾಲಾಡಿಸುವುದು, ಮಾತನಾಡುವುದು, ಕತ್ತು ಕದಲಿಸುವುದು.. ಹೀಗೆ ಪ್ರತಿಯೊಂದು ಚಲನೆಯನ್ನೂ ಹೊಸತಾಗಿ ಆರಂಭಿಸುವ ಮರುಜನ್ಮಸ್ಥಳವಿದು.

ಯಾವ್ಯಾವುದೋ ಊರಿನ, ಯಾವ್ಯಾವುದೋ ಕೇರಿಯ, ಯಾವ್ಯಾವುದೋ ಬದುಕಿನ ವಿವಿಧ ಸ್ಥರಗಳಿಂದ ತಮ್ಮ ಬಂಧುಗಳ ಹೊತ್ತು ರಾತ್ರೋರಾತ್ರೆ ಧಾವಿಸಿಬಂದವರೆಲ್ಲ ಅಲ್ಲಿ ಜಮೆಯಾಗಿದ್ದೆವು. ಊರು, ಕೇರಿ, ಬದುಕುಗಳು ಬೇರೆಯಾದರೇನು? ಎಲ್ಲರ ನಿರೀಕ್ಷಣೆಯೂ ಒಂದೇ‌- ಒಳಗಿರುವ ನಮ್ಮವರು ಗುಣಮುಖರಾಗಲೆಂಬುದು. ಒಳಗೆ ಮಲಗಿರುವ ಪ್ರೀತಿ ಪಾತ್ರ ಜೀವಕ್ಕೀಗ ನೋವನ್ನೂ ಆಚರಿಸಲಾಗಂಥಹಾ ನಿಶ್ಯಕ್ತಿ. ಅವರ ಪಾಲಿನ ಕಣ್ಣೀರನ್ನೂ ತಾವೇ ಹರಿಸುತ್ತಾ ಇಲ್ಲಿ ಕುಳಿತುಕೊಳ್ಳಬೇಕಾದ ಅನಿವಾರ್ಯಾತೆ ಹೊರಗೆ ಕಾಯುತ್ತಾ ಕುಳಿತವರಿಗೆ.

ಸಂಜೆ ಕಳೆದು ರಾತ್ರೆಯಾಯಿತು. ಎಲ್ಲರೂ ಅಲ್ಲೇ ನೆಲ, ಬೆಂಚ್ ಗಳ ಮೇಲೆ ಅಡ್ಡಾದೆವು. ಒಮ್ಮೆ ಮಲಗಿದ ಎಲ್ಲರತ್ತ ಕಣ್ಣಾಡಿಸಿದೆ. ಒಬ್ಬರ ತಂದೆ ಒಳಗಿದ್ದರೆ ಇನ್ನೊಬ್ಬರ ಮಗ ಐಸಿಯುನಲ್ಲಿದ್ದಾನೆ. ಮತ್ಯಾರದೋ ತಾಯಿ, ತಂಗಿ ಒಳಗೆ ನರಳು ಮಂಚದ ಮೇಲೆ ಅಧೀರರಾಗಿ ಮಲಗಿದ್ದಾರೆ. ಒಬ್ಬರಿಗೊಬ್ಬರು ಪರಿಚಯವಿಲ್ಲದ ನಮ್ಮೆಲ್ಲರನ್ನೂ ಕಾಲ ಒಂದೇ ಆಸ್ಪತ್ರೆಯ ಐಸಿಯು ಹೊರಗಿನ ನಿರೀಕ್ಷಣಾ ಕೊಠಡಿಗೆ ತಂದುಹಾಕಿದೆ. ಎಲ್ಲರ ನೋವೂ ಒಂದೇ. ಕೊರೋನಾ ಮಾಸ್ಕ್ ಹಿಂದೆ ಮರೆಯಾಗಿರುವ ಮುಖದಲ್ಲಿರುವ ದುಃಖವೆಲ್ಲವೂ ಒಂದೇ. ಒಂದೇ ಕಷ್ಟದ ಫಲಾನುಭವಿಗಳೇ ನಾವೆಲ್ಲ.

ಪಕ್ಕದಲ್ಲೇ ಇತ್ತು ಶಸ್ತ್ರಚಿಕಿತ್ಸಕ ವೈದ್ಯರ ಕೊಠಡಿ. ತೆರೆಯಲಿಕ್ಕೇ ಬಾರದೇನೋ ಎಂಬಂತೆ ಸದಾ ಮುಚ್ಚಿಕೊಂಡಿರುತ್ತಿದ್ದ ಅದರೊಳಕ್ಕೆ ಆಗೊಮ್ಮೆ ಈಗೊಮ್ಮೆ ರೋಗಿಯ ಕಡೆಯವರನ್ನು ಕರೆದು ಒಳಗಿರುವ ರೋಗಿಯ ಸ್ಥಿತಿಗತಿಗಳ ಹೇಳುತ್ತಿದ್ದರು. ತೀರಾ ಸಾವಿನ ಸುದ್ದಿಯೂ ಇಲ್ಲೇ ವರ್ಗಾವಣೆಯಾಗುತ್ತಿತ್ತು. ಅಳು, ಬಿಕ್ಕಳಿಕೆ, ರೋದನೆ, ಅಂಗಲಾಚುವಿಕೆಗಳೆಲ್ಲ ಸಾಲುಸಾಲಾಗಿ ಡಾಕ್ಟರ ಕೋಣೆಯ ಹೊಕ್ಕು ಹೊರಬರುತ್ತಿದ್ದವು. ಕಣ್ಣು ಮಾರಿಯಾದರೂ ಹಣ ಹೊಂದಿಸುತ್ತೇನೆ, ನಮ್ಮವರ ಜೀವ ಉಳಿಸಣ್ಣಾ ಎಂದು ಎಲ್ಲರೆದುರೇ ಅಳತೊಡಗಿದ ಹೆಂಗಸನ್ನೂ, ಅವಳಿಗೆ ಸಮಾಧಾನ ಹೇಳಬಹುದಾದ ಪದಗಳಿಗಾಗಿ ತನ್ನಿಡೀ ಎಂಬಿಬಿಎಸ್ ಜ್ಞಾನಕೋಶವನ್ನೇ ಅರಸಿ ಸೋತ ಅಸಹಾಯಕ ಡಾಕ್ಟರನ್ನೂ ನಾನು ನೋಡಿದ್ದೇ ಇಲ್ಲಿ.

ಅಪ್ಪನ ಆರೋಗ್ಯದ ಕುರಿತಾಗಿ ಪ್ರತೀಬಾರಿಯೂ ನಮ್ಮ ಲೆಕ್ಕ ತಪ್ಪುತ್ತಿತ್ತು. ಈಗ ಕೊಂಚ ಆರಾಮಾದನೆಂಬ ಖುಷಿಯ ಸುದ್ದಿ ಕೇಳಿ ಮನೆ ತಲುಪುವಷ್ಟರಲ್ಲೇ ಮತ್ತಿನ್ನೇನೋ ಕೆಟ್ಟ ಸುದ್ದಿ ಬೆನ್ನಟ್ಟಿಕೊಂಡು ಬರುತ್ತಿತ್ತು. ಡಾಕ್ಟರಂತೂ ಅವರು ಕೊಟ್ಟ ಹೇಳಿಕೆಗಳನ್ನು ಅವರೇ ಮುರಿಯುತ್ತಿದ್ದರು. ಈಗ ಪರವಾಗಿಲ್ಲ, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನನ್ನನ್ನು ಮನೆಗೆ ಕಳಿಸಿದವರು ತನ್ನ ಪಾಳಿ ನಡೆಸಲು ಬಂದ ಅಮ್ಮನ ಬಳಿ ಮತ್ತೆ ತಲೆಯೊಳಗೆ ಬ್ಲೀಡ್ ಆಗಿದೆ, ಮತ್ತೆ ಆಪರೇಷನ್ ಬೇಕಾಗಬಹುದು ಎಂದು ಬಾಂಬ್ ಸ್ಫೋಟಿಸಿಬಿಡುತ್ತಿದ್ದರು. ಅಪ್ಪನ ಆರೋಗ್ಯವೂ ಅಷ್ಟೇ ಅಸ್ಥಿರವಾಗಿತ್ತು. ಬಿಪಿಯೆಂಬುದು‌ ಎಲ್ಲ ಮಾತ್ರೆ, ಡ್ರಿಪ್, ಇಂಜಕ್ಷನ್ ಗಳ ಹಿಡಿತ ಮೀರಿ 180, 190ರ ಗಡಿದಾಟಿ ನೆಗೆಯುತ್ತಿತ್ತು. ಸುಧಾರಿಸಿದರು ಎಂಬ ಸಿಹಿ ಸುದ್ದಿಯನ್ನು ಖುಷಿಯಾಗಿ ಬಂಧು-ಮಿತ್ರರೆಲ್ಲರಿಗೂ ಫೋನು ಮಾಡುತ್ತಿದ್ದ ನಾನು ಮರುಕ್ಷಣವೇ ಇಲ್ಲ, ಮತ್ತೆ ಹೀಗಾಗಿದೆ ಎಂಬ ಸುದ್ದಿಯನ್ನೂ ತಿಳಿಸಬೇಕಾಗುತ್ತಿತ್ತು.

ಹಾನಿಗೊಳಗಾಗಿರುವ ನರ ಸ್ಮೃತಿಗೆ ಸಂಬಂಧಿಸಿದ್ದಾಗಿರುವುದರಿಂದ ಅಪ್ಪನಿಗೆ ಭಾಷೆ ಹಾಗೂ ನೆನಪು ನಷ್ಟವಾಗಿವೆಯೆಂದೇ ಡಾಕ್ಟರು ಪ್ರತಿಪಾದಿಸಿದರು. ಸಾಲು ಸಾಲಾಗಿ ಬಂದೆರಗುತ್ತಿರುವ ಕೆಟ್ಟ ಸುದ್ದಿಗಳ ಪೈಕಿ ಇದೆಷ್ಟನೆಯದು? ಅಪ್ಪನ ಬದುಕಿನ ಅತ್ಯಮೂಲ್ಯ ಭಾಗವೆಂದರೆ ನೆನಪುಗಳು. ತನ್ನ ಬಾಲ್ಯದಿಂದ ಹಿಡಿದು ತೀರಾ ನೆನ್ನೆ ಮೊನ್ನೆಯ ತನಕದ ಪ್ರತಿಯೊಂದು ಘಟನೆಯನ್ನೂ ಅವನು ಇಸವಿ ಸಮೇತ ನೆನಪಿಟ್ಟುಕೊಂಡಿದ್ದ. ಐದನೇ ವಯಸ್ಸಿನಲ್ಲಿದ್ದಾಗ ತನ್ನಮ್ಮನ ಜೊತೆ ಅಜ್ಜನ ಮನೆಗೆ ಹೋಗಿದ್ದು, ಎಲ್ಲೋ ಕಾಣಿಸಿಕೊಂಡ ಹುಲಿ ನೇರ ಮನೆಯ ಕೊಟ್ಟಿಗೆಗೇ ನುಗ್ಗಿದ್ದು, ಅದನ್ನು ಊರಿನ ಬೇಟೆಗಾರನೊಬ್ಬ ಹೊಡೆದದ್ದು, ತಾನು ಹೈಸ್ಕೂಲಿನಲ್ಲಿದ್ದಾಗ ಗ್ರಾಮಪಂಚಾಯತಿ ಕಛೇರಿಗೆ ಗ್ರಾಮಾಫೋನು ಬಂದಿದ್ದು, ರಾಜ್ ಕುಮಾರ್ ಲೀಲಾವತಿಯ ಹೊಸ ಸಿನೆಮಾ ಬಂದದ್ದು, ಮದುವೆಯಾಗಿ ಮೊದಲ ಬಾರಿಗೆ ಮಾವನ ಮನೆಗೆ ತೆರಳಿದ್ದು.. ಪ್ರತಿಯೊಂದು ನೆನಪನ್ನೂ ಅಮೂಲ್ಯ ರತ್ನದಂತೆ ಕಾಪಿಟ್ಟುಕೊಂಡಿದ್ದ ಅಪ್ಪ. ಇಂತಿದ್ದವನನ್ನು ನೆನಪುಗಳ ಹೊರತಾಗಿ ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಆದರೆ ನಮ್ಮ ಆಗಿನ ಪರಿಸ್ಥಿತಿ ಹೇಗಿತ್ತೆಂದರೆ ತೀರಾ ಕಾಲ ಬುಡಕ್ಕೇ ಬಂದಿರುವ ಸಾವಿನ ಬಳಿ ಏನು ಬೇಕಾದರೂ ಒಯ್ಯಿ, ಆದರೆ ಜೀವವೊಂದನ್ನುಳಿಸು ಎಂಬ ಕಟ್ಟಕಡೆಯ ಚೌಕಾಶಿಗೆ ಇಳಿದಾಗಿತ್ತು. ಕೈ ಇಲ್ಲ, ಪರವಾಗಿಲ್ಲ. ಕಾಲಿಲ್ಲ ಪರವಾಗಿಲ್ಲ. ಮಾತಿಲ್ಲ ಅದೂ ಪರವಾಗಿಲ್ಲ. ಆದರೆ ಜೀವವೊಂದು ಉಳಿದು ಅಪ್ಪ ಮನೆಗೆ ಬರಲಿ, ಇಡೀ ಬದುಕಿನುದ್ದಕ್ಕೂ ಅವನನ್ನು ಮಲಗಿಸಿಕೊಂಡಾದರೂ ಸಾಕಿಬಿಡುತ್ತೇವೆಂಬ ನಿಲುವು ನನ್ನದೂ, ಅಮ್ಮನದೂ ಆಗಿತ್ತು. ಆದರೆ ಅದೃಷ್ಟವಶಾತ್ ಡಾಕ್ಟರ ಈ ಅಭಿಪ್ರಾಯ ತಪ್ಪೆಂಬಂತೆ ಒಮ್ಮೆ ಸಿಟಿ ಸ್ಕ್ಯಾನಿಗೆ ಸ್ಟ್ರೆಚರ್ ಮೇಲೆ ಕರೆದೊಯ್ಯುತ್ತಿದ್ದ ವೇಳೆಗೆ ನರ್ಸು, ವಾರ್ಡ್ ಬಾಯ್ ಗಳ ಮಧ್ಯೆ ನಿಂತಿದ್ದ ನನ್ನನ್ನು ಅಪ್ಪ ತೆರೆದ ಅರೆಬರೆಗಣ್ಣಿನಲ್ಲೇ ಗುರುತಿಸಿಬಿಟ್ಟ. ಬಹಳ ಕಷ್ಟದಲ್ಲಿ ಕದಲುತ್ತಿದ್ದ ಆ ಕಣ್ಣುಗಳು ನನ್ನನ್ನೇ ಹಿಂಬಾಲಿಸುತ್ತಿರುವುದನ್ನು ಗಮನಿಸಿದ ನನಗೆ ಅಪ್ಪನ ಸ್ಮೃತಿಪಟಲದಲ್ಲಿ ನನ್ನ ದಾಖಲೆಯಿನ್ನೂ ಉಳಿದಿರುವುದು ಖಾತರಿಯಾಯಿತು.

ನಾಲ್ಕು ದಿನಗಳ ಬಳಿಕ ಅಪ್ಪನನ್ನು ಐಸಿಯುಗೆ ಬದಲಾಗಿ ಒಬ್ಬರು ಜೊತೆಗಿರಬಹುದಾದ ನ್ಯೂರೋ ಐಸಿಯುನಲ್ಲಿರಿಸಿದರು. ಇಷ್ಟು ದಿನ ದಿನಕ್ಕೆರೆಡೇ ಬಾರಿ ಕಾಣಸಿಗುತ್ತಿದ್ದ ಅಪ್ಪನ ಪ್ರತಿ ಕ್ಷಣದ ಕದಲಿಕೆಯನ್ನೂ ಈಗ ನೋಡಬಹುದಾಗಿತ್ತು. ಅವನ ಮೂಗಿಗೆ ಆಹಾರದ ಪೈಪನ್ನು ಜೋಡಿಸಲಾಗಿತ್ತು. ಗಂಟಲಲ್ಲೊಂದು ತೂತು ಮಾಡಿ ಅಲ್ಲಿಗೆ ಉಸಿರಾಟದ ಕೊಳವೆಯನ್ನು ಇಡಲಾಗಿತ್ತು. ಇನ್ನು ತಲೆಗೆ ಸುತ್ತಿದ ಬ್ಯಾಂಡೇಜಿನೊಳಗಿನಿಂದ ಹೊರಕ್ಕೆ ಚಾಚಿ ಬಂದ ಎರೆಡು ಕೊಳವೆಗಳಿದ್ದವು. ಡ್ರೈನ್ ಎಂದು ಕರೆಯುವ ಆ ಪಾರದರ್ಶಕ ಕೊಳವೆಗಳೊಳಗೆ ಹರಿದ ನೆತ್ತರಿನ ಸ್ಪಷ್ಟ ಗುರುತಿತ್ತು. ಅದರ ಅಂಚಿನಲ್ಲಿದ್ದ ಕ್ಯಾನಿನಲ್ಲಿ ಈಗಾಗಲೇ ಬಸಿದ ನೆತ್ತರು ಶೇಖರಣೆಯಾಗಿತ್ತು. ಅದೇನು ಆಪರೇಶನ್ ಗಾಯದಿಂದ ಹರಿದ ನೆತ್ತರೋ ಇಲ್ಲಾ ನೇರ ಮೆದುಳಿನಿಂದಲೇ ಹರಿದ ರಕ್ತವೋ? ಯಾವುದೇ ಆದರೂ ಅದು ಅಪ್ಪನ ಮುಖಕ್ಕೆ ಇನ್ನಿಲ್ಲದ ಭೀಕರತೆಯನ್ನು ಕೊಟ್ಟಿತ್ತು. ಹೀಗೆ ನಾಲ್ಕಾರು ನಾಳ, ಕೊಳವೆ, ಸೂಜಿಗಳು ಅಪ್ಪನಿಗೆ ಅಂಟಿಕೊಂಡು ಒಯ್ದಲ್ಲೆಲ್ಲಾ ಅವನನ್ನು ಹಿಂಬಾಲಿಸುತ್ತಿದ್ದವು.‌
ಅವನ ಪ್ರತಿ ಸೆಕೆಂಡಿನ ನರಳಿಕೆಯೂ ಈಗ ನನ್ನ ಕಣ್ಮುಂದೆಯೇ ಜರುಗುತ್ತಿತ್ತು. ನಿಶ್ಚಲವಾಗಿ ಬಿದ್ದ ಅಪ್ಪನ ಎಡಗೈ ಅದೇನನ್ನೋ ಸರಿಪಡಿಸಿಕೊಳ್ಳುವುದಕ್ಕೆ, ಕಾಣದ ಅದ್ಯಾವುದೋ ಗಾಯವನ್ನು ಸಂತೈಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವಂತೆ ಹಠಾತ್ತನೆ ಎದ್ದು, ಅದು ಸಾಧ್ಯವಾಗದೇ ಥಟ್ಟನೆ ಕೆಳಕ್ಕೆ ಬೀಳುತ್ತಿತ್ತು. ಆ ಒಂದೊಂದು ನಿಮಿಷವೂ ಅತ್ಯಂತ ಭಯಾನಕವಾಗಿತ್ತು‌‌. ರಾತ್ರೆ ಮಂಚದ ಪಕ್ಕದಲ್ಲಿ ಕೆಳಗೆ ಮಲಗುತ್ತಿದ್ದ ನನಗೆ ಮೇಲೆ ಮಂಚದಲ್ಲಿ ಕೊಂಚ ಸದ್ದಾದರೂ ಅಪ್ಪ ಮಗ್ಗಲು ಬದಲಿಸಿದನೇನೋ ಅನ್ನಿಸಿ ನಿದ್ರೆಗಣ್ಣಿನಲ್ಲೇ ಖುಷಿಯಾಗುತ್ತಿತ್ತು. ಎದ್ದು ನೋಡಿದರೆ ಅಪ್ಪ ಯಾವ ಚಲನೆಯಿಲ್ಲದೆ ಹಾಗೆಯೇ ಮಲಗಿಕೊಂಡು ನಿರಾಸೆ ಹುಟ್ಟಿಸುತ್ತಿದ್ದ. ನರ್ಸ್ ಅದೆಂಥದೋ ನಾಳವನ್ನು ಅಪ್ಪನ ಕತ್ತಿನಲ್ಲಿ ಮಾಡಿದ್ದ ತೂತಿನಲ್ಲಿ ತುರಕಿ ಯಂತ್ರವೊಂದಕ್ಕೆ ಜೋಡಿಸುತ್ತಿದಳು. ಇದ್ದಕ್ಕಿದ್ದಂತೆ ಗಾಳಿ ಗಂಟಲಿನೊಳಗೆ ನುಗ್ಗಿದ್ದಂತೆ ಅಪ್ಪ ಗಂಟಲು, ಮೂಗುಗಳಿಂದ ಕೆಮ್ಮುತ್ತಾ ಎದ್ದೆದ್ದು ಬೀಳುತ್ತಿದ್ದ. ಅರೆ ತೆರೆದ ರೆಪ್ಪೆಯೊಳಗಿನ ಅವನ ಕಣ್ಣು ವಿಕಾರವಾಗಿ ಮೇಲೆಸಿಕ್ಕಿಕೊಳ್ಳುತ್ತಿತ್ತು. ಕಫ ತೆಗೆಯುವ ಈ ಭೀಕರ ಸ್ಥಿತಿಯನ್ನು ನೋಡಲಾಗದೇ ಪ್ರತೀ ಬಾರಿಯೂ ನಾನು ಅಲ್ಲಿಂದ ಎದ್ದು ಹೊರನಡೆದುಬಿಡುತ್ತಿದ್ದೆ. ಅಳು ಒತ್ತರಿಸಿಕೊಂಡು ಬರುತ್ತಿತ್ತು. ಕಾರಿಡಾರಿನ ಕಂಬದೆದುರು ಬಂದು ಮೌನವಾಗಿ ನಿಲ್ಲುತ್ತಿದ್ದೆ. ಈ ಕ್ಷಣಕ್ಕೆ ಈ ಕಂಬದಷ್ಟೇ ನಿರ್ಭಾವುಕವಾಗಿ, ಗಟ್ಟಿಯಾಗಿ ನಿಲ್ಲಬೇಕು. ಹಾಗೆಂದು ಸುಧಾರಿಸಿಕೊಳ್ಳುತ್ತಾ ಒಳಗೆ ಹೋಗಿ ನೋಡಿದರೆ ಅಪ್ಪ ಮುಖವನ್ನು ವಾಲಿಸಿಕೊಂಡು, ಅರೆಬರೆ ಬಾಯ್ತೆರೆದು ಮತ್ತೆ ನಿದ್ರೆಗೆ ಶರಣಾಗಿದ್ದ. ಅವನ ಕಣ್ಣಿನಿಂದ ಇಳಿದಿದ್ದ ಕಂಬನಿ ದಿಂಬನ್ನು ತೋಯಿಸಿತ್ತು.

ಮೇಲಿಂದ ಮೇಲೆ ಸಿಟಿ, ಎಮ್ಮಾರೈ ಸ್ಕ್ಯಾನುಗಳಾದವು. ಪ್ರತಿಯೊಂದು ರಿಪೋರ್ಟೂ ತಲೆಯೊಳಗೆ ನೆತ್ತರು ಹರಿದ ಗುರುತನ್ನು ಹೊತ್ತುಕೊಂಡೇ ಪ್ರಕಟವಾಗುತ್ತಿತ್ತು. ಏನೇ ಹೆಣಗಿದರೂ ಒಮ್ಮೆಯಾದರೂ ರಕ್ತಸ್ರಾವ ನಿಂತ ಒಂದೇ ಒಂದು ಸುದ್ದಿ ನಮ್ಮನ್ನು ತಲುಪಲಿಲ್ಲ. ಈ ನಡುವೆ ಶನಿವಾರದ ಹೊತ್ತಿಗೆ ಅಪ್ಪನ ಎಡಗೈ-ಕಾಲುಗಳಲ್ಲಿದ್ದ ಸಣ್ಣ ಚಲನೆಯೂ ಭಾನುವಾರದ ಹೊತ್ತಿಗೆ ಸ್ತಬ್ದವಾಗಿಹೋಯಿತು. ಮುಖದಲ್ಲಿ ಯಾತನೆ ಬೆರೆತ ನಿದ್ರೆಯೊಂದು ಪ್ರತ್ಯಕ್ಷವಾಯಿತು. ಹ್ಯಾಮರೇಜ್ ಆದ ದಿನಕ್ಕಿಂತಲೂ ಹೆಚ್ಚಿನ ಅನಾರೋಗ್ಯ ತೀರಾ ಬರಿಗಣ್ಣಿಗೂ ಕಾಣುವಷ್ಟು ಸ್ಪಷ್ಟವಾಗಿ ಅವನಲ್ಲೀಗ ಉದ್ಭವಿಸಿತು. ಈ ಎಲ್ಲ ಏರಿಳಿತಗಳ ಕೊನೆಗೆ ಒಂದು ತೀರ್ಮಾನಕ್ಕೆ ಬಂದ ಡಾಕ್ಟರು ಸೋಮವಾರದ ವೇಳೆಗೆ 'ತಲೆಯೊಳಗೆ ರಕ್ತಸ್ರಾವವಿನ್ನೂ ನಿಂತಿಲ್ಲ. ಇನ್ನೊಂದು ಆಪರೇಶನ್ ಮಾಡಲೇಬೇಕು' ಎಂದು ಘೋಷಿಸಿಯೇ ಬಿಟ್ಟರು.

ಮನಸ್ಸೀಗ ದುಃಖ ಪಡಲೂ ಆಗದಷ್ಟು ದಣಿದುಹೋಗಿತ್ತು. ಯಾರಿಗೂ ಏನೂ ಹೇಳದೇ, ಯಾರ ಜೊತೆಗೂ ಮಾತನಾಡದೇ ಅಪ್ಪನ ಕಾಲಬುಡದಲ್ಲಿ ಸುಮ್ಮನೆ ಮಲಗಿಬಿಡಬೇಕೆನಿಸಿತು.

ಅಪ್ಪ ಮಾತ್ರ ಈ ಎಲ್ಲ ದುಃಖಾತಂಕಗಳ ಮೀರಿದ ಧ್ಯಾನದಲ್ಲಿರುವಂತೆ ಗಾಢ ನಿದ್ರೆಯಲ್ಲಿದ್ದ.

*************

ಅದು ಆಪರೇಷನ್ ಥಿಯೇಟರ್ ನ ಹೊರಗಿನ ಜಗುಲಿ.

ದೇವರೆಂಬ ದೇವರೂ ಭಯಭೀತನಾಗಿ ಆಚೀಚೆ ಶತಪತ ಓಡಾಡುವ ಜಾಗವದು. ಅದೆಷ್ಟೋ ಸಿನೆಮಾ, ಧಾರಾವಾಹಿಗಳಲ್ಲಿ ನಾಯಕ-ನಾಯಕಿಯರನ್ನು ಹೀಗೆ ಶಥಪಥ ಆಚೀಚೆ ಓಡಾಡಿಸಿದ್ದರೂ ಈ ಕಾಯುವಿಕೆಯಲ್ಲಿನ ನಿಜವಾದ ನೋವೇನೆಂಬುದು ಅರ್ಥವಾಗುವುದು ನಮ್ಮ ಪ್ರೀತಿಪಾತ್ರರೊಬ್ಬರ ಜೀವ ಒಳಗಡೆ ಕತ್ತರಿ-ಸೂಜಿಗಳಂಚಿನಲ್ಲಿ ನಿರ್ಧರಿತವಾಗಿರುವ ಸೂಕ್ಷ್ಮ ಪರಿಸ್ಥಿತಿಯಲ್ಲಿ ಮಾತ್ರ. ಇಲ್ಲಿ ಒಂದೊಂದು ನಿಮಿಷವೂ ಗಂಟೆಯಾಗಿ, ಗಂಟೆಗಳು ದಿನವಾಗಿ, ದಿನ ಯುಗವಾಗಿ ಜಾರುತ್ತದೆ. ಪ್ರತೀ ಬಾರಿ ನರ್ಸ್ ಅಥವಾ ಡಾಕ್ಟರೊಬ್ಬರು ಈ ಕೋಣೆಯ ಬಾಗಿಲು ತೆಗೆದು ಆಚೆ ಬಂದಾಗಲೂ ಅಲ್ಲಿರುವವರಲ್ಲರೂ ಉದ್ವೇಗದಲ್ಲಿ ಎದ್ದು ನಿಲ್ಲುತ್ತಾರೆ. ಅವರೆಲ್ಲರ ಕಣ್ಣಲ್ಲೂ 'ಒಳಗಿರುವ ನಮ್ಮವರು ಸೌಖ್ಯವಾಗಿದ್ದಾರೆಂಬ ಒಂದೇ ಒಂದು ಸಿಹಿ ಸುದ್ದಿ ಹೇಳಿ' ಎಂಬ ಅಯಾಚಿತ ಪ್ರಾರ್ಥನೆಯಿರುತ್ತದೆ.

ಮೂರು ಗಂಟೆಗಳು ಜರುಗಿ ಆಪರೇಶನ್ ಮುಗಿಯುವಷ್ಟರಲ್ಲಿ ಒಂದು ಜನುಮವೇ ಕಳೆದುಹೋಯಿತೇನೋ ಎಂಬಷ್ಟು ದಣಿವಾಗಿತ್ತು ನನಗೆ. ಒಂದು ಕೈಯಲ್ಲಿ ಸಣ್ಣ ಬಟ್ಟಲನ್ನೂ, ಇನ್ನೊಂದು ಕೈಯಲ್ಲಿ ಅಂಗೈಯಗಲದ ಕಪ್ಪೆಚಿಪ್ಪಿನಂಥಹಾ ರಚನೆಯನ್ನೂ ಹಿಡಿದಿದ್ದ ಡಾಕ್ಟರೊಬ್ಬರು 'ಬಾಲಕೃಷ್ಣ ಕಡೆಯವರ್ಯಾರು?' ಎನ್ನುತ್ತಾ ಆಪರೇಷನ್ ಥಿಯೇಟರ್ ನ ಬಾಗಿಲಿನಲ್ಲಿ ಪ್ರತ್ಯಕ್ಷವಾದರು. ಅತ್ತ ಓಡಿದೆ. 'ನೋಡಿ, ತಲೆಯೊಳಗಿನಿಂದ ಇಷ್ಟು ರಕ್ತವನ್ನು ಹೊರತೆಗೆದಿದ್ದೇವೆ' ಎನ್ನುತ್ತಾ ಕೈಯಲ್ಲಿನ ಬಟ್ಟಲು ತೋರಿಸಿದರು. ಅದರೊಳಗೆ ಕೆಂಪು ಚೆರ್ರಿ ಹಣ್ಣನ್ನು ಗಿವುಚಿ, ನೀರಿನೊಂದಿಗೆ ಕಲಸಿಟ್ಟಂಥಹಾ ಮಡ್ಡಿ ದ್ರಾವಣವೊಂದಿತ್ತು. ಇನ್ನೊಂದು ಕೈಯಲ್ಲಿದ್ದ ಚಿಪ್ಪನ್ನು ತೋರಿಸುತ್ತಾ 'ಇದು ತಲೆಯೊಳಗಿನ ಚಿಪ್ಪು. ತಲೆಯೊಳಗೆ ರಕ್ತಸ್ರಾವವಾದಾಗ ಇದರ ಹಾಗೂ ಮೆದುಳಿನ ಮಧ್ಯೆ ರಕ್ತ ಬಂದು ಕುಳಿತು, ಇಕ್ಕಟ್ಟು ಉಂಟಾಗಿ ಮೆದುಳಿಗೆ ತೊಂದರೆಯಾಗುತ್ತದೆ. ಒಂದುವೇಳೆ ರಕ್ತ ಹರಿದರೂ ಅಷ್ಟೊಂದು ಒತ್ತಡ ಉಂಟಾಗದಿರಲೆಂದು ಇದನ್ನು ಸಧ್ಯಕ್ಕೆ ತೆಗೆದಿದ್ದೇವೆ. ಇದು ನಮ್ಮ ಬಳಿಯೇ ಇರುತ್ತದೆ' ಎಂದು ತುಸು ತಡೆದವರು 'ನೋಡಿ, ಇದು ನಮ್ಮ ಕೊನೆಯ ಪ್ರಯತ್ನ‌. ಈ ಬಾರಿಯೂ ಬಿಪಿ ನಿಯಂತ್ರಣಕ್ಕೆ ಬಾರದೆ ರಕ್ತಸ್ರಾವವಾದರೆ ನಾನೇನೂ ಮಾಡಲಾಗುವುದಿಲ್ಲ' ಎಂದು ಖಡಾಖಂಡಿತವಾಗಿ ಹೇಳಿ ನಡೆದುಬಿಟ್ಟರು.

ಮೂರ್ಛೆ ಬಂದಂತೆನಿಸಿತು. ಏನಿದು ದೇವರೇ ಇಷ್ಟೊಂದು ಯಾತನೆ? ಈ ಮಡ್ಡಿಮಡ್ಡಿಯಾದ ರಕ್ತ, ತುಂಡಾದ ನರ, ಈ ಮೂಳೆಯ ಕವಚ, ನೆನ್ನೆಯ ತನಕ ಸರಿಯಿದ್ದು ಇಂದು ಮಿತಿಮೀರಿದ ಬಿಪಿ.. ಇವನ್ನೆಲ್ಲಾ ಸೃಷ್ಟಿಸಿದವನೂ ನೀನೇ. ತಲೆಯೊಳಗೆ ಇಟ್ಟವನೂ ನೀನೇ. ಈಗ ಅವುಗಳನ್ನೇ ಖಾಯಿಲೆಯಾಗಿಸಿ ಈ ಪರಿಯ ನೋವು ನೀಡುತ್ತಿರುವುದಾದರೂ ಏಕೆ?

ಯಾವ ಮನುಷ್ಯ ತಾನೇ ತನ್ನನ್ನು ಹುಟ್ಟಿಸೆಂದು ನಿನ್ನನ್ನು ಕೇಳುತ್ತಾನೆ? ನೀನೇ ಹುಟ್ಟಿಸುತ್ತೀಯ. ಶರೀರವೆಂಬ ಮತ್ಯಾರೂ ರೂಪಿಸಲಾಗದ ಅತ್ಯದ್ಭುತ ರಚನೆಯನ್ನು ಕಟ್ಟುತ್ತೀಯ. ಮೆದುಳು, ನರಮಂಡಲ, ಹೃದಯ, ಕೈ, ಕಾಲು, ಉದರ, ಜೀವಕೋಶಗಳೆಂಬ ನೂರು-ಸಾವಿರ-ಲಕ್ಷ ಅಂಗಗಳ ಒಂದಕ್ಕೊಂದು ಮೇಳೈಸಿ ಹೆಣೆಯುತ್ತೀಯ. ಎಲ್ಲವೂ ಒಟ್ಟಾಗಿ ಕೆಲಸಮಾಡುತ್ತಾ ರೂಪುಗೊಂಡ ಮನುಷ್ಯನೆಂಬ ಮನುಷ್ಯ ತನ್ನದೇ ಸಂಸಾರ, ಮನೆಗಳ ಬದುಕು ಕಟ್ಟಿಕೊಂಡು ನಗುತ್ತಲೋ, ಅಳುತ್ತಲೋ ತನ್ನ ಪಾಡಿಗೆ ಬದುಕುತ್ತಿರುವಾಗ ಅವುಗಳ ಪೈಕಿ ಯಾವುದೋ ಒಂದು ಅಂಗವನ್ನು ವಿನಾಕಾರಣವಾಗಿ ನೀನಾಗೇ ಕೆಡಿಸುತ್ತೀಯ. ಬೀಳಿಸುತ್ತೀಯ, ಮಲಗಿಸುತ್ತೀಯ, ನರಳಿಸುತ್ತೀಯ, ಪ್ರಜ್ಞೆಯನ್ನೇ ಕಿತ್ತುಕೊಳ್ಳುತ್ತೀಯ. ಅವನ ಬಂಧುಬಾಂಧವರೆಲ್ಲಾ ನಿನ್ನೆದರು ದೀನರಾಗಿ ನಿಂತು ಬೇಡಿಕೊಳ್ಳುವಂತೆ ಮಾಡುತ್ತೀಯ. ನಾವು ಹುಲುಮಾನವರು. ಹುಟ್ಟುತ್ತೇವೆ. ಬೆಳೆಯುತ್ತೇವೆ. ಅಪ್ಪಾ, ಅಮ್ಮಾ, ಮಗುವೇ ಎನ್ನುತ್ತೇವೆ. ಪ್ರೀತಿಸುತ್ತೇವೆ. ದ್ವೇಶಿಸುತ್ತೇವೆ. ಮನೆಕಟ್ಟಿ, ಮದುವೆಯಾಗಿ, ಮಕ್ಕಳ ಹೆತ್ತು, ದುಡಿದು ಬದುಕೊಂದ ಕಟ್ಟಿಕೊಳ್ಳುತ್ತೇವೆ. ನೀ ನಗಿಸಿದಾಗ ನಗುತ್ತೇವೆ. ಅಳಿಸಿದಾಗ ಅಳುತ್ತೇವೆ. ನಿನ್ನನ್ನು ಬೈಯುತ್ತೇವೆ. ಬೈದಿದ್ದನ್ನು ಮರೆತು ಮತ್ತೆ ಪೂಜಿಸುತ್ತೇವೆ. ನಿನಗೆ ಗೊತ್ತು. ಏನೇ ಮುನಿದರೂ, ಬೈದರೂ ಪರಿಸ್ಥಿತಿ ತನ್ನೆಲ್ಲ ಕೈಮೀರದ ನಂತರ ಮನುಷ್ಯ ನಿನ್ನೆದುರು ನಿಲ್ಲಲೇಬೇಕು.

ಕೀಲು ನಿನ್ನ ಕೈಯಲ್ಲಿದೆಯೆಂಬ ಕಾರಣಕ್ಕೆ ಹೀಗೆಲ್ಲಾ ಆಡಿಸುವುದೇನು?

**********

ಮೊದಲ ಸಲ ಒಂದೇ ಒಂದು ನರ ಒಡೆದು ರಕ್ತಸ್ರಾವವಾಗಿದ್ದರೆ ಎರೆಡನೇ ಬಾರಿ ಮೂರು ನರಗಳಲ್ಲಿ ರಕ್ತ ಕೋಡಿಬಿದ್ದು ಮೆದುಳಿನ ಮೇಲೆಲ್ಲಾ ಹರಿದಿತ್ತು. ಅದರ ಪರಿಣಾಮವಾಗಿಯೇ ಅಪ್ಪನ ಎಡ ಕೈ-ಕಾಲುಗಳೂ ಚಲನೆ ನಿಲ್ಲಿಸಿದ್ದವು. ನಾವು ನಿಶ್ಚಲವೆಂದು ತಿಳಿದಿದ್ದ ಅಪ್ಪ ಒಳಗೊಳಗೇ ತೀವ್ರವಾದ ಬಿಪಿ ಹಾಗೂ ರಕ್ತಸ್ರಾವದ ನೋವನ್ನು ನುಂಗುತ್ತಾ ಮಲಗಿದ್ದ.

ಎರೆಡನೇ ಬಾರಿಗೆ ಆಪರೇಶನ್ ಮಾಡಿದ ಕೆಲವೇ ಗಂಟೆಗಳಲ್ಲೇ ಪವಾಡವೆಂಬಂತೆ ಅಪ್ಪ ಇಷ್ಟಗಲಕ್ಕೆ ಕಣ್ತೆರೆದುಬಿಟ್ಟ. ಆದರೆ ಆಚೀಚೆ ಹೊರಳದ ಆ ನೋಟ ಕಣ್ಮುಚ್ಚಿಕೊಂಡ ಸ್ಥಿತಿಯದೇ ಇನ್ನೊಂದು ರೂಪದಂತೆ ಭಾಸವಾಗುತ್ತಿತ್ತು. ಬಿಪಿ ಏಕ್ದಂ 130/80ಕ್ಕೆ ಇಳಿದಿತ್ತು. ಮರುದಿನ ಬೆಳಗ್ಗೆ ಸಿಟಿ ಸ್ಕ್ಯಾನ್ ಮಾಡಿ ನೋಡಿದಾಗ ಕಳೆದ ಎಂಟು ದಿನಗಳಲ್ಲಿ ಇದೇ ಮೊದಲ ಬಾರಿಗೆ ತಲೆಯೊಳಗೆ ರಕ್ತ ಚೆಲ್ಲದ ಚಿತ್ರಗಳು ಗೋಚರಿಸಿದವು.

ಅಪ್ಪನ ಈ ಎಚ್ಚರವನ್ನು ಹೋಲುವ ನಿದ್ರಾಸ್ಥಿತಿಯ ಬಗ್ಗೆ ಎಲ್ಲರೊಂದಿಗೆ ಚರ್ಚಿಸುವಾಗ ಅವನಿಗೆ ಹೊರಗಿನ ಎಲ್ಲಾ ಸಂಗತಿಗಳೂ ತಿಳಿಯುತ್ತಿವೆ ಆದರೆ ಅವುಗಳಿಗೆ ಪ್ರತಿಕ್ರಿಯಿಸಲು ಆಗುತ್ತಿಲ್ಲ ಎಂಬ ಅಭಿಪ್ರಾಯ ಬರತೊಡಗಿತು. ಕದಲಲಾಗದ ಅಸಹಾಯ ಸ್ಥಿತಿ, ನೋವು, ಬ್ಯಾಂಡೇಜು, ಸೂಜಿ, ರಕ್ತ, ಎಲ್ಲೆಡೆಯಿಂದಲೂ ಕೇಳಿಬರುವ ನರಳಾಟ.. ಇವೆಲ್ಲವೂ ಮೌನವಾಗಿ ಅವನ ಆಳ ಪ್ರಜ್ಞೆಯನ್ನು ಕೆಣಕುತ್ತಿವೆಯೇ? ಅದೇ ಅವನ ಬಿಪಿಯ ಏರುಗತಿಗೆ ಕಾರಣವಾಗಿದೆಯೇ?
ಈ ಒಂದು ಯೋಚನೆ ಬಂದ ಮರುಕ್ಷಣದಿಂದ ನಾನು ಅಪ್ಪನೊಂದಿಗೆ ಮಾತನಾಡಲು ಶುರುವಿಟ್ಟುಕೊಂಡೆ. ನಿಮಗೆ ಏನೂ ಆಗಿಲ್ಲ, ಇನ್ನು ಎರೆಡೇ ದಿನ, ಮನೆಗೆ ಹೋಗೋಣ, ನಾವೆಲ್ಲಾ ಇದ್ದೇವೆ, ಅಮ್ಮ ಇದ್ದಾಳೆ, ಅತ್ತೆ ಮಾವ ಇದ್ದಾರೆ, ಮಧುವಿನ ಕಾರು ಬಂದಿದೆ, ನಾಳೆಯೇ ಮೂಡುಗುಡ್ಡೆಗೆ ಹೋಗೋಣ..

ಸುತ್ತಮುತ್ತಲಿದ್ದ ಸಿಸ್ಟರ್, ಪೇಷಂಟುಗಳು ನನ್ನನ್ನು ಹುಚ್ಚನೆಂಬಂತೆ ನೋಡುತ್ತಿದ್ದರೇನೋ? ಅಪ್ಪನೂ ನನ್ನ ಯಾವುದೇ ಮಾತಿಗೆ ಪ್ರತಿಕ್ರಿಯಿಸದೇ ಅವರ ಪರ ವಹಿಸಿಕೊಂಡವನಂತೆ ಸುಮ್ಮನೆ ಮಲಗಿದ್ದ. ಅದಕ್ಕೆ ತಲೆಕೆಡಿಸಿಕೊಳ್ಳದ ನಾನು ಆಗಾಗ ಅಪ್ಪನ ಜೊತೆ ಮಾತನಾಡುವುದನ್ನು ಮುಂದುವರಿಸಿಯೇ ಇದ್ದೆ. ಗಾಜುಗಣ್ಣಿನ ಗೊಂಬೆಯಂತೆ ಆಗಾಗ ಮಿಟುಕುವುದೊಂದನ್ನೇ ಮಾಡುತ್ತಿದ್ದ ಅಪ್ಪ ಕೊನೆಗೂ ನನ್ನೊಂದು ಮಾತಿಗೆ ಸ್ಪಂದಿಸಿಯೇಬಿಟ್ಟ!

ಮನೆಯಲ್ಲಿರುವ ತಮ್ಮ ತೋಟಕ್ಕೆ ಬೇಸಾಯ ಮಾಡಿಸಿದ್ದಾನೆ. ಅಡಿಕೆ ತೋಟವೀಗ ಕ್ಷೇಮವಾಗಿದೆ. ನೀವೇನೂ ಚಿಂತೆ ಮಾಡಬೇಡಿ!

ಎರೆಡನೇ ಆಪರೇಶನ್ ಆದ ಮರುದಿನ ರಾತ್ರೆ ನನ್ನ ತಮ್ಮನೇ ಕೊಟ್ಟಿದ್ದ ಸಲಹೆಯಂತೆ ಅಪ್ಪನ ಕಿವಿಗೆ ಬಹು ಸಮೀಪದಲ್ಲಿ ನಿಂತ ನಾನು ಆ ಒಂದು ಮಾತನ್ನು ಹೇಳಿಬಿಟ್ಟೆ. ಆಗ ಹೊಳೆದವು ಅಪ್ಪನ ಕಣ್ಣು! ಇಷ್ಟು ದಿನ ಶೂನ್ಯದಲ್ಲಿ ನೆಟ್ಟಂತಿದ್ದ, ಎಲ್ಲೋ ಆಗೊಮ್ಮೆ ಈಗೊಮ್ಮೆ ಭಾವಹೀನ ದೃಷ್ಟಿಯಿಂದೆಂಬಂತೆ ನನ್ನತ್ತ ತಿರುಗುತ್ತಿದ್ದ ಅವುಗಳಲ್ಲೀಗ ನೋವಿನ ಬದಲಿಗೆ ಮಗುವಿನ ಕಣ್ಣಲ್ಲಿರುವಂಥಹಾ ಬೆರಗೊಂದು ಉದ್ಭವವಾಯಿತು. ಅಪ್ಪನ ಚಿಂತೆಯ ಮೂಲವೀಗ ನಿಚ್ಚಳವಾಗಿತ್ತು!

"ನೊಣಬೂರಿನ ರವಿ ನೀವು ಹೇಳಿದ ರೇಟಿಗೇ ಬೇಸಾಯ ಮಾಡಿಕೊಟ್ಟಿದ್ದಾನೆ. ನಾಳೆಯ ಹೊತ್ತಿಗೆ ಬೇಸಾಯ ಮುಗಿದೇ ಹೋಗುತ್ತದೆ. ನೀವೇ ತಂದಿಟ್ಟ ಬೇವಿನ ಹಿಂಡಿಯನ್ನು ಹಾಕಿದ್ದಾರೆ. ತಮ್ಮ ಮಳೆಗಾಲಕ್ಕೆ ಔಷಧ ಹೊಡೆಯಲಿಕ್ಕೆಂದು ಮೈಲು ತುತ್ತವನ್ನೂ ತಂದಿಟ್ಟಿದ್ದಾನೆ. ಮುಂದಿನ ತಿಂಗಳು ಖುದ್ದು ನೀವೇ ನಿಂತು ತೋಟಕ್ಕೆ ಔಸ್ತಿ ಹೊಡೆಯುವಿರಂತೆ!"

ಕೇಳುತ್ತಾ ಹೋದಂತೆ ಅಪ್ಪನ ಕಣ್ಣುಗಳು ದೇದೀಪ್ಯವಾದವು. ಕತ್ತು ನನ್ನತ್ತ ಹೊರಳಿತು. ಒಡಲಾಳದಿಂದ ಎದ್ದು ಬಂದ ಮಾತೊಂದು ಗಂಟಲಲ್ಲಿ ಸಿಕ್ಕಿಕೊಂಡಂತೆ ಅಪ್ಪ ತುಟಿ ಕದಲಿಸಿದ! ನಲವತೈದು ವರ್ಷಗಳಿಂದ ತಾನು ಮಗುವಿನಂತೆ ಪಾಲನೆ ಮಾಡಿದ್ದ ತೋಟವೀಗ ತನ್ನ ಅನುಪಸ್ಥಿತಿಯಲ್ಲೂ ಕ್ಷೇಮವಾಗಿದೆಯೆಂಬ ಸುದ್ದಿ ಇಷ್ಟು ದಿನದ ಔಷಧ-ಆಪರೇಶನ್ ಗಳು ಮಾಡಿದ್ದಕ್ಕಿಂತ ಹೆಚ್ಚಿನ ಪರಿಣಾಮವನ್ನೇ ಉಂಟು ಮಾಡಿದ್ದವು. ಚಿಂತೆಯ ಕೀಲಿ ಕೈ ಸಿಕ್ಕಿದ ಖುಷಿಯಲ್ಲಿ ನಾನು ಅವೇ ಮಾತುಗಳನ್ನು ಪುನರುಚ್ಛರಿಸಿ ನಕ್ಕೆ.

ನನ್ನ ಮುಖವನ್ನೇ ದಿಟ್ಟಿಸುತ್ತಿದ್ದ ಅಪ್ಪ ಅದೇ ನಗುವಿನ ಪ್ರತಿಫಲನದಂತೆ ಅರ್ಧ ತುಟಿಯನ್ನಷ್ಟೇ ಕದಲಿಸಿ ನಕ್ಕ!

ಕಳೆದ ಹಲವು ದಿನಗಳ ದುರ್ಘಟನಾ ಸರಣಿಯ ಶುಭಾಂತ್ಯದ ಮೊದಲ ಅಧ್ಯಾಯ ಹಾಗೆ ಅರಂಭವಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...