ಶನಿವಾರ, ಜನವರಿ 19, 2019

ನನ್ನ ಪ್ರೀತಿಯೇ ಸುಳ್ಳಾದರೆ..‌.


ಪ್ರೀತಿಯ ಕಡಲೇ...
ಹೇಗಿದ್ದೀಯ? ಎಷ್ಟು ದಿನವಾಯ್ತು ನಿನ್ನನ್ನು ನೋಡಿ? ಅಂದು ಆ ಸಂಜೆಗತ್ತಲಿನ ಮೊಬ್ಬಿನಲ್ಲಿ ತೊರೆದು ಬರುವಾಗ ಹೊರಳಿ ನೋಡಿದ್ದೇ ಕೊನೆ, ಮತ್ತೆ ನಾವು ಭೇಟಿಯಾಗುತ್ತಿರುವುದು ಇಂದೇ. ಹೇಳು.. ಹೇಗಿದ್ದೀ ಈಗ? ನಾನಿಲ್ಲದ ನಿನ್ನ ಸಂಜೆಗಳು ಹೇಗಿವೆ? ಅದೆಷ್ಟು ಹೊಸ ಜನ ಬಂದರು ನಿನ್ನ ತೀರಕ್ಕೆ? ಅದೆಷ್ಟು ಪ್ರೇಮಿಗಳ ಹೆಸರ ದಾಖಲಿಸಿಕೊಂಡೆ ನಿನ್ನ ಮರಳೆದೆಯ ಮೇಲೆ? ಎಷ್ಟೆಲ್ಲ ಮರಳ ಗೂಡುಗಳು ಎದ್ದವು? ಎಷ್ಟನ್ನು ಉಳಿಸಿದೆ? ಎಷ್ಟನ್ನು ಕೆಡವಿದೆ? ಹೇಳಿಬಿಡು... ಏಕೋ ಎಲ್ಲ ಕೇಳಬೇಕೆನಿಸುತ್ತಿದೆ.
ಯೋಚಿಸುತ್ತೇನೆ: ನಿನಗೆ ನಾನು ತುಂಬಾ ದೂರ. ಆದರೆ ನನಗೆ ನೀನು ಎಷ್ಟೊಂದು ಸನಿಹ! ನೀನು ಹೀಗೆ ಇಷ್ಟವಾಗಿರುವುದಾದರೂ ಯಾಕೆ? ಅವಳ ಊರಿನವನೆಂಬ ಒಂದೇ ಕಾರಣಕ್ಕೇ? ಅವಳಾಡುವ ಭಾಷೆ, ಅವಳಿಷ್ಟದ ಬಣ್ಣ, ಅವಳೂರಿಗೆ ಹೋಗುವ ಬಸ್ಸು, ಅವಳ ಹಳ್ಳಿಯ ಹೆಸರು, ಅವಳು ನಡೆದ ಜಾಗ, ಅವಳ ಮುಡಿಯಿಂದ ಜಾರಿದ, ನಾನು ಜೋಪಾನವಾಗಿ ಎತ್ತಿಟ್ಟುಕೊಂಡ ಹೂವು... ಹೀಗೆ 'ಅವಳದು' ಎನ್ನುವ ಟ್ಯಾಗ್ ಅಂಟಿಸಿಕೊಂಡಿರುವುದೆಲ್ಲವೂ ನನಗೆ ಇಷ್ಟವೇ. ನೇರ ನನ್ನ ಕನಸಿಗೇ ನಡೆದು ಬರುವಷ್ಟು ಪ್ರಿಯವಾದವೇ ಅವೆಲ್ಲವೂ. ಆದರೆ, ಯಾಕೆಂದು ಕೇಳಬೇಡ, ನೀನು ಕೇವಲ‌ ಅವಳೂರಿನವ ಮಾತ್ರವಲ್ಲ. ನನ್ನ ಪಾಲಿಗೆ ನೀನೇ ಅವಳು.. ಅವಳೇ ನೀನು.
ಇಪ್ಪತೈದು ವರ್ಷಗಳ ಕೆಳಗೆ ಇದೇ ದಿನದಂದು ಮೊದಲ ಬಾರಿಗೆ ಜಗತ್ತಿಗೆ ಕಣ್ಣು ತೆರೆದ ಅವಳು ಕೇಳಿಸಿಕೊಂಡ ಮೊದಲ ಮೊರೆತ ನಿನ್ನದು. ಶ್ರಾವಣದ ಮಳೆಗೆ ಉಕ್ಕುಕ್ಕಿ ಹಾಡುತ್ತಿದ್ದ ನಿನ್ನ ಭೋರ್ಗರೆತವನ್ನು, ತೊಟ್ಟಿಲಿನಲ್ಲೇ ಮಲಗಿ, ಇಷ್ಟಗಲ ಕಣ್ಬಿಟ್ಟು ಕೇಳಿಸಿಕೊಂಡು ಖುಷಿಯಾಗಿ ಕೈಕಾಲು ಬಡಿಯುತ್ತಿದ್ದಳಂತೆ ಹೌದಾ? ಮೊದಲ ಸಲ ಹೂಹೂವಿನ ಫ್ರಾಕು ತೊಟ್ಟು, ಅಪ್ಪನ ತೋಳಿನಲ್ಲಿ ನಿನ್ನ ತೀರಕ್ಕವಳು ಬಂದ ದಿನ ಯಾವುದು? ಅವಳ ಪುಟಾಣಿ ಕಾಲನ್ನು ಸ್ಪರ್ಶಿಸಿದ ನಿನ್ನ ಮಧುರ ಅಲೆ ಯಾವುದು? ತನ್ನ ತೊದಲು ಭಾಷೆಯಲ್ಲವಳು ನಿನ್ನನ್ನು ಏನೆಂದು ಕರೆದಳು? ತನ್ನ ಮುದ್ದು ಕೈಯಿಂದ ನಿನ್ನ ಅಲೆಯನ್ನು ಮುಟ್ಟಿ ನಕ್ಕ ಆ ಸ್ಪರ್ಷ ಹೇಗಿತ್ತು? ದಯವಿಟ್ಟು ಹೇಳು...
ಇಂದು ಅವಳ ಜನುಮದಿನ‌. ಆಶ್ಚರ್ಯವಾಗುತ್ತದೆ. ಹುಟ್ಟಿ ಬೆಳೆದ ಇಷ್ಟು ವರ್ಷಗಳ ಕಾಲ ಸೂರ್ಯ ಹೀಗೆ ಹುಟ್ಟಿ ಹಾಗೆ ಮುಳುಗುವ ಉಳಿದ ದಿನಗಳಂತೆಯೇ ಸಾಮಾನ್ಯವಾಗಿದ್ದ ಈ ದಿನಾಂಕ ಇದ್ದಕ್ಕಿದ್ದಂತೆಯೇ ಇಷ್ಟೊಂದು ವಿಶೇಷವಾಗಿದ್ದಾದರೂ ಹೇಗೆ? ಈ ಹೊಸಿಲ ದೀಪ, ಗುಡಿಯ ದೇವರೆದುರಿನ ಪ್ರಾರ್ಥನೆ, ಮಧ್ಯರಾತ್ರಿ ಹನ್ನೆರೆಡಾಗುತ್ತಿದ್ದಂತೆಯೇ ಹುಟ್ಟಿಕೊಂಡ, ಹೊಸಬದುಕೇ ಆರಂಭವಾಯಿತೇನೋ ಎಂಬಂತಹ ಸಂಭ್ರಮ, ಅಳಿಸಿ ಅಳಿಸಿ ಬರೆದ, ಕೊನೆಗೂ ಅವಳಿಂದ ಉತ್ತರ ಬಾರದ ಶುಭಾಶಯ ಸಂದೇಶ.. ಇವೆಲ್ಲ ಎಲ್ಲಿದ್ದವು ಇಷ್ಟು ದಿನ? ಯಾಕಾಗಿ ನಿದ್ರಿಸುತ್ತಿದ್ದ ಈ ಬದುಕಿನೊಳಗೆ ಕನವರಿಕೆಗಳಂತೆ ಬಂದು ಸೇರಿಕೊಂಡವು?
ಅವಳಿಗೆ ಗೊತ್ತಿಲ್ಲ ಕಡಲೇ.. ಆಡಿದ ಆ ಒಂದು ಮಾತಿನೊಳಗೆ ಹೇಳದೇಹೋದ ಸಾವಿರ ಮಾತುಗಳಿವೆ. ಕಳಿಸಿದ ಒಂದು ಸಂದೇಶದೊಳಗೆ ಅಳಿಸಿದ ನೂರು ಸಾಲುಗಳಿವೆ. ರಿಂಗಾದ ಒಂದು ಕರೆಯ ಹಿಂದೆ ರಿಂಗಣಿಸುವ ಮೊದಲೇ ತುಂಡರಿಸಿದ ಅದೆಷ್ಟೋ ಕರೆ ಮಾಡದೇ ಹೋದ ಪ್ರಯತ್ನಗಳಿವೆ. ನಾನು ಧರಿಸುವ ಒಂದೊಂದು ಬಟ್ಟೆಯಲ್ಲೂ ಅವಳ ಮಧುರ ನೆನಪುಗಳಿವೆ. ಅವಳೂ ಅದೇ ಬಣ್ಣದ ಬಟ್ಟೆ ಧರಿಸಿ ಬಂದ ದಿನ ಯಾವುದೋ ಅದ್ಭುತವೇ ಘಟಿಸಿಹೋಯಿತೇನೋ ಎಂಬಂತೆ ಅನುಭವಿಸಿದ ಪೆದ್ದ ಆಚ್ಚರಿಗಳಿವೆ. ಕಛೇರಿಯ ಯಾವುದೋ ರಿಜಿಸ್ಟರ್ ನಲ್ಲಿ ನಮ್ಮಿಬ್ಬರ ಹೆಸರು ಜೊತೆಯಾಗಿ ಬಂದಿದ್ದು ನೋಡಿ ಮದುವೆಯ ಕರೆಯೋಲೆಯೇ ಅಚ್ಚಾದಂತೆ ಸಂಭ್ರಮಿಸಿದ ಮೂರ್ಖ ಸಂತೋಷವಿದೆ. ನಾನು ಮಾತನಾಡದ ದಿನ ಅವಳ ಮುಖದಲ್ಲಾದ ಬದಲಾವಣೆಯನ್ನು 'ಪ್ರೀತಿ' ಎಂದುಕೊಂಡ ಹುಚ್ಚುತನವಿದೆ. ಈ ಬದುಕಿನ ಎಲ್ಲ ಹಾದಿಗಳೂ ಅವಳತ್ತಲೇ ಸಾಗುತ್ತಿರುವ ಕಾಕತಾಳೀಯವನ್ನು 'ಋಣಾನುಬಂಧ' ಎಂದು ನಂಬಿದ ದಿವ್ಯ ದುರಂತವಿದೆ...
ಪಾಪ, ಇದರಲ್ಲಿ ಅವಳ ತಪ್ಪೇನೂ ಇಲ್ಲ. ಹಣದಲ್ಲಿ, ಗುಣದಲ್ಲಿ, ಧೈರ್ಯ, ಸೌಂದರ್ಯಗಳಲ್ಲಿ ತನಗಿಂತ ಮಿಗಿಲಾದವನನ್ನು ಬಯಸುವುದು ಹೆಣ್ಣಿನ ಸಹಜ ಗುಣ. ಹಾಗಿರುವಾಗ ಅವಳ ಒಂದು ಮಾತಿಗೆ ಸೋಲುವ, ಚಿಕ್ಕ ಮುಗುಳ್ನಗುವಿಗೇ ಕರಗಿ ಹೋಗುವ, ಅವಳ ಹೆಸರು ಕೇಳಿದೊಡನೆಯೇ ಸ್ತಬ್ಧವಾಗಿಬಿಡುವ, ಅವಳೆದುರು ತೊದತೊದತೊದಲುವ, ಯಾವ ರೀತಿಯಲ್ಲೂ ಅವಳಿಗಿಂತ ಮಿಗಿಲಲ್ಲದವನನ್ನು ಹೇಗೆ ತಾನೇ ಇಷ್ಟಪಟ್ಟಾಳು?
ಅವಳಂತೂ ಉತ್ತರಿಸುವುದಿಲ್ಲ. ನೀನಾದರೂ ಹೇಳು ಸಾಗರವೇ... ಯಾವುದೋ ನಿನ್ನೆಗಳಲ್ಲಿ ಅವಳನ್ನು ಅಳಿಸಿದ ನೋವುಗಳು ಇಂದಿಗೂ ನನ್ನನ್ನು ಕಾಡುವುದೇಕೆ? ಪ್ರೀತಿಯ ಅಪ್ಪ ಇನ್ನಿಲ್ಲವಾದ ಕ್ಷಣ ಅವಳ ಕಣ್ಣಿಂದ ಜಾರಿ ಹೋದ ಕಂಬನಿಯ ಗುರುತನ್ನು ಹುಡುಕಿ ಅಳಿಸಬೇಕೆಂಬ ಈ ಹುಚ್ಚು ಹಂಬಲವೇಕೆ? ಪ್ರೇಮದ ಹೆಸರಲ್ಲಿ ಯಾರೋ ಮಾಡಿದ ಗಾಯವನ್ನು, ಅವಳೊಳಗೆ ಇಂದಿಗೂ ಉಳಿದಿರಬಹುದಾದ ಅದರ ವೇದನೆಯನ್ನು ರಮಿಸಬೇಕೆಂದು ಅನಿಸುವುದೇಕೆ? ಯಾರೇ ಅವಳ ಕುರಿತು ಚಿಕ್ಕ ಮಾತಂದರೂ ನಾನು ನೋಯುವುದೇಕೆ? ಅವಳೂರಿನಿಂದ ಬಂದವರೆಲ್ಲ ಯಾವುದೋ ದಿವ್ಯ ಸಂದೇಶವನ್ನು ಹೊತ್ತುತಂದ ಪತ್ರಗಾರರಂತೆ ಕಾಣುವುದೇಕೆ? ಅವಳ ಒಡನಾಡುವವರ ಕಂಡಾಗ ಅವಳ ಕುರಿತಾದ ನೂರು ಪ್ರೆಶ್ನೆಗಳ ಕೇಳಬೇಕೆನಿಸುವುದೇಕೆ? ಈ ವೇದನೆ, ನಿವೇದನೆಗಳೆಲ್ಲ ಸಾವಿರಾರು ವರ್ಷಗಳೇ ಕಳೆದರೂ ಸಿಗದ ಚಂದ್ರಮನಿಗಾಗಿ ಉಕ್ಕುತ್ತಲೇ ಉಳಿದಿರುವ ನಿನಗಲ್ಲದೇ ಇನ್ಯಾರಿಗೆ ಅರ್ಥವಾಗಬೇಕು ಹೇಳು?
ನನಗೆ ಹೆಮ್ಮೆಯಿದೆ.. ಕಿರಿಬೆರಳ ಸ್ಪರ್ಷಕ್ಕೂ ನಿಲುಕದೇ ಹೋದ ಜೀವವೊಂದನ್ನು ಇಷ್ಟೆಲ್ಲ ಆರಾಧಿಸಿದ್ದಕ್ಕೆ. ನಿರಾಕರಿಸುವ ಕ್ಷಣದಲ್ಲಾದರೂ ನನ್ನ ಹೆಸರು ಅವಳ ನಾಲಿಗೆಯಿಂದ ಹಾದು ಬಂದಿದ್ದಕ್ಕೆ. ಕೈ ಜಾರುವ ಕಟ್ಟಕಡೆಯ ಕ್ಷಣದ ತನಕ ಕಾಯುತ್ತಲೇ ನಿಂತಿದ್ದಕ್ಕೆ. ಕೈ ಜಾರಿದ ಮೇಲೂ ಪ್ರೇಮಿಯಾಗಿಯೇ ಉಳಿದಿದ್ದಕ್ಕೆ. ಹೌದು.. ನನಗೆ ಹೆಮ್ಮೆಯಿದೆ.
ಇನ್ನೇನು ಸ್ವಲ್ಪವೇ ದಿನ.. ತನ್ನ ಹೊಸಬಾಳ ಸಂಗಾತಿಯೊಂದಿಗೆ ಅವಳಿಲ್ಲಿಗೆ ಬರುತ್ತಾಳೆ. ಅವನ ಕೈಗೆ ಕೈ ಬೆಸೆದು ನಿನ್ನೀ ತೀರದುದ್ದಕ್ಕೂ ನಡೆಯುತ್ತಾಳೆ. ಅಂದು ಅಪ್ಪನ ಜೊತೆಗಿದ್ದಾಗಿನ ಅದೇ ಸಂಭ್ರಮದಲ್ಲಿ ನಿನ್ನ ತೆರೆಗಳನ್ನು ಸ್ಪರ್ಷಿಸಿ ನಲಿಯುತ್ತಾಳೆ. ನೀನೂ ಅವರ ಪಾದಗಳನ್ನು ತೊಳೆತೊಳೆದು ಹಾರೈಸುತ್ತೀ. ಅದಕ್ಕೂ ಮುನ್ನ..
ಒಮ್ಮೆ ಹೇಳು ಸಮುದ್ರವೇ.. ಆ ಸಿರಿವಂತ ನನ್ನಷ್ಟು ಅವಳನ್ನು ಪ್ರೀತಿಸಿದ್ದಾನಾ? ಅವಳು ಬಾರದ ದಾರಿಗಳಲ್ಲಿ ನಿಂತು ಕಾದುಕಾದು ಸೋತಿದ್ದಾನಾ? ಅವಳ ಹಳೆಯ ನೋವೊಂದನ್ನು ತನ್ನದೇ ಎಂಬಂತೆ ನೆನೆದು ಕೊರಗಿದ್ದಾನಾ? ಅವಳಿಲ್ಲದ ಇಂತಹಾ ಸಂಜೆಯೊಂದರಲ್ಲಿ ನಿನ್ನೀ ಹತಾಶ ಬಂಡೆಯ ಮೇಲೆ ಕುಳಿತು ಅವಳ ಬಾಲ್ಯದ ಕಥೆ ಕೇಳಿದ್ದಾನಾ?
ಹೇಳು ಕಡಲೇ.. ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ?
-ವಿನಾಯಕ ಅರಳಸುರಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...