ಬುಧವಾರ, ಜುಲೈ 8, 2020

ಅಪ್ಪ.. ಐ ಲವ್ ಯು ಅಪ್ಪಾ.. 5

ಆಸ್ಪತ್ರೆಯೆಂದರೆ ಬದುಕು ಹಾಗೂ ಸಾವು ನಡುವಿನ ದಿಬ್ಬ. ಇಲ್ಲಿ ಕಳೆದ ಇಪ್ಪತ್ತು ದಿನಗಳಲ್ಲಿ ಮೂರು ಸಾವುಗಳನ್ನು ನೋಡಿಬಿಟ್ಟೆ.‌ ಅವುಗಳ ಪೈಕಿ ಒಂದಂತೂ ಕಣ್ಮುಂದೆಯೇ ನಡೆದುಹೋಗಿತ್ತು.

ನ್ಯೂರೋ ಐಸಿಯುನಲ್ಲಿ ಅಪ್ಪನ ಪಕ್ಕದ ಬೆಡ್ನಲ್ಲೇ ಮಲಗಿದ್ದರು ಆ ತಾತ. ತಾತನೆಂದರೆ ಅಪ್ಪನಿಗಿಂತ ಕೇವಲ ನಾಲ್ಕು ವರ್ಷಕ್ಕೆ ಹಿರಿದಾದ ಜೀವವದು. ಆದರೆ ನೋಡಲಿಕ್ಕೆ ಅಪ್ಪನಿಗಿಂತ ಕನಿಷ್ಠ ಹತ್ತು ವರ್ಷಗಳಷ್ಟು ದೊಡ್ಡವರಂತೆ ಕಾಣುತ್ತಿದ್ದರು. ಹೃದಯ, ಶ್ವಾಸಕೋಶ, ಕಿಡ್ನಿಗಳಂಥಹಾ ಪ್ರಮುಖಾತಿ ಪ್ರಮುಖ ಅಂಗಗಳೆಲ್ಲಾ ಒಟ್ಟೊಟ್ಟಿಗೇ ಘಾಸಿಗೊಂಡ ಸ್ಥಿತಿಯಲ್ಲಿದ್ದ ಆ ವ್ಯಕ್ತಿ ದಿನವಿಡೀ ಕಿರುಚುತ್ತಲೇ ಇರುತ್ತಿದ್ದರು. ತನ್ನ ಅರೈಕೆಗೆಂದು ಜೊತೆಗಿದ್ದ ಮಡದಿಯನ್ನೇ ಸದಾ ಬೈಯುತ್ತಾ ಎಲ್ಲೋ ಇರುವ ತನ್ನ ಮಕ್ಕಳ ಹೆಸರನ್ನು ಒಂದೊಂದಾಗಿ ಕರೆಯುತ್ತಾ ತನ್ನನ್ನು ಇಲ್ಲಿಂದ ಕರೆದೊಯ್ಯುವಂತೆ ಮೊರೆಯಿಡುತ್ತಿದ್ದರು. ಅವರು ಮಾತ್ರವಲ್ಲದೆ ಯಾರೇ ಅವರ ಕಣ್ಣೆದುರು ನಡೆದರೂ ಅಣ್ಣಾ.. ಇಲ್ಲಿ ಬಾರಪ್ಪಾ, ನನ್ನ ಒಂಚೂರು ಎಬ್ಬಿಸಿ ಕೂರಿಸು ಬಾರೋ ಎಂದು ದಯನೀಯವಾಗಿ ಕರೆಯುತ್ತಿದ್ದರು. ಪ್ರಾಯದ ದಿನಗಳಲ್ಲಿ ಲಾರಿ ಡ್ರೈವಿಂಗ್ ಮಾಡುತ್ತಿದ್ದ ಅವರು ಅತ್ಯಂತ ಒರಟರೂ, ಕುಡಿತ-ಬಿಡಿ-ತಂಬಾಕುಗಳ ಅತಿ ದೊಡ್ಡ ದಾಸರೂ ಆಗಿದ್ದರೆಂದೂ, ಆದ್ದರಿಂದ ಹೀಗಾಯಿತೆಂದೂ ಅವರ ಮಡದಿ ಹೇಳಿಕೊಂಡರೆ ಅಲ್ಲೇ ಇದ್ದ ನರ್ಸ್ ಕುಡಿತ, ಸಿಗರೇಟು ಜಾಸ್ತಿ ಅಲ್ವಾ ಅದಿಕ್ಕೆ ಪೇಷಂಟುಗಳು ಜಾಸ್ತಿ ಎಂದು ದನಿಗೂಡಿಸಿದಳು. ಅವರ ಮಾತಿಗೆ ನಾನು ಒಳಗೇ ನಕ್ಕು ಬಿಟ್ಟೆ. ಸಿಗರೇಟಿನ ಯಾವ ತುದಿಯನ್ನು ಬಾಯಿಗಿಟ್ಟು, ಯಾವ ತುದಿಗೆ ಬೆಂಕಿ ಹಚ್ಚಬೇಕನ್ನುವುದನ್ನೇ ತಿಳಿಯದವನು ನನ್ನಪ್ಪ! ಕುತೂಹಲಕ್ಕಾಗಿಯಾದರೂ ಒಂದು ದಿನ ಎಲೆ-ಅಡಿಕೆ-ಕವಳವನ್ನೂ ಹಾಕಿದವನಲ್ಲ‌. ಬೆವರೊಂದನ್ನೇ ಕುಡಿದು, ಬೆವರನ್ನಷ್ಟೇ ಹರಿಸಿದವನು. ಅಂಥವನಿಗೇ ಹೀಗಾಯಿತೆಂದರೆ ಇನ್ಯಾವ ದುಷ್ಚಟವನ್ನು ದೂರೋಣ? ಹಸಿರು ಕಾಡಿನೊಳಗೆ ಬೆಳೆದ ಅನಾಮಿಕ ಸಸಿಯಂಥಹಾ ಸ್ವಚ್ಛ, ಅರೋಗ್ಯಕರ ಬದುಕನ್ನು ಬಾಳಿದ ಅಪ್ಪ, ದುಶ್ಚಟಗಳನ್ನೇ ಉಸಿರಾಡಿದ ಆ ವ್ಯಕ್ತಿ - ಈ ಇಬ್ಬರೂ ಒಂದೇ ಆಸ್ಪತ್ರೆಯ ಅಕ್ಕಪಕ್ಕದ ಬೆಡ್ ಗಳಲ್ಲಿ ಹೀಗೆ ನಿತ್ರಾಣರಾಗಿ ಮಲಗುತ್ತಾರೆಂದರೆ ಅದಿನ್ಯಾವ ಆರೋಗ್ಯವನ್ನು ನಂಬೋಣ?

ಅದೊಂದು ದುರಾದೃಷ್ಟಕರ ಮಧ್ಯಾಹ್ನ. ಸಂಜೆಯಿಂದ ಬೆಳಗಿನ ತನಕ ಕೂಗುತ್ತಲೇ ಇದ್ದ ಆ ವ್ಯಕ್ತಿ ಕೆಲ ಸಮಯದ ಮುಂಚೆಯಷ್ಟೇ ನಿತ್ರಾಣರಾಗಿ ನಿದ್ರೆಗೆ ಶರಣಾಗಿದ್ದರು. ಮಧ್ಯಾಹ್ನ ಒಂದೂ ಮೊವ್ವತ್ತರ ಹೊತ್ತಿಗೆ ಇದ್ದಕ್ಕಿದ್ದಂತೆ ಅವರಿಗೆ ಅಳವಡಿಸಿದ್ದ ಮಾನಿಟರ್ ವಿಕಾರವಾಗಿ ಕಿರುಚಿಕೊಂಡುಬಿಟ್ಟಿತು. ಪರದೆಯಲ್ಲಿ ಬಿಪಿ, ಆಕ್ಸಿಜನ್, ನಾಡಿಮಿಡಿತಗಳೆಲ್ಲಾ ಕನಿಷ್ಠ ಮಟ್ಟಕ್ಕಿಂತ ಕೆಳಜಾರಿ, ಅದರ ಹಣೆಯಲ್ಲಿ ಕೆಂಪು ದೀಪವೊಂದು ಗಂಟಲು ಹರಿಯುವಂತೆ ಅರಚಿಕೊಳ್ಳುತ್ತಾ ಆರಿ ಆರಿ ಹೊತ್ತಿಕೊಳ್ಳುತ್ತಿತ್ತು. ಕೂಡಲೇ ರೂಮಿನ ಒಂದೊಂದು ಮೂಲೆಯಿಂದಲೂ ಬಿದ್ದೆದ್ದು ಓಡಿಬಂದ ನರ್ಸುಗಳೆಲ್ಲ ಅವರನ್ನು ಸುತ್ತುವರಿದರು. ಕೆಲ ನಿಮಿಷಗಳ ಆತಂಕ, ಉದ್ವೇಗ, ಗಡಿಬಿಡಿ, ಹೆಣಗಾಟಗಳ ನಂತರ ಅವರೆಲ್ಲರೂ ಹಿಂದೆ ಸರಿದ ಮೇಲೆ ಅಲ್ಲಿ ಉಳಿದಿತ್ತು- ಉಸಿರಾಟ, ಮಿಡುಕಾಟಗಳೆಲ್ಲದರಿಂದ ಮುಕ್ತವಾಗಿ ಮಂಚದ ಮೇಲೆ ನಿಶ್ಚಲವಾಗಿ ಮಲಗಿದ್ದ ಆತನ ಶವ!

ಅರವತ್ತೇಳು ವರ್ಷಗಳ ಬದುಕು, ಕಟ್ಟಿಕೊಂಡ ಸಂಸಾರ, ಅಂಟಿಸಿಕೊಂಡ ಚಟಗಳು, ಓಡಿಸುತ್ತಿದ್ದ ಲಾರಿ.. ಇವೆಲ್ಲವನ್ನೂ ಒಂದೇ ಕ್ಷಣದಲ್ಲಿ ಹಿಂದೆ ಬಿಟ್ಟು ಕಡ್ಡಿಯೊಂದು ಮುರಿದಷ್ಟೇ ಸಲೀಸಾಗಿ ಜೀವ ದೇಹವ ತೊರೆದುಹೋಗಿತ್ತು‌.

ಬರುಬರುತ್ತಾ ಆಸ್ಪತ್ರೆ ನನಗೆ ಅಭ್ಯಾಸವಾಗತೊಡಗಿತು‌. ಇಲ್ಲಿನ ಮುಸುಕುಗತ್ತಲ ಕಾರಿಡಾರುಗಳು, ಒಂದಿಲ್ಲೊಂದು ಜೀವದ ಎದೆಯಲ್ಲಿ ಬಾರಿಸುವ ಅಪಾಯದ ಗಂಟೆ, ಕೆಲವೇ ನಿಮಿಷದಲ್ಲಿ ಇಹದ ಋಣ ಮುಗಿಸಿ ಸ್ಟ್ರೆಚ್ಚರ್ ಮೇಲೇರಿ ಸಾಗುವ ಶವಗಳು, ಉಸಿರಾಟದಷ್ಟೇ ನಿರಂತರವೂ, ಸಾಮನ್ಯವೂ ಆದ ಕಣ್ಣೀರು, ನಿರ್ಭಾವುಕ ಡಾಕ್ಟರುಗಳು, ನಿಶ್ಯಕ್ತರಾಗಿ ನರಳುತ್ತಾ ಮಲಗಿರುವ ರೋಗಿಗಳು ಹಾಗೂ ಅವರ ಚೇತರಿಕೆಗಾಗಿ ತುಂಬುಗಣ್ಣುಗಳಲ್ಲಿ ಕಾಯುತ್ತಾ ನಿಂತಿರುವ ಅವರ ಕಡೆಯವರ ನಡುವೆಯೇ ತಂತಮ್ಮ ಹಾಸ್ಯ, ನಗು, ಮಾತುಗಳ ಹಂಚಿಕೊಳ್ಳುತ್ತಾ ಬಾಳುವ ನರ್ಸ್-ವಾರ್ಡ್ ಬಾಯ್ ಗಳು, ಆರಿ ಆರಿ ಹೊತ್ತುವ, ಹೊತ್ತಿ ಹೊತ್ತಿ ಆರುವ ಆಪರೇಶನ್ ಥಿಯೇಟರ್ ನ ಕೆಂಪು ದೀಪ, ಆಚೆ ಕುಳಿತವರ ಕಣ್ಣಲ್ಲಿ ತುಳುಕುವ ಮಾನವ ಲೋಕದ ಅನನ್ಯ ಪ್ರೀತಿ.. ಇವೆಲ್ಲ ನನ್ನ ನಿತ್ಯ ಬದುಕಿನ ಭಾಗಗಳೇ ಅನ್ನಿಸತೊಡಗಿದವು. ಒಮ್ಮೆ ಆಸ್ಪತ್ರೆಯ ಬಲ್ಬು-ದೀಪಗಳ ಕೃತಕ, ಅಖಂಡ ಹಗಲಿನೊಳಗೆ ಪ್ರವೇಶಿಸಿಬಿಟ್ಟರೆ ಹೊರಗಡೆ ಹಗಲೋ, ಸಂಜೆಯೋ, ರಾತ್ರೆಯೋ, ಮಳೆಯೋ, ಬಿಸಿಲೋ ಒಂದೂ ತಿಳಿಯುತ್ತಿರಲಿಲ್ಲ.

ಅಪ್ಪನೀಗ ಮೆಲ್ಲಮೆಲ್ಲನೆ ಈ ಲೋಕದವನಾಗತೊಡಗಿದ್ದ. ಅವನ ಎಡದ ಕೈ-ಕಾಲುಗಳು ಮತ್ತೆ ಚಲನೆಗೆ ಮರಳಿದ್ದವು. ಗಾಯದ ಹುಲಿಗೆಗಳಿರುವ ತನ್ನ ತಲೆಯನ್ನವನು ಕುತೂಹಲದಿಂದೆಂಬಂತೆ ಮುಟ್ಟಿ ನೋಡಿಕೊಳ್ಳುತ್ತಿದ್ದ. ವಾರ್ಡಿನೊಳಗಿನ ಬೆಳಕು, ಬೀಪ್ ಬೀಪ್ ಎನ್ನುವ ಮಾನಿಟರ್, ಬಟ್ಟೆ ಬದಲಿಸಲು ಬಂದ ವಾರ್ಡ್ ಬಾಯ್ ಹಾಗೂ ಪಕ್ಕದಲ್ಲಿ ಕುಳಿತಿರುವ ನಾನು.. ಎಲ್ಲರನ್ನೂ ಬೆರಗುಗಣ್ಣುಗಳಿಂದ ನೋಡುತ್ತಿದ್ದ‌.
ಉಪಚರಿಸಬಂದ ನರ್ಸನ್ನು ನೋಡಿ ಇವರು ಯಾರು? ಎಂದು ಬೆರಳುಮಾಡುತ್ತಿದ್ದ. ಈ ಬಾರಿ ಅಪ್ಪನ ಈ ಅಯೋಮಯ ಸ್ಥಿತಿ ನನ್ನಲ್ಲಿ ಭಾವುಕತೆಗಿಂತ ಹೆಚ್ಚಾಗಿ ಯೋಚನೆಯನ್ನು ಹುಟ್ಟುಹಾಕಿತು. ಈ ದುರ್ಘಟನಾ ಸರಣಿಯ ಎಲ್ಲಿಯ ತನಕದ ಕಂತುಗಳು ಅಪ್ಪನಿಗೆ ನೆನಪಿನಲ್ಲುಳಿದಿರಬಹುದು? ಆ ಕಾಳರಾತ್ರೆಯಲ್ಲಿ ತಲೆಯೊಳಗಿನ ನರವೊಂದು ತನ್ನನ್ನು ತಾನೇ ಸ್ಫೋಟಿಸಿಕೊಂಡು ಅಗಾಧವಾದ ನೋವಿನಲೆಗಳು ಹುಟ್ಟಿ ಮಾತು ಸ್ತಬ್ಧವಾದ ಆ ಕ್ಷಣಕ್ಕೇ ಅಪ್ಪನ ನೆನಪಿನ ಗಡಿಯಾರ ನಿಂತುಹೋಯಿತಾ? ಆನಂತರದಿಂದ ಇಂದಿನ ತನಕ ನಡೆದುದ್ದೆಲ್ಲವೂ ಅವನಿಗೆ ಕೊನೆಯಿಲ್ಲದ ಕೆಟ್ಟ ಕನಸಿನಂತೆ ಭಾಸವಾಗುತ್ತಿದೆಯಾ? ಅಂದು ಅಗಾಧ ನೋವಿನೊಂದಿಗೆ ನಿಂತಿದ್ದ ಪ್ರಜ್ಞೆ ಇಂದು ಇಲ್ಲಿ ಐಸಿಯು ವಾರ್ಡಿನ ಕೋಣೆಯೊಳಗೆ, ಜೀವರಕ್ಷಕ ಯಂತ್ರಗಳ ಕೀಂಕೀಂ ಸದ್ದಿನ ನಡುವೆ, ನರಳುತ್ತಿರುವ ರೋಗಿಗಳ ಮಧ್ಯದಲ್ಲಿ ಪುನರಾರಂಭವಾದಾಗ ಅಪ್ಪನಿಗೆ ಏನನ್ನಿಸಿರಬಹದು?

ದೇಹವೆಂಬ ಯಂತ್ರ ಅದೆಷ್ಟು ವಿಚಿತ್ರವಲ್ಲವೇ ಅನ್ನಿಸಿತು.

***************

ಮುಂದಿನ ಹದಿನೈದು ದಿನಗಳನ್ನು ನಾವು ಅಸ್ಪತ್ರೆಯಲ್ಲೇ ಕಳೆದೆವು. ಅಪ್ಪನೀಗ ಕೆಲವೇ ದಿನದ ಹಿಂದೆ ಹುಟ್ಟಿದ ಮಗುವಿನಂತೆ ವರ್ತಿಸುತ್ತಿದ್ದ. ನನಗೆ ಊಟ ಕೊಡು, ತಲೆಗೆ ಎಣ್ಣೆ ಹಾಕು, ಮೂರು ಉತ್ತುತ್ತೆ ತಿನ್ನಲು ಕೊಡು ಎಂದೆಲ್ಲ ನನ್ನ ಬಳಿ ಸನ್ನೆಯಲ್ಲಿ ಕೇಳುತ್ತಿದ್ದ. ನಾವೀಗ ಎಲ್ಲಿದ್ದೇವೆ? ಇದು ಯಾವ ಊರು? ಅವತ್ತು ರಾತ್ರೆ ನನಗೆ ತಲೆನೋವು ಬಂತಲ್ಲಾ, ಅಂದು ಆಗಿದ್ದಾದರೂ ಏನು? ನನ್ನ ಪಕ್ಕದಲ್ಲಿ ನರಳುತ್ತಿರುವುದು ಯಾರು? ನೀನೇಕೆ ಒಬ್ಬನೇ ಕೂತಿದ್ದೀಯಾ? ಅಮ್ಮ ಎಲ್ಲಿ.. ಅಪ್ಪನ ಕುತೂಹಲಗಳಿಗೆ ಕೊನೆಯೇ ಇರಲಿಲ್ಲ. ಮೂರು-ನಾಲ್ಕರ ಬಾಲ್ಯದಲ್ಲಿ ಬಹುಷಃ ನಾನು ಕೇಳಿ ತಲೆ ತಿಂದಿದ್ದ ಪ್ರಶ್ನೆಗಳ ಜಿದ್ದನ್ನು ಈಗ ಹೀಗೆ ತೀರಿಸಿಕೊಳ್ಳುತ್ತಿದ್ದನೋ ಏನೋ? ಒಟ್ಟಾರೆ ಅವನ ಎಲ್ಲ ಪ್ರಶ್ನೆಗಳಿಗೂ ಸುಳ್ಳುಸುಳ್ಳು ಉತ್ತರಗಳ ಕೊಡುತ್ತಾ ನಾನು ಬಚವಾಗುತ್ತಿದ್ದೆ.

ಆಸ್ಪತ್ರೆಯಲ್ಲಿದ್ದ ಮುಂದಿನ ಎರೆಡು ವಾರಗಳಲ್ಲಿ ಅಪ್ಪನನ್ನು ಜ್ವರ, ಕಫ, ಬಿಪಿ, ತಲೆನೋವುಗಳು ಕಾಡುತ್ತಲೇ ಇದ್ದವು. ಅವನ ಬಿಪಿ ಹೆಚ್ಚಿದಂತೆಲ್ಲಾ ನನ್ನ ಎದೆಬಡಿತವೂ ಹೆಚ್ಚುತ್ತಿತ್ತು. ಗಟ್ಟಿಯಿದ್ದ ನರವನ್ನೇ ಕತ್ತರಿಸಿ ಹಾಕಿದ ಬಿಪಿಯಿದು. ಹೊಲಿದ ಗಾಯವಾರದ ನರವಿನ್ಯಾವ ಲೆಕ್ಕ? ಯಾವ ಹೊತ್ತಿನಲ್ಲಿ ಮತ್ತೆ ಕೋಡಿಬೀಳುತ್ತದೋ ಯಾರಿಗೆ ಗೊತ್ತು? ಹಾಗೆಂದುಕೊಂಡೇ ನಾನು ಮತ್ತೆ ಮತ್ತೆ ನರ್ಸುಗಳ ಬಳಿ ಅಪ್ಪನ ಬಿಪಿಯ ಪ್ರಮಾಣವನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆ. ಹಾಕಬೇಕಾದ ಮಾತ್ರೆಯನ್ನು ಹಾಕಿಯಾಯಿತಾ ಎಂದು ವಿಚಾರಿಸುತ್ತಿದ್ದೆ. ಅಪ್ಪನಾದರೂ ಈಗೀಗ ಕೊಂಚ ಕೈಕಾಲು ಆಡತೊಡಗಿದ ಮೇಲೆ ಕಪಿ ಚೇಶ್ಟೆಗಳನ್ನು ಆರಂಭಿಸಿದ್ದ. ಊಟಕ್ಕೆಂದು ಮೂಗಿಗೆ ತೂರಿಸಿದ್ದ ಪೈಪನ್ನು ಕಿತ್ತು ಒಗೆಯುತ್ತಿದ್ದ. ಡಾಕ್ಟರ ಬಳಿ ಕೈ ಸನ್ನೆಯಲ್ಲೇ 'ಇವರು ನನಗೆ ಮೂರು ದಿನದಿಂದ ಊಟ ಕೊಟ್ಟಿಲ್ಲ' ಎಂದು ನರ್ಸುಗಳ ಮೇಲೆ ಕಂಪ್ಲೇಂಟ್ ಹೇಳುತ್ತಿದ್ದ. ರೈಲ್ಸ್ ಟ್ಯೂಬಿನಿಂದ ನೇರವಾಗಿ ಹೊಟ್ಟೆಗೆ ಹೋಗಿ ಬೀಳುತ್ತಿದ್ದ ಆಹಾರ ಅವನ ಗಮನಕ್ಕೆ ಬರುತ್ತಿರಲಿಲ್ಲ. ಎರೆಡು ವಾರ ಕಳೆದ ಮೇಲಂತೂ ಎಡಗೈಯಿಂದ ಮಂಚದ ಕಂಬಿಗಳನ್ನು ಹಿಡಿದು ಏಳಲು ಪ್ರಯತ್ನಿಸತೊಡಗಿದ. ಒಂದು ಬದಿಗೆ ಜಾರುತ್ತಾ ಬಂದು ಮಂಚದ ಅಂಚನ್ನು ತಲುಪಿಬಿಡುತ್ತಿದ್ದ. ಹಗಲಿನ ಹೊತ್ತಿನಲ್ಲಿ ಪಕ್ಕ ಕುಳಿತಿರುತ್ತಿದ್ದ ಅಮ್ಮ ಕೆಲವು ನಿಮಿಷದ ಮಟ್ಟಿಗೆ ಎಲ್ಲಿಗಾದರೂ ಎದ್ದು ಹೋದರೆ ಅವಳ ಮೇಲೆ ಮುನಿಸಿಕೊಳ್ಳುತ್ತಿದ್ದ.

ಅಪ್ಪನ ಈ ಒಂದೊಂದು ಸಣ್ಣ ಕದಲಿಕೆಯೂ ನಮ್ಮ ಪಾಲಿಗೆ ದೊಡ್ಡ ಸಂಭ್ರಮದ ವಿಷಯವಾಗಿತ್ತು. ಹಗಲಿನ ವೇಳೆ ಅಮ್ಮ ಹಾಗೂ ರಾತ್ರೆಯಲ್ಲಿ ನಾನು ಅವನ ಬಳಿಯಿದ್ದು ಕಾಯುತ್ತಿದ್ದೆವು. ಅವನು ಇಂಥಹಾ ಯಾವುದೇ ಕಪಿಚೇಶ್ಟೆ ಮಾಡಿದರೂ ಥಟ್ಟನೆ ಫೋನು ಮಾಡಿ ಒಬ್ಬರಿಗೊಬ್ಬರು ಹೇಳಿಕೊಂಡು ಖುಷಿಪಡುತ್ತಿದ್ದೆವು. ನಾವು ಉಳಿದುಕೊಂಡಿದ್ದ ಅತ್ತೆಯ ಮನೆಯಲ್ಲಿ ಒಂದು ವರ್ಷದ ಮಗುವೊಂದಿತ್ತು. ಮನೆಯವರೆಲ್ಲರೂ ಅದರ ಬಳಿ ಚುಪ್ ಮಾಡು, ತಾರಮ್ಮಯ್ಯ ಮಾಡು, ಡ್ಯಾನ್ಸ್ ಮಾಡು ಎಂದೆಲ್ಲಾ ಸನ್ನೆಗಳನ್ನು ಮಾಡಿಸಿ ಖುಷಿಪಡುತ್ತಿದ್ದರು. ಬದುಕಿನ ಚಿಗುರು ಕಾಲದಲ್ಲಿ ಹೀಗೆ ಸನ್ನೆ, ಭಾವ, ಭಂಗಿಗಳನ್ನು ಮೊದಲ ಬಾರಿಗೆ ಕಲಿಯುತ್ತಿರುವ ಈ ಮಗು; ಅರವತ್ಮೂರು ವರ್ಷಗಳಲ್ಲಿ ಕಲಿತದ್ದನ್ನೆಲ್ಲಾ ಒಂದು ರಾತ್ರೆಯಲ್ಲಿ ಮರೆತು ಈಗ ಅವೆಲ್ಲವನ್ನೂ ಮತ್ತೆ ನೆನಪಿಸಿಕೊಳ್ಳುತ್ತಿರುವ ಅಪ್ಪ.. ಬದುಕಿನ ಎರೆಡು ವಿರುದ್ಧ ತುದಿಗಳಲ್ಲಿರುವ ಈ ಇಬ್ಬರ ನಡುವಿನ ವಿಚಿತ್ರ ಸಾಮ್ಯವನ್ನು ನೋಡುವಾಗ ನನಗೆ ಜೀವನದ ವೈಚಿತ್ರದ ದರ್ಶನವಾದಂತೆನಿಸುತ್ತಿತ್ತು.

ಡಾಕ್ಟರುಗಳ ಪ್ರಕಾರ ಅಪ್ಪನೀಗ ಸಂಪೂರ್ಣ ಗುಣಮುಖನಾಗಿದ್ದ. ಆದರೆ ಅಪ್ಪನ ಬಲಗಾಲು, ಬಲಗೈ, ಮಾತುಗಳಲ್ಲಿ ಹತ್ತು ಪೈಸೆಯಷ್ಟಾದರೂ ಚೇತರಿಕೆಯಾಗಿರಲಿಲ್ಲ. ಆದರೆ ಬರುಬರುತ್ತಾ ನನಗೂ ಅವರ ಮಾತಿನ ಮರ್ಮ ಅರ್ಥವಾಯಿತು. ಚೇತರಿಕೆಯೆಂದರೆ ಎದ್ದು ಓಡಾಡುವುದಲ್ಲ. ಕೈಕಾಲು ಆಡಿಸುವುದೂ ಅಲ್ಲ. ಒಳಗಿನ ಅವಯವಗಳು ಮತ್ತೆ ಘಾಸಿಗೊಳ್ಳದೇ ಇರುವುದು! ಒಳಗಡೆ ರಕ್ತ ಸೋರದೇ ಇರುವುದು. ಇದೇ ಈ ಹೊತ್ತಿನ ಅತಿಮುಖ್ಯ ಚೇತರಿಕೆ! ಅಪ್ಪನ ತಲೆಯೊಳಗಿನ ರಕ್ತಸ್ರಾವವನ್ನು ನಿಲ್ಲಿಸುವಲ್ಲಿಗೆ ಇಂಗ್ಲೀಷ್ ಮೆಡಿಸನ್ ನ ಕಾರ್ಯ ವ್ಯಾಪ್ತಿ ಮುಕ್ತಾಯಗೊಂಡಿತ್ತು.

ವೈದ್ಯ ವಿಜ್ಞಾನ ಎಲ್ಲಿಗೆ ಮುಕ್ತಾಯಗೊಳ್ಳುತ್ತದೋ ಮನುಷ್ಯನ ಅಂತಃಸತ್ವ ಅಲ್ಲಿಂದ ಆರಂಭವಾಗುತ್ತದೆ. ಸಕಾರಾತ್ಮಕ ಯೋಚನೆ, ಮಾಡಬಲ್ಲೆನೆಂಬ ಆತ್ಮ ವಿಶ್ವಾಸ, ಗುಣವಾಗುವೆನೆಂಬ ಛಲ.. ಇವೆಲ್ಲ ಜಗತ್ತಿನ ಯಾವ ಮೆಡಿಕಲ್ ಶಾಪ್ ನಲ್ಲೂ ಸಿಗದ ಶತಪ್ರತಿಶತ ಫಲಿತಾಂಶ ಕೊಡುವ ಔಷಧಗಳು. ಆದರೆ ದುರಾದೃಷ್ಟವಶಾತ್ ಹೆಚ್ಚಿನ ವೈದ್ಯರುಗಳು ಇದನ್ನೆಲ್ಲಾ ಹೇಳುವುದೇ ಇಲ್ಲ. ಅಪ್ಪನಿಗೂ ಹಾಗೇ. ಕಾಲು, ಕೈ, ಮಾತು.‌. ಬಂದರೆ ಬಂತು, ಇಲ್ಲದಿದ್ದರೆ ಇಲ್ಲ ಎಂದು ಹೇಳಿಯೇ ಅವರು ನಮ್ಮೊಳಗಿನ ಆತಂಕವನ್ನು ಜೀವಂತವಾಗಿಟ್ಟಿದ್ದರು. ನೋ ಗ್ಯಾರಂಟಿ, ನೋ ರಿಕವರಿ ಎಂದು ಅಪ್ಪನ ವಯಸ್ಸು ಅರವತ್ಮೂರು ಎಂಬುದು ಗೊತ್ತಾದ ಮರುಕ್ಷಣದಿಂದ ಆರಂಭವಾದ ಅವರ ನೋನೋಗಳ ಸರಣಿ ಆಪರೇಶನ್ ಆದ ವಾರದುದ್ದಕ್ಕೂ ಮುಂದುವರೆದಿತ್ತು.

ಆದರೆ ಅವರಿಗೆಲ್ಲಾ ಅಚ್ಚರಿಯನ್ನುಂಟುಮಾಡಿ ನೋನೋ ಗಳಿಗೊಂದು ಪೂರ್ಣವಿರಾಮವಿಟ್ಟವನು ಸಾಕ್ಷಾತ್ ಅಪ್ಪ!

ಎಡ ತಲೆಯ ಹೆಮರೇಜ್ ಗೊಳಗಾಗಿ ಮಾತು, ಕೈ, ಕಾಲುಗಳ ಸ್ವಾಧೀನ ಕಳೆದುಕೊಂಡ ಇಪ್ಪತ್ತೊಂದು ಗಂಟೆಗಳ ನಂತರ ಆಸ್ಪತ್ರೆಯಂಗಳಕ್ಕೆ ಸರಿದುಬಂದಿದ್ದ ಅಪ್ಪನನ್ನು ನೋಡಿದ ವೈದ್ಯರುಗಳಿಗೆ ಈ ಪರಿಯ ಆಘಾತಕ್ಕೊಳಗಾಗಿರುವ, ಈ ವಯೋಮಾನದ ವ್ಯಕ್ತಿ ಕನಿಷ್ಠ ಮೆಡಿಸಿನ್ ಗಳಿಗೆ ಸ್ಪಂದಿಸುವುದಾದರೂ ಸಾಧ್ಯವೇ ಎಂಬ ಸಂಶಯವಾಗಿತ್ತು. ಸ್ಪಂದಿಸಿದರೂ ಆರು ತಿಂಗಳು, ವರ್ಷದ ತನಕ ಇವರ ಕೈಕಾಲುಗಳ ಚಲನೆ ಮರಳಿ ಬರಲಾರದೆಂದೇ ಅವರು ನಂಬಿದ್ದರು. ಅಷ್ಟಕ್ಕೂ ಅವರ ಸಂಶಯ ಸಕಾರಣದ್ದೇ ಆಗಿತ್ತು. ಹಿಂದಿನ ರಾತ್ರೆ ಹನ್ನೆರಡೂವರೆಯಿಂದ ಹಿಡಿದು ಮರುದಿನ ಬೆಳಗ್ಗೆ ಒಂಭತ್ತರ ತನಕ, ಅಂದರೆ ಮೊವ್ವತ್ಮೂರು ಗಂಟೆಗಳ ಕಾಲ ಅಪ್ಪನ ಮೆದುಳಿನ ಮೇಲೆ ಕುಳಿತಿದ್ದ ಘನೀಭವಿಸಿದ ರಕ್ತ ಅವನ ಎಡ ಮೆದುಳಿನ ಬಹುಪಾಲನ್ನು ಘಾಸಿಗೊಳಿಸಿಬಿಟ್ಟಿತ್ತು. ಕೋಮಾಗೇ ಹೋಗದಿರುವುದೇ ಹೆಚ್ಚು, ಜೀವಂತವಾಗಿರುವುದೇ ದೊಡ್ಡದು ಎಂಬ ಮಟ್ಟಿಗೆ ಘಾಸಿಯಾದ ವ್ಯಕ್ತಿಯೊಬ್ಬ ಆಪರೇಶನ್ ಆದ (ಎರೆಡನೇ ಬಾರಿಗೆ) ಮೂರು ದಿನಕ್ಕೆ ಕಣ್ಬಿಟ್ಟು ಕಾಫಿ ಕೊಡಿ ಎನ್ನುವುದೆಂದರೇನು? ಅರವತ್ತು ದಾಟಿದ ಯಾವ ದೇಹ ತಾನೇ ಅಷ್ಟು ಬೇಗ ಚೇತರಿಸಿಕೊಂಡಾತು? ಹಾಗಂದುಕೊಂಡೇ ಅವರು ನಮಗೆ ನೋನೋ ಎಂದಿದ್ದರು.

ಆದರೆ ಅಪ್ಪ ಚೇತರಿಸಿಕೊಂಡುಬಿಟ್ಟ!

ವಾರ್ಡಿನಲ್ಲಿದ್ದ ನರ್ಸ್, ಕ್ಲೀನರ್ ಗಳಿಂದ ಹಿಡಿದು ಕೊನೆಗೆ ಸಾಕ್ಷಾತ್ ಸರ್ಜನ್ ರೇ ಅಚ್ಚರಿಗೊಂಡು 'ವಿ ಡಿಡ್ ನಾಟ್ ಎಕ್ಸ್ ಪೆಕ್ಟೆಡ್ ದಿಸ್' ಎಂದು ನಮ್ಮೆದುರೇ ಚರ್ಚಿಸುವ ಮಟ್ಟಿಗೆ ಅಪ್ಪ ಚೇತರಿಕೊಂಡು ಬಿಟ್ಟ. ಎರೆಡನೇ ಆಪರೇಶನ್ ಆದ ಒಂದು ವಾರದ ತರುವಾಯ ಕಟ್ಟಕಡೆಯ ಸಿಟಿ ಸ್ಕ್ಯಾನ್ ಮಾಡಿಸಲು ಹೋದಾಗ ಅಲ್ಲಿ ರಿಪೋರ್ಟ್ ನೋಡಲು ಬಂದಿದ್ದ ಡಾ. ಸಾತ್ವಿಕ್ ಅಪ್ಪನನ್ನು ಸುಮ್ಮನೆ ಹೇಗಿದ್ದೀರಿ? ಎಂದು ಕೇಳಿದರು. ಆ ಪ್ರೆಶ್ನೆಗೆ ಚೆನ್ನಾಗಿದ್ದೇನೆ ಎಂದು ತಲೆಯಾಡಿಸಿದ್ದಲ್ಲದೇ ಅಪ್ಪ ಯಾವುದೋ ಹಳೆಯ ಪರಿಚಯವೆಂಬಂತೆ ಎಡಗೈಯನ್ನು ಮೇಲೆತ್ತಿ ನಮಸ್ತೇ ಕೂಡಾ ಹೇಳಿಬಿಟ್ಟ! ನೂರು ಬಲ್ಪುಗಳು ಒಟ್ಟಿಗೇ ಹೊತ್ತಿಕೊಂಡಂತೆ ದೇದೀಪ್ಯವಾದ ನಗೆಯ ತುಂಬಿಕೊಂಡ ಅವರು ನನಗೆ 'ಸ್ಕ್ಯಾನಿಂಗ್ ರಿಪೋರ್ಟ್ ನೋಡೋದೇ ಬೇಡ, ಕರ್ಕೊಂಡು ಹೋಗ್ರೀ ನಿಮ್ಮಪ್ಪನ್ನ. ಹೀ ಈಸ್ ಪರ್ಫೆಕ್ಟ್ ನೌ' ಎಂದುಬಿಟ್ಟರು.

****************

ಮೇ ಇಪ್ಪತ್ತೊಂಭತ್ತರಂದು ಅಪ್ಪನ ಕತ್ತಿನಲ್ಲಿದ್ದ ಉಸಿರಾಟದ ನಳಿಕೆಯನ್ನು ತೆಗೆದು ಗಂಟಲ ತೂತನ್ನು ಮುಚ್ಚಿದ್ದರು. ನಾನು ನಿರೀಕ್ಷಿಸಿದಂತೆ ಅವನಿಗೆ ಮಾತು ಮರಳಲಿಲ್ಲ. ಸಾಲದ್ದಕ್ಕೆ ಇಷ್ಟು ದಿನ ಇಲ್ಲದ್ದು ಮೂಳೆ ತೆಗೆದ ತಲೆಯ ಭಾಗ ಒಳಕ್ಕೆ ನೆಗ್ಗಿಹೋಗಿ ತಲೆ ಚಕ್ಕಾಗಿ ಕಾಣುತೊಡಗಿತು. ಕಳೆದ ಹದಿನೇಳು ದಿನಗಳಲ್ಲಿ ಇದೇ ಮೊದಲ ಬಾರಿಗೆ ಮೂಗಿನಲ್ಲಿ ಉಸಿರಾಡುತ್ತಿದ್ದ ಅಪ್ಪನಿಗೆ ಉಸಿರು ಕಟ್ಟುತ್ತಿತ್ತು. ಅವನು ಕುತ್ತಿಗೆಯ ಬ್ಯಾಂಡೇಜು ಕಿತ್ತುಕೊಳ್ಳದಂತೆ, ನೆಗ್ಗಿದ ತಲೆಯ ಭಾಗವನ್ನು ತಟ್ಟಿಕೊಳ್ಳದಂತೆ ಕಾಯುತ್ತಾ ನಾನು ಮಂಚದ ಪಕ್ಕದಲ್ಲಿ ಕುಳಿತಿದ್ದೆ.

ಅದು ಡಿಶ್ಚಾರ್ಜಾಗುವ ಹಿಂದಿನ ದಿನದ ರಾತ್ರಿ.

ಸಮಯ ನೋಡಿಕೊಂಡೆ. ಸರಿಯಾಗಿ ನಡುರಾತ್ರೆಯ ಹನ್ನೆರೆಡೂ ಮೊವ್ವತ್ತು.

ಇಪ್ಪತ್ತು ದಿನಗಳ ಹಿಂದೆ ನಮ್ಮ ಪುಟ್ಟ ಗೂಡಿನ ಶಾಂತಿಗೆ ಸಿಡಿಲು ಬಡಿದ ಸಮಯ..

ಇಪ್ಪತ್ತೇ ಇಪ್ಪತ್ತು ದಿನಗಳ ಹಿಂದೆ ಇದ್ದ ಚಂದದ ಬದುಕು. ಅದು ನಿಜಕ್ಕೂ ಬದುಕೇನಾ ಅಥವಾ ಅರ್ಧ ಕಂಡು ಎದ್ದ ಕನಸಾ?

ಆ ಕಾಳ ರಾತ್ರೆಗೆ ಮುನ್ನ 'ಅಲರ್ಜಿಗೆ ಎಣ್ಣೆ ಹಚ್ಚಿಕೋ' ಎಂದು ಕಾಳಜಿ ತೋರಿ ಮಲಗಿದ್ದ ಅಪ್ಪನ ಚಿತ್ರ ಕಣ್ಮುಂದೆ ಸುಳಿಯಿತು.

ನಾನು ನೋಡಿದ ಆರೋಗ್ಯವಂತ ಅಪ್ಪನ ಕಟ್ಟ ಕಡೆಯ ಚಿತ್ರವದು.

ಈಗಿಲ್ಲಿ, ನನ್ನ ಕಣ್ಮುಂದೆ ಮಲಗಿರುವ ಅಪ್ಪನೇ ಬೇರೆ.

ತಡೆತಡೆದು ಬರುತ್ತಿರುವ ಉಸಿರು, ಒಳಸೇರಿಕೊಂಡ ಗಲ್ಲ, ಬಾರದ ಮಾತು, ಒಂದೇ ಸಲಕ್ಕೆ ಹತ್ತು ವರ್ಷ ಮುಂದಕ್ಕೆ ಹೋದಂತೆ ಕಾಣುತ್ತಿರುವ ದೇಹ, ಕಾಂತಿ ಹೀನ ಕಣ್ಣು..

ಅಪ್ಪ ಹಾಸಿಗೆಯ ಮೇಲೆ ಮಿಸುಕಾಡುತ್ತಿದ್ದ. ತನ್ನಷ್ಟಕ್ಕೆ ತಾನೇ ಏನೇನೋ ಸನ್ನೆ ಮಾಡುತ್ತಾ ತನ್ನೊಳಗೇ ತಾನು ಸಂಭಾಶಿಸಿಕೊಳ್ಳುತ್ತಿದ್ದ. ಏಳಲು ನೋಡುತ್ತಿದ್ದ. ಯಾರಿಗೋ ಕೈ ತೋರಿಸುತ್ತಿದ್ದ. ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ.

ಅವನಿನ್ನು ಹೀಗೇ.. ತನ್ನ ಜಗದೊಳಗೇ ಉಳಿದು ಬಿಡುತ್ತಾನೆ. ನಮ್ಮ ಪ್ರಪಂಚಕ್ಕೆ ಬರುವುದೇ ಇಲ್ಲ. ನಮ್ಮೊಂದಿಗೆ ಕುಳಿತು ರಾಜಕುಮಾರನ ಹಳೆಯ ಸಿನೆಮಾ ನೋಡುವುದಿಲ್ಲ. ಮೊಬೈಲ್ ತಂದು ಆ ಹಾಡು ಹಾಕು, ಈ ಹಾಡು ಹಾಕು ಎನ್ನುವುದಿಲ್ಲ. ನನಗೆ ಜ್ವರ ಬಂದಾಗ ಹಣೆ ಸವರುವುದಿಲ್ಲ. ನಾನು ಬೆಂಗಳೂರಿಗೆ ಹೊರಟಾಗ ನನ್ನ ಚೀಲ ಹಿಡಿದು ಮುಂದೆ ನಡೆಯುವುದಿಲ್ಲ. ಮತ್ತೆ ಯಾವಾಗ ಬರ್ತಿ? ಎಂದು ಕೇಳುವುದಿಲ್ಲ. ಅಲ್ಲಿಂದ ನಾನು ಅಮ್ಮನಿಗೆ ಫೋನು ಮಾಡಿ ಮಾತನಾಡುವಾಗ ನಂಗೆ ಕೊಡು ಎಂದು ಮೊಬೈಲು ಇಸಿದುಕೊಳ್ಳುವುದಿಲ್ಲ.

ಆ ಹಳೆಯ ಅಪ್ಪನಿನ್ನು ಮತ್ತೆ ಸಿಗಲಾರ.

ಆ ಕ್ಷಣಕ್ಕೇ ನನಗದು ಅರ್ಥವಾಗಿಹೋಯಿತು. ವಿಧಿ ಅವನಿಗೆ ರಿಪೇರಿಯಾಗದಷ್ಟು ಘಾಸಿ ಮಾಡಿಬಿಟ್ಟಿದೆ.

ನಿದಿರೆಯ ಭಾರಕ್ಕೆ ಚಲನೆ ಕೊಂಚ ಮಂದಗೊಂಡ ಅಪ್ಪನ ಕೈಯನ್ನು ಮಂಚಕ್ಕೆ ಬಂಧಿಸಿ ಮೆಲ್ಲನಿಳಿದು ಬೇಸ್ಮೆಂಟಿನತ್ತ ನಡೆದೆ. ಇಪ್ಪತ್ತು ದಿನಗಳ ಹಿಂದೆ ಅಪ್ಪ ಅಡ್ಮೀಟಾದ ದಿನ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಆಸ್ಪತ್ರೆಯ ನಿರ್ಜನ ಕಾರಿಡಾರಿನಲ್ಲಿ ನಡೆಯತೊಡಗಿದೆ.

ಅಗೋ ಅಲ್ಲಿ ಬರುತ್ತಿದೆ.. ಅಪ್ಪನನ್ನು ಹೊತ್ತ ಆ್ಯಂಬುಲೆನ್ಸ್. ಅದೋ ಬಂತು. ನಾನು ಇಳಿದೆ. ಅಮ್ಮ ಇಳಿದಳು. ಅಪ್ಪನನ್ನೂ ಇಳಿಸಿದರು. ಅದೋ ಅಲ್ಲಿ ಬರುತ್ತಿದ್ದಾರೆ ಡಾಕ್ಟರು. ಅಪ್ಪನನ್ನು ಪರೀಕ್ಷಿಸುತ್ತಿದ್ದಾರೆ. ಸ್ಕ್ಯಾನಿಂಗ್ ರಿಪೋರ್ಟನ್ನೂ ನೋಡುತ್ತಿದ್ದಾರೆ.

ಯಾಕಿಷ್ಟು ತಡ ಮಾಡಿದಿರಿ? ಬ್ರೈನ್ ತುಂಬಾ ಡ್ಯಾಮೇಜಾಗಿದೆ..

ಇಲ್ಲ.. ಇಲ್ಲ.. ಈ ಬಾರಿ ಅವರು ಹಾಗೆ ಹೇಳುತ್ತಿಲ್ಲ. ಅವರ ಮುಖದಲ್ಲೀಗ ಆ ಗಂಭೀರತೆಯಿಲ್ಲ. ಬದಲಿಗೆ ಸಮಾಧಾನದ ಮುಗುಳ್ನಗುವಿದೆ.

"ನಥಿಂಗ್ ಟು ವರಿ. ಸಣ್ಣ ಮಟ್ಟದ ಸ್ಟ್ರೋಕ್ ಆಗಿದೆ. ಎರೆಡೇ ದಿನ. ಎಲ್ಲವೂ ಸರಿಹೋಗುತ್ತದೆ.."

ಡಾಕ್ಟರು ಅಭಯ ನೀಡುತ್ತಿದ್ದಾರೆ. ನಾನು ನಗುತ್ತಿದ್ದೇನೆ. ಅಮ್ಮ ನಗುತ್ತಿದ್ದಾಳೆ. ಅಪ್ಪನೂ ನಗುತ್ತಿದ್ದಾನೆ. ಎಲ್ಲವೂ ಸರಿಯಾಗಿದೆ. ಅಪ್ಪನೀಗ ಅವನ ಕಾಲ ಮೇಲೇ ನಡೆಯುತ್ತಾ ಓಮಿನಿಯತ್ತ ಸಾಗುತ್ತಿದ್ದಾನೆ..

ಈ ಕಥೆಯ ಅಂತ್ಯ ಹೀಗಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅಲ್ವಾ?

ಮೇಲಿನ ಮಹಡಿಯಿಂದ ಇಳಿದು ಬಂದಷ್ಟೇ ಸುಲಭದಲ್ಲಿ ಹತ್ತೊಂಭತ್ತು ದಿನ ಹಿಂದಕ್ಕೆ ಹೋಗಲು ಸಾಧ್ಯವಾಗಿದ್ದರೆ.. ಹಳೆಯ ತಪ್ಪುಗಳನ್ನೆಲ್ಲಾ ಸರಿಪಡಿಸಿಕೊಳ್ಳಲು ಆಗಿದ್ದರೆ.‌. ಅಪ್ಪನ ಮಾತು, ಕೈ, ಕಾಲುಗಳನ್ನು ಉಳಿಸಿಕೊಳ್ಳುವಂತಿದ್ದರೆ..

ಒಂದು ಬಾರಿ ಹಿಂದೆ ಹೋಗಿ
ಅಳಿಸಬೇಕು ಎಲ್ಲಾ
ಯಾಕೆ ಅಂಥ ಹಾದಿಯೊಂದು
ಬಾಳಿನಲ್ಲಿ ಇಲ್ಲ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...