ಬುಧವಾರ, ಜುಲೈ 8, 2020

ಅಪ್ಪ.. ಐ ಲವ್ ಯು ಅಪ್ಪಾ.. -1

ನಮ್ಮ ಬದುಕಿನಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ಅದರ ಎಲ್ಲಾ ಪರಿಣಾಮ, ಪ್ರಭಾವಗಳಿಗೂ ನಾವು ಮಾತ್ರ ಫಲಾನುಭವಿಗಳೂ, ಹೊಣೆಗಾರರೂ ಆಗಿದ್ದರೂ ಅವನ್ನು ನಾಲ್ಕು ಜನರೆದುರು ಹೇಳಿಕೊಳ್ಳಲೇಬೇಕು. ಅದು ಕೇವಲ ನಮ್ಮ ಮನದ ಭಾರವನ್ನು ಕಡಿಮೆಮಾಡಿಕೊಳ್ಳಲಿಕ್ಕಾಗಿಯಲ್ಲ. ಅಥವಾ ನಾಲ್ಕು ಜನರ ಸಿಂಪಥಿ ಗಿಟ್ಟಿಸಲಿಕ್ಕೂ ಅಲ್ಲ. ಬದುಕಿನ ತಿರುವೊಂದರಲ್ಲಿ ನಮಗರಿವೆಲ್ಲದಂತೆ ಕಷ್ಟಗಳು ಹೇಗೆ ಧುತ್ತೆಂದು ಕಣ್ಣಮುಂದೆ ನಿಂತುಬಿಡುತ್ತವೆಂಬುದನ್ನು ಉಳಿದವರಿಗೆ ಅರ್ಥಮಾಡಿಸಲಿಕ್ಕೆ. ಅಂಥಹಾ ಅನಿರೀಕ್ಷಿತ ಘಳಿಗೆಯಲ್ಲಿ ನಾವು ಮಾಡುವ ತಪ್ಪು, ಪ್ರಮಾದ, ಯೋಚಿಸಿದ ಬಗೆ, ಗಡಿಬಿಡಿಯಲ್ಲಿ ತುಳಿದ ತಪ್ಪು ಹಾದಿ, ತೋರಿದ ಜಾಣ್ಮೆಗಳನ್ನು ಉಳಿದವರಿಗೆ ಹೇಳಲಿಕ್ಕೆ. ಎಲ್ಲವೂ ಸರಿಯಾಗಿದ್ದಾಗ ನಾವು ನನಗೆ ಯಾರೂ ಬೇಡ, ನಾನೊಬ್ಬನೇ ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬ ಒಣ ಜಂಭದಿಂದ ಬೀಗುತ್ತಿರುತ್ತೇವೆ. ಆದರೆ ಅದೃಷ್ಟರೇಖೆಯೆಂಬ ದೇವರು ಎಳೆದ ಗ್ರಾಫ್ ಎಲ್ಲಾ ಕಾಲದಲ್ಲೂ ಸಮನಾಂತರವಾಗಿರುವುದಿಲ್ಲ. ಅದು ನಮ್ಮನ್ನು ಹೇಗೆ ಅಸಹಾಯಕತೆಯ ಕಾರಿಡಾರಿನಲ್ಲಿ ಕೈಕಟ್ಟಿ ನಿಲ್ಲಿಸಿಬಿಡುತ್ತದೆಂಬುದು ಆ ಹಾದಿಯಲ್ಲಿ ಸಾಗಿದವರನ್ನು ನೋಡಿ ನಾವು ತಿಳಿಯಬೇಕಾದ ಪರಮ ಸತ್ಯ.

ಈ ಕೆಳಗಿನ ಬರಹ ನಾನು ಆಸ್ಪತ್ರೆಯ ನಸುಗತ್ತಲ ಅಸಹಾಯ ಕಾರಿಡಾರುಗಳಲ್ಲಿ, ಮುಗಿಯದ ಯಾತನೆಯಲ್ಲಿ ನಿಶ್ಚಲನಾಗಿ ಮಲಗಿರುವ ಅಪ್ಪನ ಮಂಚದ ಕಾಲ ಬುಡದಲ್ಲಿ, ಆಪರೇಶನ್ ಥಿಯೇಟರ್ ನ ಹೊರಗಿನ ಭಯಾನಕ ಮೌನದಲ್ಲಿ ಕುಳಿತು ಬರೆದದ್ದು. ತೀರಾ ಯಾರ ಸಾಂತ್ವನವೂ ಕವಿದ ಆತಂಕವನ್ನು ನಿವಾರಿಸಲಾಗದೇ ಹೋದಾಗೆಲ್ಲಾ ಸಂತೈಸಿದ್ದು ಈ ಬರಹ. ಅತ್ಯಂತ ಆತ್ಮೀಯವೆಂದು ನಂಬಿದ ಜೀವವೂ ನಿನ್ನ ಕಷ್ಟ ನಿನಗೆ, ನನ್ನ ಜೀವನ ನನಗೆ ಎಂದು ಕೈಕೊಡವಿದ ಮರುಕ್ಷಣ ಮನಸ್ಸಿನ ಆರೈಕೆಗೆ ನಿಂತಿದ್ದೂ ಇದೇ ಓದು-ಬರಹ. ಸ್ವಗತದಂತೆ, ಬಡಬಡಿಕೆಯಂತೆ, ದೇವರೆದುರು ನಿಂತು ಮಾಡಿದ ಪ್ರಾರ್ಥನೆಯಂತೆ ಇದನ್ನೆಲ್ಲ ಬರೆದಿದ್ದೇನೆ.

ಪ್ರಾರ್ಥಿಸಿದಾಗ ಕೇಳಿಸಿಕೊಳ್ಳದೇ ಹೋದ ದೇವರು ಬಿಡುವಾಗಿ ಕುಳಿತ ಯಾವ ಹೊತ್ತಿನಲ್ಲಾದರೂ ಓದಿ ಹರಸಿಯಾನೆಂಬ ಸಣ್ಣ ಆಸೆಯಲ್ಲಿ.

****************

ಅಪ್ಪನಿಗೆ ಬ್ರೈನ್ ಹ್ಯಾಮರೇಜ್ ಆಯಿತು.
ಆದರೆ ನಾವದನ್ನು ಸಣ್ಣ ಸ್ಟ್ರೋಕ್ ಎಂದು ತಪ್ಪಾಗಿ ತಿಳಿದೆವು.

ಅದು ಮೇ ಹನ್ನೆರೆಡರ ಮಧ್ಯರಾತ್ರೆ 12/12:30ರ ಸಮಯ. ಆ ದೌರ್ಭಾಗ್ಯದ ಕತ್ತಲು ನಮ್ಮನೆಯ ಮೆಲಿನ ಬಾನನ್ನು ಆವರಿಸಿಕೊಳ್ಳುವ ಮುನ್ನವೇ ಮಳೆಯೊಂದು ಧೋ ಎಂದು ಸುರಿದುಹೋಗಿತ್ತು. ಅಶುಭದ ಮೊದಲ ಸೂಚನೆಯಂತೆ ಕರೆಂಟೂ ಹೋಗಿತ್ತು. ಸಾಲದ್ದಕ್ಕೆ ಕಾಡುಕೋಣಗಳ ಗುಂಪೊಂದು ಮನೆಯ ಹಿಂದೆಯೇ ಇದ್ದ ತೋಟಕ್ಕೆ ಮತ್ತೆಮತ್ತೆ ಭೇಟಿ ಕೊಡುತ್ತಾ ಭಯ ಹುಟ್ಟಿಸಿತ್ತು. ಇಷ್ಟೆಲ್ಲ ಭೀತಿಗಳ ಸಮೇತ ಮುಸುಕಿನಿಂತಿದ್ದ ಆ ಕತ್ತಲ ನಡುರಾತ್ರೆಯ ವೇಳೆಗೆ ಅದೇಕೋ ಅಮ್ಮ ಇದ್ದಕ್ಕಿದ್ದಂತೆ ಎದ್ದು ಕುಳಿತಳು. ಎಂದೂ ಇಲ್ಲದ್ದು ಅಂದು ಅವಳಿಗೆ ಹೊರಗೆ ಹೋಗಬೇಕಿತ್ತು. ರಾತ್ರೆ, ಕತ್ತಲು, ಕಾಡುಕೋಣದ ಭಯ.. ಪಕ್ಕದಲ್ಲಿದ್ದ ಅಪ್ಪನನ್ನು ಎಬ್ಬಿಸಲು ಪ್ರಯತ್ನಿಸಿದಳು. ತಟ್ಟಿದಳು, ಕರೆದಳು, ಅಲ್ಲಾಡಿಸಿದಳು.. ಊಹೂಂ, ಅಪ್ಪ ಗಾಢ ನಿದ್ರೆಯಲ್ಲಿದ್ದ. ಸರಿ, ತಾನೊಬ್ಬಳೇ ಎದ್ದು ಬಚ್ಚಲಿಗೆ ಹೋಗಿಬಂದು ಮತ್ತೆ ಮಲಗಿದಳು‌.

ಆಗ ಎದ್ದ ಅಪ್ಪ. ಕೆಲವೇ ನಿಮಿಷದ ಮುನ್ನ ಅಮ್ಮ ಎಷ್ಟೆಲ್ಲಾ ಕರೆದು, ತಟ್ಟಿ, ಅಲ್ಲಾಡಿಸಿದಾಗಲೂ ಏಳದವನು ಯಾರೋ ಕರೆದಂತೆ ತಾನಾಗಿಯೇ ಎದ್ದು ಹೊರನಡೆದುಬಿಟ್ಟ. ಹಾಗೆ ಎದ್ದವನು ನೇರ ಬಚ್ಚಲಿಗೆ ನಡೆದದ್ದೂ, ಅಲ್ಲಿ ಅವನು ನಲ್ಲಿ ತಿರುಗಿಸಿ ನೀರು ಬಿಟ್ಟದ್ದೂ ಶಬ್ದಗಳಾಗಿ ಅಮ್ಮನ ಅರಿವಿಗೆ ಬಂದವು. ಆದರೆ ನಿದ್ರೆಗಣ್ಣಿನಲ್ಲಿದ್ದ ಅಮ್ಮನನ್ನು ಯೋಚನೆಗೆ ದೂಡಿದ್ದು ಅದ್ಯಾವುದೂ ಅಲ್ಲ. ಅಲ್ಲಿ ಬಚ್ಚಲಿನೊಳಗೆ ಅಪ್ಪ ಆಡತೊಡಗಿದ್ದ ಗೊಜಗೊಜ ಮಾತು!

ಮೊದಲಿಗೆ ಅಪ್ಪ ಬಚ್ಚಲಿನ ಕಟ್ಟೆಯ ಮೇಲಿಟ್ಟ ಬಕೇಟಿನಲ್ಲಿದ್ದ ನೀರನ್ನು ಖಾಲಿ ಮಾಡಿಟ್ಟಿರುವ ನನ್ನ ತಮ್ಮನಿಗೆ ಬೈಯುತ್ತಿದ್ದಾನೆಂದೇ ಅಮ್ಮ ಭಾವಿಸಿದಳು. ಆದರೆ ಒಂದು ನಿಮಿಷಕ್ಕೆಲ್ಲಾ ಮರಳಿ ಬಂದು ಮಗ್ಗುಲಲ್ಲಿ ಮಲಗಿದಮೇಲೂ ಅಪ್ಪನ ಗೊಣಗಾಟ ಮುಂದುವರಿದೇ ಇತ್ತು. ತೀರಾ ಪಕ್ಕದಲ್ಲೇ ಇದ್ದೂ ಅವನೇನು ಹೇಳುತ್ತಿದ್ದಾನೆಂಬುದು ಅಮ್ಮನ ಅರಿವಿಗೆ ಬಾರದಾಯಿತು. ಏನೆಂದು ಕೇಳಿದಳಾದರೂ ಆ ಪ್ರೆಶ್ನೆ ಅಪ್ಪನನ್ನು ತಾಕಲಿಲ್ಲ. ಅಷ್ಟರಲ್ಲಿ ವರಸೆ ಬದಲಿಸಿದ ಅಪ್ಪ ಮಲಗುವ ಮುನ್ನ ಸದಾ ತನ್ನ ಪಕ್ಕದಲ್ಲಿಟ್ಟುಕೊಳ್ಳುತ್ತಿದ್ದ ಫಸ್ಟೇಯ್ಡ್ ಬಾಕ್ಸ್ ನಲ್ಲಿ ವಿಕ್ಸ್ ಗಾಗಿ ತಡಕತೊಡಗಿದ. ಆ ತಡಕಾಟದ ಶಬ್ದ ಅದೆಷ್ಟು ವಿಕಾರವಾಗಿತ್ತೆಂದರೆ ಪಕ್ಕದ ಕೋಣೆಯಲ್ಲಿ ಆಳ ನಿದ್ರೆಯಲ್ಲಿದ್ದ ನಾನು ಹಾಗೂ ತಮ್ಮನನ್ನೂ ಅದು ಎಚ್ಚರಗೊಳಿಸಿಬಿಟ್ಟಿತು. ಭೀತ ಹೃದಯದ ಎದೆಬಡಿತದಂತೆ ಕರ್ಕಶವಾಗಿ ಕೇಳಿಬಂದ ಆ ಸದ್ದಿಗೆ ಎದ್ದು ಬಂದು ನೋಡಿದರೆ ಅಲ್ಲಿ ಇಷ್ಟಗಲದ ಚಿಕ್ಕ ಡಬ್ಬಿಯ ಮುಚ್ಚಳ ತೆಗದು ವಿಕ್ಸ್ ಹಚ್ಚಿಕೊಳ್ಳಲಾಗದ ಅಪ್ಪ ಡಬ್ಬಿಯ ತುಂಬಾ ಟಕಟಕನೆ ಬರಗುತ್ತಿದ್ದ. ಅದುರುವ ಕೈಯಲ್ಲಿ ಅದರೊಳಗಿನಿಂದ ವಿಕ್ಸನ್ನು ತೆಗೆತೆಗೆದು ತನ್ನ ಎಡಕಣತಲೆಗೆ ಒಂದೇ ಸಮನೆ ಹಚ್ಚಿಕೊಳ್ಳುತ್ತಾ ಅರ್ಥವಾಗದ್ದೇನನ್ನೋ ಮಣಮಣಿಸುತ್ತಿದ್ದ. ಅವನ ಬರಗುವಿಕೆಗೆ ಸಿಕ್ಕ ಇಡೀ ಡಬ್ಬಿ ವಿಕಾರವಾಗಿ ಕರಗುಟ್ಟುತ್ತಾ ಆಚೀಚೆ ಹೊಡಕುತ್ತಿತ್ತು. ಅಮ್ಮ ಮಾತ್ರ ಏನಾಗುತ್ತಿದೆಯೆಂಬುದೇ ಅರ್ಥವಾಗದೇ ಏನ್ರೀ? ಏನಾಗ್ತಿದೆ? ಎಂದು ಅತ್ತಲಿಂದ ಉತ್ತರ ಬಾರದ ಪ್ರಶ್ನೆಗಳ ಕೇಳುತ್ತಾ ಬೆಚ್ಚಿ ಕುಳಿತಿದ್ದಳು.

ಇಷ್ಟು ವರ್ಷಗಳಲ್ಲಿ ಹಿಂದೆಂದೂ ಕಾಣದ ಸ್ಥಿತಿಯಲ್ಲಿ ಅಪ್ಪನನ್ನು ನೋಡಿದ ನನಗೆ ಆಘಾತವಾಯಿತು.
ಹೀಗೆಲ್ಲಾ ಗೊಂದಲ-ನಿಶ್ಯಕ್ತಿಯಲ್ಲಿ ಕೈ, ಕಾಲು, ಮಾತುಗಳು ಅದುರುವ ವ್ಯಕ್ತಿಯಾಗಿರಲೇ ಇಲ್ಲ ಅಪ್ಪ. ಅಪ್ಪನೆಂದರೆ ದಣಿವರಿಯದ ಚೇತನ. ಬೆಳಗ್ಗೆ ಆರಕ್ಕೆದ್ದು ಕೆಲಸಕ್ಕೆ ಶುರುವಿಟ್ಟುಕೊಂಡನೆಂದರೆ ರಾತ್ರೆ ಹತ್ತರ ತನಕ ಅವನ ಮೈಯೊಳಗಿನ ಯಂತ್ರ ಆಫ್ ಆಗುತ್ತಲೇ ಇರಲಿಲ್ಲ. ಅದರಲ್ಲೂ ಅಮ್ಮನಿಗೆ ಅನಾರೋಗ್ಯ ಆರಂಭವಾದ ಮೇಲಂತೂ ಮನೆಯೊಳಗಿನ ಕೆಲಸಗಳಿಗೂ ಅಪ್ಪ ಕೈ ಹಚ್ಚತೊಡಗಿದ್ದ. ತೀರಾ ಅರವತ್ತು ದಾಟಿದ ಮೇಲೂ ಅಷ್ಟು ದೂರದ ಬೆಂಗೇರಿ ಗುಡ್ಡಕ್ಕೆ ಹೋಗಿ, ಸೊಪ್ಪು ಕೊಯ್ದು, ದೈತ್ಯ ಹೊರೆಯಾಗಿ ಕಟ್ಟಿ ತಲೆಯ ಮೇಲಿಟ್ಟುಕೊಂಡು ಹೊತ್ತು ತರುತ್ತಿದ್ದ. ಹೀಗೆ ಎತ್ತರ ನಿಲುವು, ಗಟ್ಟಿ ದೇಹದ ಅಪ್ಪನನ್ನು ಎಲ್ಲೊ ಒಂದೆರೆಡು ಹೊಟ್ಟೆನೋವುಗಳ ಹೊರತಾಗಿ ಮತ್ಯಾವ ಖಾಯಿಲೆಯೂ ಈ ವರೆಗೆ ಸುಸ್ತುಮಾಡಿ ಮಲಗಿಸಿರಲಿಲ್ಲ.

ಇಂತಿದ್ದ ಅಪ್ಪನ ಬಾಯಲ್ಲೀಗ 'ತಲೆನೋವು' ಎಂಬ ಅತಿ ಸರಳ ಪದವೇ ತೊದಲು ತೊದಲಾಗಿ, ಮತ್ತೇನೋ ಆಗಿ ಹೊರಬರುತ್ತಿತ್ತು. ಅವನ ಅಸ್ಪಷ್ಟ ಮಾತಿನ ಜಾಡು ಹಿಡಿದು‌ ತಲೆನೋವಾ? ಎಲ್ಲಿ? ಎಂದು ವಿಕ್ಸ್ ತಿಕ್ಕಿಕೊಳ್ಳುವ ವಿಫಲ ಪ್ರಯತ್ನ ಮಾಡುತ್ತಿದ್ದ ಅವನ ಎಡಕಣತಲೆಗೆ ಹಚ್ಚಿದೆ. ಸ್ವಲ್ಪ ಹಾಯೆನ್ನಿಸಿತೋ ಏನೋ? 'ಈಗ್ ಗೀಗ್ ಗೀಗ ಓಓಓಕೆ' ಎಂದು ತೊದಲುತ್ತಾ ಕಣ್ಮುಚ್ಚಿ ಮಲಗಲೆತ್ನಿಸಿದ. ಮರುಕ್ಷಣವೇ ಥಟ್ಟನೆ ಕಣ್ತೆರೆದು ತಾನು ಬಾತ್ರೂಮಿಗೆ ಹೋಗಬೇಕೆಂದು ಸನ್ನೆ ಮಾಡುತ್ತಾ ಏಳಲೆತ್ನಿಸಿದ. ಆದರೆ ತೂರಾಡುತ್ತಲೇ ನಿಂತವನ ದೇಹ ತನ್ನ ಪಾದಗಳ ಮೇಲೆ ಆಧರಿಸಲಾರದೇ ಪಕ್ಕಕ್ಕೆ ವಾಲಿತು. ಅಲ್ಲೇ ಇದ್ದ ತಮ್ಮ ಹಾಗೂ ನಾನು ಹೆಗಲಿಗೆ ಕೈಕೊಟ್ಟು ಅವನನ್ನು ನಡೆಸಿಕೊಂಡು ನಡೆದೆವು. ಇಪ್ಪತ್ತೊಂಭತ್ತು ವರ್ಷಗಳ ಬದುಕಿನಲ್ಲಿ ಮೊದಲ ಬಾರಿಗೆ ಅಪ್ಪನನ್ನು ಹೆಗಲು ಹಿಡಿದು ನಡೆಸುತ್ತಿರುವ ವಿಚಿತ್ರ ಆತಂಕದಲ್ಲಿ ನಾನಿದ್ದರೆ ಅರವತ್ಮೂರು ವರ್ಷಗಳ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಇನ್ನೊಬ್ಬರ ಹೆಗಲಿಗಾತು ನಡೆಯುತ್ತಿರುವ ವಿಚಿತ್ರ ಭಯದಲ್ಲಿ ಅಪ್ಪನಿದ್ದ‌‌.

ಬಚ್ಚಲಿಗೆ ಹೋಗಿ ಮರಳಿ ಬರುತ್ತಿದ್ದಂತೆಯೇ ಅಪ್ಪ ಮತ್ತೆ ಅಲ್ಲಿಗೇ ಕರೆದೊಯ್ಯುವಂತೆ ಸನ್ನೆ ಮಾಡಿದ. ಈ ಬಾರಿ ಅವನು ಮತ್ತಷ್ಟು ಭಾರವೂ, ಪರಾವಲಂಬಿಯೂ ಆಗಿರುವುದು ನಮ್ಮ ಗಮನಕ್ಕೆ ಬಂತು. ಮರಳಿ ಹಾಸಿಗೆಗೆ ಬಂದೊರಗಿದವನ ಮಾತು ತೀರಾ ಅರ್ಥಗಳ ಮೀರಿದ ಹಂತ ತಲುಪಿಬಿಟ್ಟಿತ್ತು. ಅವನು ಅಕ್ಷರಷಃ ಪದಗಳಿಗಾಗಿ ತಡಕಾಡುತ್ತಿದ್ದ. ಇದೇನಾಗುತ್ತಿದೆಯೆಂದು ನಾವು ಭೀತರಾಗುತ್ತಿರುವಾಗಲೇ ಇದ್ದಕ್ಕಿದ್ದಂತೆ ಅಪ್ಪ ತನ್ನ ಬಲಗಾಲನ್ನು ತೋರಿಸುತ್ತಾ ಏನೋ ಹೇಳತೊಡಗಿದ. ಮುಟ್ಟಿನೋಡಿದರೆ ಅದು ಛಳಿ ಹಿಡಿದಂತೆ ತಣ್ಣಗಾಗಿತ್ತು. ಈ ಮೊದಲು, ಬೆಂಗಳೂರಿನಲ್ಲಿರುವ ನನ್ನ ಅಕ್ಕನಿಗೆ ಹೀಗೇ ಆಗುತ್ತಿತ್ತೆನ್ನುವುದನ್ನು ನೆನಪಿಸಿಕೊಂಡ ನಾನು ಅದನ್ನು ಲೋ ಬಿಪಿಯೆಂದು ತಪ್ಪಾಗಿ ಅಂದಾಜಿಸಿ ಅಪ್ಪನ ಅಂಗಾಲನ್ನು ಉಜ್ಜತೊಡಗಿದೆ ಹಾಗೂ ಬದುಕಿನ ಅತ್ಯಂತ ದೊಡ್ಡ ಪ್ರಮಾದವನ್ನು ಮಾಡಿಬಿಟ್ಟೆ. ನಿಜದಲ್ಲಿ ಹೈ ಬಿಪಿಯ ಧಾಳಿಗೊಳಗಾಗಿದ್ದ ಅಪ್ಪನಿಗೆ ಉಪ್ಪುನೀರು ಕುಡಿಸುವಂತೆ ಅಮ್ಮನಿಗೆ ಹೇಳಿಬಿಟ್ಟೆ! ಜೀವನದ ಕಟ್ಟಕಡೆಯ ಕ್ಷಣದ ತನಕ ಪಶ್ಚಾತ್ತಾಪ ಪಡುತ್ತಲೇ ಇರಬೇಕಾದ ಕೆಲಸವೊಂದನ್ನು ನಾವೀಗ ಮಾಡುತ್ತಿದ್ದೇವೆಂಬ ಅರಿವು ನನಗಾಗಲೀ ಅಮ್ಮನಿಗಾಗಲೀ ಇರಲೇ ಇಲ್ಲ. ಒಂದು ಲೋಟ ನೀರಿಗೆ ಇಷ್ಟೇ ಇಷ್ಟು ಉಪ್ಪು ಬೆರೆಸಿದ ಅಮ್ಮ ಅದನ್ನು ಅಪ್ಪನಿಗೆ ಕುಡಿಸಿಯೇಬಿಟ್ಟಳು. ಅದನ್ನು ತನ್ನ ಕೈಯಲ್ಲೇ ಹಿಡಿದು ಕುಡಿದ ಅಪ್ಪ ಮೊದಲಿಗೆ ಕೊಂಚ ಸಮಾಧಾನಗೊಂಡವನಂತೆ ಕಂಡುಬಂದ. ಹೀಗೆ ಪ್ರಮಾದಕರ ಪ್ರಥಮಚಿಕಿತ್ಸೆಯನ್ನು ನೀಡಿದ ನಾವು ಅಪ್ಪನಿಗೆ 'ಏನೂ ಆಗಲ್ಲ, ಮಲಗಿ' ಎಂದು ಸಮಾಧಾನ ಹೇಳಿ ನಮ್ನಮ್ಮ ಹಾಸಿಗೆಗಳಿಗೆ ಮರಳಿಬಿಟ್ಟೆವು.

ಕೆಲವೊಂದು ಘಟನೆಗಳನ್ನು ನಾವು ನಮ್ಮ ಪಶ್ಚಾತ್ತಾಪವನ್ನೋ ಅಥವಾ ಮತ್ಯಾವುದೋ ಭಾವವನ್ನು ತೋಡಿಕೊಳ್ಳಬೇಕೆನ್ನುವುದಕ್ಕಿಂತ ಹೆಚ್ಚಾಗಿ ನಾವು ಮಾಡಿದ ತಪ್ಪನ್ನು ಇನ್ಬೊಬ್ಬರು ಮಾಡದಂತೆ ತಡೆಯಬೇಕೆಂಬ ಕಾರಣಕ್ಕಾಗಿಯಾದರೂ ನಾಲ್ಕು ಜನರ ಜೊತೆ ಹೇಳಿಕೊಳ್ಳಲೇಬೇಕು. ಅರ್ಧ ಜ್ಞಾನ ಅನರ್ಥಕ್ಕೆ ಮೂಲ. ಆದರಿಲ್ಲಿ ನನ್ನ ಅವಿವೇಕದ ನಿರ್ಧಾರ ಬಹುಷಃ ದುರ್ಘಟನೆಗೇ ಕಾರಣವಾಗಿಹೋಗಿತ್ತು. ಅಪ್ಪನ ತಲೆಯೊಳಗೆ ನಾವೆಂದೂ ಕಲ್ಪಿಸಿಕೊಳ್ಳದ ಅನೂಹ್ಯ ಪ್ರಕ್ರಿಯೆಯೊಂದು ಘಟಿಸತೊಡಗಿತ್ತು. ಅದರ ಮೊದಲ ಕಂತಾಗಿ ಯಾವುದೋ ನರವೊಂದರಿಂದ ಇನ್ನೇನು ಕೋಡಿಬೀಳಲಿದ್ದ ಅಥವಾ ಈಗಾಗಲೇ ಕೋಡಿಬಿದ್ದಿದ್ದ ಅತ್ಯಧಿಕ ರಕ್ತದೊತ್ತಡದ ಪ್ರವಾಹಕ್ಕೆ ನಾವು ಕೊಟ್ಟ ಉಪ್ಪು ನೀರು ಅದಿನ್ಯಾವ ಪರಿಯ ಬಲ ನೀಡಿತೋ ಏನೋ? ಆದದ್ದಾದರೂ ಏನೆಂದು ಚಿಂತಿಸುತ್ತಾ ನಾವು ಬಾರದ ನಿದ್ರೆಯ ನಿರೀಕ್ಷೆಯಲ್ಲಿ ಹಾಸಿಗೆಗೊರಗಿದ ಕೆಲ ನಿಮಿಷಗಳಲ್ಲೇ ಮತ್ತೆ ಅಪ್ಪನಲ್ಲಿ ತಳಮಳ ಆರಂಭವಾಯಿತು. ತಡಬಡಾಯಿಸಿ ಎದ್ದು ನೋಡಿದರೆ ಈ ಬಾರಿ ಅಪ್ಪ ತನ್ನ ಎಡಗೈಯಿಂದ ಬಲಗೈಯೆಡೆಗೆ ತೋರಿಸುತ್ತಾ ಸನ್ನೆಮಾಡಿದ. ಸೂಕ್ಷ್ಮವಾಗಿ ಗಮನಿಸಿದರೆ ಅವನ ಬಲಗೈ - ಬಲಗಾಲುಗಳೆರೆಡೂ ತಮ್ಮ ಚಲನೆಯನ್ನು ನಿಲ್ಲಿಸಿಬಿಟ್ಟಿದ್ದವು. ಆಗಲೇ ಆ ಪದ ಮೊಟ್ಟಮೊದಲಬಾರಿಗೆ ನಮ್ಮ ಅರಿವಿನೊಳಗೆ ಮಿಂಚಿದ್ದು:

ಸ್ಟ್ರೋಕ್! ಈ ಅರ್ಧರಾತ್ರೆಯಲ್ಲಿ ಅಪ್ಪನಿಗೆ ಬಂದೊದಗಿರುವ ಅನಾಹುತದ ಹೆಸರು ಸ್ಟ್ರೋಕ್ ಎಂಬ ಸಣ್ಣ ತಿಳಿವು ಮೂಡುತ್ತಿದ್ದಂತೆಯೇ ನಾವು ಪಕ್ಕದಮನೆಯಲ್ಲಿದ್ದ ಅಣ್ಣನಿಗೆ ಕರೆಮಾಡಿ, ಅವರ ಸಲಹೆಯಂತೆ ನಮ್ಮೂರಿನ ಡಾಕ್ಟರನ್ನು ಕರೆಸಿದೆವು. ಅದಕ್ಕೂ ಮುನ್ನ ನಾವು ನಮ್ಮ ಸ್ವಯಂಕೃತ ಅಪರಾಧ ಸರಣಿಯ ಎರೆಡನೇ ತಪ್ಪನ್ನು ಮಾಡಿಬಿಟ್ಟೆವು‌. ಸ್ಟ್ರೋಕ್ ಆದಾಗ ಕುಡಿಸಬೇಕಾದುದೆಂದು ನಾವು ನಂಬಿದ್ದ ಕೊಬ್ಬರಿ ಎಣ್ಣೆಯನ್ನು ಅಪ್ಪನಿಗೆ ಕುಡಿಸಿಬಿಟ್ಟೆವು.

ಇದಾಗಿ ಇಪ್ಪತ್ತು ನಿಮಿಷಗಳ ನಂತರ ಡಾಕ್ಟರು ಬರುವುದರೊಳಗೆ ಮತ್ತೊಂದು ಅವಗಢ ಸಂಭವಿಸಿಬಿಟ್ಟಿತು. ಅಪ್ಪನಿಗೆ ವಾಂತಿಯಾಯಿತು‌. ಇಂಥಹಾ ಸಂದರ್ಭಗಳಲ್ಲಿ ವಾಂತಿಯಾಗುವುದು ಮೆದುಳಿಗೇನೋ ತೊಂದರೆಯಾಗಿದೆಯೆಂಬುದರ ಸ್ಪಷ್ಟ ಸಂದೇಶ. ಮೆದುಳಿನಲ್ಲಿ ರಕ್ತಸ್ರಾವವಾದರೆ ಅಥವಾ ಅಪಘಾತದಲ್ಲಿ ತಲೆಯೊಳಗೇನಾದರೂ ಏಟಾದಾಗ ಹೀಗೆ ವಾಂತಿಯಾಗುವ ಮೂಲಕ ಮೆದುಳು ತನಗಾದ ತೊಂದರೆಯನ್ನು ಪ್ರಕಟಿಸುತ್ತದೆ‌. ಆದರೆ ಈ ವಿಷಯದ ತಿಳುವಳಿಕೆಯಿರದ ನಾವು ಕುಡಿಸಿದ ಉಪ್ಪುನೀರು, ಕೊಬ್ಬರಿ ಎಣ್ಣೆಗಳಿಂದಲೇ ಹೀಗಾಗಿದೆಯೆಂದುಕೊಳ್ಳುತ್ತಾ ವೈದ್ಯರ ಹಾದಿ ಕಾಯತೊಡಗಿದೆವು.

ಸಣ್ಣ ಪ್ರಥಮ ಚಿಕಿತ್ಸಾ ಕಿಟ್ ನೊಂದಿಗೆ ಬಂದ ಡಾಕ್ಟರು ನಮ್ಮನೆಯನ್ನು ಪ್ರವೇಶಿಸುವ ಹೊತ್ತಿಗೆ ಸಮಯ ಬೆಳಗಿನ ಜಾವದ ಒಂದೂ ಮೊವ್ವತ್ತು/ಎರೆಡು ಗಂಟೆ ದಾಟಿತ್ತು. ಕೆಲ ಮಾತ್ರೆ ಹಾಗೂ ಇಂಜಕ್ಷನ್ ಗಳನ್ನು ನೀಡಿದ ಅವರು ಸ್ಟ್ರೋಕ್ ಅಥವಾ ತಲೆಯೊಳಗೆ ಬ್ಲಡ್ ಕ್ಲಾಟ್ ಆಗಿರುವ ಅನುಮಾನವನ್ನು ವ್ಯಕ್ತಪಡಿಸಿ ಬೆಳಗಿನ ಜಾವ ಎಂಟರ ಹೊತ್ತಿಗೆ ತೀರ್ಥಹಳ್ಳಿಗೆ ಕರೆದೊಯ್ಯುವಂತೆ ಹೇಳಿದರು. ಅವರನ್ನು ಗೇಟಿನ ತನಕ ಬೀಳ್ಕೊಟ್ಟ ನಾವು ಅಪ್ಪನಿಗೆ ದಿವೀನಾಗಿ ಹೊದಿಕೆ ಹೊದ್ದಿಸಿ ಬೆಳಗಿನ ಜಾವದ ತನಕ ಅರಾಮಾಗಿ ನಿದ್ರಿಸುವಂತೆ ಸಮಾಧಾನ ಹೇಳಿ ನಮ್ನಮ್ಮ ಹಾಸಿಗೆಗಳಿಗೆ ಮರಳಿದೆವು.

ನಮ್ಮ ಸ್ವಯಂಕೃತ ಅಪರಾಧ ಸರಣಿಯ ಮೂರನೇ ಹಾಗೂ ಅತಿದೊಡ್ಡ ತಪ್ಪು ಹಾಗೆ ಜರುಗಿಹೋಗಿತ್ತು.

ವಾಸ್ತವವೇನೆಂದರೆ ಬ್ಲಡ್ ಕ್ಲಾಟ್ ಎಂದರೇನು ಹಾಗೂ ಅದು ಎಂಥಹಾ ಅನಾಹುತಕಾರೀ ಬೆಳವಣಿಗೆ ಎಂಬುದರ ಚಿಕ್ಕ ಅರಿವೂ ಇಲ್ಲದೆ 'ಅಂಥಾದ್ದೇನೂ ಆಗಿಲ್ಲ' ಎಂದು ಭ್ರಮಿಸಿದ ನಾವುಗಳು ಹೊದಿಕೆಯೆಳೆದು ಮಲಗಿದ ಆ ಪ್ರಮಾದಕಾರೀ ಹೊತ್ತಿಗೆ ಸರಿಯಾಗಿ ಅಪ್ಪನ ಎಡಕಣತಲೆಯ ನರವೊಂದರೊಳಗೆ ರಕ್ತ ಹೆಪ್ಪುಗಟ್ಟಲಾರಂಭಿಸಿತ್ತು. ಕರಾರುವಕ್ಕಾಗಿ ಆ ಹೊತ್ತಿಗೆ ರಕ್ತ ಹೆಪ್ಪುಗಟ್ಟಲಾರಂಭಿಸಿತ್ತೋ ಅಥವಾ ನಡುರಾತ್ರೆಯ ಯಾವುದೋ ಹೊತ್ತಿನಲ್ಲೇ ರಕ್ತ ಹೆಪ್ಪುಗಟ್ಟಿ ಈ ಹೊತ್ತಿಗಾಗಲೇ ರಕ್ತಸ್ರಾವವೇ ಆರಂಭವಾಗಿತ್ತೋ ಎನ್ನುವುದು ಇಂದಿಗೂ ಸ್ಪಷ್ಟವಾಗಿಲ್ಲ. ಎರೆಡೆರೆಡು ಬಾರಿ ಆದ ಹಳದಿ ವಾಂತಿಯ ಬಗ್ಗೆ ಸಣ್ಣ ಜ್ಞಾನವಿದ್ದರೂ ನಮಗದು ಗೊತ್ತಾಗಿಬಿಡುತ್ತಿತ್ತು. ಆದರೆ ದುರಂತದ ಬಹುಮುಖ್ಯ ಹಂತವಾದ, ಚಿಕಿತ್ಸೆ ದೊರಕಲೇಬೇಕಾದ ಅತ್ಯಮೂಲ್ಯ ವೇಳೆಯೊಂದು ಶ್ರುಶ್ರೂಷೆಯಿಲ್ಲದೆ ಹಾಗೆ ಕಳೆದುಹೋಗಿತ್ತು. ಮಲಗಿದ ಕೆಲ ನಿಮಿಷಗಳಿಗೇ ಅಪ್ಪನಲ್ಲಿ ವಾಂತಿ ಹಾಗೂ ವಿಸರ್ಜನೆಗಳು ಮತ್ತೆ ಆರಂಭವಾದವು. ಈ ಬಾರಿ ಮೂವರ ಸಹಾಯದಿಂದ ಎದ್ದು ಬಚ್ಚಲಿಗೆ ನಡೆಯುವಷ್ಟು ತ್ರಾಣ ಕೂಡಾ ಅಪ್ಪನಲ್ಲುಳಿದಿರಲಿಲ್ಲ. ಗಡಿಯಾರ ಒಂದೊಂದು ನಿಮಿಷ ಮುಂದಕ್ಕೆ ಹೋದಂತೆಯೂ ಅಪ್ಪನ ಪರಿಸ್ಥಿತಿ ಗಂಭೀರವಾಗತೊಡಗಿತು. ಕೈಕಾಲು ಒತ್ತಿ ತಲೆಗೆ ವಿಕ್ಸ್ ಹಚ್ಚಿ ನೀವಿದ್ದರಿಂದ ಹಿಡಿದು ಡಾಕ್ಟರು ನೀಡಿದ ಇಂಜಕ್ಷನ್ ನ ತನಕ ಯಾವುದೂ ಅಪ್ಪನ ಸ್ಥಿತಿಯನ್ನು ಸುಧಾರಿಸುವಷ್ಟು ಸಮರ್ಥವಾಗಿಲ್ಲವೆಂಬುದು ನಮ್ಮ ಅರಿವಿಗೆ ಬರುತ್ತಾ ಹೋಯಿತು. ಬೆಳಗಾಗುವುದನ್ನು ಕಾಯುತ್ತಾ ಕೂರುವುದೆಂದರೆ ಅನಾಹುತವನ್ನು ಮನೆಬಾಗಿಲಿಗೆ ಬರಗೊಟ್ಟಂತೆಂಬ ಯೋಚನೆ ಮೂಡತೊಡಗಿತು. ಇಷ್ಟು ಹೊತ್ತು ಘಟಿಸಿದ್ದ ಪ್ರಮಾದಗಳೆಲ್ಲದರ ನಡುವೆ ಮೊಟ್ಟಮೊದಲ ಸರಿಯಾದ ನಿರ್ಧಾರವೊಂದನ್ನು ತೆಗೆದುಕೊಂಡೆವು. ಅಪ್ಪನನ್ನು ನೇರ ತೀರ್ಥಹಳ್ಳಿ ಪಟ್ಟಣದ ಖಾಸಗೀ ಆಸ್ಪತ್ರೆಗೆ ಕರೆದೊಯ್ಯುವುದೆಂದು ನಿರ್ಧರಿಸಿ ಗೆಳೆಯನ ಓಮಿನಿಯನ್ನು ಕರೆಸಿದೆವು. ದಾರಿಯಲ್ಲಿ ಅಪ್ಪನಿಗೆ ಎರೆಡು ಬಾರಿ ವಾಂತಿಯಾಯಿತು. ನಿತ್ರಾಣನಾಗಿ ಅಮ್ಮನ ಹೆಗಲಿಗೊರಗಿದ್ದವನು ಓಮಿನಿ ನಮ್ಮೂರಿನ ಮಣ್ಣುದಾರಿಯ ದಾಟುವ ವೇಳೆಗೆ ಅದೇಕೋ ಕತ್ತು ಹೊರಳಿಸಿ ನಮ್ಮೂರಿನತ್ತ ಒಮ್ಮೆ ಕಡೆಯಬಾರಿಗೆಂಬಂತೆ ನೋಡಿಬಿಟ್ಟ. ನನ್ನ ಹೃದಯ ಜೋರಾಗಿ ಹೊಡೆದುಕೊಂಡಿದ್ದೇ ಆಗ. ನಮ್ಮೆಲ್ಲರ ಇಷ್ಟು ದಿನದ ಇಡೀ ಬದುಕಿನ ಚಿತ್ರಣವನ್ನೇ ಬದಲಿಸಿಹಾಕುವಂಥಾದ್ದೇನೋ ಘಟಿಸಿದೆಯೆಂದು ಅದೇಕೋ ಬಲವಾಗಿ ಅನ್ನಿಸತೊಡಗಿತು.

ನಾನಿಲ್ಲಿ ಪ್ರತಿಯೊಂದು ಸಮಯವನ್ನೂ ಕರಾರುವಕ್ಕಾಗಿ ಹೇಳಲು ಪ್ರಯತ್ನಪಟ್ಟಿದ್ದೇನೆ. ಏಕೆಂದರೆ ಬ್ರೈನ್ ಹ್ಯಾಮರೇಜ್ ನಂತಹಾ ಮಾರಣಾಂತಿಕ ಖಾಯಿಲೆ ಘಟಿಸಿದಾಗ ಒಂದೊಂದು ನಿಮಿಷವೂ ಅಮೂಲ್ಯವಾದದ್ದು. ಅಜ್ಞಾನದಿಂದ, ತಿಳುವಳಿಕೆಯ ಕೊರತೆಯಿಂದ ಹಾಗೂ ಮತ್ಯಾವುದೋ ಗಡಿಬಿಡಿಯಿಂದ ನಾವು ವ್ಯಯಮಾಡುತ್ತಾ ಹೋಗುವ ಒಂದೊಂದು ನಿಮಿಷದಲ್ಲೂ ಮೆದುಳಿನ ಒಂದೊಂದೇ ಜೀವಕೋಶವು ನಿಶ್ಕ್ರಿಯವಾಗುತ್ತಿರುತ್ತದೆ. ತೀರ್ಥಹಳ್ಳಿಯ ಖಾಸಗೀ ಆಸ್ಪತ್ರೆಯನ್ನು ತಲುಪುವ ವೇಳೆಗೆ ಸಮಯ ಬೆಳಗಿನ ಆರೂಮೊವ್ವತ್ತರ ಸಮೀಪ ಬಂದಿತ್ತು. ಅಪ್ಪನನ್ನು ಪ್ರಾಥಮಿಕ ಪರೀಕ್ಷೆಗೊಳಪಡಿಸಿದ ಡಾಕ್ಟರ್ ಹೈ ಬಿಪಿಯ ಕಾರಣದಿಂದಾಗಿ ಎಡಭಾಗದ ಮಿದುಳಿನಲ್ಲಿ ಬ್ಲಡ್ ಕ್ಲಾಟ್ ಆಗಿರುವುದರಿಂದ ಮಾತು ಹಾಗೂ ಬಲಭಾಗದ ಅಂಗಗಳು ಕಾರ್ಯ ನಿಲ್ಲಿಸಿವೆಯೆಂದೂ, ಈಗ ಅವರು ಕೋಮಾಗೆ ಹೋಗದಂತೆ ತಾತ್ಕಾಲಿಕ ಚಿಕಿತ್ಸೆ ನೀಡುವುದಾಗಿಯೂ, ನಾವು ಒಂಭತ್ತೂ ಮೊವ್ವತ್ತರ ಹೊತ್ತಿಗೆ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಅಪಾಂಯ್ಟ್ ಮೆಂಟ್ ತೆಗೆದುಕೊಂಡು ಅಪ್ಪನ ತಲೆಯ ಸಿಟಿ ಸ್ಕ್ಯಾನ್ ಮಾಡಿಸಿ ರಿಪೋರ್ಟ್ ತರಬೇಕೆಂದೂ, ನಂತರ ಕ್ಲಾಟ್ ನ ಪ್ರಮಾಣವನ್ನು ನೋಡಿ ಮುಖ್ಯ ಚಿಕಿತ್ಸೆಯನ್ನು ಆರಂಭಿಸುವುದಾಗಿಯೂ ಹೇಳಿದರು. ಮೇಲಿಂದ ಮೇಲೆ ಕರೆಮಾಡುತ್ತಿದ್ದ ಬಂಧು-ಮಿತ್ರರಿಗೆ ನಡೆದದ್ದೆಲ್ಲವನ್ನೂ ವಿವರಿಸುತ್ತಾ ಅಪ್ಪನನ್ನು ಐಸಿಯುಗೆ ಒಯ್ಯುತ್ತಿದ್ದ ಸ್ಟ್ರೆಚ್ಚರ್ ನ ಹಿಂದೆ ನಡೆಯುತ್ತಿದ್ದ ನಾನೇಕೋ ಒಮ್ಮೆ ತಿರುಗಿ ನೋಡಿದೆ. ಟ್ರಾಲಿ ಸಾಗಿಸುವ ಖಾಲಿ ದಾರಿಯಲ್ಲಿ ಅಮ್ಮ ಭೀತ ಗುಬ್ಬಿಮರಿಯಂತೆ ಒಬ್ಬಳೇ ಅಳುತ್ತಾ ನಡೆದುಬರುತ್ತಿದ್ದಳು. ಬಳಿಗೆ ಹೋದ ನನ್ನ ಬಳಿ ಕೋಮಾ ಗೀಮಾ ಅಂತೆಲ್ಲಾ ಯಾಕೆ ಹೇಳ್ತಿದಾರೆ ಎಂದು ಕೇಳಿದಳು‌. ಅದು ಹಾಗಲ್ಲ, ಪ್ರಥಮ ಚಿಕಿತ್ಸೆ ಕೊಡದೇ ಹೋದರೆ ಕೋಮಾಗೆ ಹೋಗುತ್ತಾರೆ ಎಂದು ಅಮ್ಮನನ್ನು ಸಮಾಧಾನ ಮಾಡಿದೆ.

ಹೀಗೆ ನಾವು ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಅಪಾಂಯ್ಟ್ ಮೆಂಟ್ ಪಡೆದು, ಅವರು ಹೇಳಿದ ಸಮಯಕ್ಕೆ ಅಂದರೆ ಹನ್ನೊಂದೂ ಮೊವ್ವತ್ತಕ್ಕೆ ಅಪ್ಪನನ್ನು ಒಯ್ದು, ಕ್ಯೂನಲ್ಲಿ ಕಾದು ಸ್ಕ್ಯಾನಿಂಗ್ ಮಾಡಿಸಿ, ಕೊನೆಯದಾಗಿ ರಿಪೋರ್ಟ್ ನಮ್ಮ ಕೈಗೆ ಸಿಗುವಾಗ ಮಧ್ಯಾಹ್ನದ ಎರೆಡೂವರೆ ಗಂಟೆ. ಇದೂ ಸಾಲದೆಂಬಂತೆ ಮಧ್ಯಾಹ್ನ ಮನೆಗೆ ಹೋಗಿದ್ದ ಪುಣ್ಯಾಧಿಪುಣ್ಯಪುರುಷ ವೈದ್ಯ ಊಟ ಮುಗಿಸಿಬಂದು ಸಿಟಿ ಸ್ಕ್ಯಾನಿನ ರಿಪೋರ್ಟ್ ಕೈಗೆತ್ತಿಕೊಂಡ ವೇಳೆಗೆ ಸಮಯ ಬರೋಬ್ಬರಿ ಸಂಜೆಯ ಐದೂಮೊವ್ವತ್ತು! ನಮ್ಮ ಸ್ವಯಂಕೃತ ಅಪರಾಧಗಳ ಪಟ್ಟಿಯ ಕಟ್ಟ ಕಡೆಯ ಹಾಗೂ ಅತ್ಯಂತ ಭೀಕರ ತಪ್ಪಾಗಿತ್ತದು‌. ಹ್ಯಾಮರೇಜ್ ಸಂಭವಿಸಿದ ಕನಿಷ್ಠ ಹನ್ನೆರೆಡರಿಂದ ಹದಿನೇಳು ಗಂಟೆಗಳಾಗಲೇ ಸರಿಯಾದ ಚಿಕಿತ್ಸೆಯಿಲ್ಲದೇ ವ್ಯಯವಾಗಿಹೋಗಿದ್ದವು.

ಸ್ಕ್ಯಾನಿಂಗ್ ರಿಪೋರ್ಟನ್ನು ಈ ತುದಿಯಿಂದ ಆ ತುದಿಯ ತನಕ ಪರೀಕ್ಷಿಸಿದ ಡಾಕ್ಟರು ಇದಕ್ಕೆ ಸಣ್ಣದೊಂದು ಆಪರೇಶನ್ ಮಾಡಬೇಕಾಗಿದ್ದು ಶಿವಮೊಗ್ಗ ಅಥವಾ ಮಣಿಪಾಲಕ್ಕೆ ಕರೆದೊಯ್ಯಿರಿ ಎಂದರು‌. "ಸಾಮಾನ್ಯವಾಗಿ ನಾವು ಇಂಥಹಾ ಕೇಸ್ ಗಳಲ್ಲಿ ರೋಗಿಯನ್ನು ಇಪ್ಪತ್ನಾಲ್ಕು ಗಂಟೆ ಪರೀಕ್ಷೆಯಲ್ಲಿಡುತ್ತೇವೆ. ಅಷ್ಟರಲ್ಲಿ ಯಾವುದೇ ಚೇತರಿಕೆ ಕಾಣದಿದ್ದರೆ ನಂತರ ಶಸ್ತ್ರಚಿಕಿತ್ಸೆಗೆ ಕಳಿಸುತ್ತೇವೆ. ನೀವು ನಾಳೆ ಬೆಳಗಿನ ತನಕ ನಮ್ಮ ಆಸ್ಪತ್ರೆಯಲ್ಲೇ ಇರಿ. ನಂತರ ಶಿವಮೊಗ್ಗ ಅಥವಾ ಮಣಿಪಾಲಕ್ಕೆ ಕರೆದೊಯ್ಯಿರಿ" ಎಂದು ಸೂಚಿಸಿದರು‌. ಅಲ್ಲದೇ ಬೆಳಗ್ಗೆಗಿಂತ ಮಧ್ಯಾಹ್ನದ ವೇಳೆಗೆ ಅಪ್ಪನೂ ಸಹಾ ಕೊಂಚ ಚೇತರಿಸಿಕೊಂಡಿದ್ದ. ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನದೂಟಗಳನ್ನು ಸೇವಿಸಿ ಸಣ್ಣ ನಿದ್ರೆಯನ್ನೂ ಮಾಡಿದ್ದ. ಇದನ್ನೇ 'ಚೇತರಿಕೆ' ಎಂದು ನಾವೆಲ್ಲಾ ಗುರುತಿಸಿದ್ದೆವು. ಸುತ್ತಮುತ್ತಲಿದ್ದವರಿಂದಲೂ ಡಾಕ್ಟರ ಮಾತಿಗೆ ಅನುಮೋದನೆ ದೊರಕಿ ನಾನಿಂದು ಅಪ್ಪನನ್ನುಳಿಸಿಕೊಂಡು ಇಲ್ಲಿಯೇ ಉಳಿಯುವುದು ಸರಿಯೆಂದೇ ಬಹುತೇಕರು ಸೂಚಿಸಿದರು.

ಬದುಕಿನ ಕೆಲವೊಂದು ಘಳಿಗೆಗಳಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮಗೇ ಗೊತ್ತಿಲ್ಲದೆ ನಡೆಯಬೇಕಿದ್ದ ಮಹಾನ್ ದುರಂತವೊಂದನ್ನು ಬದಲಿಸಿಬಿಡುತ್ತವೆ. ಡಾಕ್ಟರೂ ಸೇರಿದಂತೆ ಎಲ್ಲರೂ ಹೇಳಿದ 'ನಾಳೆಯ ತನಕ ಇಲ್ಲೇ ಇರಿಸಿಕೊಳ್ಳಿ' ಎಂಬ ಮಾತನ್ನು ನಾನು ಮೀರಿದ್ದು ಅಂಥದೇ ಒಂದು ಘಳಿಗೆ. ಡಾಕ್ಟರೊಂದಿಗೆ ಮಾತುಕತೆ ಮುಗಿಸಿ ವಾರ್ಡಿನೊಳಗಡಿಯಿಟ್ಟ ನನಗೆ ಭೀಕರ ಸ್ಥಿತಿಯಲ್ಲಿ ಕೆಮ್ಮುತ್ತಿದ್ದ ಅಪ್ಪ ಕಣ್ಣಿಗೆ ಬಿದ್ದ. ಪ್ರತೀಬಾರಿ ಕೆಮ್ಮುವಾಗಲೂ ಅವನ ಕಣ್ಣುಗಳು ಮೇಲೆ ಸಿಕ್ಕಿಕೊಳ್ಳುತ್ತಿದ್ದವು. ಅವನಿಗೀಗ ಎದ್ದು ಕೂರಲೂ ಆಗುತ್ತಿರಲಿಲ್ಲ‌. ಬಲಗೈ, ಬಲಗಾಲು ಹಾಗು ಮಾತುಗಳಾಗಲೇ ಈ ಹಿಂದೆ ಚಲನೆಯಿದ್ದದ್ದೇ ಸುಳ್ಳೆಂಬಂತೆ ಸಂಪೂರ್ಣ ಸ್ತಬ್ಧವಾಗಿಬಿಟ್ಟಿದ್ದವು. ಎಲ್ಲದಕ್ಕಿಂತ ಹೆಚ್ಚಾಗಿ ಮಹಾನ್ ಯಾತನೆಯೊಂದು ಅಪ್ಪನ ಮುಖದಲ್ಲಿ ಮನೆಮಾಡಿಕೊಂಡುಬಿಟ್ಟಿತ್ತು. 'ಅಪ್ಪ ಸುಧಾರಿಸಿಕೊಂಡಿದ್ದಾನೆ' ಎಂಬ ನನ್ನ ಮೂಢನಂಬಿಕೆ ಕಳಚಿ ಬಿದ್ದಿದ್ದೇ ಆಗ. ಅಲ್ಲದೆ ಈಗ ಬರಲಿರುವುದು ರಾತ್ರೆ‌. ರಾತ್ರೆಯೆಂಬುದು ಸಾಮಾನ್ಯವಾಗಿ ಎಲ್ಲ ಖಾಯಿಲೆ, ಯಾತನೆಗಳೂ ಉಲ್ಬಣಗೊಳ್ಳುವ ಸಮಯ. ಬೆಳಗ್ಗೆಯಾದರೂ ಬೇರೆಡೆಗೆ ಒಯ್ಯುವುದೇ ಆದರೆ ಈ ಒಂದಿಡೀ ರಾತ್ರೆ ಅಪ್ಪನನ್ನು ಈ ಯಾತನೆಯಾಳದಲ್ಲೇ ಉಳಿಸಬೇಕಾದರೂ ಏಕೆ? ಊರಿನ ಹಿತೈಶಿಯೊಬ್ಬರ ಮಾತಿನಲ್ಲಿ ಅಸ್ಪಷ್ಟವಾಗಿ ಸ್ಫುರಿಸಿದ ಆ ಅರ್ಥಕ್ಕೂ ಅಪ್ಪನ ಈಗಿನ ಸ್ಥಿತಿಗೂ ತಾಳೆಯಾಗುತ್ತಿದೆಯೆಂದೆನಿಸಿದ ಮರುಕ್ಷಣವೇ ಅಪ್ಪನನ್ನು ಶಿವಮೊಗ್ಗಕ್ಕೆ ಕರೆದೊಯ್ಯುವುದೆಂದು ನಿರ್ಧರಿಸಿಬಿಟ್ಟೆ. ಮಣಿಪಾಲ ನಮ್ಮ ಮೊದಲ ಆದ್ಯತೆಯಾಗಿತ್ತಾದರೂ ಕೊರೋನಾದಿಂದಾಗಿ ಜಿಲ್ಲೆ-ಜಿಲ್ಲೆಗಳ ನಡುವಿನ ಓಡಾಟದ ಮೇಲಿದ್ದ ನಿರ್ಬಂಧ ನಮ್ಮನ್ನು ಶಿವಮೊಗ್ಗದತ್ತ ಅಟ್ಟಿತು. ಶಿವಮೊಗ್ಗದಲ್ಲಿ ಯಾವ ಆಸ್ಪತ್ರೆ? ಅಲ್ಲಿ ಬಿಪಿಎಲ್ ಕಾರ್ಡ್ ಅಪ್ಲೈ ಆಗುತ್ತದಾ? ತುಂಬಾ ದುಬಾರಿಯಾದೀತು ಎಂಬೆಲ್ಲ ಸಣ್ಣ ಚರ್ಚೆ ನಡೆಯಿತಾದರೂ ಆ ಕ್ಷಣಕ್ಕೆ ಬೊಗಸೆಗೆ ಬಂದು ಕುಳಿತಂತಿದ್ದ ಅಪ್ಪನ ಆರೋಗ್ಯದೆದುರು ಮತ್ಯಾವ ಲೆಕ್ಕಾಚಾರಕ್ಕೂ ಬೆಲೆ ಕೊಡುವ ಸ್ಥಿತಿಯಲ್ಲಿ ನಾವಿರಲಿಲ್ಲ. ಗಡಿಬಿಡಿಯಲ್ಲಿ ಡಿಶ್ಚಾರ್ಜ್ ಮಾಡಿಸಿಕೊಂಡು ಅಪ್ಪ, ನಾನು ಹಾಗೂ ಅಮ್ಮನನ್ನು ಹೊತ್ತ ಆಂಬುಲೆನ್ಸ್ ಶಿವಮೊಗ್ಗದ ದಾರಿಯಲ್ಲಿ ಓಡಲಾರಂಭಿಸಿದಾಗ ಸಮಯ ರಾತ್ರೆಯ ಎಂಟು ಗಂಟೆ‌.

ಬದುಕಿಗೆ ಧಿಡೀರನೆ ಬಂದೆರೆರಗಿರುವ ಇರುಳಿನಷ್ಟೇ ಗಾಢವಾಗಿ ರಸ್ತೆಯ ಮೇಲೂ ಮುಸುಕಿದ್ದ ಕತ್ತಲ ದಾರಿಗೆ ಬೆಳಕು ಬೀರುತ್ತಾ ನಮ್ಮ ಆ್ಯಂಬುಲೆನ್ಸ್ ಶರವೇಗದಲ್ಲಿ ಧಾವಿಸುತ್ತಿತ್ತು. ಇದಕ್ಕೂ ಮೊದಲು ಅಪ್ಪ-ಅಮ್ಮನ ಜೊತೆಯಾಗಿ ನಾನು ಶಿವಮೊಗ್ಗಕ್ಕೆ ಹೋಗಿದ್ದು ಯಾವಾಗ? ಕೆಲವೇ ತಿಂಗಳ ಕೆಳಗೆ. ನನಗೆ ಹುಡುಗಿ ನೋಡಲಿಕ್ಕೆ! ಅಂದು ಅಪ್ಪ-ಅಮ್ಮ ಇಬ್ಬರೂ ಬಹಳ ಸಂಭ್ರಮದಲ್ಲಿ ನನ್ನ ಅಕ್ಕ-ಪಕ್ಕ ಕುಳಿತಿದ್ದರು. ಅಪ್ಪ ತಾನು ಹುಡುಗಿ ನೋಡಲು ಹೋದ ಪ್ರಸಂಗಗಳನ್ನೂ, ಕೊನೆಗೆ ಅಮ್ಮನನ್ನು ಒಪ್ಪಿದ ಕಥೆಯನ್ನೂ ಖುಷಿಖುಷಿಯಲ್ಲಿ ಹೇಳಿಕೊಂಡಿದ್ದ. ಬೆಪ್ಪನಂತೆ ಕುಳಿತಿದ್ದ ನನ್ನನ್ನು ನಗಿಸಲು ಯತ್ನಿಸಿದ್ದ. ಇಂದೂ ಸಹಾ ಅದೇ ದಾರಿ, ಅದೇ ಅಪ್ಪ, ಅಮ್ಮ ಹಾಗು ನಾನು. ಆದರೆ ಅಂದು ನಮ್ಮ ನಡುವೆ ಮಾತಾಗಿ, ಖುಷಿಯಾಗಿ, ಹಾಸ್ಯವಾಗಿ ಹಬ್ಬಿಕೊಂಡಿದ್ದ ಆ ಸಂತಸ ಇಂದೆಲ್ಲಿ ಹೋಯಿತು? ಸನ್ನಿವೇಶವೇಕೆ ಇಷ್ಟು ಬೇಗ ಬದಲಾಗಿಬಿಟ್ಟಿತು?

ಹಿಂದೆ ಅಪ್ಪ ಉತ್ತರಗಳಾಚೆಗಿನ ಪ್ರೆಶ್ನೆಯಾಗಿ ಅತ್ತ ಮಂಪರೂ ಅಲ್ಲದ, ಇತ್ತ ಎಚ್ಚರವೂ ಅಲ್ಲದ ಸ್ಥಿತಿಯಲ್ಲಿ ತಲೆಯನ್ನು ನೀವಿಕೊಳ್ಳುತ್ತಾ, ಮೌನವಾಗಿ ನರಳುತ್ತಾ ಮಲಗಿದ್ದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...