ಸೋಮವಾರ, ಮಾರ್ಚ್ 27, 2017

ಕೆಲಸ ಮಾಡಿಸುವುದಕ್ಕೆ ಉರಿಗೋಪವೇ ಆಗಬೇಕೇ?

"ಒಂದೊಳ್ಳೆ ಕೆಲಸ ಸಿಗಬೇಕಂದ್ರೆ ಪುಣ್ಯ ಮಾಡಿರಬೇಕು; ಅದೇ ಒಳ್ಳೇ ಬಾಸ್ ಸಿಗಬೇಕಂದ್ರೆ ಹಿಂದಿನ ಜನ್ಮದ ಪುಣ್ಯ ಬೇಕು!"

ಈ ಮಾತು ಕೇಳಿ ಸಾಮಾನ್ಯರು ನಗಬಹುದು. ಆದರೆ ಇಂದಿನ ಐಟಿ ಹಾಗೂಕಾರ್ಪೋರೇಟ್ ಪ್ರಪಂಚದಲ್ಲಿ ದುಡಿಯುತ್ತಿರುವ ಒಬ್ಬನೇ ಒಬ್ಬನೂ ಈ ವಾಕ್ಯ ಸುಳ್ಳೆಂದು ಅಲ್ಲಗಳೆಯಲು ಸಾಧ್ಯವೇ ಇಲ್ಲ! ಹಾಗಿದೆ ಔದ್ಯೋಗಿಕ ಬದುಕಿನಲ್ಲಿ ಬಾಸ್ ಗಳ ಪಾತ್ರ.

ಮೊದಲು ಮ್ಯಾನೇಜರ್/ಬಾಸ್ ಬಗ್ಗೆ ತಿಳಿದುಕೊಳ್ಳೋಣ. ಆಧುನಿಕ ಜಗತ್ತಿನ, ಪೈಪೋಟಿಯನ್ನೇ ಉಸಿರಾಗಿಸಿಕೊಂಡು ಚಲಿಸುತ್ತಿರುವ ಖಾಸಗೀ ವಲಯದಲ್ಲಿ ಯಾವುದೇ ವಿಭಾಗದಲ್ಲಿ 'ಬಾಸ್' ಆಗುವುದೆಂದರೆ ತಮಾಷೆಯ ಮಾತಲ್ಲ. ಇಲ್ಲಿ ಯಾರದೋ ಕೈ 'ಬೆಚ್ಚಗೆ' ಮಾಡುವುದರಿಂದ ಅಥವಾ ಯಾವುದೋ ಒಂದು ಜಾತಿಯಲ್ಲಿ ಜನಿಸುವುದರಿಂದ ಮ್ಯಾನೇಜರ್ ಗಳಾಗುವದಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ವರ್ಷಗಳ ಅನುಭವ ಬೇಕು. ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ ಚುರುಕುತನ ಬೇಕು. ಕೊರಡನ್ನು ತೇಯ್ದು ಗಂಧವನ್ನು ತೆಗೆಯುವ ಉಪಾಯ ಗೊತ್ತಿರಬೇಕು. ನುಗ್ಗಿ ಬರುವ ಅಲೆಯಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲ, ಅದರಲ್ಲೇ ಕೊಳೆ ತೊಳೆದುಕೊಳ್ಳುವ ಜಾಣತನವೂ ಇರಬೇಕು! ಆಗಲೇ ಒಬ್ಬ ಸಾಮಾನ್ಯ ಕೆಲಸಗಾರನೊಬ್ಬ  'ಬಾಸ್' ಆಗಲು ಸಾಧ್ಯ. ಆದರೆ ಇಷ್ಟಲ್ಲಾ ದೊಡ್ಡ ಗುಣಗಳನ್ನು ಮೈಗೂಡಿಸಿಕೊಳ್ಳುವ ಭರದಲ್ಲಿ ತನ್ನ ಕೈಕೆಳಗಿನವರನ್ನು ಹೇಗೆ ನಡೆಸಿಕೊಳ್ಳಬೇಕು, ಅವರ ಜೊತೆ ಹೇಗೆ ನಡೆದುಕೊಳ್ಳಬೇಕೆಂಬ 'ಸಣ್ಣ' ವಿಷಯವನ್ನವರು ಮರೆಯುತ್ತಿದ್ದಾರಾ?

ಬಹುಷಃ ಹೆಚ್ಚಿನ ಉತ್ತರಗಳು 'ಹೌದು' ಎಂದೇ ಬರುತ್ತವೆ. ಒಂದು ತಂಡವನ್ನಾಗಲೀ, ವ್ವವಸ್ಥೆಯನ್ನಾಗಲೀ ಮುನ್ನಡಿಸಬೇಕೆಂದರೆ ಅಲ್ಲಿ ಒತ್ತಡ ಹಾಕಬೇಕು, ಅಧಿಕಾರಯುತವಾದ ಅಪ್ಪಣೆಯಿರಬೇಕು, ತಪ್ಪುಗಳನ್ನು ತಡೆಯುವ ಗದರಿಕೆಯಿರಬೇಕು.... ಇದೆಲ್ಲಾ ನಿಜವೇ. ಆದರೆ ಎಷ್ಟರಮಟ್ಟಿಗೆ? ಒತ್ತಡವೇ ವಾತಾವರಣವಾಗಿಬಿಟ್ಟರೆ? ಪ್ರತೀ ಮಾತೂ ಗದರಿಕೆಯೇ ಆಗಿಹೋದರೆ? ಪ್ರತಿಯೊಂದು ಕೆಲಸವನ್ನೂ ನಡುಗುವ ಕೈಯ್ಯಲ್ಲೇ ಮಾಡುವಂತಾದರೆ? ಆಗ ಉದ್ಯೋಗವೆನ್ನುವುದು ಕೇವಲ ಯಂತ್ರಗಳೊಂದಿಗೆ ಒಡನಾಡುವ 'ಕರ್ಮ'ವಾಗುತ್ತದೇ ಹೊರತು ಮನಸ್ಸಿಗೆ ನೆಮ್ಮದಿಕೊಡುವ 'ಕಾಯಕ'ವಾಗುವುದೇ ಇಲ್ಲ!

ಐಟಿ,ಕಾರ್ಪೋರೇಟ್ ಉದ್ಯೋಗಿಗಳ ಬದುಕೆನ್ನುವ ದೂರದ ಬೆಟ್ಟದಲ್ಲಿ ಅದೆಷ್ಟೋ ಕಲ್ಲುಮುಳ್ಳುಗಳು. ಬೆಳಗ್ಗೆ ಎದ್ದೊಡನೆಯೇ ತಯಾರಾಗಿ ಓಡಬೇಕು. ರುಚಿಯಿರಲೇಬೇಕು ಎಂದೇನೂ ಇಲ್ಲದ ಬೆಳಗಿನ ಉಪಹಾರ; ತಡವಾದರೆ ಅದೂ ಇಲ್ಲ. ಚಲಿಸುವುದಕ್ಕಿಂತ ನಿಲ್ಲುವುದೇ ಜಾಸ್ತಿಯಿರುವ ಟ್ರಾಫಿಕ್ನಲ್ಲಿ, ಸಂದಣಿಭರಿತ ಬಸ್ನಲ್ಲಿ ಒಂಟಿ ಕಾಲಲ್ಲಿ ಎಲ್ಲೋ ಹುಟ್ಟಿ ಎಲ್ಲೋ ಚಾಚಿಕೊಂಡ ತೆಂಗಿನಮರಗಳಂತೆ ನಿಂತು ತಮ್ಮ ಪರ್ಸ್, ಮೊಬೈಲ್ ಗಳನ್ನು ಕಳ್ಳರಿಂದ ಕಾಪಾಡಿಕೊಳ್ಳುತ್ತಾ ಆಫೀಸು ತಲುಪಬೇಕು. (ದಿನದ ಮೂರ್ನಾಲ್ಕು ಗಂಟೆಗಳನ್ನು ಅತ್ತ ಆಫೀಸಿನಲ್ಲೂ ಅಲ್ಲದೇ, ಇತ್ತ ಮನೆಯಲ್ಲೂ ಅಲ್ಲದೇ ನಡುದಾರಿಯ ಟ್ರಾಫಿಕ್ನಲ್ಲಿ ತೂಕಡಿಸುತ್ತ ವ್ಯಯಿಸಬೇಕಾದ ಕರ್ಮ ಎಷ್ಟೋ ಜನರಿಗಿದೆ) ದಿನವಿಡೀ ಕಂಪ್ಯೂಟರ್ ಒಳಗಿನ ಲೆಕ್ಕಾಚಾರದ ಆಳದಲ್ಲಿ ಕೈಕಾಲು ಬಡಿಯಬೇಕು. ಮಧ್ಯದಲ್ಲಿ ಮತ್ತದೇ ರುಚಿ-ಶುಚಿಗಳರಿಯದ ಹೊರಗಿನೂಟ. ಸಂಜೆ ಮತ್ತೆ ಟ್ರಾಫಿಕ್ ಎನ್ನುವ ಸಮುದ್ರವನ್ನು ದಾಟಿ ಮನೆ/ರೂಮು ತಲುಪುವಷ್ಟರಲ್ಲಿ ಜೀವ 'ಹಾಸಿಗೆ ಮೇಲೆ ಬಿದ್ದರೆ ಸಾಕು' ಎನ್ನುವಷ್ಟು ದಣಿದುಹೋಗಿರಿತ್ತದೆ. ಆರು ದಿನಗಳು ಕಾದಮೇಲೆ ಸಿಕ್ಕ ವೀಕೆಂಡ್ ಕೇವಲ ಬಟ್ಟೆ ತೊಳೆದು,  ಕಸ-ಜಿರಲೆಗಳನ್ನು ಹೊಡೆದಟ್ಟಿ, ಊಟ ತಿಂಡಿ ಮುಗಿಸುವಷ್ಟರಲ್ಲೇ ಮುಗಿದು ಹೋಗುತ್ತದೆ. ಇನ್ನು ನೈಟ್ ಡ್ಯೂಟಿ ಮಾಡುವವರಂತೂ ಈ ಲೋಕದವರಾಗಿಯೇ ಉಳಿದಿರುವುದಿಲ್ಲ. ನಿದ್ರೆಯ ಸಮಯದಲ್ಲಿ ಕೆಲಸ, ಕೆಲಸದ ಸಮಯದಲ್ಲಿ ನಿದ್ರೆ. ಯಾವುದಕ್ಕೂ ನಿಗದಿತ ಸಮಯವಿಲ್ಲದೇ ಯಾವುದು ತಿಂಡಿಯೋ, ಯಾವುದು ಊಟವೋ,  ಯಾವುದು ನಿನ್ನೆಯೋ, ಯಾವುದು ನಾಳೆಯೋ...ಎಲ್ಲಾ ಅಯೋಮಯವಾಗಿಹೋಗಿರುತ್ತದೆ! 

ಹೀಗೆ ಜೀವನ ನಡೆಸುತ್ತಿರುವ ಲಕ್ಷಾಂತರ ಜನರು ತಮ್ಮೀ ಯಾಂತ್ರಿಕತೆಯ ಬಗ್ಗೆ ಸಣ್ಣದಾಗಿ ದೂರುತ್ತಾರಾದರೂ ತಮ್ಮ ಪಾಲಿನ ಜವಾಬ್ದಾರಿಗಳನ್ನು ಪ್ರೀತಿಯಿಂದಲೇ ನಿರ್ವಹಿಸಿಕೊಂಡು ಹೋಗುತ್ತಾರೆ. ಅರ್ಧರಾತ್ರಿಯ ತನಕ ಗೇಯ್ದರೂ ಸರಿಯೇ, ಮಾಡಬೇಕಾದುದನ್ನು ಮಾಡಿಯೇ ತೀರುತ್ತಾರೆ. ವಿಶ್ರಾಂತಿಗೆಂದು ಇರುವ ಒಂದೇ ಒಂದು ಭಾನುವಾರವನ್ನೂ ಕೆಲವೊಮ್ಮೆ ಉದಾರವಾಗಿ ಬಿಟ್ಟುಕೊಡುತ್ತಾರೆ. ಮುಖದಲ್ಲಿ ಕಾಣುವ ಬೇಸರ ಮಾಡುವ ಕೆಲಸದಲ್ಲೂ ಪ್ರತಿಫಲಿಸಲು ಬಿಡುವುದಿಲ್ಲ. ಆದರೆ ಔದ್ಯೋಗಿಕ ಜೀವನವೊಂದು ಯಾವಾಗ ನರಕವೆನಿಸತೊಡಗುತ್ತದೆ ಗೊತ್ತಾ? ಯಾವಾಗ ಕೆಲಸ ಮಾಡುವ ಜಾಗದಲ್ಲಿ ನೆಮ್ಮದಿಯಿರುವುದಲ್ಲವೋ, ಗೌರವವಿರುವುದುಲ್ಲವೋ, ಮಾಡಿದ ಕೆಲಸಕ್ಕೊಂದು ಬೆಲೆ ಅನ್ನುವುದು ದೊರೆಯುವುದಿಲ್ಲವೋ ಆಗ.

ಎಷ್ಟೋ ಬಾರಿ ದಿನವಿಡೀ ಕುಳಿತು ಶ್ರಧ್ದೆಯಿಂದ ಮಾಡಿ ಮುಗಿಸಿದ ಹತ್ತಾರು 'ಎಫರ್ಟ್'ಗಳು ಚಿಕ್ಕದೊಂದು 'ಗುಡ್' ಎಂಬ ಮೆಚ್ಚುಗೆಯನ್ನೂ ಪಡೆಯುವುದಿಲ್ಲ. ಆದರೆ ದಿನದ ಕೊನೆಯಲ್ಲಿ ಮಾಡಿದ ಸಣ್ಣದೊಂದು ತಪ್ಪು ಮೇಲಾಧಿಕಾರಿಯ ಕ್ಯಾಬಿನ್ ತನಕ ಎಳೆದುಬಿಡುತ್ತದೆ. ಚಿಕ್ಕ ಗೌರವವೂಬಿಲ್ಲದೇ ತಾರಾಮಾರೀ ಬೈಗುಳಗಳಿಗೊಳಗಾಗುತ್ತದೆ. ಇಲ್ಲಿ ತನ್ನ 'ಸರಿ' ಗಳಿಗಿಂತ 'ತಪ್ಪು'ಗಳೇ ಹೆಚ್ಚು ಗುರುತಿಸಲ್ಪಡುತ್ತವೆ ಎಂಬ ಭಾವನೆ ಒಮ್ಮೆ ಬಂದುಬಿಟ್ಟರೆ ಮುಗಿದೇ ಹೋಯಿತು, ಆ ವಾತಾವರಣದ ಮೇಲೆ 'ನನ್ನದು' ಎನ್ನುವ ಪ್ರೀತಿ ಹುಟ್ಟುವುದಾದೇ ಇಲ್ಲ. ವರ್ಷವಿಡೀ ಗೇಯ್ದು, ತಮ್ಮ ಜೀವನದ ಅಮೂಲ್ಯ ಸಮಯ, ಬುದ್ಧಿ, ಶ್ರಮಗಳನ್ನೆಲ್ಲಾ ಕಂಪನಿಗಾಗಿ ವ್ಯಯಿಸಿ, ವರುಷದುದ್ದಕ್ಕೂ ಕಾದ 'ಸಂಬಳ ಏರಿಕೆ'ಯ ದಿನ ಆಸೆಯಿಂದ ಮೇಲಾಧಿಕಾರಿಯ ಕ್ಯಾಬಿನ್ ಹೊಕ್ಕಾಗ ಅವರು ನೀವು ವರುಷವಿಡೀ ಮಾಡಿದ ತಪ್ಪುಗಳನ್ನಷ್ಟೇ ಪಟ್ಟಿ ಮಾಡಿಕೊಂಡು ಕೂತಿದ್ದರೆ ಹೇಗಾಗಬೇಡ!?

ಕೆಲವು ಬಾಸ್ ಗಳೇಕೆ ಹಾಗಿರುತ್ತಾರೆ? ಎಲ್ಲರೂ ಎಲ್ಲರೂ ನೂರಕ್ಕೆ ನೂರು ಪರ್ಫೆಕ್ಟ್ ಆಗಿರಬೇಕೆಂಬ ಹಠಕ್ಕೋ? 'ಕ್ರೋಧಂ ಸರ್ವರ್ಥ ಸಾಧನಂ' ಎಂಬ ತಪ್ಪು ತಿಳುವಳಿಕೆಗೋ? ಬಹುಷಃ ಕಾರಣ ಅವರಿಗೂ ಗೊತ್ತಿರಲಿಕ್ಕಿಲ್ಲ. ಹೆಚ್ಚಿನಸಲ ಒಬ್ಬ ಉರಿಗೋಪದ ಬಾಸ್ ಕೈಕೆಳಗೆ ಪಳಗಿದ ಶಿಷ್ಯನೇ ಮುಂದೆ ಮತ್ತೊಬ್ಬ ಉರಿಗೋಪದ ಬಾಸ್ ಆಗಿ ರೂಪುಗೊಳ್ಳುತ್ತಾನೆ. 'ಅಂದು ನಾನು ಅನುಭವಿಸದ್ದರೆದುರು ಇದೇನೂ ಅಲ್ಲ' ಎನ್ನುವ ಭಾವನೆ ಬೇರೂರಿರುತ್ತದೋ ಅಥವಾ 'ಹೀಗೆ ನಡೆದುಕೊಳ್ಳುವುದೇ ಸರಿಯಾದ ರೀತಿ' ಎಂದುಕೊಂಡಿರುತ್ತಾರೋ ಗೊತ್ತಿಲ್ಲ. ಎಂದೋ ಯಾರೋ ಕಟ್ಟಿಸಿಕೊಂಡ ದಂಡ ಇಂದು ವಸೂಲಾಗುತ್ತಿರುತ್ತದೆ. ದುರಂತವೆಂದರೆ ಇಂದು ತನ್ನ ಕೈಕೆಳಗಿನವರ ಮೇಲೆ ಎಗರಾಡುವಾಗ ಅಂದು ತನ್ನ ಮೇಲಾಧಿಕಾರಿಯ ಕಡುಗೋಪದಿಂದ ತನಗೆಷ್ಟು ನೋವಾಗುತ್ತಿತ್ತೆಂಬುದು ಅವರಿಗೆ ನೆನಪಾಗುವುದೇ ಇಲ್ಲ! ಅಲ್ಲದೇ ಕೆಲವೊಮ್ಮೆ ಅನುಭವದ 'ಆಳ'ಕ್ಕಿಂತ ಹಿರಿತನದ 'ಎತ್ತರ'ವೇ ಹೆಚ್ಚಾಗಿ ಕೆಲಸಮಾಡತೊಡಗುತ್ತದೆ. ತನ್ನ ಮನದೊಳಗೇ ಹಾಕಿಕೊಂಡಿರುವ ಅಥವಾ ಹತ್ತಾರು ವರ್ಷಗಳಿಂದ ಆಚರಿಸುತ್ತಾ, ಆಚರಿಸುತ್ತಾ ಡಿಫಾಲ್ಟ್ ಆಗಿಹೋಗಿರುವ ಸಿದ್ಧಸೂತ್ರದಂತೇ ತನ್ನ ಕೈಕೆಳಗಿನವರೂ ನಡೆಯಬೇಕೆಂದು ಅದು ಬಯಸುತ್ತದೆ. 

ಹಾಗಂತ ಎಲ್ಲಾ ಮೇಲ್ವಿಚಾರಕರೂ ಹೀಗೇ ಅನ್ನಲಿಕ್ಕಾಗುವುದಿಲ್ಲ.  ಸಂಬಳ, ಪದವಿಗಳ ಬೇಧವಿಲ್ಲದೆ ಗೆಳೆಯನಂತೆ ನಡೆದುಕೊಳ್ಳುವವರಿದ್ದಾರೆ. 'ಏನ್ರೀ,  ಹೇಗಿದಾಳ್ರೀ ನಿಮ್ಮ ಗರ್ಲ್ ಫ್ರೆಂಡ್?" ಎಂದು ತಮಾಷೆಮಾಡುವ ಹಗುರ ಮನಸ್ಸಿನವರಿದ್ದಾರೆ. "ಇದೊಂದು ಶನಿವಾರ ವರ್ಕ್ ಮಾಡಿ ಆಯ್ತಾ?" ಎಂದು ಗೌರವಯುತವಾಗಿ ದುಡಿಸಿಕೊಳ್ಳುವ ಜಾಣರಿದ್ದಾರೆ. ಕೆಲಸದಾಚೆಗಿನ ವಿಚಾರಗಳನ್ನೂ ಚರ್ಚಿಸುತ್ತಾ ಮನಸ್ಸಿಗೆ ಹತ್ತಿರವಾಗುವವರಿದ್ದಾರೆ. ಇಂಥವರ ಮಾತನ್ನ ತೆಗೆದು ಹಾಕುವುದು ಎಂತಹವರಿಗೂ ಕಷ್ಟವೇ. ನನ್ನ ಪ್ರಯತ್ನಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ವ್ಯಕ್ತಿಯೊಬ್ಬ ನನ್ನ ತಪ್ಪುಗಳನ್ನೂ ಗುರುತಿಸಿದಾಗ ನಾನದನ್ನು ಸ್ವೀಕರಿಸುವ ರೀತಿಯೇ ಬೇರೆಯಾಗಿರುತ್ತದೆ. ಅವರು ತನ್ನ ಮೇಲೆ ಭರವಸೆಯಿಟ್ಟಿದ್ದಾರೆನ್ನುವುದನ್ನು ಅರಿತುಕೊಂಡ ಪ್ರತಿಯೊಬ್ಬನೂ ಹೆಚ್ಚೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾನೆ. ಆ ಭರವಸೆಯನ್ನು ಉಳಿಸಿಕೊಳ್ಳುವ ಹಾದಿಯಲ್ಲೇ ಯೋಚಿಸುತ್ತಾನೆ. 

ಕೆಲಸ ಮಾಡಿಸುವುದೇ ಒಬ್ಬರ ಕರ್ತವ್ಯವಾಗಿರುವಾಗ ಅದನ್ನು ಗೌರವಯುತವಾಗಿಯೇ ಮಾಡಿಸಬಹುದಲ್ಲ? ತಪ್ಪನ್ನು ತಿದ್ದುವ ರೀತಿ ಶಿಲ್ಪಿ ಉಳಿಯಿಂದ ಕೊಟ್ಟ ಏಟಿನಂತಿರಬೇಕಲ್ಲದೇ, ಚಾಲಕ ಚಾವಟಿಯಿಂದ ಕೊಟ್ಟ ಒದೆಯಂತಲ್ಲ ಅಲ್ವಾ? ತಿದ್ದಬೇಕು, ಬೆಳೆಯಲು ಬಿಡಬೇಕು. ಆ ಮೂಲಕ ನಾವು ಬೆಳೆಯಬೇಕು' ಎನ್ನುವ ಉದಾರಗುಣ ಹೊಂದಿರುವ ಬಾಸ್ ಸಿಕ್ಕಿದರೆಂದರೆ ಉದ್ಯೋಗ ಜೀವನದ ಅರ್ಧ ಕಷ್ಟಗಳು ಮುಗಿದಂತೆಯೇ.

(ಮಾರ್ಚ್ 2017ರ 'ನಿಮ್ಮೆಲ್ಲರ ಮಾನಸ'ದಲ್ಲಿ ಪ್ರಕಟವಾದ ಲೇಖನ)

ಶನಿವಾರ, ಜನವರಿ 28, 2017

ಗೋಪಿಯ ಅಜ್ಜಿ..

ಅಜ್ಜಿ ಮನೆಗೆ ವಾಪಾಸ್ ಬರ್ತಿದಾಳಂತೆ!
ಈ ಸುದ್ದಿ ಕೇಳಿ ಖುಷಿಪಟ್ಟವನು ಹನ್ನೆರೆಡು ವರ್ಷದ ಗೋಪಿಯೊಬ್ಬನೇ. ಅಪ್ಪ ತಟಸ್ಥನಾಗಿದ್ದ. ಅಮ್ಮ ಬೆಳಗಿನಿಂದಲೂ ಭುಸುಗುಟ್ಟುತ್ತಾ ಓಡಾಡಿಕೊಂಡಿದ್ದಳು. "ಅವತ್ತು ದೊಡ್ಡದಾಗಿ ನಾವು ಸಾಕ್ತೀವಿ ಅಂತ ಅಷ್ಟೆಲ್ಲಾ ರಾದ್ದಾಂತ ಮಾಡಿ ಕರ್ಕೊಂಡ್ ಹೋದ್ರಲ್ಲಾ ನಿಮ್ಮ ಅಣ್ಣ-ಅತ್ತಿಗೆ, ಇಷ್ಟು ಬೇಗ ಸಾಕಾಗಿ ಹೋಯ್ತಂತಾ? ಅವರ ಕಾಯಿಲೇನ ಇನ್ನಷ್ಟು ಜಾಸ್ತಿ ಮಾಡಿ, ಈಗ ಇಲ್ಲಿ ತಂದ್ ಹಾಕಿದ್ರೆ ನೋಡ್ಕೊಳ್ಳೋರ್ಯಾರು? ನಾನವತ್ತು ಬಾಣಂತಿಯಾಗಿ ಮಲಗಿದ್ದಾಗ ನೋಡೋಕೆ ಬಂದಿದ್ದ ನನ್ನ ಅಪ್ಪ-ಅಮ್ಮನ್ನ ಕಣ್ಣೀರು ಹಾಕಿಸಿ ಕಳ್ಸಿದ್ರಲ್ಲಾ ನಿಮ್ಮಮ್ಮ, ಇವತ್ತು ಅವರು ಮಲಗಿದಾಗ ನೋಡ್ಕೊಳ್ಳೋಕೆ ನಾನೇ ಬೇಕಂತ?" ಎಂದು ಅವಳು ಅಡಿಗೆಮನೆಯಲ್ಲಿ ಕೂಗಾಡುತ್ತಿದ್ದದ್ದು ಕೇಳಿ ಚೂಯಿಂಗ್ ಗಮ್ ತಗೊಳ್ಳೋಕೆ ಒಂದು ರೂಪಾಯಿ ಕೇಳಲೆಂದು ಬಂದಿದ್ದ ಗೋಪಿ ಬಾಗಿಲಲ್ಲೇ ನಿಂತುಬಿಟ್ಟ. ಜೇಬಲ್ಲಿ ಒಂದು ರೂಪಾಯಿಯಿದೆ. ಇನ್ನೊಂದು ರೂಪಾಯಿ ಸಿಕ್ಕಿದ್ರೆ ಎರೆಡು ಚೂಯಿಂಗ್ ಗಮ್ ಜೊತೆ ಒಂದು WWE ಕಾರ್ಡ್ ಫ್ರೀ ಬರ್ತಿತ್ತು. ಆದ್ರೆ ಈಗೇನಾದ್ರೂ ಅಮ್ಮನತ್ರ ಕೇಳಿದ್ರೆ ಒಂದು ರೂಪಾಯಿಗೆ ಹತ್ತು ಒದೆತ ತಿನ್ಬೇಕಾಗುತ್ತೆ! ಏನು ಮಾಡೋದು ಅಂತ ಯೋಚಿಸುತ್ತಾ ನಿಂತಿರುವಾಗಲೇ ಮನೆಯೆದುರು ಗೇಟ್  ತೆರೆದ ಸದ್ದಾಯಿತು. ಕೈಯ್ಯಲ್ಲೊಂದು ಬ್ಯಾಗ್ ಹಿಡಿದು ದಾಪುಗಾಲಿಡುತ್ತಾ ಬರುತ್ತಿದ್ದ ದೊಡ್ಡಪ್ಪ; ಅವರ ಹಿಂದೆ ಚಿಕ್ಕ ಬಟ್ಟೆಯ ಗಂಟನ್ನು ಕಂಕುಳಲ್ಲಿಟ್ಟುಕೊಂಡು ವಾಲುತ್ತಾ ನಡೆದುಬರುತ್ತಿರುವ ಅಜ್ಜಿ. ಆರೇಳು ತಿಂಗಳ ಕೆಳಗೆ ಇದೇ ದೊಡ್ಡಪ್ಪ ಅಪ್ಪ-ಅಮ್ಮನ ಜೊತೆ ಜಗಳಾಡಿ ತನ್ನ ಮನೆಗೆ ಕರೆದುಕೊಂಡು ಹೋಗುವಾಗ ಅವಳ ಬೆನ್ನು ಇಷ್ಟೊಂದು ಬಾಗಿರಲಿಲ್ಲ; ಇವತ್ಯಾಕೋ ತೀರ ವಯಸ್ಸಾದವಳಂತೆ ಕಾಣುತ್ತಿದ್ದಾಳೆ ಕಾವೇರಜ್ಜಿ.

ಜಗುಲಿಯ ಖುರ್ಚಿಯ ಮೇಲೆ ಕೈಲಿದ್ದ ಚೀಲವನ್ನ ಹೆಚ್ಚೂ ಕಡಿಮೆ ಬಿಸಾಕುವಂತೆಯೇ ಇಟ್ಟ ದೊಡ್ಡಪ್ಪ "ಹೂಂ, ಒಳಗೆ ಹೋಗು" ಅಂದರು.
"ಅಲ್ಲ ಶಂಕ್ರು ಅದೂ...." ಅಂತ ಏನೋ ಹೇಳಲು ಹೊರಟ ಅಜ್ಜಿಯ ಮಾತನ್ನು ಅರ್ಧಕ್ಕೇ ತುಂಡರಿಸಿ, "ನೋಡೂ, ನೀನು ಜಾಸ್ತಿ ಮಾತಾಡ್ಬೇಡ. ನಿನಗೆ ಇನ್ನೂ ಪ್ರಾಯ ತುಂಬಿ ಬರೋದಿಲ್ಲ. ಬಾಯಿ ಮುಚ್ಕಂಡು ಒಂದು ಮೂಲೇಲಿ ಕೂರೋದ್ನ ಕಲಿ" 
ಹಾಗಂತ ಗುಡುಗಿ ಹೊರಡಲೆಂದು ತಿರುಗಿದವರನ್ನ ಅಮ್ಮನ ಮಾತು ತಿವಿದಿತ್ತು: "ಅವತ್ತು ಮತ್ತೆ ಈ ಮನೆ ಮೆಟ್ಲು ಹತ್ಸೊಲ್ಲ, ನನ್ನಮ್ಮನ್ನ ನಾನೇ ಸಾಕ್ತೀನಿ ಅಂತ ಕರ್ಕೊಂಡ್ ಹೋದೋರ್ಗೆ ಇಷ್ಟು ಬೇಗ ಅಮ್ಮ ಭಾರ ಅದ್ಲೇನೋ!"

ತಕ್ಷಣ ಬಾಲ ಮೆಟ್ಟಿಸಿಕೊಂಡ ಹಾವಿನಂತೆ ಭುಸುಗುಟ್ಟಿದ್ದರು ದೊಡ್ಡಪ್ಪ: "ಈ ಕೊಂಕು ಮಾತೆಲ್ಲ ನಿನ್ನ ಗಂಡನ್ಹತ್ರ ಇಟ್ಕೋ. ಅಷ್ಟಕ್ಕೂ ಅಮ್ಮನ ಆಸ್ತಿ ಇಟ್ಕೊಂಡ್ ತಿಂತಿರವ್ರು ನೀವು ತಾನೇ? ಬೇಕಾದ್ರೆ ನೋಡ್ಕೊಳ್ಳಿ, ಇಲ್ಲ ಬಿಡಿ" ಅಂತ ಧಡಧಡನೆ ಮೆಟ್ಟಿಲಿಳಿದು ಬಿರುಗಾಳಿಯಂತೆ ಹೊರಟೇಹೋದರು. ಅಪ್ಪ ಇದ್ಯಾವುದನ್ನೂ ಕೇಳಿಸಿಕೊಳ್ಳದವನಂತೆ ಗದ್ದೆಯಕಡೆ ನಡೆದ.

ಹಿತ್ತಲ ಬದಿಯಲ್ಲಿದ್ದ ಪುಟ್ಟ ಕೋಣೆಯನ್ನು ಅಜ್ಜಿಗೆ ಬಿಟ್ಟುಕೊಡಲಾಯಿತು. ಅಜ್ಜಿಗ್ಯಾಕೋ ಅದು ಹಿಡಿಸಿದಂತೆ ಕಾಣಲಿಲ್ಲ. "ನಂಗೆ ಈ ಕೋಣೆ ಬೇಡ. ಇಲ್ಲಿ  ಓಡುಹುಳ ಬರ್ತಾವೆ" ಅಂತ ರಾಗ ತೆಗೆದಾಗ ಅಮ್ಮ ಧುಮುಗುಟ್ಟಿದಳು. "ನಿಮಗಂತ ಹೊಸ ಕೋಣೆ ಎಲ್ಲಿಂದ ತರೋಣ? ಇರೋದ್ರಲ್ಲೇ ಹೊಂದ್ಕೊಂಡು ಹೋಗ್ಬೇಕು. ನಾವೆಲ್ಲಾ ಏನು ಅರಮನೇಲಿ ಮಲಗ್ತಿದೀವ?" ಅಜ್ಜಿ ಮುಂದೆ ಮಾತನಾಡಲಿಲ್ಲ. ಸುಮ್ಮನೆ ಒಳಗೆ ಹೋಗಿ ತನಗಾಗಿ ಹಾಸಿದ್ದ ಹಾಸಿಗೆಯ ಮೇಲೆ ಕೂತಳು. ಕಿಟಕಿಯ ಮೂಲಕ ಅಂಗಳದಲ್ಲಿ ಸೈಕಲ್ ಹೊಡೆಯುತ್ತಿರುವ ಗೋಪಿಯನ್ನು ನೋಡಿದವಳೇ ಏನೋ ನೆನಪಾದಂತೆ ತನ್ನ ಬಟ್ಟೆಯ ಗಂಟು ತೆರೆದು, ಅದರೊಳಗೆ ಪುಟ್ಟ ಪ್ಲಾಸ್ಟಿಕ್ ಕವರಿನೊಳಗೆ ಇಟ್ಟುಕೊಂಡಿದ್ದ ಉತ್ತುತ್ತೆಯನ್ನ ತೆಗೆದು ಗೋಪಿಯನ್ನ ಕರೆದಳು:
"ಮಾಣೀ.. ಬಾರಾ ಇಲ್ಲಿ" 
ಸೈಕಲ್ ತುಳಿಯುತ್ತಿದ್ದ ಗೋಪಿ ಅಲ್ಲಿಂದಲೇ ಕೂಗಿದ "ಎಂತ ಅಜ್ಜೀ? ನಾನು ಸೈಕಲ್ ಹೊಡೀತಿದೀನಿ" 
ನಾಲ್ಕು ಉತ್ತುತ್ತೆಯನ್ನ ಕೈಲಿ ಹಿಡಿದುಕೊಂಡು ವಾಲಾಡುವ ಹೆಜ್ಜೆಯಲ್ಲಿ ತಾನೇ ಅಂಗಳಕ್ಕೆ ಬಂದಳು. "ಇಕಾ ಉತ್ತುತ್ತೆ. ಮೊನ್ನೆ ಶಾರದ ಬಂದೊಳು ದಿನಾ ಎರೆಡೆರಡು ತಿನ್ನಿ ಅಂತ ಕೊಟ್ಟು ಹೋದ್ಲು. ನಂಗೆ ಹಲ್ಲು ಗಟ್ಟಿ ಇಲ್ಲ. ತಗಾ, ನೀನಾದ್ರೂ ತಿನ್ನು" 
ಗೋಪಿ ಖುಷಿಯಿಂದ ಅಷ್ಟನ್ನೂ ಒಟ್ಟಿಗೇ ಬಾಯಿಗೆ ತುರುಕಿಕೊಂಡ. ಏನೋ ಜಂಬು ವಾಸನೆ ಅನ್ನಿಸಿದರೂ ರುಚಿಯಾಗೇ ಇತ್ತು ಉತ್ತುತ್ತೆ. 
"ನಿಂಗಿವತ್ ಇಸ್ಕೂಲಿಲ್ವಾ?"
"ಇಲ್ಲ ಅಜ್ಜೀ. ಭಾನುವಾರ ಅಲ್ವಾ"
ಎರೆಡು ನಿಮಿಷ ಅಲ್ಲೇ ಎಳೆ ಬಿಸಿಲಲ್ಲಿ ಛಳಿಕಾಸುತ್ತ ನಿಂತು ಮತ್ತೆ ವಾಲಾಡುತ್ತಾ ಒಳಗೆ ಹೋದವಳನ್ನ ನೋಡಿದ ಗೋಪಿಗೆ ಏನೋ ಹೊಳೆದು ಅವಳ ಹಿಂದೆಯೇ ಓಡಿದ. ಹಾಸಿಗೆಯೆದುರು ಮೊಣಕಾಲೂರಿ ಕೂತವನು ಸಣ್ಣ ದನಿಯಲ್ಲಿ ಕೇಳಿದ:
"ಅಜ್ಜೀ ನಿನ್ಹತ್ರ ಒಂದು ರೂಪಾಯಿ ಇದ್ಯಾ?"
"ಎಂತಕೆ ಮಾಣೀ?"
"ಮತ್ತೇ.. ನಾನು ಚೂಯಿಂಗ್ ಗಮ್ ತಗೋಬೇಕು ಅದಿಕ್ಕೇ"
"ನೋಡ್ತೀನಿ, ತಡಿ" ಅಂದವಳು ತನ್ನ ದಿಂಬಿನಡಿ ಇದ್ದ ಸಣ್ಣ ಕೈಚೀಲದಿಂದ ನಾಲ್ಕಾರು ನಾಣ್ಯಗಳನ್ನು ಹೊರತೆಗೆದಳು. ಅವನ್ನು ಕಿಟಕಿಯಿಂದ ಬರುತ್ತಿರುವ ಬೆಳಕಿನಲ್ಲಿ ಕಣ್ಣಿನ ಸಮೀಪ ಹಿಡಿದು ನೋಡಿ ತಲಾ ಐದು ಹಾಗೂ ಒಂದರ ಒಂದೊಂದು ನಾಣ್ಯ ಗೋಪಿಯರ ಕೈಗಿತ್ತು ಪಿಸುಗುಟ್ಟಿದಳು- "ಹಂಗೇ ಬರ್ಬೇಕಾದ್ರೆ ನಂಗೆ ಕಾವೇರಿ ಹೋಟ್ಲಿಂದ ಕಾರ್ಸೇವು ತಗೊಂಡ್ಬಾ. ಅಮ್ಮಂಗೆ ಹೇಳ್ಬೇಡ!" 
ಗೋಪಿ ಖುಷಿಯಿಂದ ಓಡಿದ.

                   ****************

ಅಜ್ಜಿ ಬಂದ ದಿನದಿಂದ ಮನೆಯಲ್ಲಿ ಒಂದಿಲ್ಲೊಂದು ಗಲಾಟೆ ನಡೆಯುತ್ತಲೇ ಇತ್ತು. ಟಾಯ್ಲೆಟ್ ಗೆ ಹೋದೋರು ಸರಿಯಾಗಿ ನೀರು ಹಾಕಿಲ್ಲ, ವದ್ದೆ ಬಟ್ಟೆ ಮಂಚದ ಮೇಲೇ ಇಟ್ಟಿದ್ದಾರೆ, ಕೈಚೀಲದಲ್ಲಿ ಕೊಳಕು ತಿಂಡಿ ಇಟ್ಟುಕೊಂಡಿರೋದ್ರಿಂದ ಇಲಿ, ಜಿರಲೆ ಜಾಸ್ತಿ ಆಗಿದಾವೆ.... ಹೀಗೇ ಏನೇನೋ ಕಾರಣಕ್ಕೆ. ಕೆಲವೊಮ್ಮೆ ಕಾರಣವೇನೆಂದೇ ಗೋಪಿಗೆ ತಿಳಿಯುತ್ತಿರಲಿಲ್ಲ. ಅಮ್ಮನ ಬೈಗುಳದಿಂದ ಶುರುವಾಗಿ, ನಂತರ ಅಪ್ಪನ ಧ್ವನಿ ತಾರಕಕ್ಕೇರಿ ಕೊನೆಗದು ಅಜ್ಜಿಯ ಕಣ್ಣೀರಿನೊಂದಿಗೆ ಕೊನೆಯಾಗುತ್ತಿತ್ತು. ಎರೆಡೇ ವರ್ಷಗಳ ಕೆಳಗೆ ಇವರಿಗೆ ಎದುರು ನಿಂತು ಅಷ್ಟೇ ಗಟ್ಟಿದನಿಯಲ್ಲಿ ಜಗಳಾಡುತ್ತಿದ್ದ ಅಜ್ಜಿ ಇಂದು ಈ ಪರಿ ಮೆತ್ತಗಾಗಿರುವುದನ್ನ ನೋಡಿ ಗೋಪಿಗೆ ಒಮ್ಮೊಮ್ಮೆ ಆಶ್ಚರ್ಯವಾಗುತ್ತಿತ್ತು. 

ಇವರಲ್ಲಿ ಯಾರು ಸರಿಯೋ, ಯಾರು ತಪ್ಪೋ, ದೇವರೇ ಬಲ್ಲ. ಎರೆಡು ವರ್ಷಗಳ ಕೆಳಗೆ ಅಜ್ಜ ತೀರಿಕೊಂಡಾಗ ಆಸ್ತಿ ಭಾಗದ ವಿಷಯದಲ್ಲಿ ಆರಂಭವಾಗಿತ್ತು ದಾಯಾದಿ ಕಲಹ. ಯಾರ್ಯಾರಿಗೆ ಎಷ್ಟೆಟ್ಟು ಬರಬೇಕಿತ್ತೋ, ಎಷ್ಟೆಷ್ಟು ಬಂತೋ ಗೊತ್ತಿಲ್ಲ; ಇದ್ದ ಮೂರುಮೆಟ್ಟು ಭೂಮಿಗಾಗಿ ಮೂವರು ಅಣ್ಣ-ತಮ್ಮಂದಿರು ಹಾಗೂ ಒಬ್ಬ ಅಕ್ಕ ಪೆಡಂಭೂತಗಳಂತೆ ಕಿತ್ತಾಡಿಕೊಂಡು ದೂರಾಗಿದ್ದರು. ಆಗೆಲ್ಲಾ ದೊಡ್ಡಪ್ಪ-ದೊಡ್ಡಮ್ಮಾದಿಗಳಿಂದ ಹಿಡಿದು ಇದೇ ಅಜ್ಜಿಯ ತನಕ ಎಲ್ಲರೂ ತನ್ನ ಅಮ್ಮನ ಮೇಲೆ ಹರಿಹಾಯುತ್ತಿದ್ದಾಗ, ನೊಂದ ಅಮ್ಮ ತನ್ನನ್ನು ತಬ್ಬಿಕೊಂಡು ಅಳುತ್ತಾ ಮಲಗುತ್ತಿದ್ದಾಗ 'ಅಮ್ಮ ಪಾಪ' ಅನ್ನಿಸುತ್ತಿತ್ತು ಗೋಪಿಗೆ.  ಆದರೆ ಇಂದು ಬೆನ್ನು ಬಾಗಿ, ಸರಿಯಾಗಿ ನಡೆಯಲು ಆಗದೇ, ಸುಕ್ಕುಗಳ ನಡುವೆ ಅಡಗಿಕೊಂಡಿರುವ ಕಣ್ಗಳನ್ನ ಮತ್ತಷ್ಟು ಕಿರಿದಾಗಿಸಿಕೊಂಡು ಅಳುವ ಅಜ್ಜಿಯನ್ನ ನೋಡಿದಾಗಲೂ 'ಪಾಪ' ಅಂತಲೇ ಅನ್ನಿಸುತ್ತಿತ್ತು. ಅಮ್ಮ ಮನೆಯಲ್ಲಿಲ್ಲದ ಹೊತ್ತಿನಲ್ಲಿ ತನ್ನ ಕೋಣೆಗೆ ಕರೆದೊಯ್ದು ಕೈಚೀಲದಲ್ಲಿ ಮುಚ್ಚಿಟ್ಟುಕೊಂಡಿರುತ್ತಿದ್ದ , ತನ್ನನ್ನು ನೋಡಲು ಬಂದವರ್ಯಾರೋ ಕೊಟ್ಟು ಹೋಗಿದ್ದ ತಿಂಡಯನ್ನ ಕೈಗಿತ್ತು "ಗಬಗಬ ತಿನ್ನು, ಅಮ್ಮ ಬರೋಕೂ ಮುಂಚೆ!" ಎಂದು ತನ್ನ ಬೆನ್ನು ನೇವರಿಸುತ್ತಿದ್ದ ಅಜ್ಜಿಗೆ, ಅಮ್ಮನಿಗೆ ತಿಳಿಯದಂತೆ ಕಾರ್ಸೇವು, ಗೋಲಿಬಜೆ, ಬೋಂಡಾ ತಂದು ಕೊಡುತ್ತಿದ್ದ, ಅವಳ ದುಡ್ಡಿನಲ್ಲಿಯೇ!

ಮರಳಿ ಬಂದ ಆರಂಭದಲ್ಲಿ ಅಜ್ಜಿ ಅಲ್ಲೇ ಹತ್ತಿರದಲ್ಲಿದ್ದ ಲೋಕೆಶರಾಯರ ಮನೆಗೆ ಯಾವಾಗಲೂ ಹೋಗಿ ಬರುತ್ತಿದ್ದಳು. ಅಲ್ಲಿ ಇವಳಿಗಿಂತ ಕೆಲವೇ ವರ್ಷಗಳಿಗೆ ಚಿಕ್ಕವರಾದ ಲೋಕೆಶರಾಯರ ತಾಯಿ ಸುಂದ್ರಮ್ಮನ ಜೊತೆ ಹರಟುತ್ತಾ, ಅವರ ಸೊಸೆ ಫಾಲ್ಗುಣಿ ಕೊಡುವ ಕಾಫಿ, ಪಾನಕ ಕುಡಿಯುವುದು, ಕುರುಕಲು ತಿಂಡಿ ಮೆಲ್ಲುವುದು ಅಜ್ಜಿಯ ಮೆಚ್ಚಿನ ದಿನಚರಿಯಾಗಿತ್ತು. ಆದರೆ ಯಾವಾಗ ಇವಳ ಕೆಮ್ಮು, ಅನಾರೋಗ್ಯಗಳು ಜಾಸ್ತಿಯಾದವೋ, ಅವರೂ ಇವಳನ್ನು ದೂರವಿರಿಸತೊಡಗಿದರು. ಕೊನೆಗೊಂದು ದಿನ ಫಾಲ್ಗುಣಿ  "ಕಾವೇರಮ್ಮ, ನನ್ನ ಮಕ್ಕಳಿನ್ನೂ ಚಿಕ್ಕವು. ನೀವು ಹೀಗೆ ಕೆಮ್ತಾ ಇಲ್ಲೇ ಕೂತಿದ್ರೆ ಅವಕ್ಕೂ ಕೆಮ್ಮು ಅಂಟಿಕೊಳ್ಳತ್ತೆ. ಮತ್ತೆ ಮತ್ತೆ ಇಲ್ಲಿಗೆ ಬರಬೇಡಿ" ಅಂತ ಮುಖಕ್ಕೆ ಹೊಡೆದಂತೆ ಹೇಳಿಯೇಬಿಟ್ಟಳು! ಅವಮಾನದಿಂದ ಸೋತ ಹೆಜ್ಜೆಗಳನ್ನಿಡುತ್ತಾ ಮನೆಗೆ ಬಂದಿದ್ದಳು ಕಾವೇರಜ್ಜಿ.

ಈ ವಿಷಯ ತಿಳಿದ ಅಮ್ಮನಿಗೂ ಅಜ್ಜಿಯ ಮೇಲೆ ಕನಿಕರ ಮೂಡಿತ್ತೋ ಏನೋ. "ನೋಡಿದ್ರಾ? ಅವತ್ತು ಅತ್ತೆ ಗಟ್ಟಿ ಇದ್ದು, ನಮ್ಜೊತೆ ಜಗಳ ಕಾಯ್ತಿದ್ದಾಗ ಅವರ ಕಿವಿ ಊದ್ತಿದ್ದ ಇದೇ ಫಾಲ್ಗುಣಿ-ಸುಂದರಮ್ಮ, ಇವತ್ತು ಅವರಿಗೆ ವಯಸ್ಸಾದ ಕೂಡ್ಲೇ ಹೇಗೆ ಮಾತಾಡ್ತಿದಾರೆ ಅಂತ?" ಎಂದು ಅಪ್ಪನ ಬಳಿ ಹೇಳಿದ್ದು ಪಕ್ಕದಲ್ಲೇ ಮಲಗಿದ್ದ ಗೋಪಿಯ ಕಿವಿಗೆ ಸ್ಪಷ್ಟವಾಗಿಯೇ ಕೇಳಿತ್ತು.

ಬರುಬರುತ್ತಾ ಅಜ್ಜಿಯ ಜೀರ್ಣಶಕ್ತಿ ಕುಸಿಯತೊಡಗಿತು. ಏನೇ ತಿಂದರೂ ವಾಂತಿಯೋ, ಬೇದಿಯೋ  ಶುರುವಾಗಿಬಿಡುತ್ತಿತ್ತು. ನಿಶ್ಯಕ್ತಿಯಿಂದ ಮಲಗಿಯೇ ಇರುತ್ತಿದ್ದ ಅವಳು, ಅಪ್ಪ ಪೇಟೆಯ ಕಡೆಗೆ ಹೊರಟಿದ್ದು ಕಂಡರೆ ಸಾಕು "ಚಂದ್ರೂ.... ಶಂಕ್ರು, ಶಶಿ ಯಾರಾದ್ರೂ ಕಂಡ್ರೆ ಬಂದು ನನ್ನ ನೋಡ್ಕೊಂಡು ಹೋಗೋಕೆ ಹೇಳೋ" ಅಂತ ಮಲಗಿದಲ್ಲಿಂದಲೇ ಕೂಗಿ ಹೇಳುತ್ತಿದ್ದಳು. ಪ್ರತೀ ಸಲವೂ ಇದನ್ನೇ ಕೇಳಿ, ಕೇಳಿ ಬೇಸತ್ತ ಅಪ್ಪ "ಹೌದೌದು. ದಿನಕ್ಕೆ ನಾಲ್ಕು ಸಲ ಬಂದು ಹೋಗೋಕೆ ಅವರಿಗೆ ಬೇರೆ ಉದ್ಯೋಗವೇ ಇಲ್ಲಾಂದ್ಕೊಂಡ್ಯಾ?" ಅಂತ ರೇಗಿದ್ದನಾದರೂ ತನ್ನ ಅಣ್ಣಂದಿರಿಗೆ ತಾಯಿಯ ಕರೆಯನ್ನು ಮುಟ್ಟಿಸಲು ಮರೆತಿರಲಿಲ್ಲ. ಆದರೆ ತಾಯಿ ಬೇರಿನ ಹಂಗು ಕಳಚಿಕೊಂಡು ಸ್ವತಂತ್ರ ವೃಕ್ಷಗಳಾಗಿ ಬೆಳೆದು ನಿಂತಿದ್ದವರಿಗೆ ನಾಲ್ಕು ಹೆಜ್ಜೆ ಬಂದು ವೃದ್ಧ ತಾಯಿಯನ್ನ ಮಾತನಾಡಿಸಿಕೊಂಡು ಹೋಗುವುದೂ ವೃಥಾ ಶ್ರಮವೆನಿಸಿತ್ತು!

ಬೆಳಗ್ಗೆ ಉತ್ತುತ್ತೆ ಕೇಳಲು ಅಜ್ಜಿಯ ಕೋಣೆಗೆ ಹೋದಾಗ "ನೋಡಾ ಮಾಣೀ... ಮಕ್ಳಿಗೆಲ್ಲಾ ಈ ಮುದುಕಿ ಬ್ಯಾಡಾಗಿಹೋದ್ಲು" ಅಂತ ಬಿಕ್ಕಿದ್ದ ಅಜ್ಜಿಗೆ ಏನು ಹೇಳಬೇಕೆಂದು ತಿಳಿಯದೇ ಕಣ್ಕಣ್ಣು ಬಿಡುತ್ತಾ ನಿಂತುಬಿಟ್ಟ ಗೋಪಿ.

ಹಾಗೇ ಹದಿನೈದು ದಿನ ಕಳೆದ ಮೇಲೆ ಒಂದು ದಿನ ಸಂಜೆ ಗೋಪಿ ಶಾಲೆಯಿಂದ ಬರುವ ಹೊತ್ತಿಗೆ ಅಜ್ಜಿ ಲವಲವಿಕೆಯಿಂದ ಎದ್ದು ಓಡಾಡುತ್ತಿದ್ದಳು. ಗೋಪಿಯನ್ನು ಕಂಡವಳೇ "ಬಾರೋ ಮಾಣೀ.. ಇಲ್ನೋಡೋ... ಯಮ ಬರೆ ಎಳ್ದಿದಾನೆ! ನಾನು ಸಧ್ಯಕ್ಕೆ ಸಾಯಲ್ಲ!" ಎಂದು ತನ್ನ ಮೊಣಕಾಲಿನ ಮೇಲೆ ಮಚ್ಚೆಯಂತೆ ಮಂದವಾಗಿ ಮೂಡಿದ್ದ ಕಪ್ಪು ಗುರುತನ್ನು ತೋರಿಸಿ ಹಿಗ್ಗಿನಿಂದ ಹೇಳಿದಳು. ಅಲ್ಲೇ ಇದ್ದ ಅಮ್ಮನೂ "ಹೌದೋ ಪುಟ್ಟೂ. ಇನ್ನೂ ಕೆಲವು ವರ್ಷ ನೀನು ಉತ್ತುತ್ತೆ,  ದ್ರಾಕ್ಷಿ ತಿನ್ತಿರ್ಬೋದು!" ಎಂದು ನಕ್ಕಳು. ಗೋಪಿಯೂ ನಕ್ಕ: "ಅಂದರೆ... ಅಜ್ಜಿ ಸಾಯಲ್ಲ!"

                   ****************

ಎಂಟನೇ ತರಗತಿ ಪಾಸಾದ ಗೋಪಿಯನ್ನು ಮುಂದೆ ಉಡುಪಿಯಲ್ಲಿ ಬಿಟ್ಟು ಓದಿಸಬೇಕೆಂದು ತೀರ್ಮಾನಿಸಲಾಯಿತು. ಅಲ್ಲಿ ಗೌರಿಶಂಕರ್ ಎನ್ನುವವರೊಬ್ಬರು ತಮ್ಮ ತಂದೆಯ ಸ್ಮರಣಾರ್ಥ ಹಾಸ್ಟೆಲ್ ಒಂದನ್ನು ನಡೆಸುತ್ತಿದ್ದಾರಂತೆ. ವಿದ್ಯಾರ್ಥಿಗಳಿಗಾಗೇ ಇರುವ ಆ ಹಾಸ್ಟೆಲ್ ಗೆ ತಿಂಗಳಿಗೆ ಐವತ್ತೇ ರೂಪಾಯಿ ಬಾಡಿಗೆ! ಆದರೆ ಕೆಲವೊಂದು ಶರತ್ತುಗಳಿವೆ; ವಿದ್ಯಾರ್ಥಿಗಳು ವರುಷಕ್ಕೆ ಎರೆಡು ಬಾರಿ ಮಾತ್ರ ಊರಿಗೆ ಹೋಗಿ ಬರಬಹುದು. ಒಂದು ಅಕ್ಟೋಬರ್ ರಜೆಗೆ, ಇನ್ನೊಂದು ಬೇಸಿಗೆ ರಜೆಗೆ! ಉಳಿದಂತೆ ವಿದ್ಯಾರ್ಥಿಗಳ ರಿಪೋರ್ಟ್ ಕಾರ್ಡಿನಿಂದ ಹಿಡಿದು ಎಲ್ಲಾ ಶೈಕ್ಷಣಿಕ ಜವಾಬ್ದಾರಿ, ಮೇಲ್ವಿಚಾರಣೆಗಳೂ ಗೌರಿಶಂಕರ್ ಅವರದೇ ಆಗಿರುತ್ತದೆ. 

ಗೋಪಿಯ ಮಾವ ಅಲ್ಲೇ ಇದ್ದು ಓದಿದ್ದರಿಂದ ಗೋಪಿಗೆ ಅಲ್ಲಿಯ 'ಸೀಟ್' ಸುಲಭವಾಗಿ ಸಿಕ್ಕಿತ್ತು. ಉಡುಪಿಗೆ ಹೋಗುತ್ತಿರುವ ವಿಷಯವನ್ನು ಅಜ್ಜಿಗೆ ಹೇಳಬಾರದೆಂದು ಅಮ್ಮ ತಾಕೀತು ಮಾಡಿದ್ದಳು. ಅಂತೂ, ಇಂತೂ ಗೋಪಿ ಮನೆಬಿಡುವ ದಿನ ಬಂದೇ ಬಿಟ್ಟಿತು. ಹೊರಡಲು ಇನ್ನೇನು ಸ್ವಲ್ಪ ಸಮಯವಿದ್ದಾಗ ಗೋಪಿ ಅಜ್ಜಿಯ ಕೋಣೆ ಹೊಕ್ಕ. ಮೊದಲಿನಂತೆ ನಡೆದಾಡಲಾಗದ ಅಜ್ಜಿ ಹೆಚ್ಚಾಗಿ ಮಲಗಿಯೇ ಇರುತ್ತಿದ್ದಳು. ಗೋಪಿಯನ್ನು ಕಂಡವಳೇ ಕಾರ್ಸೇವಿಗೆಂದು ಬೆಳಗ್ಗೆಯೇ ತೆಗೆದಿಟ್ಟುಕೊಂಡಿದ್ದ ಚಿಲ್ಲರೆಯನ್ನು ಕೊಡಲೆಂದು ಕೈ ಮುಂದೆ ಚಾಚಿದಳು....
"ಅಜ್ಜೀ... ನಾನು ಉಡುಪಿಗೆ ಹೋಗ್ತಿದೀನಿ"
"ಆಂ... ಉಡುಪಿಗಾ? ಯಾಕೆ ಮಾಣೀ? ಯಾವತ್ತು ವಾಪಾಸ್ ಬರ್ತೀಯ?"
"ಇನ್ಮುಂದೆ ಅಲ್ಲೇ ಇದ್ಕೊಂಡು ಓದ್ತೀನಿ ಅಜ್ಜಿ...."
ಚಿಲ್ಲರೆ ಹಿಡಿದು ಮುಂಚಾಚಿದ್ದ ಕೈ ಅಲ್ಲೇ ಸ್ತಬ್ಧವಾಯಿತು. 
ಬಳಲಿ ಮುದುರಿದ್ದ ಕಣ್ಣು ತುಂಬಿ ಬಂತು.
"ನಂಗೆ ಹೇಳ್ಲೇ ಇಲ್ವಲ್ಲಾ ಮಾಣೀ...." ಎಂದು ಗದ್ಗದವಾಗಿ ಕೇಳಿದ ಸ್ವರದಲ್ಲಿ ನೋವು ಮಡುಗಟ್ಟಿ ನಿಂತಿತ್ತು. 
ಸೋತ ದೃಷ್ಟಿಯಲ್ಲಿ ಅಜ್ಜಿಯನ್ನೇ ನೋಡುತ್ತ ನಿಂತಿದ್ದ ಗೋಪಿ ಏನೋ ಹೊಳೆದಂತೆ ಥಟ್ಟನೆ ಅಜ್ಜಿಯ ಕೈಲಿದ್ದ ಚಿಲ್ಲರೆಯನ್ನ ತೆಗೆದುಕೊಂಡ.
"ಇರು ಅಜ್ಜೀ. ಈಗ್ಲೇ ಹೋಗಿ ನಿಂಗೆ ಕಾರ್ಸೇವು ತಂದ್ಕೊಡ್ತೀನಿ" ಅಂತ ಒಂದೇ ಉಸಿರಿಗೆ ಹೊರಗೋಡಿದವನು ಬಂದು ನಿಂತದ್ದು ಹೋಟೆಲ್ ಎದುರಿನ ಅಂಗಳದಲ್ಲೇ. ಏದುಸಿರು ಬಿಡುತ್ತಾ ತಲೆಯೆತ್ತಿ ನೋಡಿದ- 
'ಕಾವೇರಿ ಹೋಟೆಲ್' ಬಾಗಿಲು ಮುಚ್ಚಿತ್ತು!

ಹೊರಟುನಿಂತ ಗೋಪಿಯನ್ನು " ಚೆನ್ನಾಗಿ ಓದು ಮಾಣೀ... ಒಳ್ಳೇದಾಗ್ಲಿ...ಹೋಗಿ ಬಾ... ಈ ಅಜ್ಜೀನ ಮರ್ತ್ ಬಿಡ್ಬೇಡ. ಆಗಾಗ ಬಂದು ಹೋಗ್ತಿರು ಆಯ್ತಾ...." ಎಂದು ಮನಸಾರೆ ಹರಸಿ ಕಳಿಸಿದಳು ಕಾವೇರಜ್ಜಿ.

                  ****************

ಗೋಪಿ ಉಡುಪಿಗೆ ಹೋದ ಎರೆಡು ತಿಂಗಳಿಗೆಲ್ಲಾ ಅಜ್ಜಿಯ ಆರೊಗ್ಯ ಬಿಗಡಾಯಿಸಿತು. ಶಿವಮೊಗ್ಗದ ಆಸ್ಪತ್ರೆಯ ಸ್ಪೆಶಲ್ ವಾರ್ಡಿನಲ್ಲಿ ಬಳಲಿ, ಬೆಂಡಾಗಿ, ಜೀವಚ್ಛವದಂತೆ ಮಲಗಿದ್ದ ಎಂಬತ್ತರ ಮುದುಕಿಯನ್ನು ಪರೀಕ್ಷಿಸಿದ್ದ ಡಾಕ್ಟರ್ ಘೋಷಿಸಿಬಿಟ್ಟರು:
"ಇದು ಲಿವರ್ ಜಾಂಡೀಸ್!"
"ಹೆಚ್ಚೆಂದರೆ ಇನ್ನೊಂದು ತಿಂಗಳು ಬದುಕಬಹುದು. ಕರ್ಕೊಂಡು ಹೋಗಿ, ಇದ್ದಷ್ಟು ದಿನ ಚೆನ್ನಾಗಿ ನೋಡ್ಕೊಳ್ಳಿ"
ನಡೆದುದೆಲ್ಲವನ್ನೂ ಗೋಪಿಗೆ ಫೋನಿನಲ್ಲಿ ಹೇಳಿದ ಅಮ್ಮ ಒಮ್ಮೆ ಬಂದು ನೋಡಿಕೊಂಡು ಹೋಗೆಂದಿದ್ದಳು. ಅಂತೆಯೇ ಗೋಪಿ ಊರಿಗೆ ಹೋಗಲು ತನ್ನ ವಾರ್ಡನ್ ಗೌರಿ ಶಂಕರರ ಅನುಮತಿ ಕೇಳಲು ಬಂದ.
"ನಿನ್ನಂಥವರು ತುಂಬಾ ಜನರನ್ನು ನೋಡಿದೀನಿ ಹುಡುಗಾ!"
ಹುಚ್ಚು ಕೆದರಿದ ಕರಡಿ ಅರಚಿದಂತಿತ್ತು ಅವನ ಧ್ವನಿ.
"ಬಂದು ಇನ್ನೂ ಎರೆಡು ತಿಂಗಳಾಗಿಲ್ಲ, ಆಗ್ಲೇ ಕಥೆ ಹೇಳ್ತೊಂಡು ಬಂದ್ಬಿಟ್ಟ. ನಿಂಗೆ ಮೊದಲೇ ಹೇಳಿಲ್ವಾ ವರ್ಷಕ್ಕೆ ಎರೆಡು ಸಲ ಮಾತ್ರ ಊರಿಗೆ ಬಿಡೋದೂಂತ? ಅಕ್ಟೋಬರ್ ತನಕ ಬಾಯ್ಮುಚ್ಚಿಕೊಂಡು ಇರ್ಬೇಕು ಗೊತ್ತಾಯ್ತಾ?"

ಅಲ್ಲಿಗೆ ಅಜ್ಜಿಯನ್ನು ಜೀವಂತ ನೋಡುವ ಅಂತಿಮ ಅವಕಾಶ ಮುಗಿದುಹೋಗಿತ್ತು.

ಇದಾಗಿ ಎರೆಡು ವಾರವಾಗಿತ್ತಷ್ಟೇ. ಅದೊಂದು ಶನಿವಾರ ಗೋಪಿ ಶಾಲೆ ಮುಗಿಸಿ ಬರುವ ಹೊತ್ತಿಗೆ ಆ ಕಹಿ ಸುದ್ದಿ ಅವನಿಗಾಗಿ ಕಾದುಕೂತಿತ್ತು. ಅಜ್ಜಿ ತನ್ನ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಳು. ಉಟ್ಟ ಬಟ್ಟೆಯಲ್ಲೇ ಗೋಪಿ ಬಸ್ಸು ಹತ್ತಿದ. ಮನೆ ತಲುಪುವ ಹೊತ್ತಿಗೆ ಸಂಜೆಯಾಗಿತ್ತು...

ಅಲ್ಲಿ... ಅಂಗಳದ ನಟ್ಟ ನಡುವೆ ಮಲಗಿತ್ತು ಅಜ್ಜಿಯ ಶವ...

ಅಜ್ಜಿ.. ತನ್ನ ಪ್ರೀತಿಯ ಅಜ್ಜಿ... ಮಾಣೀ ಎಂದು ತಲೆ ನೇವರಿಸುತ್ತಿದ್ದ ಅಜ್ಜಿ... ಹಿಡಿ ಕಾರ್ಸೇವಿಗಾಗಿ ಹಾತೊರೆಯುತ್ತಿದ್ದ ಅಜ್ಜಿ.. ಮಕ್ಕಳು-ಮರಿ, ನೆಂಟರಿಷ್ಠರಿಗೆಲ್ಲಾ ಬೇಡಾಗಿ ಕಣ್ಣೀರಿಡುತ್ತಿದ್ದ ಅಜ್ಜಿ....

ಗೋಪಿ ನೋಡಿದ.. ನೋಡಿಯೇ ನೋಡಿದ... ಜೀವಮಾನದಲ್ಲಿ ಇನ್ನೆಂದೂ ನೋಡಲಾಗದ ಈ ಮುಖ ತನ್ನ ಕೊನೆಯ ಕ್ಷಣದ ತನಕವೂ ಹಾಗೇ ಕಣ್ಣಲ್ಲಿ ಉಳಿದು ಹೋಗಲೆಂಬಂತೆ ಮೈಯೆಲ್ಲಾ ಕಣ್ಣಾಗಿ ನಿಂತು ನೋಡಿದ...

ಅಂತಿಮ ಸಂಸ್ಕಾರಕ್ಕೆಂದು ಶವವನ್ನ ಒಯ್ಯತೊಡಗಿದರು. ಗೋಪಿ ನಿಂತಲ್ಲೇ ಕಲ್ಲಾಗಿ ನೋಡುತ್ತಿದ್ದ. ಕೆಲವೇ ಕ್ಷಣಗಳ ಹಿಂದೆ ಜೀವಂತವಾಗಿದ್ದ, ಯಾರದೋ ಅಮ್ಮನಾಗಿ, ಯಾರದೋ ಅಜ್ಜಿಯಾಗಿ, ಇನ್ಯಾರದೋ ಪ್ರೀತಿಯಾಗಿ ಉಸಿರಾಡಿಕೊಂಡಿದ್ದ ದೇಹವನ್ನ ಅಗ್ನಿ ಇಂಚಿಂಚಾಗಿ ಆಹುತಿ ತೆಗೆದುಕೊಂಡಿತು. ಎಲ್ಲವೂ ಮುಗಿದು, ಎಲ್ಲರೂ ಮನೆಗೆ ಬಂದರು. ಸ್ನಾನ ಮಾಡಿಕೊಂಡು ಒಳಗೆ ಬಂದ ಗೋಪಿ ಥಟ್ಟನೆ ಏನೋ ಹೊಳೆದಂತಾಗಿ ಬ್ಯಾಗಿನಲ್ಲಿದ್ದ ಪರ್ಸ್ ತೆರೆದ. ಅಲ್ಲಿ ಬೆಚ್ಚಗೆ ಕೂತಿತ್ತು ಅವನು ಜೋಪಾನವಾಗಿಟ್ಟುಕೊಂಡಿದ್ದ ಐದು ರೂಪಾಯಿಯ ನಾಣ್ಯ.....ಅಜ್ಜಿ ಕಟ್ಟಕಡೆಯ ಬಾರಿಗೆ ಕಾರ್ಸೇವು ತಾ ಎಂದು ಕೊಟ್ಟಿದ್ದ ನಾಣ್ಯ...
ಅದನ್ನೊಮ್ಮೆ ಆಸ್ಥೆಯಿಂದ ಸವರಿದ. 
ಪಕ್ಕದಿಂದಲೇ ಅಜ್ಜಿಯ ದನಿ ಕೇಳಿದಂತಾಯ್ತು:
"ಬರ್ಬೇಕಾದ್ರೆ ನಂಗೆ ಕಾವೇರಿ ಹೋಟ್ಲಿಂದ ಕಾರ್ಸೇವು ತಗೊಂಡು ಬಾ ಮಾಣೀ... ಅಮ್ಮಂಗೆ ಹೇಳ್ಬೇಡ!" 

('ಮೈಸೂರು ಅಸೋಸಿಯೇಷನ್-ಮುಂಬೈ' ಸಂಸ್ಥೆಯ 'ಮಾಸ್ತಿ ಜಾಗತಿಕ ಕನ್ನಡ ಕಥಾ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಗಳಿಸಿದ ಕಥೆ)

ಗುರುವಾರ, ಜನವರಿ 5, 2017

ಜೀವಜಲ

ಬರಡು ಧೂಳಿನ ಮಣ್ಣ ಕಣ್ಣಿಗೆ
ಹಸಿರು ದೃಷ್ಟಿಯ ಚಿಮುಕಿಸಿ;
ಕಲ್ಲ ನರದಲಿ ನೆತ್ತರುಕ್ಕಿಸಿ
ಜೀವ ಸಂತತಿ ಅರಳಿಸಿ.

ಸಪ್ತ ಗ್ರಹಗಳಲೆಲ್ಲೂ ಕಾಣದ
ನಾಗರೀಕತೆ ಚಿಗುರನು,
ತೀರ ತೊಟ್ಟಿಲೊಳಿಟ್ಟು ತೂಗಿದ
ಉದಕ ಮಾತೆಯ ಮಡಿಲಿದು.

ಕಡಲೊ ನದಿಯೋ, ಕೆರೆಯೋ ಝರಿಯೋ
ಸಿರಿಯು ಬತ್ತದ ಆಳವೋ;
ಅಗಾಧ ಸುಳಿಗಳ, ಪ್ರಚಂಡ ಅಲೆಗಳ
ನುಂಗಿ ನಿಂತಿಹ ಶಾಂತಿಯೋ.

ಜೀವ ವಾಹಿನಿ ಹರಿದು ಸಾಗುತ
ಹಸಿವನೆಲ್ಲವ ಕಿತ್ತಳು;
ಹರಿವು ತಾಕದ ನೆಲದ ತಾಪಕೂ
ಮಳೆಯ ಹನಿಗಳ ಸುರಿದಳು.

ವಿಷವ ಹರಿಸುವ ಕೈಯ್ಯ ದಾಹಕೂ
ಜೀವಜಲವನೆ ಎರೆವಳು;
ಯುಗವೆ ಸವೆದರೂ ಮತ್ತೆ ಹುಟ್ಟುತ
ಜಗದ ಉಳಿವಿಗೆ ದುಡಿವಳು.

('3ಕೆ: ಕನ್ನಡ ಕವಿತೆ ಕಥನ' ದ ರಾಜ್ಯೋತ್ಸವ ಕವನ ಸ್ಪರ್ಧೆ 2016ರಲ್ಲಿ ಸಮಾಧಾನಕರ ಬಹುಮಾನ ಪಡೆದ ನನ್ನ ಕವನ. ಕವನ ಸ್ಪರ್ಧೆಯ ವಿಷಯ 'ಜಲಸಂಸ್ಕೃತಿ')

ಶನಿವಾರ, ಡಿಸೆಂಬರ್ 31, 2016

ಪರಮೇಶಿ ಪ್ರಸಂಗ




ಪರಮೇಶಿ ದೈವಭಕ್ತನೇ. ಆದರೂ ಅವನಿಗೆ ವಿಷ್ಣುವಿನ 'ಅವತಾರ'ಗಳ ಬಗ್ಗೆ ಅನುಮಾನಗಳಿದ್ದವು. ಯಾವುದೋ ಆಪತ್ತು ಬಂದಕೂಡಲೇ ಗಂಡಾಗಿದ್ದವನು ಮೋಹಿನಿಯಾಗುವುದು, ವರಾಹವಾಗುವುದು, ಉಗ್ರ ನರಸಿಂಹನಾಗುವುದು ಹೇಗೆ ಸಾಧ್ಯ? ಅದರಲ್ಲೂ ಎಸ್ಪೆಶಲಿ ಗಂಡಸರು! ಅವರು ಹಾಗೆಲ್ಲಾ ಬದಲಾಗುವವರೇ ಅಲ್ಲ. ಮೆನ್ ಆರ್ ಆಲ್ವೇಸ್ ಮೆನ್! ಆಫಿಸಿನಲ್ಲಿ ಲೇಡಿ ಬಾಸ್ ಭದ್ರಕಾಳಿಯಾಗಿ, ಚಂಡಿಚಾಮುಂಡಿಯಾಗಿ, ಕನ್ನಡದ ಕಿರಣ್ ಬೇಡಿಯಾಗಿ....ಹೀಗೇ ಕ್ಷಣಕ್ಕೊಂದು ಭಯಾನಕ ರೂಪ ತಾಳುತ್ತಾ  ತನ್ನ ಮೇಲೆ ರೌದ್ರ ತಾಂಡವವಾಡಿದರೂ ತಾನು ಮಾತ್ರ ಡಾಬರ್ ಮನ್ ಅನ್ನು ಕಂಡ ಬಡಕಲು ಬೀದಿನಾಯಿಯಂತೆ ಬಾಲ ಮುದುರಿಕೊಂಡೇ ನಿಂತಿರುತ್ತೇನೆ. ತಾನು ಮಾತ್ರ ಅಲ್ಲ; ಹಿಂದಿನ ಜನ್ಮದ ಕೋಪವನ್ನೂ ಈ ಜನ್ಮಕ್ಕೆ 'ಕ್ಯಾರಿ ಫಾರ್ವಡ್' ಮಾಡಿಕೊಂಡು ಬಂದಂತಿರುವ ಅವರೆದುರು ಆರಡಿ ಎತ್ತರದ, ಜಿಮ್ ಬಾಡಿಯ ಕೋದಂಡನೂ ಬರೀ ದಂಡವೇ! 

ಬಾಸ್ ಗೆ ಎದಿರಾಡಬೇಕೆಂದು ಅದೆಷ್ಟೇ  ಪ್ರಯತ್ನಿಸಿದರೂ ಪರಮೇಶಿಗೆ ಸಾಧ್ಯವಾಗುವುದೇ ಇಲ್ಲ.  ಹಿಂದಿನ ರಾತ್ರಿ ನೋಡಿದ ಅಣ್ಣಾವ್ರ ಚಿತ್ರದಿಂದ ಪ್ರೇರಿತನಾಗಿ ಇದ್ದ ಬದ್ದ ಧೈರ್ಯವನ್ನೆಲ್ಲಾ ಜೊತೆಗೂಡಿಸಿ "ಇವತ್ತು ಅವರಿಗೆ ಸರಿಯಾಗಿ ಉತ್ತರಕೊಡ್ತೇನೆ!" ಅಂತ ಎದೆಯುಬ್ಬಿಸಿಕೊಂಡು ಹೊರಡುವುದೇನೋ ನಿಜ. ಆದರೆ ಒಂದು ಸಲ ಅವರ ಬಿಗಿದ ಮುಖ, ದಪ್ಪ ಕನ್ನಡಕದೊಳಗಿಂದ ತನ್ನೆಡೆಗೆ ಬೆಂಕಿಯುಗುಳಲು ಸಿದ್ಧವಾಗಿರುವ ಕಣ್ಣು, ಮೇಲೆರೆಗಲು ತಯಾರಾಗಿರುವಂತೆ ಸೆಟೆದು ಕುಳಿತಿರುವ ಭಂಗಿ- ಇದನ್ನೆಲ್ಲಾ ನೋಡುತ್ತಿದ್ದಂತೆಯೇ ರಿಟೈರ್ಮೆಂಟಿಗೆ ಸನಿಹವಾಗಿದ್ದರೂ ಚಾಂಪಿನ್ ಆಗಿಯೇ ಉಳಿದಿರುವ ಹಳೇ ಜಟ್ಟಿಯನ್ನು ಕಂಡಂತಾಗಿ, ಅವನ ಧೈರ್ಯವೆಲ್ಲಾ ಬಾಗಿಲಿನಲ್ಲೇ ಹಾರಿಹೋಗಿ, ಮತ್ತೆ ಬಾಲ ಮುದುರಿದ ನಾಯಿಯಾಗಿಬಿಡುತ್ತಿದ್ದ! ಎಂದಿನಂತೆ ಕೈಕಟ್ಟಿ, ತಲೆ ತಗ್ಗಿಸಿ ತನ್ನ ಮೇಲಾಗುತ್ತಿರುವ 'ಸಹಸ್ರ ನಾಮಾರ್ಚನೆ'ಯನ್ನು ಶ್ರದ್ಧೆಯಿಂದ ಕೇಳಿಸಿಕೊಂಡು ತನ್ನ ಜಾಗಕ್ಕೆ ಮರಳುತ್ತಿದ್ದ.

ಉದ್ಯೋಗಕ್ಕೆ ಸೇರಿದ ಆರಂಭದಲ್ಲಿ ಕೆಲಸ ಗೊತ್ತಿಲ್ಲದ ಕಾರಣದಿಂದ ಹಾಗೂ ಬಾಸ್ ಮೇಲಿನ ಭಯದಿಂದ ಹೆಚ್ಚೆಚ್ಚು ತಪ್ಪುಗಳಾಗುತ್ತಿದ್ದವು. ಅಲ್ಲದೇ ಮೊದಲೇ ಎಡಬಿಡಂಗಿ ಗುಣದವನೂ ಆಗಿದ್ದರಿಂದ ಒಂದಿಲ್ಲೊಂದು ತಪ್ಪು ಮಾಡುತ್ತಲೇ ಇದ್ದ ಪರಮೇಶಿ. 'ಫರ್ಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ಟ್ ಇಂಪ್ರಷನ್' ಎಂಬಂತೆ ಮೊದಲ ಹೆಜ್ಜೆಯಲ್ಲೇ 'ಯಡವಟ್ಟು' ಎಂಬ ಹಣೆಪಟ್ಟಿ ಹಚ್ಚಕೊಂಡವನಿಗೆ ಬಾಸ್ ರಿಂದ ಆಗಾಗ ಮಹಾಮಂಗಳಾರತಿ ನಡೆಯುತ್ತಲೇ ಇತ್ತು. ಕೆಲವೊಮ್ಮೆ ತನ್ನದಲ್ಲದ ಅಥವಾ ತೀರಾ ಕ್ಷುಲ್ಲಕ ತಪ್ಪಿಗೂ ತಾರಾಮಾರಿ ಬೈಗಳು ಕೇಳಬೇಕಾಗುತ್ತಿತ್ತು. ತಿರುಗಿ ಹೇಳಲೂ ಆಗದೆ, ತೀರಾ ಸಹಿಸಿಕೊಳ್ಳಲೂ ಆಗದೇ ಬೋನಿಗೆ ಬಿದ್ದ ಕರಡಿಯಂತಾಗಿತ್ತು ಪರಮೇಶಿಯ ಸ್ಥಿತಿ. ಆದರೂ ಅವನೇನು ಸಂಪೂರ್ಣ ತೆಪ್ಪಗಿರುತ್ತಿರಲಿಲ್ಲ. ಅವಕಾಶ ಸಿಕ್ಕಾಗೆಲ್ಲಾ ಆತ್ಮೀಯ ಸಹೋದ್ಯೋಗಿಗಳೆದುರು, ಗೆಳೆಯರುದುರು ಹಾಗೂ ಮನೆಯವರೆದುರು ತನ್ನ ಬಾಸ್ ಅನ್ನು ಕ್ಷುದ್ರಾತಿಕ್ಷುದ್ರ ಜೀವಿಗಳಿಗೆ ಹೋಲಿಸಿ ತಮಾಷೆಮಾಡುವ ಮೂಲಕ ಅಷ್ಟರಮಟ್ಟಿಗೆ ತನ್ನ ಉರಿ ಕಡಿಮೆಮಾಡಿಕೊಳ್ಳುತ್ತಿದ್ದ. 

ಹೀಗಿರುವಾಗ ಅದೊಂದು ದಿನ ಅನಿರೀಕ್ಷಿತ ಘಟನೆಯೊಂದು ನಡೆದುಹೋಯಿತು. ಅದ್ಯಾವುದೋ ಅತಿ ಮುಖ್ಯ ಕಾಗದಪತ್ರವೊಂದು ಅಚಾನಕ್ಕಾಗಿ ಕಾಣೆಯಾಯಿಗಿಬಿಟ್ಟಿತು. ಪರಮೇಶಿಗೋ ಅದನ್ನು ಖುದ್ದು ಬಾಸ್ ಗೆ ಕೊಟ್ಟಂತೆ ಮಾಸಲು ಮಾಸಲು ನೆನಪು; ಆದರೆ ಅವರು ಮಾತ್ರ ನೀನದನ್ನು ಕೊಟ್ಟದ್ದೇ ಸುಳ್ಳು ಎಂದು ವಾದಿಸತೊಡಗಿದ್ದರು. ಸಾಲದ್ದಕ್ಕೆ ಎಲ್ಲರೆದುರೇ ಪರಮೇಶಿಯ ಮರೆವನ್ನು, ಬೇಜಾವಬ್ದಾರಿಗಳನ್ನು ದೊಡ್ಡ ಗಂಟಲಿನಲ್ಲಿ ಹರಾಜು ಹಾಕುತೊಡಗಿದರು. ಈ ಕುರುಕ್ಷೇತ್ರ ನೋಡಲಾಗದೆ ಎಲ್ಲರೂ ಭೂತಕನ್ನಡಿ ಹಿಡಿದುಕೊಂಡು ಹುಡುಕಲಾಗಿ, ಎಷ್ಟೆಲ್ಲಾ ಗಲಾಟೆ ಸೃಷ್ಟಿಸಿದ ಆ ಪತ್ರ ಕೊನೆಗೂ ಬಾಸ್  ಟೇಬಲ್ ಮೇಲೆ ರಾಶಿಬಿದ್ದಿದ್ದ ಕಡತಗಳ ಮಧ್ಯದಿಂದಲೇ ಎದ್ದು ಬಂತು! ಎಲ್ಲರೂ ಅಯ್ಯೋ ಪಾಪ ಎನ್ನುವಂತೆ ತನ್ನೆಡೆಗೆ ನೋಡಿದ್ದೇ ತಡ, ಅದೆಷ್ಟೋ ದಿನದಿಂದ ಸಹಿಸಿಕೊಂಡಿದ್ದ ಉಗ್ರ ಕೋಪವೆಲ್ಲಾ ತಾನೇ ಆಗಿ ಎದ್ದುನಿಂತ ಪರಮೇಶಿ. ಕೈಲಿದ್ದ ಫೈಲನ್ನು ರಪ್ ಎಂದು ಟೇಬಲ್ ಮೇಲೆ ಕುಕ್ಕಿದವನೇ "ಮುಂದಿನ ಸಲ ಮಾತನಾಡುವ ಮೊದಲು ಒಮ್ಮೆ ನಿಮ್ಮ ಕಾಲ ಬುಡ ನೋಡಿಕೊಳ್ಳಿ" ಎಂದು ಗುಡುಗಿ, ದಢಾಲ್ಲೆಂದು ಬಾಗಿಲು ತಳ್ಳಿಕೊಂಡು ನಡೆದೇಬಿಟ್ಟ. 

ಒಂದು ಕ್ಷಣದ ಆವೇಶದಲ್ಲಿ ಹಾಗೊಂದು ಮಾತಂದು ಬಂದವನಿಗೆ ನೆತ್ತಿಗೇರಿದ್ದ ಕೋಪ ಇಳಿದ ಕೂಡಲೇ ನಡುಕ ಶುರುವಾಯಿತು. ತಾನೇನೂ ಎದುರಾಡದೆಯೇ ಅಷ್ಟೆಲ್ಲಾ ಎಗರಾಡುತ್ತಿದ್ದವರು ಇನ್ನು ಮುಂದೆ ಸುಮ್ಮನಿರುತ್ತಾರೆಯೇ? ಕನ್ನಡಕದೊಳಗಿನ ತಮ್ಮೆರೆಡೂ ಹದ್ದಿನ ಕಣ್ಣುಗಳನ್ನೂ ನನ್ನ ಮೇಲೇ ನೆಟ್ಟು ತಪ್ಪುಗಳನ್ನು ಹುಡುಕುತ್ತಾರೆ. ತಾನಾಡಿದ ಮಾತಿಗೆ ಬಡ್ಡಿ ಸಮೇತ ಜಿದ್ದಿ ತೀರಿಸಿಕೊಳ್ಳುತ್ತಾರೆ! ಅವನು ಕ್ಯಾಂಟೀನಿನಲ್ಲಿ ಕೈಯ್ಯಲ್ಲಿ ಅನ್ನದ ತುತ್ತು ಹಿಡಿದು ಹೀಗೆಲ್ಲಾ ಚಿಂತಿಸುತ್ತಿದ್ದಾಗ ಆಕಾಶದಲ್ಲಿ ಅದ್ಯಾವ ದೇವರು 'ಅಸ್ತು' ಅಂದರೋ ಏನೋ, ಮತ್ತೆ ತನ್ನ ಕ್ಯಾಬಿನ್ ಗೆ ಮರಳುವ ಹೊತ್ತಿಗೆ ಅವನ ಜಂಘಾಬಲವನ್ನೇ ಉಡುಗಿಸುವಂತಹ ಸುದ್ದಿಯೊಂದು ಅವನಿಗಾಗಿ ಕಾದು ಕೂತಿತ್ತು. ಅವನು ಆಚೆ ಹೋಗುತ್ತಿದ್ದಂತೆಯೇ ಇತ್ತಕಡೆ ಬ್ಯಾಂಕಿಂದ ಫೋನ್ ಬಂತಂತೆ. ನಾಲ್ಕು ದಿನದ ಹಿಂದೆ ಯಾವುದೋ ಸಪ್ಲೈಯರ್ ಹೆಸರಿಗೆ ಅವನು ಬರೆದಿದ್ದ ಚೆಕ್ಕೊಂದು 'ಸ್ಪೆಲ್ಲಿಂಗ್ ಮಿಸ್ಟೇಕ್' ಎಂಬ ಕಾರಣಕ್ಕೆ ಬೌನ್ಸ್ ಆಗಿತ್ತು! 

ಕೊಲ್ಲಲು ಬಂದವನ ಕೈಗೆ ಕೋವಿ ಕೊಟ್ಟಂತಾಯಿತು ಪರಮೇಶಿಯ ಸ್ಥಿತಿ. ಮೊದಲೇ ಗಾಯಗೊಂಡ ಹುಲಿಯಾಗಿದ್ದ ಬಾಸ್ ಈ ಸುದ್ದಿ ಕೇಳಿ ಸಾಕ್ಷಾತ್ ಸಿಂಹಿಣಿಯೇ ಆಗಿದ್ದರು. 'ಬರಲಿ ಅವನು. ಸರಿಯಾಗಿ ಮಾಡ್ತೀನಿ!' ಎಂದು ಘರ್ಜಿಸಿದ್ದರು. ಆದರೆ ಅದೇ ಸಮಯಕ್ಕೆ ಯಾವುದೋ ಕಸ್ಟಮರ್ ಜೊತೆಗೆ ಮೀಟಿಂಗ್ ಹಾಗೂ ಲಂಚ್ ಇದ್ದಿದ್ದರಿಂದ ಅಲ್ಲಿಗೆ ಹೋಗಿದ್ದರು. ಬಂದಮೇಲೆ ಅವರು ಮಾಡುವ ಮೊದಲ ಕೆಲಸವೇ ತನಗೊಂದು ಗತಿ ಕಾಣಿಸುವುದು. ಮುಗಿದೇ ಹೋಯ್ತು ತನ್ನ ಕಥೆ!

ಪರಮೇಶಿ ನಡುಗಿಹೋದ. ಎಂದೋ ಮರೆತಿದ್ದ ಮನೆದೇವರಿಗೆ ಹರಕೆಹೊತ್ತ. ಕುಳಿತಲ್ಲಿಂದಲೇ ದೂರದಲ್ಲಿರುವ ಇಷ್ಟದೈವ ಗುಡಿಬಂಡೆ ಆಂಜನೇಯನಿಗೆ ಅಡ್ಡಬಿದ್ದ. ಯಾರೇ ಬಂದು ತನ್ನ ಡಿಪಾರ್ಟ್ ಮೆಂಟಿನ ಬಾಗಿಲು ತೆಗೆದರೂ ಅದು 'ಅವರೇ' ಎಂದೆಣಿಸಿ ಅವನ ಎದೆ ಧಸಕ್ ಎನ್ನುತ್ತಿತ್ತು. ಮುಂದಿನ ಒಂದು ಗಂಟೆಯ ಒಂದೊಂದು ನಿಮಿಷವನ್ನೂ ಎರಗಲಿರುವ ಸಿಡಿಲಿನ ಉದ್ದಗಲಗಳನ್ನು ಕಲ್ಪಿಸಿಕೊಳ್ಳುತ್ತಲೇ  ಕಳೆದುಬಿಟ್ಟ.

ಆಗ ತೆರೆಯಿತು ಬಾಗಿಲು. ಜೊತೆಗೇ ಔವ್ssssss ಎಂಬ ಭಯಾನಕ ತೇಗಿನ ಶಬ್ದ! ತನ್ನ ಪಾಲಿನ ಯಮರಾಯನ ಕೋಣ ತನ್ನ ಡಿಪಾರ್ಟ್ಮೆಂಟಿನ ಬಾಗಿಲಿನಲ್ಲಿಯೇ ಬಾಲ ಬೀಸುತ್ತಾ ನಿಂತಿದೆ ಎಂಬುದು ಗೊತ್ತಾಗಿಹೋಯಿತು ಪರಮೇಶಿಗೆ. ಕಣ್ಣು ಕೂಡಾ ಅಲುಗಿಸದೇ ತನ್ನೆದುರಿನ ಕಂಪ್ಯೂಟರ್ ನೋಡುತ್ತಾ ಕುಳಿತುಬಿಟ್ಟ. ಮುಂದೆ ಧಕ್ ಎಂದು ಆಟೋಮ್ಯಾಟಿಕ್ ಬಾಗಿಲು ಹಾಕಿಕೊಂಡ ಸದ್ದು; ಟಕ್ ಟುಕ್, ಟಕ್ ಟುಕ್ ಎಂಬ ಕಾಲ್ನಡಿಗೆ; ಕರ್ರ್... ಎಂದು ಈಸಿ ಚೇರಿನಮೇಲೆ ಕುಳಿತ ಶಬ್ದ. ಮುಂದಿನ ಎರೆಡು ನಿಮಿಷ ಅಸಹನೀಯ ಮೌನ. ಕೂಡಲೇ "ಪರಮೇಶಿ, ಬನ್ನಿ ಇಲ್ಲಿ" ಎಂಬ ಮರಣಕರೆ!

ಬಲಿಪೀಠದೆಡೆಗೆ ನಡೆಯವ ಕುರಿಯಂತೆ ನಡೆದು ಬಂದು "ಯೆಸ್ ಮ್ಯಾಡಮ್" ಎಂದು ಕೈಕಟ್ಟಿ ನಿಂತ. "ಏನ್ ಕೆಲಸ ಮಾಡ್ತೀರ್ರೀ ನೀವು????" ಎಂಬ ಘರ್ಜನೆಯನ್ನು ನಿರೀಕ್ಷಿಸಿದ್ದವನಿಗೆ ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ. "ಚೆಕ್ ಬರೆಯುವಾಗ ಹುಷಾರಾಗಿ ಬರೀರಿ ಆಯ್ತಾ? ತಪ್ಪಾದರೆ ಕ್ಯಾನ್ಸಲ್ ಮಾಡಿ. ಅದನ್ನೇ ಕಳಿಸ್ಬೇಡಿ" ತೀರಾ ತಗ್ಗಿದ, ಮೃದುವಾದ, ಸಣ್ಣನೆಯ ದನಿಯಲ್ಲಿ ನುಡಿದಿದ್ದರು, ತೀರಾ ಚಿಕ್ಕ ಮಗುವೊಂದಕ್ಕೆ ಹೇಳುವಂತೆ! ಇದು ನಿಜವೆಂದು ನಂಬುವುದಕ್ಕೆ ಪರಮೇಶಿಗೆ ನಿಮಿಷಗಳೇ ಹಿಡಿದವು. ಅದಾಗಿ ಕೆಲವೇ ನಿಮಿಷಗಳಲ್ಲಿ ಹೊರಟೇಹೋಗಿಬಿಟ್ಟರು ಪರಮೇಶಿಯ ಉರಿಗೋಪದ ಮೇಡಮ್.

ನಿಜವಾಗಿ ನಡೆದದ್ದು ಏನೆಂದು ಪರಮೇಶಿಗೆ ಗೊತ್ತಾದದ್ದೇ ಸಂಜೆ. ಕೆಲಸ ಮುಗಿಸಿ ಮನೆಗೆ ಹೊರಟವನನ್ನು ಮರೆಗೆ ಕರೆದುಕೊಂಡುಹೋದ ಆಫೀಸಿನ ಸಹಾಯಕ ಸಿಬ್ಬಂದಿಯಲ್ಲೊಬ್ಬನಾದ ರಮೇಶಣ್ಣ ಗುಟ್ಟಾಗಿ ಕೇಳಿದರು: 
"ನಿಮ್ಮ ಬಾಸ್ ಇದಾರಾ ಸರ್?" 
"ಇಲ್ಲರೀ. ಬೇಗ ಹೊರಟೋದ್ರು. ಯಾಕೆ ಏನ್ ವಿಷ್ಯ?"
"ಅಯ್ಯೋ ಯಾಕೆ ಕೇಳ್ತೀರ. ಅನಾಹುತ ಆಗೋಯ್ತು ಸರ್. ಇವತ್ತು ಬಂದಿದ್ದ ಕಸ್ಟಮರ್ಸ್ ಗಂತ ನಾನ್ ವೆಜ್ ಊಟ ತರ್ಸಿದ್ವಾ. ಅವರ ಊಟ ಮುಗಿದ್ರೂ ಒಂದು ಐಟಮ್ ಸ್ವಲ್ಪ ಜಾಸ್ತೀನೇ ಉಳಿದುಬಿಡ್ತು. ಅದ್ಕೇ ನಾನೂ, ನಮ್ ಹುಡುಗ್ರೂ ಸ್ವಲ್ಪ್ ಸ್ವಲ್ಪ ಹಾಕ್ಕೊಂಡ್ ತಿಂದ್ವಿ. ಅದೇನ್ ಹಾಕಿ ಆ ದರಿದ್ರದ ಚಿಕನ್ ಮಡಿದ್ರೋ ಏನೋ, ಸ್ವಲ್ಪ ಹೊತ್ತಿಗೇ ಎಲ್ರಿಗೂ ಹೊಟ್ಟೆಯೊಳ್ಗೆ ಗುಡಗುಡಾಂತ ಶುರುವಾಯ್ತು ನೋಡಿ, ಆಗಿಂದ ಈಗಿನ್ ತನಕ ಸುಮಾರ್ ಆರ್ಸಲ ಟಾಯ್ಲೆಟ್ ಗೆ ಹೋಗ್ಬಂದೆ. ನನ್ ಪುಣ್ಯ, ಕಸ್ಟಮರ್ಸ್ಯಾರೂ ತಿನ್ಲೀಲ ಆ ದರಿದ್ರಾನ. ಆದ್ರೆ ನಿಮ್ ಬಾಸ್ ಗೆ ಮಾತ್ರ ನಾನೇ ಒತ್ತಾಯ ಮಾಡಿ ಎರೆಡೆರೆಡ್ಸಲ ಬಡ್ಸಿ ತಿನ್ಸ್ಬಿಟ್ಟೆ ಸಾರ್! ಅದ್ಕೇ ಕೇಳ್ದೆ ಹೇಗಿದಾರೇಂತ. ಯಾರಿಗೂ ಹೇಳ್ಬೇಡಿ ಆಯ್ತಾ?" ಎಂದವನೇ ಮತ್ತೆ ಟಾಯ್ಲೆಟ್ ಕಡೆಗೆ ಓಡಿದ!

ಬಾಲಕ್ಕೆ ಅಷ್ಟೆಲ್ಲಾ ಬೆಂಕಿ ಹಿಡಿದಿದ್ದ ಆಟಂ ಬಾಂಬ್ ಸಿಡಿಯದೇ ಯಾಕೆ ಠುಸ್ಸಾಯಿತೆಂಬುದು ಆಗ ಗೊತ್ತಾಯ್ತು ಪರಮೇಶಿಗೆ. ರಮೇಶಣ್ಣನ ಒತ್ತಾಯಕ್ಕೆ ಸಿಕ್ಕಿ ದೋಷವಿದ್ದ ಚಿಕನನ್ನು ತುಸು ಹೆಚ್ಚೇ ತಿಂದಿದ್ದ ಬಾಸ್ ಗೆ ಸ್ವಲ್ಪ ಹೊತ್ತಿನಲ್ಲೇ ಹೊಟ್ಟೆಯೊಳಗೆ 'ಗುಡಗುಡ' ಆರಂಭವಾಗಿತ್ತು ಹಾಗೂ ಕ್ಯಾಬಿನ್ ಗೆ ಮರಳುವ ಹೊತ್ತಿಗದು ಉಲ್ಬಣಿಸಿತ್ತು. ತನ್ನೆದುರು ಗಟ್ಟಿಯಾಗಿ "ಏಯ್ss" ಎಂದು ಉಸುರಿದ್ದರೂ ಕುಳಿತಲ್ಲೇ 'ಅನಾಹುತ'ವಾಗಿಬಿಡುವ ಸಂಭವವಿದ್ದರಿಂದ ಮೆತ್ತಗೆ ಪಾಠಹೇಳಿ ಕಳಿಸಿಬಿಟ್ಟರು. ಆ 'ಬಾಧೆ'ಯ ನಡುವೆಯೂ ತನ್ನನ್ನು ಕರೆದು ಚೆಕ್ಕಿನ ವಿಷಯ ಮಾತನಾಡಿದ್ದರೆಂದರೆ ಅವರೊಳಗೆ ಅದೆಷ್ಟು ಕೋಪವಿದ್ದಿರಬೇಡ! ಅಂತೂ ಇಂತೂ ಚಿಕನ್ ರೂಪದಲ್ಲಿ ಬಂದು ತನ್ನನ್ನು ಬೀಸುವ ದೊಣ್ಣೆಯಿಂದ ಪಾರುಮಾಡಿದ ದೇವರಿಗೆ ಹಾಗೂ ಅದನ್ನು ತಿನ್ನಿಸಿದ ರಮೇಶಣ್ಣನಿಗೆ ಮನದೊಳಗೇ ವಂದಸಿ ಮನೆಕಡೆ ಹೆಜ್ಜೆಹಾಕಿದ ಪರಮೇಶಿ.

(ಡಿಸೆಂಬರ್ 2016ರ 'ತುಷಾರ'ದಲ್ಲಿ ಪ್ರಕಟಿತ)

ಶನಿವಾರ, ನವೆಂಬರ್ 5, 2016

ಹಾರೆನ್ನ ಹೃದಯವೇ...

ಹಾರೆನ್ನ ಹೃದಯವೇ ಆ ನೀಲ ನಭಕೆ
ನರಳುವೆಯೇಕೆ ಸೆರೆಗೆ ಸಿಕ್ಕಿ?
ನೀನೇ ಹರಡಿಕೊಂಡ ಬಲೆಯ ಹರಿದು ಹಾರಿಬಿಡು
ಬೇಕಿಲ್ಲ ಬೇರ್ಯಾರ ರೆಕ್ಕೆ.

ಕದವೇ ಇಲ್ಲದ ತೆರೆದ ಬಾಳಿದು
ಆಗಮನ, ನಿರ್ಗಮನ ಉಚಿತ;
ಕೈ ಚಾಚಿ ಬಂದಂತೇ ಕೈ ಬೀಸಿ ನಡೆದುಬಿಡು
ನಿನ್ನದೇನಿದೆ? ಎಲ್ಲ ಪೂರ್ವ ಲಿಖಿತ.

ಇರುವಷ್ಟು ಹೊತ್ತಷ್ಟೇ ಈ ಗೂಡು ನಿನದು
ಋಣ ಮುಗಿಯಿತೆಂದು ಹಾರಿಬಿಡು;
ಬಾಡಿಗೆಯ ಕೇಳದು ಸ್ವಚ್ಛಂದ ಬಾನು
ತ್ರಾಣವಿರುವಷ್ಟು ಜಗವ ಸುತ್ತಿಬಿಡು.

ಅರಿತವಗೆ ತಲೆಬಾಗಿ, ಕಿರಿಯರಿಗೆ ಗುರುವಾಗಿ,
ಹಾರಲಾಗದವಗೆ ತುತ್ತು ಗುಟಕನೀಡು;
ಹಿಗ್ಗು, ಕುಗ್ಗುಗಳಿಗೆ ಸೋಲದೇ ಸಾಗುತಿರು
ಬಾನೆಲ್ಲ ಮೊಳಗಲಿ ನಿನ್ನ ಹಾಡು.

ಸೊತಿತೇ ರೆಕ್ಕೆ? ಉಡುಗಿತೇ ತ್ರಾಣ?
ಸಾಕಿನ್ನು ಇಳಿ ಆ ಮಣ್ಣಿನೆಡೆಗೆ;
ಹಾದ ದಾರಿಯನೆಲ್ಲ ಮನದುಂಬಿ ನೆನೆದೊಮ್ಮೆ
ಒಂದಾಗಿ ಬಿಡು ಆ ಅನಂತದೊಳಗೆ.

(ತುಷಾರದ 'ಚಿತ್ರಕವನಸ್ಪರ್ಧೆ'ಯಲ್ಲಿ ಪ್ರಕಟಿತ)

ಮಂಗಳವಾರ, ಅಕ್ಟೋಬರ್ 25, 2016

ಮೊದಲ ತೊದಲಿಗೆ ಈಗ ಒಂದು ವರುಷ....!

ಇಂದು, ಒಂದು ವರುಷದ ಕೆಳಗೆ ನಾನು 'ಯಾನ' ಆರಂಭಿಸಿದ ದಿನ.... ಸಾಗರ ಬಹಳ ದೊಡ್ಡದಿದೆ, ಅಲೆಗಳ ಹೊಡೆತ ಜೋರಾಗೇ ಇದೆ, ಮುಳುಗಿ ಹೋಗುತ್ತೀನೇನೋ, ನನಗೆಲ್ಲಿದೆ ಈಜುವ ತಾಕತ್ತು?ಎಂದೆಲ್ಲಾ ಯೋಚಿಸುತ್ತಾ ದಡದಲ್ಲೇ ನಿಂತು ಅದೆಷ್ಟೋ ಸಮಯ ನೋಡುತ್ತಲೇ ಉಳಿದಿದ್ದವನು ಕೊನೆಗೂ ಧೈರ್ಯಮಾಡಿ ನನ್ನ ಪುಟ್ಟ ನೌಕೆಯ ಜೊತೆ ನೀರಿಗಿಳಿದ ದಿನ. ಈ ಒಂದು ವರುಷದಲ್ಲಿ ಸಾಗಿದ ದೂರ ಅತ್ಯಲ್ಪವಾದರೂ ಕಲಿತದ್ದು ಮಾತ್ರ ತುಂಬ.

ಬ್ಲಾಗ್ ಎನ್ನುವುದೊಂದು ಮಾಯಾಲೋಕ; ಸಣ್ಣ ಕೋಣೆಯ ನಾಲ್ಕು ಇಕ್ಕಟ್ಟು ಗೋಡೆಗಳ ನಡುವೆ ಅರೆನಿದ್ರೆಯ ಮಂಪರಿನಲ್ಲಿ ಹೊಳೆದ ಸಾಲೊಂದಕ್ಕೆ ಕೊಂಬು, ಬಾಲ ಸೇರಿಸಿ ರೂಪಿಸಿದ ಕವನವನ್ನು ದೂರದ ಅಮೇರಿಕದಲ್ಲೆಲ್ಲೋ ಕುಳಿತ ಕನ್ನಡಿಗರೊಬ್ಬರು ಓದುತ್ತಾರೆಂದರೆ ಇದು ಅದ್ಭುತವೇ ಅಲ್ವಾ? ಮೊದಲ ಬರಹವನ್ನು ಬ್ಲಾಗ್ ನ ಗೋಡೆಯಮೇಲೆ ಚಿತ್ರಿಸಿ, ನನ್ನ ಚಿತ್ತಾರವನ್ನು ನೋಡಲು ಬರುವ ಸಹೃದಯರಿಗಾಗಿ ಕಾಯುತ್ತಾ ಕೂತಿದ್ದ ಆ ಪ್ರತೀ ಕ್ಷಣವೂ ಈಗ ಮತ್ತೆ ಮರುಕಳಿಸಿದಂತೆ ಅನಿಸುತ್ತಿದೆ. 'ಯಾರು ಬರ್ತಾರೆ?' ಎನ್ನುವ ಪ್ರೆಶ್ನೆಗೆ ಉತ್ತರವೆಂಬಂತೆ ಹಲವಾರು ಓದುಗರು ಬಂದುಹೋದರು. ಪ್ರತಿದಿನ ಬ್ಲಾಗಣ್ಣನ ಬಳಿ 'ಬಂದವರ' ಬಗ್ಗೆ ವಿಚಾರಿಸಿದಾಗಲೆಲ್ಲಾ 'ನೋಡು- ನಿನ್ನೆ ಇಷ್ಟು ಜನ ಬಂದರು, ಈ ವಾರದಲ್ಲಿ ಇಷ್ಟು, ಈ ತಿಂಗಳಿನಲ್ಲಿ ಇಷ್ಟು, ಒಟ್ಟು ಇಂತಿಷ್ಟು....' ಎಂದು ಅತ್ತ ಹೆಚ್ಚೂ ಅಲ್ಲದ, ಇತ್ತ ಕಡಿಮೆಯೂ ಅಲ್ಲದ ಅಂಕೆ-ಸಂಖ್ಯೆಗಳ ತೋರಿಸುತ್ತಾ ಬಂದಿದ್ದಾನೆ. ಅವರು ಬಂದ ದಾರಿ, ಅವರ ದೇಶ ಎಲ್ಲವನ್ನೂ ತೋರಿಸಿ ಖುಷಿಪಡಿಸುತ್ತಾ ಬಂದಿದ್ದಾನೆ, ನನ್ನ ಬ್ಲಾಗಣ್ಣ.

ಕೆಲವೊಮ್ಮೆ ಈ ಬ್ಲಾಗಣ್ಣನ ಲೆಕ್ಕಾಚಾರದ ಬಗ್ಗೆ ಅನುಮಾನ ಕಾಡಿದ್ದುಂಟು. ಮೊದಲ ಪೋಸ್ಟ್ ನ ಹೊರತಾಗಿ ಉಳಿದ ಬರಹಗಳಲ್ಲಿ ಒಂದಕ್ಕೂ ಒಂದೇ ಒಂದು ಕಮೆಂಟ್ ಸಿಕ್ಕಿಲ್ಲ; ನಿಜಕ್ಕೂ ಇಷ್ಟುಜನ ನನ್ನ ಬ್ಲಾಗ್ ಓದಿರುವುದು ನಿಜಾನಾ ಎಂದು ಬ್ಲಾಗಣ್ಣನ ಲೆಕ್ಕಾಚಾರವನ್ನೇ ಅನುಮಾನಿಸಿದೆ. ತನ್ನ ಪ್ರೊಡಕ್ಟ್ ವ್ಯಾಪಾರವಾಗಲೆಂಬ ಕಾರಣಕ್ಕೆ ಗೂಗಲ್ ದೊಡ್ಡಪ್ಪನ ಕಿರಿಯ ಮಗನಾದ ಈ ಬ್ಲಾಗಣ್ಣ ಅಮೇರಿಕಾ, ಇಟಲಿ, ರಷ್ಯಾ ಎಂದೆಲ್ಲಾ ದೊಡ್ಡ ದೊಡ್ಡ ದೇಶಗಳ ಹೆಸರು ತೋರಿಸಿ ಕಾಗೆ ಹಾರಿಸುತ್ತಿಲ್ಲವಷ್ಟೇ ಎಂದು ಹುಬ್ಬು ಗಂಟಿಕ್ಕಿದೆ. ಈ ರಹಸ್ಯವನ್ನು ಬೇಧಿಸಲು ಒಂದು ಉಪಾಯ ಮಾಡಿದೆ. ಇತ್ತೀಚೆಗೆ ದುಬೈ ಸೇರಿದ ಗೆಳೆಯನೊಬ್ಬನಿಗೆ ನನ್ನ ಬ್ಲಾಗ್ ಐಡಿ ಕೊಟ್ಟು ಓಪನ್ ಮಾಡು ಎಂದೆ. ಮರುಕ್ಷಣವೇ ಯುಏಇ ಓದುಗರ ಸಂಖ್ಯೆ ಒಂದು ಜಾಸ್ತಿ ಆಯಿತು! 'ನನ್ನ ಪ್ರಾಮಾಣಿಕತೆಯನ್ನೇ ಅನುಮಾನಿಸಿದೆ ಅಲ್ವಾ' ಎಂದು ಬ್ಲಾಗಣ್ಣ ಮುಖ ಚಿಕ್ಕದು ಮಾಡಿಕೊಂಡ."ಅನುಮಾನ ಸುಳ್ಳಾದಾಗಲೇ ನಂಬಿಕೆ ಬಲವಾಗುವುದು ಬ್ಲಾಗಣ್ಣ!" ಎಂದು  ಅವನಿಗೆ ಸಮಾಧಾನ ಮಾಡಿ, ಕಾಂಪನ್ಷೇಶನ್ ಎಂದು ಹೊಸದೊಂದು ಕವನ ಪೋಸ್ಟ್ ಮಾಡಿದೆ. ಬೇಸರ ಮರೆತು ಎಂದಿನಂತೆ ನನ್ನ ಕವನವನ್ನು ಹೊತ್ತು ಪ್ರಪಂಚದಾದ್ಯಂತ ಹಬ್ಬಿಹೋದ.

ಬ್ಲಾಗ್ ಗಾಗಿಯೇ ಅಂತ ನಾನು ಬರೆಯಲಿಲ್ಲ. ಅಲ್ಲಿ-ಇಲ್ಲಿ ಪ್ರಕಟವಾದವನ್ನೇ ಎತ್ತಿ ಬ್ಲಾಗ್ ಗೆ ಹಾಕಿದೆ. ಅಂದಹಾಗೆ ಬ್ಲಾಗಣ್ಣನ ಲೆಕ್ಕ ಪುಸ್ತಕದಲ್ಲಿ ದಾಖಲಾಗಿರುವ ಕಳೆದ ಒಂದುವರ್ಷದ ಅಂಕೆ-ಸಂಖ್ಯೆಗಳ ಹೀಗಿದೆ ನೋಡಿ:
ಒಟ್ಟು ಪೋಸ್ಟ್ ಗಳು: 25
ಕವನಗಳು: 14
ಲೇಖನಗಳು: 4
ಕಥೆ: 1
ಇತರೆ: 6

ಬಂದುಹೋದವರ ಅಂಕೆ-ಸಂಖ್ಯೆ:
ಭಾರತ:1288
(ಇದರಲ್ಲಿ 25% ನನ್ನದೇ!)
ಯುನೈಟೆಡ್ ಸ್ಟೇಟ್ಸ್:264
ಫ್ರಾನ್ಸ್:111
ಯುಎಇ: 33
ರಷ್ಯಾ: 31
ಸಿಂಗಾಪೂರ್: 11
ನೆದರ್ಲ್ಯಾಂಡ್: 9
ಕೆನಡಾ: 6
ರೊಮೇನಿಯಾ: 5
ಯೂಕೆ: 4
ಒಟ್ಟು: 1762

ಈ ಬರಹ ನಿಜಕ್ಕೂ ತೀರಾ ಚಂಚಲೆ. ಥೇಟ್ 'ಅವಳ' ಮನಸ್ಸಿನಂತೆ! ತಲೆಗೆ ಎಷ್ಟೇ ಹುಳ ಬಿಟ್ಟುಕೊಂಡರೂ ಅವಳ ಅಂತರಂಗ ಅರ್ಥವಾಗುವುದೇ ಇಲ್ಲ. ನಾನಾಗಿ ಒಲಿದು ಕೈ ಹಿಡಿದಾಗ ದೂರ ಓಡುತ್ತಾಳೆ.  ಬಿಡುವಾಗಿ ಕುಳಿತು ಪೆನ್ನು- ಹಾಳೆ ಹಿಡಿದು, ಸರ್ವ ಸನ್ನದ್ಧನಾಗಿ ಪರಿಪರಿಯಾಗಿ ಕರೆದರೂ ಅವಳು ಬರುವುದೇ ಇಲ್ಲ. ಆದರೆ ಇನ್ಯಾವಾಗಲೋ ನಾನು ಗಡಿಬಿಡಿಯಲ್ಲಿ ಆಫೀಸಿಗೆ ಓಡುತ್ತಿರುವಾಗ, ಮಂಡೆಬಿಸಿ ಮಾಡಿಕೊಂಡು ಏನೋ ಮಾಡುತ್ತಿರುವಾಗ, ನಾಲ್ಕು ಜನರ ಗುಂಪಿನಲ್ಲಿ ಹರಟುತ್ತಿರುವಾಗ ಓಡಿಬಂದು ತಬ್ಬಿಕೊಂಡುಬಿಡುತ್ತಾಳೆ! ಬೇಸರದಲ್ಲೋ, ಹಿಂಜರಿಕೆಯಲ್ಲೋ, ಯಾವುದೋ ನೆನಪಿನಲ್ಲೋ ನಾನು ಕರಗಿಹೋಗುತ್ತಿರುವಾಗ ಬಳಿಬಂದು ' ನಿನ್ನ ಜೊತೆ ನಾನಿದ್ದೇನೆ' ಎಂದು ತಲೆನೇವರಿಸುತ್ತಾಳೆ. 'ಅವಳು' ನಡೆದ ದಾರಿಯಲ್ಲಿ ನಾನೊಂದು ಹೆಜ್ಜೆಯಿಟ್ಟರೆ ಸಾಕು, ನನ್ನ ಮೇಲೆ ಕವನಗಳ ಮಳೆಯನ್ನೇ ಸುರಿಸುತ್ತಾಳೆ! ಮುಗಿಯದ ಜೀವನ ಪ್ರೀತಿಯೊಂದನ್ನು ನನ್ನೊಳಗೆ ತುಂಬಿದ್ದಾಳೆ, ಈ ಬರಹವೆಂಬ ಮಾಯಗಾತಿ....

ನನ್ನ ತೊದಲು ಬರಹಗಳನ್ನು ಓದಿ, ಲೈಕ್-ಕಮೆಂಟ್ ಮಾಡಿ, ಬ್ಲಾಗ್ ಗೆ ಭೇಟಿಕೊಡುವ ಮೂಲಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನ್ನನ್ನು ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ನಾನು ಋಣಿ. ಸಾಗಬೇಕಿರುವ ದೂರ ಬಹಳವಿದೆ. ಈ ಅಂಬೆಗಾಲು ನಡೆಯಾಗಿ, ಓಟವಾಗಬೇಕಿದೆ. ಪೆನ್ನೆಂಬ ಮಂತ್ರದಂಡ ನನ್ನೊಳಗೆ ಬರೆದಿರುವ ಕನಸುಗಳು ನೂರಿವೆ. ಅವೆಲ್ಲಾ ನನಸಾದರೂ, ಆಗದಿದ್ದರೂ ನೀಮ್ಮೆಲ್ಲರ ಪ್ರೋತ್ಸಾಹ ಮಾತ್ರ ಹೀಗೇ ಇರಲಿ.

ಸ್ನೇಹಾಭಿಲಾಷೆಯೊಂದಿಗೆ
ವಿನಾಯಕ ಅರಳಸುರಳಿ





ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...