ಶನಿವಾರ, ಜನವರಿ 19, 2019

ಪ್ರೀತಿಸಿ ಸೋಲುವ ದೇವಯಾನಿಯರು...


ಏಕೋ ದೇವಯಾನಿ ಬಹಳ ಕಾಡುತ್ತಾಳೆ.
"ನೀವು ನನ್ನ ಬುದ್ಧಿಯಾದರೆ ಅವನು ನನ್ನ ಹೃದಯ!"
"ನಿನಗೆ ನಾನು ಬೇಕೋ, ಇಲ್ಲಾ ಆ ಕಚ ಬೇಕೋ?" ಎಂಬ, ಜಗತ್ತಿನ ಬಹುತೇಕ ಹೆಣ್ಣು ಹೆತ್ತ ತಂದೆಯರು ಕೇಳುವ ಪ್ರೆಶ್ನೆಯನ್ನೇ ಕೇಳುವ ಶುಕ್ರಾಚಾರ್ಯರಿಗೆ ಮಗಳು ದೇವಯಾನಿ ಕೊಡುವ ಉತ್ತರವಿದು. ರಾಕ್ಷಸರ ಗುರುಗಳಾದ ಶುಕ್ರಾಚಾರ್ಯರಿಗೆ ಸತ್ತವರನ್ನು ಮತ್ತೆ ಬದುಕಿಸುವ ಮೃತ ಸಂಜೀವಿನಿ ವಿದ್ಯೆ ತಿಳಿದಿರುತ್ತದೆ. ಅದನ್ನು ಕಲಿಯಲೋಸುಗ ದೇವಲೋಕದಿಂದ ಇಳಿದುಬರುವವನೇ ದೇವಗುರು ಬೃಹಸ್ಪತಿಗಳ ಮಗನಾದ ಕಚ. ಅವನ ಮುಖ್ಯ ಉದ್ದೇಶವೇ ಅದಾದರೂ ಅದಕ್ಕಾಗಿ ಅವನು ಗೆಲ್ಲಬೇಕಾದುದು ಶುಕ್ರಾಚಾರ್ಯರನ್ನ. ಲೋಕಕಲ್ಯಾಣಾರ್ಥವಾದ ಆ ತಂತ್ರವೇನೋ ಸರಿಯಾದ್ದೇ. ಆದರೆ ಆ ಮಹತ್ಕಾರ್ಯಕ್ಕೆ ದಾಳವಾಗಿ ಬಳಕೆಯಾಗುವವಳು ಮಾತ್ರ ಮುಗ್ಧ ಪ್ರೀತಿಯ ದೇವಯಾನಿ!
ದೇವಯಾನಿ ಪ್ರೀತಿಸುತ್ತಾಳೆ. ಋಷಿಪುತ್ರನಾದ ಸ್ಪುರದ್ರೂಪಿ ಕಚನನನ್ನು ಮೊದಲ ನೋಟದಿಂದಲೇ ಇನ್ನಿಲ್ಲದಂತೆ ಆರಾಧಿಸುತ್ತಾಳೆ. ಮತ್ತೆ ಮತ್ತೆ ರಾಕ್ಷಸರು ಅವನನ್ನು ಕೊಂದು ಬಿಸಾಡಿದಾಗಲೂ ಭೋರಿಟ್ಟು ಅಳುತ್ತಾಳೆ. "ಅವನನ್ನು ಬದುಕಿಸಿಕೊಡು" ಎಂದು ಶುಕ್ರಾಚಾರ್ಯರ ಬಳಿ ಮಗುವಿನಂತೆ ಹಠ ಹಿಡಿಯುತ್ತಾಳೆ. ಪ್ರೀತಿಯ ಮಗಳ ಕಣ್ಣೀರನ್ನು ನೋಡಲಾಗದ ತಂದೆ ತಮಗೆ ಮಾತ್ರ ತಿಳಿದ ಮೃತ ಸಂಜೀವಿನಿ ವಿದ್ಯೆಯನ್ನು ಬಳಸಿ ಕಚನನ್ನು ಬದುಕಿಸುತ್ತಾರೆ. ಮೊದಲ ಬಾರಿ ಅಸುರರು ಅವನನ್ನು ಕತ್ತರಿಸಿ ತೋಳಗಳಿಗೆಸೆದಾಗ, ಎರೆಡನೇ ಬಾರಿ ಸಮುದ್ರಕ್ಕೆಸೆದಾಗ ಅವರ ಕೆಲಸ ಸುಲಭವಾಗಿಯೇ ಆಗುತ್ತದೆ. ಆದರೆ ಮೂರನೇ ಬಾರಿ ಮತ್ತೂ ತಲೆ ಓಡಿಸುವ ರಾಕ್ಷಸರು ಕಚನನ್ನು ಕೊಂದು, ಅವನ ದೇಹವನ್ನು ಸುಟ್ಟು ಬೂದಿಮಾಡಿ ಮಧ್ಯದಲ್ಲಿ ಹಾಕಿ ಶುಕ್ರಾಚಾರ್ಯರಿಗೇ ಕುಡಿಸುತ್ತಾರೆ. ಹೊರಹೋದ ಕಚ ಸಂಜೆಯಾದಾಗಲೂ ಮರಳಿ ಬಾರದಿದ್ದಾಗ ದೇವಯಾನಿ ಮತ್ತೆ ಅಳತೊಡಗುತ್ತಾಳೆ. ಮತ್ತೆ ತಂದೆಯೆದುರು ಕಚನನ್ನು ಹುಡುಕಿ ತರುವಂತೆ ಭೋರಿಡುತ್ತಾಳೆ. ಈ ಬಾರಿ ಶುಕ್ರಾಚಾರ್ಯರು ಕೂಗಿ ಕರೆದಾಗ ಕಚ ಅವರ ಹೊಟ್ಟೆಯಿಂದಲೇ ಓಗೊಡುತ್ತಾನೆ. ಕೊನೆಗೆ ಹೊಟ್ಟೆಯಲ್ಲಿರುವಂತೆಯೇ ಅವನಿಗೆ ಮೃತ ಸಂಜೀವಿನಿ ಮಂತ್ರ ಕಲಿಸಿ, ನಂತರ ಅವನಿಗೆ ಜೀವನೀಡುತ್ತಾರೆ. ಅವರ ಹೊಟ್ಟೆ ಸೀಳಿಕೊಂಡು ಹೊರಬರುವ ಕಚ ಅದೇ ವಿದ್ಯೆಯನ್ನು ಬಳಸಿ ಅವರಿಗೆ ಮರುಜೀವ ಕೊಡುತ್ತಾನೆ.
ಕಥೆಯ ಕಾಡುವ ಭಾಗ ಶುರುವಾಗುವುದೇ ಇಲ್ಲಿ. ಬಂದ ಕೆಲಸ ಪೂರೈಸಿಕೊಂಡ ಕಚ ಹೊರಟುನಿಲ್ಲುತ್ತಾನೆ‌. ಅಷ್ಟು ಸುಲಭದಲ್ಲಿ ಬಾರದ ಲೋಕಕ್ಕೆ ಹೊರಟುನಿಂತ ಅವನ ಬಳಿ ದೇವಯಾನಿ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ. ನೀನೆಂದರೆ ತನಗೆ ಅದೆಷ್ಟು ಪ್ರೀತಿಯೆಂಬುದನ್ನು ಪರಿಪರಿಯಾಗಿ ವರ್ಣಿಸುತ್ತಾಳೆ. ತಂದೆಯ ಬಳಿ ಮಾಡಿದಂತೆಯೇ ಹಠಮಾಡುತ್ತಾಳೆ. ನೀನಿಲ್ಲದೆ ಬದುಕಲಾರೆ ಎನ್ನುತ್ತಾಳೆ. ಕಣ್ಣೀರಾಗುತ್ತಾಳೆ. ಬಿಟ್ಟು ಹೋಗಬೇಡ ಎಂದು ಗೋಗರೆಯುತ್ತಾಳೆ. ಆದರೆ ಅಚಲನಾದ ಕಚ ಯಾವುದಕ್ಕೂ ಕರಗುವುದಿಲ್ಲ. ಹತಾಶಳಾದ ದೇವಯಾನಿ "ಮೃತ ಸಂಜೀವಿನಿ ನಿನಗೆ ಉಪಯೋಗಕ್ಕೆ ಬಾರದೇ ಹೋಗಲಿ" ಎಂದು ಶಪಿಸುತ್ತಾಳೆ. ಆಗಲಾದರೂ ಅವನು ತನ್ನನ್ನು ಒಪ್ಪುವನೇನೋ ಎಂದು ಅವನತ್ತ ಆಸೆಯಿಂದ ನೋಡುತ್ತಾಳೆ. ಆದರೆ ಅವಳಿಗೇ ತಿರುಗಿ ಶಪಿಸುವ ಕಚ ತಿರುಗಿಯೂ ನೋಡದೆ, ಬದುಕೇ ನೀನೆಂದು ಪ್ರೀತಿಸಿದ ದೇವಯಾನಿಯ ಪಾಲಿಗೆ ಕಾಡುವ ನೋವನ್ನಷ್ಟೇ ಉಳಿಸಿ ಹೊರಟೇಹೋಗುತ್ತಾನೆ.
ಹಾಗೆ ನೋಡಿದರೆ ಕಚನನ್ನು ಪ್ರೀತಿಸಿದ ದೇವಯಾನಿ ನೊಂದಿದ್ದೇ ಹೆಚ್ಚು. ಪ್ರತೀ ಬಾರಿಯೂ ಅವನು ಮನೆಯಿಂದಾಚೆ ಹೋಗುವಾಗ ಆತಂಕದಿಂದಲೇ ಕಳಿಸಿಕೊಡುತ್ತಾಳೆ. ಹೊರ ಹೋದ ಅವನು ಕತ್ತಲಾದರೂ ಮರಳಿ ಬಾರದಾದಾಗ, ಕಾಡೆಲ್ಲ ಅಲೆದು ಹುಡುಕಿದರೂ ಅವನು ಕಾಣದೇ ಹೋದಾಗ, ಅವನನ್ನು ಬದುಕಿಸಲು ತಂದೆ ಹಿಂದೆಮುಂದೆ ಯೋಚಿಸಿದಾಗ.... ದೇವಯಾನಿ ಅತ್ತೇ ಅಳುತ್ತಾಳೆ. ಪ್ರೀತಿಸದ ಕೆಲಕ್ಷಣಗಳ ಹೊರತಾಗಿ ಪ್ರೇಮವೆಂಬುದು ಅವಳ ಬದುಕಿನಲ್ಲಿ ಸಂಭ್ರಮವನ್ನು ಚಿಗುರಿಸುವುದೇ ಇಲ್ಲ. ಆದರೂ ಸಹಾ ದೇವಯಾನಿ ಪ್ರೀತಿಸುತ್ತಲೇ ಹೋಗುತ್ತಾಳೆ. ಇಡೀ ಅಸುರ ಜಗತ್ತೇ ಅವನನ್ನು ತನ್ನಿಂದ ದೂರ ಮಾಡಲು ಹವಣಿಸುವಾಗಲೂ ಎದೆಯೊಳಗೆ ಕನಸುಗಳನ್ನಿಟ್ಟುಕೊಂಡು ಕನವರಿಸುತ್ತಾಳೆ. ಪ್ರತೀ ಬಾರಿ ಅವನು ನಿರ್ಜೀವವಾದಾಗಲೂ ಅವನನ್ನು ಬದುಕಿಸಿಕೊಳ್ಳುತ್ತಾಳೆ. ಹಾಗೆ ತಾನು ಬದುಕಿಸಿಕೊಂಡ ಹುಡುಗ ತನಗೇ ಸಿಗುತ್ತಾನೆಂದು ಸಂಭ್ರಮಿಸುತ್ತಾಳೆ. ಅವನಿಗಾಗಿ ಸುರಿಸುವ ಒಂದೊಂದು ಕಣ್ಣೀರ ಹನಿಯೂ ಮುಂದೊಂದು ದಿನ ಸಂಭ್ರಮದ ಮುತ್ತಾಗುತ್ತದೆಂದು ಭ್ರಮಿಸುತ್ತಾಳೆ.
ಕೊನೆಗೆ ಮಾಯದ ನೆನಪುಗಳ ಹೃದಯದಲ್ಲೇ ಮರೆಮಾಡಿಕೊಂಡು, ಕಚನ ಶಾಪದಂತೆ ಋಷಿಪುತ್ರನಲ್ಲದ, ಕ್ಷತ್ರಿಯನಾದ ಯಯಾತಿಯನ್ನು ಮದುವೆಯಾಗುತ್ತಾಳೆ.
************
ದೇವಯಾನಿ.. ದೇವಲೋಕದಂದಿಳಿದುಬಂದ ತನ್ನನ್ನು, ಹಿಂದೆಂದೋ ಬೇರಾಗಿದ್ದ ತನ್ನ ಬದುಕಿನ ಭಾಗವೇ ಮರಳಿ ಬಂತೇನೋ ಎಂಬಂತೆ ನಲ್ಮೆಯಿಂದ ಬರಮಾಡಿಕೊಂಡ ದೇವಯಾನಿ.. ಮೊಟ್ಟ ಮೊದಲ ನೋಟದಲ್ಲೇ ತನ್ನೊಡನೆ ಬದುಕಿನ ಕಟ್ಟ ಕಡೆಯ ಹೆಜ್ಜೆಯನ್ನು ನಡೆಯಬೇಕೆಂದು ನಿರ್ಧರಿಸಿ ಸಾವಿರ ಕನಸುಕಂಡ ದೇವಯಾನಿ.. ಪ್ರತಿದಿನ ತಾನು ಮನೆಯಿಂದ ಹೊರಡುವಾಗ ಭಾರ ಹೃದಯದಿಂದ ಬೀಳ್ಕೊಡುತ್ತಿದ್ದ ಹೂವಿನಂತಹಾ ದೇವಯಾನಿ.. ಸಂಜೆ ಮರಳುವ ಹೊತ್ತಿಗೆ ಮೈಯೆಲ್ಲ ಹೃದಯವಾಗಿ ಕಾದು ನಿಂತಿರುತ್ತಿದ್ದ ಪ್ರೇಮ ಮೂರ್ತಿ ದೇವಯಾನಿ.. ಅಸುರರ ಕೈಲಿ ದಾರುಣವಾಗಿ ಹತ್ಯೆಯಾದ ತನ್ನನ್ನು ಮತ್ತೆ ಮತ್ತೆ ಬದುಕಿಸಿಕೊಂಡ ದೇವಯಾನಿ.. ಹೆತ್ತ ತಂದೆಯ ಪ್ರಾಣವನ್ನೂ ಪಣಕ್ಕಿಟ್ಟು ತಾನೆಂಬ ಮೋಸಗಾರನನ್ನು ಉಳಿಸಿಕೊಂಡ ದೇವಯಾನಿ.
ಹಿಡಿ ಪ್ರೀತಿಯೊಂದಲ್ಲದೆ ಮತ್ತಾವ ಸೌಭಾಗ್ಯವನ್ನೂ ಬಯಸದೆ ತನ್ನನ್ನು ಇಷ್ಟೆಲ್ಲ ಆರಾಧಿಸಿದ ದೇವಯಾನಿ..
ಯಾಕೆ ಕಚನ ದೃಷ್ಟಿಗೆ ದೇವಯಾನಿ ಹೀಗೆ ಕಾಣಲಿಲ್ಲ? ಯಾಕೆ ಕೊನೆಗೂ ಅವನಿಂದ ಅವಳನ್ನು ಪ್ರೀತಿಸಲಾಗಲೇ ಇಲ್ಲ? ತನ್ನನ್ನು ಇನ್ನಿಲ್ಲದಂತೆ ಪ್ರೀತಿಸಿದ ಜೀವ ಎದುರಲ್ಲಿ ನಿಂತು ಕೈಚಾಚಿದಾಗಲೂ ಏಕವನು ಕರಗಲಿಲ್ಲ? ಒಂದು ಹೃದಯದಲ್ಲಿ ಅಷ್ಟೊಂದು ಉತ್ಕಟವಾದ ಜ್ಯೋತಿಯನ್ನುರಿಸಿದ ಪ್ರೀತಿ ಅದೇಕೆ ಇನ್ನೊಂದು ಮನದಲ್ಲಿ ಸಣ್ಣ ಕಿಡಿಯನ್ನೂ ಹಚ್ಚದೇ ನಂದಿ ಹೋಯಿತು?
ಪ್ರೆಶ್ನೆಗಳು ಮೃತ ಕಚನಂತೆಯೇ ಎದ್ದೆದ್ದು ಬಂದು ಕಾಡುತ್ತವೆ.
ಕಚನ ದೃಷ್ಟಿ ಅಚಲವಾಗಿತ್ತು. ಅವನಿಗೆ ಸಾಧ್ಯತೆ-ಅಸಾಧ್ಯತೆಗಳ ಅರಿವಿತ್ತು. ಕರ್ತವ್ಯ ಪ್ರಜ್ಞೆ ಸ್ಪಷ್ಟವಾಗಿತ್ತು. ಕಾರ್ಯವನ್ನು ಈಡೇರಿಸಿಕೊಳ್ಳುವ ಜಾಣತನವಿತ್ತು. ಆದರೆ ದೇವಯಾನಿ? ಅವಳು ಹಾಗಲ್ಲ. ಅವಳಿಗೆ ತಿಳಿದಿದ್ದುದು ಒಂದೇ.. ಪ್ರೀತಿಸುವುದು. ಸರಿ-ತಪ್ಪು, ಸಾಧ್ಯತೆ-ಅಸಾಧ್ಯತೆ, ದೈವಿಕತೆ-ರಾಕ್ಷಸತೆ, ನಿಜ-ಮೋಸ.. ಇವೆಲ್ಲವುಗಳಾಚೆಗೆ ನಿರ್ಮಲ ಹೃದಯದಿಂದ ಪ್ರೀತಿಸುವ ಮುಗ್ಧತೆಯೊಂದೇ ಅವಳಲ್ಲಿದ್ದುದು. ಬಹುಷಃ ಮುಗ್ಧವಾದ ಹೃದಯವೊಂದಲ್ಲದೆ ಮತ್ತಾರಿಗೂ ಜಗತ್ತಿನಲ್ಲಿ ಇಷ್ಟೊಂದು ಉತ್ಕಟವಾಗಿ ಪ್ರೀತಿಸಲಿಕ್ಕೆ ಸಾಧ್ಯವಿಲ್ಲವೇನೋ ಎಂಬಂತೆ ಪ್ರೀತಿಸಿದ ದೇವಯಾನಿ ಪ್ರೀತಿಸಿ ಮೋಸಹೋದ ಜಗತ್ತಿನೆಲ್ಲ ಮನಸ್ಸುಗಳ ಪ್ರತೀಕವಾಗಿ ಉಳಿದುಹೋದಳು.
************
ದೇವಯಾನಿ ಇಂದಿಗೂ ಜೀವಂತವಾಗಿದ್ದಾಳೆ. ಆಧುನಿಕ ಕಲಿಯುಗುದಲ್ಲೂ ತನ್ನಂತೆಯೇ ಮೋಸ ಹೋಗುವ ಮುಗ್ಧ ಹೃದಯಗಳ ನಿಶ್ಯಬ್ಧ ಬಿಕ್ಕುಗಳಲ್ಲಿ ಉಸಿರಾಡಿಕೊಂಡಿದ್ದಾಳೆ. ಅವನ ರೂಪಕ್ಕೋ, ಜಾಣತನಕ್ಕೋ, ಮಾತಿನಲ್ಲಿನ ಸರಸಕ್ಕೋ, ಎಂದೆಂದೂ ಕೈ ಬಿಡನೆಂಬ ದಿವ್ಯ ನಂಬಿಕೆಗೋ ಸೋತು ಕರಗಿದ, ತನ್ನಂಥವರೇ ಆದ ಕೋಟ್ಯಾಂತರ ದೇವಯಾನಿಯರಲ್ಲಿ ಹಂಚಿಹೋಗಿದ್ದಾಳೆ. ಬಿಟ್ಟು ಹೋಗಲೆಂದೇ ಬಳಿಬರುವ ಕಚನಿಂದ ಘಾಸಿಗೊಳ್ಳಲೆಂದೇ ಅವನನ್ನು ಅಪಾರವಾಗಿ ಪ್ರೀತಿಸಿಕೊಂಡಿದ್ದಾಳೆ. ಆ ಋಷಿಪುತ್ರನಂತೆ ಯಾವ ಮಹದುದ್ದೇಶವಿಲ್ಲದೆಯೂ ಸಹಾ ಅವನಿಗಿಂತ ಕಠೋರವಾಗಿ ತಿರಸ್ಕರಿಸಿ ಹೋಗುವನಿಗೆಂದೇ ಜಾರಲಿರುವ ಕಂಬನಿಗಳ ಕಾದಿಟ್ಟುಕೊಂಡಿದ್ದಾಳೆ.
ಕೊನೆಗೆ ಅವನದೇ ಶಾಪದಂತೆ, ತನಗೆ ಜೊತೆಯಾಗುವ ಯಾವುದೋ ಯಯಾತಿಯಲ್ಲಿ ಮತ್ತೆ ಮತ್ತೆ ಕರಗಿ ಅಮರಳಾಗುತ್ತಿದ್ದಾಳೆ.
(ಮಾನಸದಲ್ಲಿ ಪ್ರಕಟಿತ)
-ವಿನಾಯಕ ಅರಳಸುರಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...