ಬುಧವಾರ, ಜುಲೈ 8, 2020

ಅಪ್ಪ.. ಐ ಲವ್ ಯು ಅಪ್ಪ.. 2

ನಾವು ಶಿವಮೊಗ್ಗದ ನಂಜಪ್ಪ ಹಾಸ್ಪಿಟಲಿನ ಅಂಗಳಕ್ಕೆ ಬಂದಿಳಿಯುವ ಹೊತ್ತಿಗೆ ಸಮಯ ಒಂಭತ್ತು ದಾಟಿತ್ತು‌. ವರಸೆಯಲ್ಲಿ ನನಗೆ ದೊಡ್ಡಪ್ಪನಾಗಬೇಕಿದ್ದ ಬಂಧುವೊಬ್ಬರು ಆಗಲೇ ಆಸ್ಪತ್ರೆಯ ನರಶಾಸ್ತ್ರಜ್ಞರೊಬ್ಬರನ್ನು ಸಂಪರ್ಕಿಸಿ ನಾವು ಬಂದೊಡನೆಯೇ ಅಪ್ಪನನ್ನು ಪರೀಕ್ಷಿಸುವ ವ್ಯವಸ್ಥೆ ಮಾಡಿದ್ದರು. ಕೊರೋನಾದ ಮುನ್ನೆಚ್ಚರಿಕೆ ಕ್ರಮವಾಗಿ ಒಬ್ಬ ರೋಗಿಯ ಜೊತೆ ಇನ್ನೊಬ್ಬರು ಮಾತ್ರ ಆಸ್ಪತ್ರೆಯೊಳಗೆ‌ ಪ್ರವೇಶಿಸಬಹುದೆಂಬ ನಿಯಮವಿದ್ದರಿಂದ ಅಮ್ಮ ಹಾಗೂ ನಮ್ಮ ಸಹಾಯಕ್ಕೆ ಧಾವಿಸಿ ಬಂದಿದ್ದ, ಶಿವಮೊಗ್ಗ ತವರಿನವರಾದ ಅತ್ತೆಯನ್ನು ಹೊರಗೆ ಬಿಟ್ಟು ನಾನೊಬ್ಬನೇ ಅಪ್ಪನ ಸ್ಟ್ರೆಚ್ಚರನ್ನು ಹಿಂಬಾಲಿಸಿದೆ. ಬೇಸ್ಮೆಂಟಿನಲ್ಲಿನ ಪ್ರಥಮ ಪರೀಕ್ಷಾ ಘಟಕದಲ್ಲಿ ಮಂಚದ ಮೇಲೆ ನರಳುತ್ತಾ ಮಲಗಿದ್ದ ಅಪ್ಪನನ್ನು ಗಂಭೀರ ಮುಖದಲ್ಲಿ ನೋಡಿದ ನರಶಾಸ್ತ್ರಜ್ಞರು ನಾವು ಈಗಾಗಲೇ ಮಾಡಿಸಿದ್ದ ಸ್ಕ್ಯಾನಿಂಗ್ ರಿಪೋರ್ಟನ್ನು ಪರೀಕ್ಷಿಸಿದರು.

"ಇದು ಆಗಿದ್ದು ಯಾವಾಗ?"

ದಪ್ಪಗಿನ ಕಪ್ಪು ಹಾಳೆಯ ಮೇಲೆ ಮೂಡಿದ್ದ ಅಪ್ಪನ ಮೆದುಳಿನ ವಿವಿಧ ಚಿತ್ರಗಳ ನೋಡುತ್ತಿದ್ದಂತೆಯೇ ದುಪ್ಪಟ್ಟಾದ ಗಂಭೀರ ಮುಖದಲ್ಲಿ ನನ್ನನ್ನವರು ಪ್ರಶ್ನಿಸಿದರು.

"ಇಂದು ರಾತ್ರೆ ಹನ್ನೆರೆಡು-ಹನ್ನೆರೆಡೂ ಮೊವ್ವತ್ತರ ಹೊತ್ತಿಗೆ"

ಸಾವಿರ ಪ್ರಶ್ನೆಗಳ ಎದೆಯೊಳಗಿಟ್ಟುಕೊಂಡು, 'ನಥಿಂಗ್ ಟು ವರಿ. ನಾವಿದನ್ನು ಸರಿಪಡಿಸುತ್ತೇವೆ' ಎಂಬ ಪ್ರತಿಕ್ರಿಯೆಯನ್ನು ಅವರಿಂದ ನಿರೀಕ್ಷಿಸುತ್ತಾ ಉತ್ತರಿಸಿದೆ.

"ವಾಟ್? ರಾತ್ರೆ ಹನ್ನೆರೆಡಕ್ಕಾ? ಹಾಗಾದ್ರೆ ಇಷ್ಟು ಹೊತ್ತು ಏನು ಮಾಡ್ತಿದ್ರಿ?"

ಏನು ಹೇಳುವುದೆಂದು ತಿಳಿಯದೆ ಆತಂಕದಲ್ಲಿ ನಿಂತಿದ್ದ ನನ್ನನ್ನು ನೋಡುತ್ತಾ ಅವರೇ ಮಾತು ಮುಂದುವರೆಸಿದರು:

"ಸೀ, ನಿಮ್ಮ ತಂದೆಗೆ ಬ್ರೈನ್ ಹ್ಯಾಮರೇಜ್ ಆಗಿದೆ. ನೀವು ತುಂಬಾ ತಡಮಾಡಿಬಿಟ್ಟಿದ್ದೀರ. ಇದಾಗಿ ಮೂರು ಗಂಟೆಯ ಒಳಗೇ ಅವರನ್ನು ಕರೆದುಕೊಂಡುಬರಬೇಕಿತ್ತು. ಈಗ ಮೆದುಳಿನ ಮೇಲೆಲ್ಲಾ ವಿಪರೀತ ರಕ್ತ ಹರಿದಿರುವುದರಿಂದ ಅದನ್ನು ಆಪರೇಟ್ ಮಾಡುವುದೂ ಸಾಧ್ಯವಿಲ್ಲ...

ನಿಮ್ಮ ತಂದೆ ಉಳಿಯುವುದು ಕಷ್ಟ!"

ನಿಂತನಿಂತಲ್ಲೇ ಸಿಡಿಲೊಂದು ನಡು ನೆತ್ತಿಗೆ ಅಪ್ಪಳಿಸಿದಂತೆ..
ಈ ಮಾತನ್ನು ಕೇಳಿಸಿಕೊಂಡ ನನ್ನ ಕಿವಿ, ಮೆದುಳು, ಮನಸ್ಸುಗಳು ಭಗ್ಗನೆ ಹೊತ್ತಿ ಉರಿದಂತೆ..
ಇಡೀ ಬಾಳಿನ ಸಕಲ ನಂಬಿಕೆ, ಪ್ರಾರ್ಥನೆಗಳೆಲ್ಲ ಕ್ಷಣಮಾತ್ರದಲ್ಲಿ ಸುಟ್ಟು ಕರಕಲಾದಂತೆ..
ನಿಂತಲ್ಲೇ ಕಲ್ಲಾಗಿ ನಿಂತುಬಿಟ್ಟೆ.

ಅಪ್ಪ‌.. ನನ್ನ ಅಪ್ಪ! ನೆನ್ನೆ ರಾತ್ರೆಯಷ್ಟೇ ನನ್ನನ್ನು ಊಟಕ್ಕೆ ಬಾರೋ ಎಂದು ಅಕ್ಕರೆಯಿಂದ ಕರೆದಿದ್ದ ಅಪ್ಪ. ಅಲರ್ಜಿಗೆ ಕೊಬ್ಬರಿ ಎಣ್ಣೆ ಹಚ್ಚಿಕೋ ಎಂದು ಕಾಳಜಿ ತೋರಿದ್ದ ಅಪ್ಪ. ಆಗಷ್ಟೇ ಹುಟ್ಟಿದ ನನ್ನನ್ನು ಎತ್ತಿಕೊಂಡು ಸಂಭ್ರಮಿಸಿದ್ದ ಅಪ್ಪ. ತೊಟ್ಟಿಲಲ್ಲಿ ಕೈಕಾಲಾಡಿಸುತ್ತಾ ಮಲಗಿದ್ದ ನನ್ನನ್ನು ಬಿಬ್ಬೀ ಎಂದು ಮುದ್ದಿಸಿದ್ದ ಅಪ್ಪ‌. ಸಾಗರದಿಂದ ಮೂರು ಚಕ್ರದ ಸೈಕಲ್ಲನ್ನು ನನಗಾಗಿ ಹೊತ್ತುತಂದಿದ್ದ ಅಪ್ಪ.. 'ನನ್ನ ಮಗನಿಗೆ ಆಯುರಾರೋಗ್ಯವನ್ನು ಕರುಣಿಸು' ಎಂದು ಪ್ರತಿದಿನ ದೇವರ ಪೂಜೆ ಮಾಡುತ್ತಿದ್ದ ಅಪ್ಪ..

ಅವನೀಗ ನಮ್ಮನ್ನಗಲಿ ಹೋಗುತ್ತಾನಂತೆ!

ಕಾಲವೆಂಬ ಕಾಲ ನನ್ನ ಪಾಲಿಗೆ ಸ್ತಬ್ಧವಾಗಿಹೋಯಿತು. ಏನೇ ಸ್ಟ್ರೋಕೆಂದು ತಿಳಿದಿದ್ದರೂ, ಆಪರೇಶನ್ ಆಗಬೇಕೆಂದು ಗೊತ್ತಿದ್ದರೂ ಅಪ್ಪನಿಗಾಗಿರುವುದು ಮಾರಣಾಂತಿಕ ಖಾಯಿಲೆಯೆಂಬ ಸಣ್ಣ ಕಲ್ಪನೆಯೂ ನನಗಿರಲಿಲ್ಲ. ಇಷ್ಟು ಹೊತ್ತು ಅಪ್ಪನನ್ನು ಪರೀಕ್ಷಿಸಿ, ಶುಶ್ರೂಷೆ ಮಾಡಿದ್ದ ಯಾವ ಡಾಕ್ಟರೂ ಅಂಥಾದ್ದೊಂದು ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ನಮ್ಮೆಲ್ಲರ ಮನದಲ್ಲಿದ್ದದ್ದೂ ಒಂದೇ ನಂಬಿಕೆ: ಅಪ್ಪನಿಗೆ ಸ್ಟ್ರೋಕ್ ಆಗಿದೆ. ಸಣ್ಣದೊಂದು ಆಪರೇಶನ್ ಮಾಡಿ ಅದನ್ನು ಸರಿಪಡಿಸುತ್ತಾರೆ. ನಂತರ ಯಾವುದಾದರೂ ನಾಟಿ ವೈದ್ಯರಲ್ಲಿಗೆ ಕರೆದೊಯ್ದು ಎಣ್ಣೆ ಮಾಲಿಶ್ ಮಾಡಿಸಿದರೆ ಸಾಕು. ಕೆಲವೇ ದಿನಗಳಲ್ಲಿ ಅಪ್ಪ ನಮ್ಮೊಂದಿಗೆ ಮನೆಗೆ ಮರಳುತ್ತಾನೆ. ಇನ್ನೊಂದರೆಡು ತಿಂಗಳಿನಲ್ಲಿ ಮೊದಲಿನಂತೆ ಎದ್ದು ಓಡಾಡುತ್ತಾನೆ..

ಆದರೀಗ ಈ ಡಾಕ್ಟರು ಹೇಳುತ್ತಿರುವುದೇನು? ಅಪ್ಪ ನನ್ನದೇ ಅಜ್ಞಾನಕ್ಕೆ ಬಲಿಯಾಗಿಹೋದನಾ? ನಾನೇ ತಡಮಾಡಿ ಅಪ್ಪನ ಅಂತ್ಯಕ್ಕೆ ಕಾರಣವಾಗಿಬಿಟ್ಟೆನಾ? ನಾವಲ್ಲಿ ಅವರಿವರೊಂದಿಗೆ ಮಾತನಾಡುತ್ತಾ, ಮೆಡಿಕಲ್ಲು-ಸ್ಕ್ಯಾನಿಂಗ್ ಸೆಂಟರ್-ಹಾಸ್ಪಿಟಲ್ ಗಳಿಗೆ ಅಲೆಯುತ್ತಾ, ಅಪ್ಪನ ಮಂಚದ ಕಾಲಬುಡದಲ್ಲಿ ತೂಕಡಿಸುತ್ತಾ ಕುಳಿತಿದ್ದ ಪ್ರತಿಯೊಂದು ನಿಮಿಷದಲ್ಲೂ ಅಪ್ಪ ಸಾವಿಗೆ ಇಂಚಿಂಚು ಹತ್ತಿರವಾಗುತ್ತಿದ್ದನಾ? ಈಗ ನಾನು ಏನು ಮಾಡಲಿ? ಒಂದು ಮಾತೂ ಹೇಳದೇ ಹೊರಟು ನಿಂತಿರುವ ಅಪ್ಪನನ್ನು ಹೇಗೆ ಉಳಿಸಿಕೊಳ್ಳಲಿ? ಅಲ್ಲಿ, ಹೊರಗಡೆ ಅಪ್ಪನಿಗೆ ಗಂಭೀರವಾದುದೇನೂ ಆಗಿಲ್ಲವೆಂಬ ಸಮಾಧಾನದ ಸುದ್ದಿಗಾಗಿ ಕಾದು ಕುಳಿತಿರುವ ಅಮ್ಮನಿಗೆ ಏನೆಂದು ಹೇಳಲಿ? ನಾಳೆಯಿಂದ ಅಪ್ಪ ನಮ್ಮ ಪಾಲಿಗಿಲ್ಲವೆಂಬ ಕಠೋರ ಸತ್ಯವ ನಾನಾದರೂ ಹೇಗ ಜೀರ್ಣಿಸಿಕೊಳ್ಳಲಿ?

ನಡುಗುತ್ತಿದ್ದ ಹೃದಯದಲ್ಲೇ ಅಪ್ಪ ಮಲಗಿದ್ದಲ್ಲಿಗೆ ಬಂದೆ. ಕಣ್ಣೆದುರು ನಿಂತ ನನ್ನನ್ನು ದಯನೀಯವಾಗಿ ನೋಡಿದ ಅಪ್ಪ ತಲೆ ನೋವು ಎಂಬಂತೆ ಸನ್ನೆ ಮಾಡಿದ. ಮೆತ್ತಗೆ ಅವನ ತಲೆ ನೇವರಿಸುತ್ತಾ ಸಮಾಧಾನ ಹೇಳತೊಡಗಿದೆ: ಇನ್ನು ಸ್ವಲ್ಪವೇ ಹೊತ್ತು ಅಪ್ಪಾ. ಶಿವಮೊಗ್ಗಕ್ಕೆ ಬಂದಿದ್ದೇವೆ‌. ನಾಳೆ ಡಾಕ್ಟರು ಒಂದು ಇಂಜಕ್ಷನ್ ಕೊಡ್ತಾರೆ. ಎಲ್ಲಾ ಸರಿಯಾಗುತ್ತೆ‌. ನೋವೆಲ್ಲಾ ಕಡಿಮೆಯಾಗುತ್ತೆ‌‌.. ಅದಕ್ಕಿಂತ ಹೆಚ್ಚು ಮಾತನಾಡಲು ನನ್ನಿಂದಾಗಲಿಲ್ಲ. ಜೀವವೆಂಬ ಜೀವ ಕರಗಿ ಕೊರಳಿಗೆ ಬಂದು ಕಟ್ಟಿಕೊಂಡಂತಾಯಿತು. ಡಾಕ್ಟರ ಅದೇಶದಂತೆ ಅಡ್ಮೀಶನ್ ಕೆಲಸಗಳನ್ನು ಪೂರೈಸಲೆಂದು ಕ್ಯಾಶ್ ಕೌಂಟರಿನತ್ತ ತೆರಳುವ ಮುನ್ನ ಅಪ್ಪನನ್ನೊಮ್ಮೆ ತಿರುಗಿನೋಡಿದೆ.

ದೂರ ನಡೆಯುತ್ತಿದ್ದ ನನ್ನನ್ನು ಹೋಗಬೇಡ ಎಂಬಂತೆ ನೋಡುತ್ತಾ ಮಲಗಿದ್ದ.. ನನ್ನ ಅಪ್ಪ.

*************

ಅಡ್ಮೀಶನ್ ಕೆಲಸಗಳು ಲಗುಬಗೆಯಲ್ಲಿ ಮುಗಿದವು. ಕ್ಯಾಶ್ ಕೌಂಟರಿನಲ್ಲಿ ಕುಳಿತವ ಹೇಳಿದ 'ಆಪರೇಶನ್ ಗೆ ಒಂದು ಲಕ್ಷ ಖರ್ಚಾಗುತ್ತದೆ, ದಿನದ ಐಸಿಯು ಬಾಡಿಗೆ ಮೊವ್ವತ್ತು ಸಾವಿರ, ಎಷ್ಟು ದಿನ ಐಸಿಯುನಲ್ಲಿರಬೇಕೆಂದು ಈಗಲೇ ಹೇಳಬರುವುದಿಲ್ಲ' ಎಂಬೆಲ್ಲ ಎಚ್ಚರಿಕೆಗಳನ್ನು ಮೆದುಳು ಯಾವುದೋ ಮೂಲೆಗೆ ಎಸೆಯಿತು. ಕೈಯ್ಯಲ್ಲಿದ್ದದ್ದು, ಖಾತೆಯಲ್ಲಿದ್ದು ಎಲ್ಲವನ್ನೂ ಸೇರಿಸಿದರೆ ಇರುವ ಇಪ್ಪತ್ತು-ಮೊವ್ವತ್ತು ಸಾವಿರಕ್ಕೂ, ಇವರು ಹೇಳುತ್ತಿರವ ಮೊತ್ತಕ್ಕೂ ಸಂಬಂಧವೇ ಇಲ್ಲವೆಂಬ ಸತ್ಯ ಬುದ್ಧಿಯನ್ನು ತಾಕಿತಾದರೂ ಅದನ್ನೆಲ್ಲಾ ಯೋಚಿಸಲು ಸಮಯವಿರಲಿಲ್ಲ. ಜೀವದ ವಿಷಯಕ್ಕೆ ಬಂದಾಗ ಹಣವೆನ್ನುವ ಪ್ರಪಂಚದ ಅತ್ಯಂತ ಅಮೂಲ್ಯ ವಸ್ತು ಹೇಗೆ ಯಕಶ್ಚಿತ್ ಕಾಗದದ ಚೂರಾಗಿ ಬದಲಾಗಿಬಿಡುತ್ತದಲ್ಲವೇ? ಕುಟುಕು ಪ್ರಾಣವ ಉಳಿಸಿಕೊಂಡು ನರಳುತ್ತಿರುವ ಆಪ್ತ ಜೀವವ ಪಕ್ಕದಲ್ಲಿಟ್ಟು 'ಇಷ್ಟು ಖರ್ಚಾಗುತ್ತದೆ. ಏನು ಮಾಡುವೆ?' ಎಂದು ಕೇಳಿದಾಗ ಯಾವ ಮನುಷ್ಯ ತಾನೇ ಹಣದ ಬೆಲೆಯ ಲೆಕ್ಕಹಾಕಿಯಾನು? ಅಡ್ಮೀಶನ್ ಮುಗಿಸಿ ಮರಳಿಬರುವ ಹೊತ್ತಿಗೆ ಅಪ್ಪನನ್ನಾಗಲೇ ತುರ್ತು ನಿಗಾ ಘಟಕ- ಐಸಿಯುಗೆ ಕರೆದೊಯ್ದಿದ್ದರು. ಆಸ್ಪತ್ರೆಯ ಹೊರಗೆ ಕಾಯುತ್ತಿದ್ದ ಅಮ್ಮನನ್ನು ಅತ್ತೆಯ ಜೊತೆ ಅವರ ಮನೆಗೆ ಕಳಿಸಿ ಅಪ್ಪನಿರುವ ಐಸಿಯು ವಾರ್ಡಿನ ಹೊರಗಿನ ಕಾರಿಡಾರಿಗೆ ಬಂದು ಕುಳಿತೆ‌.

ಬದುಕಿನ ಭಯಾನಕವಾದ ರಾತ್ರೆಯೊಂದು ಕಣ್ತೆರೆದದ್ದೇ ಆಗ.

ಅದು ಐಸಿಯು ವಾರ್ಡಿನ ಹೊರ ಕಾರಿಡಾರ್. ಮುಚ್ಚಿದ ಕೋಣೆಯೊಳಗಿನ ಹಾಸಿಗೆಯ ಮೇಲೆ, ಯಂತ್ರಗಳ ಸೆರೆಗೆ ಉಸಿರನ್ನೊಪ್ಪಿಸಿ ಮಲಗಿರುವ ಪರಮಾಪ್ತ ಜೀವಗಳ ದಾರಿ ಕಾಯುತ್ತಿರುವ ಬಂಧುಗಳೆಲ್ಲಾ ಕುಳಿತ ನಿರೀಕ್ಷಣೆಯ ಜಾಗವದು. ಆಗಾಗ ತೆರೆದುಕೊಳ್ಳುತ್ತಿದ್ದ ಐಸಿಯು ವಾರ್ಡಿನ ಬಾಗಿಲಿನಿಂದ ಹೊರಬಂದ ನರ್ಸುಗಳು ಒಳಗಿರುವ ರೋಗಿಯ ಹೆಸರು ಹೇಳಿ 'ಇವರ ಕಡೆಯವರು ಬನ್ನಿ' ಎಂದು ಕರೆಯುತ್ತಿದ್ದರು. ಯಾವ ಕ್ಷಣ ಯಾರಿಗೆ ಕರೆಯೋ? ಯಾವ ನಿಮಿಷದಲ್ಲಿ ಯಾವ ಕೆಟ್ಟ ಸುದ್ದಿಯೋ? ಎಂಬ ಆತಂಕದಲ್ಲೇ ಕುಳಿತಿರುವವರ ಸಾಲಿನ ಕೊನೆಯ ಬೆಂಚಿನ ಮೇಲೆ ಕಾಲು ಚಾಚಿ ಮಲಗಿಕೊಂಡೆ.

ಬಿಟ್ಟು ಹೋಗಿಯೇ ಬಿಡುತ್ತಾನಾ ಅಪ್ಪ? ನೆನ್ನೆಯಷ್ಟೇ ಜೊತೆಗಿದ್ದನಲ್ಲಾ? ಅವನು ಕೇಳಬಯಸಿದ ಹಳೆಯ ಸಿನೆಮಾ ಹಾಡೊಂದು ನನ್ನ ಮೊಬೈಲ್ನಲ್ಲಿ ಯೂಟ್ಯೂಬ್ನಲ್ಲಿ ಸಿಗದೇ ಹೋದಾಗ ಅಮ್ಮನ ಮೊಬೈಲನ್ನು ತಂದುಕೊಡುತ್ತಾ 'ಇದರಲ್ಲಿ ಹುಡುಕು' ಎಂದು ಅದೆಷ್ಟು ಮುಗ್ಧವಾಗಿ ಕೇಳಿದ್ದ? ಎಲ್ಲಾ ಮೊಬೈಲುಗಳಲ್ಲಿ ಬರುವ ಯೂಟ್ಯೂಬೂ ಒಂದೇ ಅಪ್ಪಾ ಎಂದಾಗಲೂ ಅರ್ಥವಾಗದೇ ಮಗುವಿನಂತೆ ಮೊಬೈಲು ಹಿಡಿದುಕೊಂಡೇ ನಿಂತಿದ್ದನಲ್ಲಾ? ಕೊನೆಗೆ ಅವನ ಹಾಡನ್ನು ಹೇಗೋ ಹುಡುಕಿ ಹಾಕಿದಾಗ ಮೊಬೈಲನ್ನು ಕಿವಿಯ ಬಳಿಯಿಟ್ಟುಕೊಂಡು ಓಡಿದ್ದನಲ್ಲಾ? ಅಪ್ಪಾ.. ಆ ಹಾಡನ್ನು ಮತ್ತೆ ಹಾಕುತ್ತೇನೆ ಬಾರೋ. ಒಮ್ಮೆ ಹೊರಗೆ ಬಾ.. ಭಯವಾಗುತ್ತಿದೆ ನನಗೆ. ನೀನೆಂಬ ಧೈರ್ಯವೇ ಹೀಗೆ ಮಲಗಿಬಿಟ್ಟರೆ ಹೇಗೆ ಹೇಳು? ನನಗಾದ ಭಯದ ಕಥೆಯ ನಿನಗೆ ಹೇಳುತ್ತೇನೆ ಬಾ.. ಸ್ಟ್ರೆಚ್ಚರ್, ವೀಲ್ ಚೇರ್ ಗಳೆಲ್ಲದರಿಂದೆದ್ದು ನಿನ್ನದೇ ಕಾಲ ಮೇಲೇ ನಡೆಯುತ್ತಾ ಬಾ.. ಹೆದರಿಬಿಟ್ಯಾ? ನಂಗೇನೂ ಅಗಿಲ್ಲ ಎಂದು ತಲೆದಡವು ಬಾ.

ಕೆಲವೇ ಸಮಯದ ಮುಂಚೆ ಇಲ್ಲೇ ಇದ್ದೆಯಲ್ಲಾ. ಆಗಲೇ ಎಲ್ಲಿ ಹೋಗಿಬಿಟ್ಟೆ ಅಪ್ಪ? ಮನೆಯಲ್ಲಿದ್ದಾಗ ನಾನು ಸುಮ್ಮನೆ ಸೆಖೆಯೆಂದು ಬರಿ ನೆಲದ ಮೇಲೆ ಮಲಗಿದರೇನೇ ದಿಂಬು, ಹೊದಿಕೆ ತಂದು ಕೊಡುತ್ತಿದ್ದೆ. ಈಗ ಹೀಗೆ ಒರಟು ಬೆಂಚಿನ ಮೇಲೆ ನಿನ್ನನ್ನೇ ಕಾಯುತ್ತಾ ಮಲಗಿದ್ದೇನೆ. ಬಂದು ಮಾತನಾಡಿಸದೇ ಒಳಗೇ ಕುಳಿತಿದ್ದೀಯಲ್ಲಾ ಏಕೆ ಅಪ್ಪಾ?

ಅದೆಷ್ಟು ಮಾತನಾಡುತ್ತಿದ್ದೆ ನನ್ನ ಜೊತೆ.. ಇತಿಹಾಸ, ಹಳೆಯ ಸಿನೆಮಾ ಹಾಡುಗಳು, ನಿನ್ನ ಬಾಲ್ಯದ ನೆನಪುಗಳು.. ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದೆ ನನ್ನ ಬಳಿ. ಒಮ್ಮೆಯಾದರೂ ಕಿವಿಗೊಟ್ಟು ಕೇಳಿದ್ದೆನಾ ನಾನು? ರಗಳೆ ಮಾಡುವೆಯೆಂದು ನಿನ್ನನ್ನು ಕಡೆಗಣಿಸುತ್ತಿದ್ದೆನಲ್ಲಾ? ಈಗ ಏನಾಗಿ ಹೋಯಿತು‌ ನೋಡು? ನಾನಾಗಿ ಬಯಸಿದರೂ ಮಾತನಾಡದ ಸ್ಥಿತಿಯ ತಲುಪಿಬಿಟ್ಟೆಯಾ? ಹೋಗೋ ಅಪ್ಪಾ.. ಕೋಪ ನಿನ್ನ ಮೇಲೆ. ಅದೆಷ್ಟು ಹೆದರಿಸುತ್ತಿದ್ದೀಯ? ಎಲ್ಲವೂ ಸರಿಯಾಗಿ ನೀನು ಮನೆಗೆ ಬಂದ ಮೇಲೆ ಒಂದು ವಾರ ಮಾತುಬಿಡುತ್ತೇನೆ ನಿನ್ನ ಜೊತೆ.

ಯೋಚನೆಗಳು ಹಳಿ ತಪ್ಪುತ್ತಿದ್ದವು. ಘಟಿಸಿದ್ದೆಲ್ಲಾ ಸುಳ್ಳಾಗಿಹೋಗಬಾರದೇ? ಒಂದೇ ಒಂದು ಬಾರಿ ಕಾಲ ಹಿಂದಕ್ಕೆ ಸರಿದು ಅಪ್ಪ ಆರೋಗ್ಯವಂತನಾಗಿರುವ ದಿನಗಳು ಮರಳಿ ಬರಬಾರದೇ? ಮನಸ್ಸು ಭಾವುಕವಾಗಿ ಬೇಡುತ್ತಿತ್ತು. ಬಲವಂತವಾಗಿ ಕಣ್ಮುಚ್ಚಿ ನಿದ್ರೆಯನ್ನು ಕಣ್ಣಿಗೆಳೆದುಕೊಳ್ಳುವ ಶತಪ್ರಯತ್ನ ಮಾಡಿದೆ. ಆದರೆ ನಿದ್ರೆಯೆಂಬುದು ಜನುಮದಾಚೆಗೆಲ್ಲೋ ಕೈಜಾರಿಹೋದ ಬೊಗಸೆ ನೀರಿನಂತಾಗಿತ್ತು. ಡಾಕ್ಟರು ಹೇಳಿದ ಮಾತುಗಳೇ ಕಿವಿಯಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿದ್ದವು.

"ನಿಮ್ಮ ತಂದೆಗೆ ಬಹಳ ಸಮಯದಿಂದ ಬಿಪಿ ಇದೆ. ಆದರೆ ಅವರು ಮಾತ್ರೆ ತೆಗೆದುಕೊಂಡಿಲ್ಲ. ಇಂದು ರಾತ್ರೆ ಅದು ಮಿತಿ ಮೀರಿ ತಲೆಯೊಳಗಿನ ನರವೊಂದರಲ್ಲಿ ಬ್ಲಡ್ ಕ್ಲಾಟ್ ಆಗಿ ಬ್ರೈನ್ ಹ್ಯಾಮರೇಜ್ ಆಗಿದೆ. ಹರಿದ ರಕ್ತ ಮೆದುಳಿನ ಮೇಲೆಲ್ಲಾ ಕುಳಿತು ಹೆಪ್ಪುಗಟ್ಟಿ ಮೆದುಳಿನ ಬಹುಭಾಗ ನಿಷ್ಕ್ರಿಯವಾಗಿದೆ‌. ನೀವು ಬೇಗ ಕರೆತಂದಿದ್ದರೆ ತಕ್ಷಣ ಆಪರೇಶನ್ ಮಾಡಿ ಗುಣಪಡಿಸಬಹುದಿತ್ತು. ಆದರೀಗ ಕಾಲ ಮೀರಿದೆ. ಇನ್ನೊಂದು ವಾರ ಅವರನ್ನು ಐಸಿಯುನಲ್ಲಿ ಆಬ್ಸರ್ವೇಶನ್ ನಲ್ಲಿಟ್ಟು ರಕ್ತವನ್ನೆಲ್ಲಾ ಕ್ಲಿಯರ್ ಮಾಡಿ ನಂತರ ಆಪರೇಶನ್ ಮಾಡುತ್ತೇವೆ‌. ಈ ಆರು ದಿನಗಳು ಅತ್ಯಂತ ಅಪಾಯಕಾರಿಯಾಗಿದ್ದು ಏನು ಬೇಕಾದರೂ ಆಗಬಹುದು. ಒಂದು ವೇಳೆ ಈ ಒಂದು ವಾರ ಏನೂ ಆಗದೇ ಕಳೆದಲ್ಲಿ ನಂತರ ಆಪರೇಶನ್ ಮಾಡುತ್ತೇವೆ!"

ಅಪ್ಪನಿಗೆ ಬಿಪಿಯಿತ್ತೆಂಬ ವಿಷಯವನ್ನು ಇಂದು ಬೆಳಗ್ಗೆ ಪರೀಕ್ಷಿಸಲು ಬಂದಿದ್ದ ಊರಿನ ಡಾಕ್ಟರು ಹೇಳಿದ್ದರು. ಹಿಂದೆಂದೋ ಜ್ವರವೆಂದು ಅಪ್ಪ ಅವರ ಕ್ಲಿನಿಕ್ ಗೆ ಹೋದಾಗ ಅಕಸ್ಮಾತಾಗಿ ಈ ವಿಷಯ ಬಹಿರಂಗವಾಗಿತ್ತು. ಆದರೆ ಅಪ್ಪ, ಬಿಪಿಯಿದೆ, ಮಾತ್ರೆ ತೆಗೆದುಕೊಳ್ಳಿರೆಂಬ ಡಾಕ್ಟರ ಸಲಹೆಯನ್ನು ಅವರ ಕ್ಲಿನಿಕ್ಕಿನಲ್ಲೇ ಬಿಟ್ಟು ಮನೆಗೆ ಬಂದಿದ್ದ. ಆ ಒಂದು ಸಣ್ಣ ಮೈಮರೆವಿನ ಫಲವಾಗಿ ಮೊವ್ವತೈದು ಪೈಸೆಯ ಮಾತ್ರೆಗೆ ನಿಯಂತ್ರಣವಾಗಬೇಕಿದ್ದ ಬಿಪಿಯಿಂದು ತೀರಾ ಪ್ರಾಣಕ್ಕೇ ಕೈಯಿಟ್ಟುಬಿಟ್ಟಿತ್ತು.

*************

ಅಪ್ಪ ಇದ್ದದ್ದೇ ಹಾಗೆ. ಮಾತ್ರೆ ಔಷಧಗಳೆಂಬ ಪದಗಳು ಅವನ ಶಬ್ದಕೋಶದ ಯಾವ ಪುಟದಲ್ಲೂ ಇರಲಿಲ್ಲ. ಬೆಳಗ್ಗೆ ಆರಕ್ಕೆ ಎದ್ದರೆ ರಾತ್ರೆ ಹತ್ತರ ತನಕ ಒಂದಿಲ್ಲೊಂದು ಕೆಲಸ ಮಾಡುತ್ತಾ ಬೆವರು ಹರಿಸುತ್ತಿದ್ದವನಿಗದು ಬೇಕಾಗಿಯೂ ಇರಲಿಲ್ಲ. ಎಂದೋ ಸಣ್ಣಗೊಂದು ತಲೆನೋವು, ಮತ್ತೆಂದೋ ಪುಟ್ಟಗೊಂದು ಬೆನ್ನು ನೋವು, ಅಪರೂಪಕ್ಕೊಮ್ಮೆ ಹೊಟ್ಟೆ ನೋವು. ಇವೆಲ್ಲವಕ್ಕೂ ಅಪ್ಪನ ಆಹಾರ ಕ್ರಮದಲ್ಲಿ ಅವನದೇ ಆದ ವಿಚಿತ್ರ ಮದ್ದುಗಳಿದ್ದವು. ಚಹಾ ಕುಡಿಯುವುದು, ದಿನಕ್ಕೆ ಮೂರು ಉತ್ತುತ್ತೆ ತಿನ್ನುವುದು, ಮಸಾಲೆ ಪದಾರ್ಥಗಳ ತಿನ್ನದಿರುವುದು, ಅದೆಂಥದೋ ಕಶಾಯ ಕುಡಿಯುವುದು.. ಹೀಗೆ. ಕೆಸರು ಮಣ್ಣಿನಲ್ಲಿ ಓಡಾಡಿಕೊಂಡಿದ್ದವನ ಹಿಮ್ಮಡಿ ಸದಾ ಬಾಯ್ಬಿಟ್ಟುಕೊಂಡಿರುತ್ತಿತ್ತು. ಅದಕ್ಕೆ ಹಚ್ಚುವ ಕ್ರಾಕ್ ಕ್ರೀಮ್, ತಲೆನೋವಿಗೊಂದು ಝಂಡೂ ಬಾಮ್, ಬೆನ್ನು-ಸೊಂಟ ನೋವುಗಳಿಗೊಂದು ಮೂವ್.. ಇವೆಲ್ಲಾ ಫಸ್ಟೇಯ್ಡ್ ಬಾಕ್ಸ್ ನಲ್ಲಿ ಸದಾ ಅಪ್ಪನ ಸೇವೆಗೆ ಸಿದ್ಧವಾಗಿರುತ್ತಿದ್ದವು. ಇಷ್ಟೇ ಅಪ್ಪನ ಪಾಲಿನ ಆಸ್ಪತ್ರೆಯೆಂದರೆ. ಇನ್ನೆಲ್ಲೋ ವರ್ಷಕ್ಕೊಮ್ಮೆ ಜ್ವರ ಬಂದು, ತನ್ನ ಹಿತ್ತಲ ಗಿಡದ ಯಾವ ಮದ್ದಿಗೂ ಅದು ಬಗ್ಗದಿದ್ದರೆ ಆಗ ಊರಿನ ಡಾಕ್ಟರ ಬಳಿ ಓಡುತ್ತಿದ್ದ. ಅಲ್ಲಿಂದ ಮನೆಗೆ ಬಂದು ಮಾತ್ರೆ ನುಂಗುವಷ್ಟರಲ್ಲೇ ಆ ಜ್ವರವು ನಡುದಾರಿಯಲ್ಲೆಲ್ಲೋ ಬಿದ್ದುಹೋದಂತೆ ವಾಸಿಯಾಗಿಬಿಟ್ಟಿರುತ್ತಿತ್ತು.

ಬಹಳ ವರ್ಷಗಳ ಹಿಂದೆ ಅಪ್ಪನಿಗೆ ಗ್ಯಾಸ್ಟಿಕ್ ಹೊಟ್ಟೆನೋವಿತ್ತು. ನಡುರಾತ್ರೆಯಲ್ಲದು ಕಾಡತೊಡಗಿದಾಗ ಅಪ್ಪ ಸೀದಾ ಎದ್ದು ಪಣತದ ಕೊಟ್ಟಿಗೆಗೆ ನಡೆಯುತ್ತಿದ್ದ. ಅಲ್ಲಿನ ಕಂಬವೊಂದರೆದುರಿನ ಮಣ್ಣು ನೆಲದ ಮೇಲೆ ಕಂಬಳಿಯೊಂದನ್ನು ಹಾಸಿ, ತಲೆಕೆಳಗಾಗಿ ನಿಂತುಬಿಡುತ್ತಿದ್ದ. ಅನ್ನ, ಮಜ್ಜಿಗೆಗಳ ಹೊರತಾಗಿ ಮತ್ತೇನನ್ನೂ ಸೇವಿಸುತ್ತಲೇ ಇರಲಿಲ್ಲ. ಅವನ ಈ ಪಥ್ಯದ ತೀವ್ರತೆಯ ತಡೆಯಲಾರದ ಹೊಟ್ಟೆ ನೋವು ಮೆಲ್ಲನೆ ಪೇರಿಕಿತ್ತಿತ್ತು. ಅಲ್ಲದೆ ವರ್ಷವೊಂದರ ಕೆಳಗೆ ಅದೊಂದು ದಿನ ಗುಡ್ಡದಿಂದ ಸೊಪ್ಪಿನ ಹೊರೆ ಹೊತ್ತು ತರುತ್ತಿದ್ದವನು ಅಂಗಳದಲ್ಲಿ ಜಾರಿ ಬಿದ್ದುಬಿಟ್ಟ. ಅಲ್ಲೇ ಇದ್ದ ನನ್ನ ತಮ್ಮ ಹಾಗೂ ಪಕ್ಕದ ಮನೆಯ ಅಣ್ಣ ಅಪ್ಪನನ್ನು ಎತ್ತಿ, ಪಕ್ಕದಲ್ಲಿದ್ದ ಸೊಪ್ಪಿನ ಹೊರೆಯನ್ನು ಬದಿಗೆ ಸರಿಸಲು ಪ್ರಯತ್ನಿಸಿದ್ದರು. ಆದರೆ ಏನೇ ಹೆಣಗಾಡಿದರೂ ಅದನ್ನು ಒಂದಿಂಚು ಕದಲಿಸುವುದು ಸದೃಢ ದೇಹಿಗಳಾದ ಅವರಿಗೂ ಕಷ್ಟವಾಗಿತ್ತು. ಅಷ್ಟು ಭಾರೀ ಹೊರೆಯನ್ನು ಅಪ್ಪನೊಬ್ಬನೇ ದೂರದ ಗುಡ್ಡದ ಕಲ್ಲುದಾರಿಯಿಂದ ಹೊತ್ತು ತಂದಿದ್ದಾದರೂ ಹೇಗೆಂದು ಅವರಿಬ್ಬರೂ ಅಚ್ಚರಿ ವ್ಯಕ್ತಪಡಿಸಿದ್ದರು.

ಅಂದಹಾಗೇ ಈ ಘಟನೆ ನಡೆದಾಗ ಅಪ್ಪನಿಗೆ ಅರವತ್ತೆರೆಡರ ಪ್ರಾಯ!

ಇಂತಿದ್ದ ಅಪ್ಪ ತನ್ನ ಜೀವಮಾನವಿಡೀ ನನ್ನ, ಅಮ್ಮನ ಹಾಗೂ ತಮ್ಮನ ಖಾಯಿಲೆಗಳಿಗಾಗಿ ಕ್ಲಿನಿಕ್ ಗೆ ಹತ್ತಿಳಿದದ್ದೇ ಹೆಚ್ಚು. ಹೀಗೆ ಅರವತ್ತು ವರ್ಷಗಳ ತನ್ನ ಜೀವನದ ಬಹುಪಾಲನ್ನು ನಳನಳಿಸುವ ಆರೋಗ್ಯದಿಂದ, ಆರೋಗ್ಯಕರ ಅಭ್ಯಾಸಗಳಿಂದ ಕಳೆದಿದ್ದ ಅಪ್ಪ ಇಂದು ಹೀಗೆ ಹಠಾತ್ತನೆ ಐಸಿಯು ಸೇರಿದ್ದಾನೆಂಬುದನ್ನು ಅರಗಿಸಿಕೊಳ್ಳುವುದು ಮನಸ್ಸಿಗೆ ಮಾತ್ರವಲ್ಲ, ಬುದ್ಧಿಗೂ ಕಷ್ಟವೇ ಆಗಿತ್ತು.

ಐಸಿಯು ವಾರ್ಡಿನ ಹೊರಗೆ ದುಃಸ್ವಪ್ನದಂಥಹಾ ವಾಸ್ತವವನ್ನೂ, ಕಟು ವಾಸ್ತವದಂಥಹಾ ದುಃಸ್ವಪ್ನಗಳನ್ನೂ ಅನುಭವಿಸುತ್ತಾ ಮಲಗಿದ್ದ ನನ್ನನ್ನು ಬೆಳಗಿನ ಮೂರರ ಹೊತ್ತಿಗೆ ಎಬ್ಬಿಸಿ ಒಳಗೆ ಕರೆಯಲಾಯಿತು. ಬೆಚ್ಚಿ ಬಿದ್ದೆದ್ದು ಹೋಗಿ ನೋಡಿದರೆ ನನ್ನೆದುರು ನಿಂತಿದ್ದ ಡಾಕ್ಟರು ಗಂಭೀರ ಮುಖದಲ್ಲಿ ನೇರ ವಿಷಯಕ್ಕೆ ಬಂದುಬಿಟ್ಟರು:

"ನಿಮ್ಮ ತಂದೆಯ ಪರಿಸ್ಥಿತಿ ತುಂಬಾ ಕ್ರಿಟಿಕಲ್ ಆಗಿದೆ. ಅವರೀಗ ಇದ್ದ ಅಲ್ಪ ಪ್ರಜ್ಞೆಯನ್ನೂ ಕಳೆದುಕೊಂಡಿದ್ದಾರೆ. ಕೂಡಲೇ ಆಪರೇಶನ್ ಮಾಡಲೇಬೇಕು. ಹಾಗೆ ಮಾಡಿದ ಮೇಲಾದರೂ ಉಳಿಯುತ್ತಾರೆಂಬುದು ಖಾತ್ರಿಯಿಲ್ಲ. ಕೂಡಲೇ ಈ ಮಾದರಿಯ ರಕ್ತವನ್ನು ತಂದುಕೊಡಿ!"

ಹೊತ್ತಿನ್ನೂ ಮೂಡದ ನಡು ರಾತ್ರೆ. ಏನೇನೂ ಗೊತ್ತಿಲ್ಲದ ಅಪರಿಚಿತ ಶಹರ. ಕೈಯಲ್ಲಿ ಇನ್ನೇನು ಮುಗಿದು ಹೋಗಲಿರುವ ಚಿಲ್ಲರೆ ಕಾಸು. ಒಳಗೆ ತಳಮಳಿಸುತ್ತಾ ಮಲಗಿರುವ ಅಪ್ಪ! ಎಲಾ ಬದುಕೇ..ಎಲ್ಲಿಗೆ ತಂದು ನಿಲ್ಲಿಸಿಬಿಟ್ಟೆ? ಈ ನಡುರಾತ್ರೆಯಲ್ಲಿ ಎಲ್ಲಿಂದ ತರಲಿ ರಕ್ತವನ್ನು? ಅವರು ಹೇಳುವ ಬ್ಲಡ್ ಬ್ಯಾಂಕ್ ಅದಿನ್ಯಾವ ಮೂಲೆಯಲ್ಲಿದೆಯೋ ಕಂಡವರ್ಯಾರು? ತಂದು ಕೊಡುತ್ತೇನೆ ಎಂದಷ್ಟೇ ಹೇಳಿ ಆಸ್ಪತ್ರೆಯಿಂದ ಹೊರಬಂದೆ. ಬೇರೇನೂ ತೋಚದೆ ಕೊಂಚ ದೂರದ ತಮ್ಮ ಮನೆಯಲ್ಲಿದ್ದ ಅತ್ತೆಗೆ ಕರೆಮಾಡಿದೆ. ಕೆಲವೇ ನಿಮಿಷಗಳಲ್ಲಿ ತನ್ನ ತಮ್ಮನೊಂದಿಗೆ ಆಸ್ಪತ್ರೆಗೆ ಬಂದ ಅವರು ನನ್ನಿಂದ ರಕ್ತದ ಮಾದರಿಯನ್ನು ಪಡೆದು ಬ್ಲಡ್ ಬ್ಯಾಂಕ್ ಗೆ ತೆರಳಿದರು.

ಸುತ್ತಲ ವಾತಾವರಣ ಬೆಳಗಿನ ಮೂರೂ ಮೊವ್ವತ್ತರ ಭಯಾನಕ, ದಾರುಣ ಕತ್ತಲಲ್ಲಿ ಸ್ತಬ್ದವಾಗಿ ನಿಂತಿತ್ತು. ರಾತ್ರೆ ಅಡ್ಮೀಶನ್ ಹೋಗುವ ಮೊದಲು ನೋಡಿದ್ದೇ ಕೊನೆ, ಆ ನಂತರ ಇಲ್ಲಿಯವರೆಗೂ ದೂರದಿಂದಲಾದರೂ ಅಪ್ಪನ ಮುಖ ಕಂಡಿಲ್ಲ. ಹೇಗಿದ್ದಾನೆ ಅಪ್ಪ? ಯಾವ್ಯಾವ ಯಂತ್ರ, ಕೊಳವೆ, ಸೂಜಿಗಳ ಚುಚ್ಚಿಟ್ಟಿದ್ದಾರೋ? ಅದಿನ್ನೆಷ್ಟು ನೋವನ್ನನುಭವಿಸುತ್ತಿದ್ದಾನೋ? ಪ್ರಜ್ಞಯೇ ಹೋಗಿದೆಯಂತಲ್ಲಾ? ಬಹುಷಃ ಅಪ್ಪನ ಜೀವಮಾನದಲ್ಲೇ ಇದು ಮೊದಲ ಪ್ರಜ್ಞಾಹೀನತೆ. ಅಷ್ಟಕ್ಕೂ ನೆನ್ನೆ 'ಒಂದು ವಾರದ ನಂತರ ಆಪರೇಶನ್ ಮಾಡುತ್ತೇವೆ' ಎಂದಿದ್ದವರು ಈಗ ಹಠಾತ್ತನೆ ಇಂದೇ ಮಾಡುತ್ತೇವೆ ಅಂದಿದ್ದಾದರೂ ಏಕೆ? ಇದರಲ್ಲೇನೂ ಮೋಸವಿಲ್ಲ ತಾನೇ? ಅಪ್ಪನೀಗ ಜೀವಂತವಾಗಿದ್ದಾನೆ ತಾನೇ?

ಹುಟ್ಟುಗಳ ಕಂಡಿದ್ದೆ. ಪರಮಾಪ್ತರ ಸಾವುಗಳನ್ನೂ ನೋಡಿದ್ದೆ. ಆದರೆ ಜೀವದ ಒಂದು ಭಾಗವೇ ಕಣ್ಣೆದುರಿಗೆ ಕೈಜಾರಿಹೋಗುತ್ತಿರುವುದನ್ನು ಹೀಗೆ ಅಸಹಾಯಕವಾಗಿ ನೋಡುತ್ತಿರುವುದು ಇದೇ ಮೊದಲು.

ಎಲ್ಲಿ ಹೋದಿರಿ ಅಪ್ಪ ಪೂಜಿಸಿದ್ದ ದೈವಗಳೇ? ಯಾವ ಕಲ್ಲಿನೊಳಗೆ ಅವಿತುಬಿಟ್ಟಿರಿ? ಎಲ್ಲಿ ಹೋಯಿತು ಪ್ರತಿನಿತ್ಯ ಅವನು ನಿಮ್ಮ ತಲೆಯ ಮೇಲೆ ಸುರಿದ ಅಭಿಷೇಕದ ನೀರು? ಎಲ್ಲಿ ಹೋದವು ಅವನು ನಿಮಗೆ ಎರೆದ ಹಾಲು-ತುಪ್ಪ? ಇದೇನಾ ಅವನು ಏರಿಸಿದ ಮೃದು ಹೂಗಳಿಗೆ ನೀವು ಕೊಟ್ಟ ಪ್ರತಿಫಲ? ಏನಾಯಿತು ಅವನು ಪ್ರತಿನಿತ್ಯ ಮಾಡಿದ್ದ ಪ್ರಾರ್ಥನೆ? ನಿಮ್ಮದಾದರೂ ಏನು ತಪ್ಪಿದೆ ಹೇಳಿ? ಎಂದಾದರೂ ಅವನು ಪ್ರಾರ್ಥನೆಯಲ್ಲಿ ತನ್ನ ಬಗೆಗೆ ಏನನ್ನಾದರೂ ಕೇಳಿದ್ದಾನೆಯೇ? ಮಗನಿಗೆ ಅಲರ್ಜಿ ಕಡಿಮೆಯಾಗಲಿ, ಮಗನಿಗೆ ಒಳ್ಳೆಯ ಕೆಲಸ ಸಿಗಲಿ.. ಜಗದೆಲ್ಲ ಖುಷಿಯೂ ಮಗನಿಗೇ ಇರಲಿ..

ಜೀವ ಚೀರಿಕೊಳ್ಳುತ್ತಿತ್ತು. ಹೃದಯ ದಣಿಯುತ್ತಿತ್ತು. ಕಾಲು ಸೋಲುತ್ತಿತ್ತು. ನಾನೊಬ್ಬ ಗಂಡಸು ಹಾಗೂ ಗಂಡಸರು ಅಳಬಾರದು ಎಂಬೆಲ್ಲ ಗರ್ವಗಳ ಮರೆತು ಒಂದೇ ಸಮನೆ ಅತ್ತುಬಿಟ್ಟೆ. ಈ ಗಾಢಾಂಧಕಾರದಲ್ಲಿ ಸಮಾಧಾನದ ಮಾತನಾಡುವ ಒಂದೇ ಒಂದು ಜೀವವೂ ಜೊತೆಗಿಲ್ಲದ ಅದೆಂಥಹಾ ಒಬ್ವಂಟಿ ಇರುಳಿಗೆ ಬಂದು ನಿಂತುಬಿಟ್ಟೆ?

ಇದು ಕೇವಲ ನನ್ನೊಬ್ಬನ ಕಥೆಯಲ್ಲ. ಆಸ್ಪತ್ರೆಯೊಂದರ ಕಾರಿಡಾರಿನಲ್ಲಿ ಸುಮ್ಮನೆ ಒಂದು ದಿನ ಕಳೆದು ನೋಡಿ: ಇಂಥದೇ ಅದೆಷ್ಟೋ ನರಳಿಕೆ, ಅಳು, ರೋದನೆಗಳು ಜರುಗುತ್ತಲೇ ಇರುತ್ತವೆ. ಮಂದಿ ನರಳಿ, ಅತ್ತು, ಸಮಾಧಾನಪಡಿಸಿ, ಸಮಾಧಾನಗೊಂಡು ಒಂದಷ್ಟು ಹೊತ್ತು ಇದ್ದು, ಎದ್ದುಹೋಗುತ್ತಲೇ ಇರುತ್ತಾರೆ. ಇಂಥಹಾ ಅದೆಷ್ಟು ಜನರ ನರಳಾಟವ ಕೇಳಿಕೇಳಿ ಇಷ್ಟೊಂದು ನಿರ್ಭಾವುಕಗೊಂಡಿವೆಯೋ ಈ ಆಸ್ಪತ್ರೆಯ ಕಂಬ, ಗೋಡೆ, ಕಾರಿಡಾರುಗಳು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...