ಗುರುವಾರ, ಜನವರಿ 24, 2019

ಗೋಡೆ

"ಈಗ್ಲೇ ಕಟ್ತೀನಿ ಗೋಡೇನ. ಅದ್ಹೆಂಗೆ ನಮ್ಮನೆ ಅಂಗ್ಳಕ್ಕೆ ಕಾಲಿಡ್ತೀರೋ ನಾನೂ ನೋಡ್ತೀನಿ!"

ವಿಶು ಬೆಚ್ಚಿ ಎಚ್ಚರಾದ. ಕೋಣೆಯ ತುಂಬಾ ನೂರಾರು ಕರಡಿಗಳು ತುಂಬಿಕೊಂಡಂತಹಾ ಕತ್ತಲು. ಪಕ್ಕದಲ್ಲಿ ಮಲಗಿರುವ ಅಮ್ಮನ ಕುತ್ತಿಗೆಗಾಗಿ ತಡಕಾಡಿದ. ಸಿಗಲಿಲ್ಲ. ಇಷ್ಟು ಬೇಗ ಬೆಳಗಾಗಿಹೋಯ್ತಾ? ಆದರೆ ದಿನಾ ಬೆಳಗ್ಗೆ ಬರುವಂತೆ ಕಿಟಕಿಯಿಂದ ಬೆಳಕೇಕೆ ಬರ್ತಿಲ್ಲ? ಯೋಚಿಸುತ್ತಿರುವಾಗಲೇ  ಕೇಳಿತು, ಮತ್ತೊಂದು ಧ್ವನಿ:

"ನೀನೂ ಅಷ್ಟೇ. ಅದ್ಹೇಗೆ ನಮ್ಮ ಅಂಗಳದಲ್ಲಿ ಕಾಲಿಡುತ್ತೀಯೋ ನಾನೂ ನೋಡ್ತೀನಿ!"
ಇದು ಅಪ್ಪನ ಧ್ವನಿ. ಅಂಗಳದಿಂದ ಕೇಳುತ್ತಿದೆ.... "ಅಮ್ಮಾ..." ಮತ್ತೆ ತಡಕಾಡಿದ. ಯಾವ ಉತ್ತರವೂ ಬರಲಿಲ್ಲ. ಗಾಬರಿಯಾಯಿತು. ಗವ್ವೆನ್ನುವ ಕತ್ತಲನ್ನೇ ದಿಟ್ಟಿಸಿದ. ಗಾಢಾಂಧಕಾರದೊಳಗೆ ಯಾವ್ಯಾವುದೋ ಆಕೃತಿಗಳು ನಾಟ್ಯವಾಡುತ್ತಿರುವಂತೆ ತೋರಿತು. "ಅಮ್ಮಾssssss" ಎಂದು ಕೂಗುತ್ತಾ ನೇರ ಅಂಗಳಕ್ಕೇ ಓಡಿಬಂದ. 

ಈಚೆ ಅಂಗಳದಲ್ಲಿ ಅಪ್ಪ, ಆಚೆ ಅಂಗಳದಲ್ಲಿ ದೊಡ್ಡಪ್ಪ. ಇಬ್ಬರೂ ಒಬ್ಬರ ಕೈಗೊಬ್ಬರು ಸಿಗದಷ್ಟು ದೂರದಲ್ಲಿ ನಿಂತಿದ್ದರು. ಅಮ್ಮ, ದೊಡ್ಡಮ್ಮ, ಕೆಲಸದಾಳುಗಳಾದ ಸೀನು, ಮಾದು, ಬಾಬು ಎಲ್ಲರೂ ಇದ್ದರು.

"ಅದು ಸರ್ಕಾರೀ ಜಾಗ. ನಿಮ್ಮಪ್ಪನ ಸ್ವತ್ತೇನೂ ಅಲ್ಲ!"
ದೊಡ್ಡಪ್ಪ ಘೀಳಿಟ್ಟರು.

"ಅದೂ ಅಷ್ಟೇ. ಸರ್ಕಾರೀ ಜಾಗಾನೇ. ನಿಮ್ಮಪ್ಪ ಮಾಡಿಟ್ಟ ಅಸ್ತಿಯೇನೂ ಅಲ್ಲ!"
ಅಪ್ಪ ಘರ್ಜಿಸಿದ.

ಇಬ್ಬರ ಅಪ್ಪನೂ ಒಬ್ಬರೇ ಅಲ್ವಾ? ವಿಶೂಗೆ ಏನೂ ಅರ್ಥವಾಗಲಿಲ್ಲ. ಸುತ್ತ ಕತ್ತಲು ಹಾಗೇ ಇದೆ. ಇನ್ನೂ ಬೆಳಗಾಗಿಲ್ಲ. ಯಾಕೆ ಇಬ್ಬರೂ ಜಗಳಾಡುತ್ತಿರಬಹುದು?

"ಬಾಬೂ, ತಗೊಂಬಾ ಇಟ್ಟಿಗೆ, ಸಿಮೆಂಟು; ಕಟ್ಟು ಗೋಡೇನ. ಇನ್ನರ್ಧ ಗಂಟೇಲಿ ಮುಗೀಬೇಕು. ಆಕಡೆ ಮನೆಯ ಒಂದು ಕಸಾನೂ ನಮ್ಮಂಗಳಕ್ಕೆ ಬರಬಾರ್ದು!" ದೊಡ್ಡಪ್ಪ ದೊಡ್ಡದನಿಯಲ್ಲಿ ಆದೇಶವಿತ್ತರು. ಬಾಬು, ಸೀನು, ಮಾದು ಎಲ್ಲರೂ ದಡಬಡಾಯಿಸಿ ಓಡಿದರು. ಮಾದು ಇಟ್ಟಿಗೆ ತಂದ. ಸೀನು ಸಿಮೆಂಟು ಕಲಸಿದ. ಬಾಬು ಗೋಡೆಕಟ್ಟತೊಡಗಿದ. ವಿಶು ಕುತೂಹಲದಿಂದ ನೋಡುತ್ತಾ ನಿಂತ. ಮೊದಲು ನೆಲಮಟ್ಟದ ಸಾಲಾಗಿ, ಈಗಷ್ಟೇ ಭೂಮಿಯಿಂದೆದ್ದುಬಂದ ಚಿಗುರಿನಂತೆ ಮೂಡಿಬಂತು; ನೋಡನೋಡುತ್ತಿದ್ದಂತೇ ಎದೆಮಟ್ಟಕ್ಕೆ ಬೆಳೆದು, ಕೊನೆಗೆ ಆಚೆಗಿರುವುದೇನನ್ನೂ ನೋಡಲಾಗದಂತೆ ರಾತ್ರೋರಾತ್ರಿ ಬೆಳೆದುನಿಂತಿತು, ಗೋಡೆ.

                       ******************

"ಚಲ ಚಯ್ಯ ಚಯ್ಯ ಚಯ್ಯ......"

ಗೋಡೆಯಾಚೆಗಿನ ದೊಡ್ಡಪ್ಪನ ಮನೆಯಂಗಳದಲ್ಲಿ ಹಾಡುತ್ತಿತ್ತು... ಅಭಿಯ ಹಾಡುವ ಫೋನು! ವಿಶು ತನ್ನ ಕೆಂಪು ಡಯಲ್ ಫೋನಿನ ಗುಂಡಿಗಳನ್ನು ಒಂದೊಂದಾಗಿ ಒತ್ತಿದ. ಊಹೂಂ, ಯಾವುದೂ ಹಾಡಲಿಲ್ಲ. 
ಸೀದಾ ಅಡಿಗೆಮನೆಗೆ ಓಡಿದ. 

"ಅವರ ತೋಟಕ್ಕೆ ಹೋಗುವಾಗ ನಿಮ್ಮ ಅಂಗಳದಿಂದಾನೇ ಹೋಗಬೇಕು. ನೀವು ಪೇಟೆಗೆ ಹೋಗೋದಾದ್ರೆ ಅವರ ಅಂಗಳದಲ್ಲೇ ಹಾಯಬೇಕು. ಜರೂರತ್ತು ಇಬ್ಬರಿಗೂ ಇದೆ. ಸ್ವಲ್ಪ ಹೊಂದಿಕೊಂಡು ಹೋಗ್ಬಾರ್ದಾ?"
ಮೆತ್ತಗಿನ ದನಿಯಲ್ಲಿ ಕೆಲಸದಾಳು ರತ್ನ ಅಮ್ಮನಿಗೆ ಹೇಳುತ್ತಿದ್ದಳು. 
"ಹೌದು ಮಾರಾಯ್ತಿ. ಈಗ ನೋಡು, ಎರೆಡೂ ಮನೆಯವ್ರೂ ಇರೋ ನೇರ ದಾರೀನ ಬಿಟ್ಟು ಅಲ್ಲೆಲ್ಲೋ ದಿಬ್ಬ ಹತ್ತಿ ಹಾರ್ಬೇಕಾಗಿದೆ. ಸೊಪ್ಪು, ಹೊರೆ, ದರಗು ತರೋಕೆ, ಹಿಂಡಿ ಮೂಟೆ ಹೊತ್ತು ಬರೋಕೆ ಎಲ್ಲದಕ್ಕೂ ತೊಂದರೇನೇ. ಮನೆಯ ಗಂಡಸರಿಗೇ ತಾಳ್ಮೆಯಿಂದ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳೋ ಸಹನೆ ಇಲ್ಲಾಂದ್ರೆ ನಾವ್ತಾನೇ ಏನು ಮಾಡೋಣ ಹೇಳು?"
ಅಮ್ಮ ಮತ್ತಷ್ಟು ತಗ್ಗಿದ ದನಿಯಲ್ಲಿ ಉತ್ತರಿಸಿದಳು.

"ಅಭಿಯ ಫೋನಿನಂತೆ ನನ್ನ ಫೋನು ಯಾಕೆ ಹಾಡೋದಿಲ್ಲ ಅಮ್ಮಾ?"
ಅಜ್ಜಿಗೆ ಅರಿವೆಯ ಚಿಂತೆಯಾದರೆ ವಿಶಾಲನಿಗೆ ತನ್ನ ಫೋನಿನ ಚಿಂತೆ.

"ಇದರಲ್ಲಿ ಸ್ಪೀಕರ್ ಇಲ್ಲ"

"ಹಾಗಾದ್ರೆ ನಂಗೂ ಸ್ಪೀಕರ್ ಇರೋ ಫೋನು ಬೇಕು"

"ತಲೆ ತಿನ್ಬೇಡ ವಿಶು. ಮೊನ್ನೆತಾನೇ ಜಾತ್ರೇಲಿ ಹಠಮಾಡಿ ಆ ಕೆಂಪು ಫೋನು ತಗೊಂಡೆ. ಅದು ಇಷ್ಟು ಬೇಗ ಸಾಕಾಯ್ತಾ? ಅದ್ರಲ್ಲೇ ಆಡ್ಕೋ ಹೋಗು."

ಪೆಚ್ಚುಮೋರೆ ಹಾಕಿಕೊಂಡು ಅಂಗಳಕ್ಕೆ ಬಂದ. ಮುಂದಿನಸಲ ಜಾತ್ರೆಗೆ ಹಾಡುವ ಫೋನನ್ನೇ ತಗೊಳ್ತೀನಿ, ಹಸಿರು ಬಣ್ಣದ್ದು! 
ಹಾಗಂದುಕೊಂಡು ಅಲ್ಲಿ ಅನಾಥವಾಗಿ ಬಿದ್ದುಕೊಂಡಿದ್ದ ಕೆಂಪು ಡಯಲ್ ಫೋನನ್ನು ಎತ್ತಿಕೊಂಡ. ಒಂದೊಂದೇ ಬಟನ್ ಒತ್ತುತ್ತಾ ತಾನೇ ಹಾಡತೊಡಗಿದ:
"ಚಯ್ಯೋ... ಚಯ್ಯೋ.. ಚಯ್ಯೋ...
ಚಲ ಚಯ್ಯೋ ಚಯ್ಯೋ ಚಯ್ಯೋ....."

                    **************

ಅಪ್ಪ-ದೊಡ್ಡಪ್ಪನ ಜಗಳ ನಿಂತಿತ್ತು, ಜೊತೆಗೆ ಮಾತುಕತೆಯೂ. ಅಭಿಯೂ ಮೊದಲಿನಂತೆ ತನ್ನ ಜೊತೆ ಆಡಲು ಬರುತ್ತಿರಲಿಲ್ಲ. ಮೊನ್ನೆ "ರಾತ್ರೆ ಚಿಕ್ಕಮ್ಮ ಬರ್ತಾರೆ. ಹಾಡುವ ಫೋನು ತರ್ತಾರೆ. ನಾಳೆ ನಿನ್ನ ಕೆಂಪು ಫೋನೂ ತಗೊಂಬಾ, ಒಟ್ಟಿಗೇ ಆಡೋಣ" ಎಂದಿದ್ದ. ಅಷ್ಟರಲ್ಲಿ ಹೀಗಾಯ್ತು. ಅದರೂ ನಿನ್ನೆ ಮಧ್ಯಾಹ್ನ ಎಲ್ಲರೂ ಮಲಗಿದ್ದಾಗ ಯಾರಿಗೂ ಗೊತ್ತಾಗದಂತೆ ನಮ್ಮನೆ ಅಂಗಳಕ್ಕೆ ಬಂದಿದ್ದ, ತನ್ನ ಹಾಡುವ ಫೋನಿನ ಜೊತೆ! ತಾನೂ ಕೆಂಪು ಫೋನು ಹಿಡಿದುಕೊಂಡು ಓಡಿದ್ದೆ. ಅವನಿಗೆ ತನ್ನ ಫೋನಿಗಿಂತಲೂ ಈ ಡಯಲ್ ಫೋನಿನಮೇಲೇ ಆಸೆ ಜಾಸ್ತಿ. ಇಬ್ಬರೂ ಅದಲುಬದಲಾಯಿಸಿಕೊಂಡು ಆಡತೊಡಗಿದ್ದೆವು. ಅಂಗೈಯ್ಯಲ್ಲಿ ಹಿಡಿಯಬಹುದಾದಷ್ಟು ಪುಟ್ಟ ಗಾತ್ರ, ಹಸಿರು ಬಣ್ಣ, ತುದಿಯಲ್ಲೊಂದು ಎಲ್ಲೀಡಿ ಬಲ್ಪು... ಎಷ್ಟು ಚೆಂದ ಇದೆ ಅವನ ಫೋನು! ಪ್ರತೀ ಬಟನ್ ಕೂಡಾ ಹೊಳೆಯತ್ತದೆ! ಮೆತ್ತಗೆ ಕೈಯ್ಯಲ್ಲಿ ಹಿಡಿದುಕೊಂಡು ಇನ್ನೇನು ಅದರ ಬಟನ್ ಒತ್ತಬೇಕು, ಅಷ್ಟರಲ್ಲಿ ಫಾಲ್ಗುಣಿ ದೊಡ್ಮಮ್ಮ ಬಂದುಬಿಟ್ರು!

"ಕತ್ತೆ! ಎಷ್ಟುಸಲ ಹೇಳಿಲ್ಲ ಇಲ್ಲಿಗೆ ಬರ್ಬೇಡ ಅಂತ? ಕೆಟ್ಟಬುದ್ದಿ ಮಾಡ್ತೀಯಾ?" 
ಬೈದಿದ್ದು ತನಾಗಾ? ಅಭಿಗಾ? ಗೊತ್ತಾಗುವ ಮೊದಲೇ ಫೋನನ್ನು ತನ್ನಿಂದ ಕಸಿದುಕೊಂಡು, ಅಭಿಯ ಕಿವಿ ಹಿಡಿದು ದರದರಾಂತ ಎಳೆದುಕೊಂಡು ಹೋದರು. ಆಮೇಲೆ ತುಂಬಾ ಹೊತ್ತು ಅಭಿ ಅಳೋದು ಕೇಳ್ತಾನೇ ಇತ್ತು. ಮತ್ತೆ ಅವನು ಈ ಕಡೆ ಬರಲೇ ಇಲ್ಲ.

                         ****************

ಎತ್ತರದ ಗೋಡೆಯಾಚೆಗಿನ ದೊಡ್ಡಪ್ಪನ ಮನೆ ಮಾಯಾಬಜಾರಿನಂತೆ ಅನಿಸುತ್ತಿತ್ತು ವಿಶಾಲನಿಗೆ. ಅಲ್ಲಿ ಏನೆಲ್ಲಾ ಇದೆ! ಗಿರ್ರನೆ ತಿರುಗಿ ನಿಮಿಷಗಳಲ್ಲಿ ಬಟ್ಟೆ ತೊಳೆದುಕೊಡುವ ಮೆಶೀನ್ ಇದೆ. ತಣ್ಣಗೆ ಐಸ್ ಕ್ರೀಮ್ ಮಾಡಿಕೊಡುವ ಫ್ರಿಜ್ ಇದೆ. ತಮ್ಮನೆಯ ಟೀವಿಯಂತೆ ಕೇವಲ ಡಿಡಿ ಒನ್ ಮಾತ್ರ ಬರುವ ಟೀವಿಯಲ್ಲ ಅವರದ್ದು; ಅದರಲ್ಲಿ ಹತ್ತಾರು ಚಾನಲ್ ಗಳು. ದಿನಾ ಸಂಜೆ ಆರಕ್ಕೆ ಗೊಂಬೆ ಆಟ ಬರುತ್ತೆ ಅದರಲ್ಲಿ. ಎಷ್ಟು ಚಾನ್ಸ್ ಅಭಿಗೆ! ಆಡೋಕೆ ಹತ್ತಾರು ಆಟಿಕೆಗಳಿದಾವೆ. ಅವನ ಅಮ್ಮನ ಅಕ್ಕತಂಗಿಯರು ಪ್ರತೀಸಲ ಬರುವಾಗಲೂ ಅವನಿಗೆ ಏನಾದರೂ ತರುತ್ತಲೇ ಇರ್ತಾರೆ. ರಿಮೋಟ್ ಕಾರು, ಪೋಕ್ಲ್ಯಾನು, ಲೇಸರ್ ಲೈಟು, ಮಾತಾಡೋ ಗೊಂಬೆ..... ಜೊತೆಗೆ ಬಣ್ಣಬಣ್ಣದ ಬ್ಯಾಗಡೆಗಳ ಚಾಕಲೇಟುಗಳು ಬೇರೆ. ಎಷ್ಟೋಸಲ ಅವನ ಜೊತೆ ಆಡುತ್ತಿದ್ದಾಗ ಅವನನ್ನು ಮಾತ್ರ ಒಳಗೆ ಕರೆದು ಚಾಕ್ಲೇಟನ್ನೋ ಅಥವಾ ಸ್ಪೆಶಲ್ ಆಗಿ ಮಾಡಿದ ತಿಂಡಿಯನ್ನೋ ಕೊಡುತ್ತಿದ್ದರು. "ಇಲ್ಲೇ ಕೂತು ತಿನ್ಕಂಡು ಹೋಗು" ಅನ್ನುತ್ತಿದ್ದರಂತೆ. ಪಾಪ ಅಭಿ, ಕೆಲವೊಮ್ಮೆ ಅವರಿಗೆ ಗೊತ್ತಾಗದಂತೆ ಸಣ್ಣ ಚೂರೊಂದನ್ನು ತಂದು ಕೊಡುತ್ತಿದ್ದ. ಆ ಚಿಕ್ಕ ತುಂಡೇ ಎಷ್ಟು ರುಚಿಯಿರುತ್ತದೆ! ಒಳಗಿಟ್ಟುಕೊಂಡರೆ ಬಾಯ್ತುಂಬಾ ಸಿಹಿ-ಸಿಹಿ. ಇನ್ನು ಪೂರ್ಣ ಚಾಕ್ಲೇಟು ಅದೆಷ್ಟು ಸಿಹಿಯಿದ್ದಿರಬೇಡ?

ಅಪ್ಪ ಹೇಳುತ್ತಿದ್ದ. ದೊಡ್ಡಪ್ಪ ಮೊದಲು ಹೀಗಿರಲಿಲ್ಲವಂತೆ. ಚಿಕ್ಕವರಿದ್ದಾಗ ಅವರಿಗೆ ಕೊನೆಯ ತಮ್ಮನಾದ ಅಪ್ಪನ ಮೇಲೆ ತುಂಬಾ ಪ್ರೀತಿಯಿತ್ತಂತೆ. ಶಾಲೆಗೆ ಹೋಗುವಾಗ ಯಾವ್ಯಾವುದೋ ಹಣ್ಣೆಲ್ಲಾ ಕೊಯ್ದು ಕೊಡುತ್ತಿದ್ದರಂತೆ. ಅಜ್ಜ ತನ್ನನ್ನು ತೀರ್ಥಹಳ್ಳಿಯ ತೆಪ್ಪೋತ್ಸವದ ಜಾತ್ರೆಗೆ ಕರೆದೊಯ್ದಿಲ್ಲವೆಂದು ಅಪ್ಪ ಅಳುತ್ತಾ ಕುಳಿತಿದ್ದಾಗ ದೊಡ್ಡಪ್ಪನೇ ಸೈಕಲ್ನಲ್ಲಿ ಕೂರಿಸಿಕೊಂಡು, ಇಪ್ಪತ್ತು ಕಿಲೋಮೀಟರ್ ಸೈಕಲ್ ತುಳಿದು, ತೀರ್ಥಹಳ್ಳಿಯಲ್ಲಿ ಜಾತ್ರೆ ತೋರಿಸಿಕೊಂಡು ಬಂದಿದ್ದರಂತೆ. ನಂತರ ಅವರು ಬೆಂಗಳೂರಿಗೆ ಹೋದಮೇಲೆ ಪ್ರತೀಸಲ ಬರುವಾಗಲೂ ಅಪ್ಪನಿಗೆಂದು ರೇಡಿಯೋ, ಶೂ, ಸೆಂಟ್... ಹೀಗೆ ಏನಾದರೂ ಒಂದು ತರುತ್ತಲೇ ಇದ್ದರಂತೆ. "ಅತ್ತಿಗೆಯನ್ನು ಮದುವೆಯಾಗಿದ್ದೇ ಆಗಿದ್ದು, ಅಣ್ಣ ಬದಲಾಗಿಹೋದ" ಎನ್ನುತ್ತಾ ಅಪ್ಪ ನಿಟ್ಟುಸಿರಾಗುತ್ತಿದ್ದ. ಅತ್ತ ದೊಡ್ಡಪ್ಪನೂ ಅಷ್ಟೇ "ಶಂಕ್ರು ಒಳ್ಳೆಯವನೇ. ಆ ಗೌರಿ ಅವನ ತಲೆ ಕೆಡಿಸಿದಳು!" ಎನ್ನುತ್ತಿದ್ದರು. ಈ ಒಳ್ಳೆಯವರು, ಕೆಟ್ಟವರು, ಕೆಡಿಸುವವರು, ಕೆಟ್ಟವರು.... ಇವಲ್ಲರ ತಾಕಲಾಟದ ನಡುವೆ ಕೆಡವಲಾಗದ ಗೋಡೆಯೊಂದು ಬೆಳೆದು ಅಣ್ಣ ಅತ್ತ, ತಮ್ಮ ಇತ್ತ ಆಗಿದ್ದರು.

                    *****************

ಗೋಡೆ ಅಷ್ಟೇನೂ ಗಟ್ಟಿಯಿರಲಿಲ್ಲ. ಮಾರನೇ ವರ್ಷ ಮಳೆಗಾಲದಲ್ಲಿ ಅದರ ಮೇಲಿನದೆರೆಡು ಸಾಲು ಮುರಿದುಬಿತ್ತು. ಅದೇ ಮಳೆಗಾಲದಲ್ಲಿ ಅಜ್ಜ ತೀರಿಕೊಂಡ. ಅಜ್ಜ ಇದ್ದಷ್ಟು ದಿನ ಬೇರೆಬೇರೆಯಾಗಿದ್ದ ಅವನ ಮಕ್ಕಳು ಅವನ ಅಪರಕರ್ಮಗಳಿಗಾಗಿ ಒಂದಾದರು. ಸಾಮಾನು-ಸರಂಜಾಮುಗಳ ಸಾಗಾಣಿಕೆಗಾಗಿ ಗೋಡೆಯ ಮಧ್ಯದಲ್ಲೊಂದಿಷ್ಟು ಜಾಗವನ್ನು ಒಡೆದು ಬಾಗಿಲಿನಂತೆ ಮಾಡಲಾಯಿತು. ಎಷ್ಟೋ ದಿನಗಳ ನಂತರ ವಿಶಾಲ್-ಅಭಿ ಜೊತೆಯಾಗಿ ಅಂಗಳದಲ್ಲಿ ಆಡಿದರು. ಕಾರ್ಯಗಳೆಲ್ಲ ಮುಗಿದಮೇಲೂ ಕೆಡವಿದ್ದ ಜಾಗವನ್ನು ಮತ್ತೆ ಕಟ್ಟುವಷ್ಟು ರೋಶಾವೇಶ ದೊಡ್ಡಪ್ಪನಲ್ಲಾಗಲೀ, ಅಪ್ಪನಲ್ಲಾಗಲೀ ಇದ್ದಂತೆ ಕಾಣಲಿಲ್ಲ. ಸ್ವತಃ ತಾವಾಗಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುವುದು, ಒಬ್ಬರ ಮನೆಗೊಬ್ಬರು ಹೋಗಿಬರುವುದು ಮಾಡುತ್ತಿರಲಿಲ್ಲವಾದರೂ ಹಾಗೆ ಮಾಡದಂತೆ ತಮ್ಮ ಹೆಂಡತಿ, ಮಕ್ಕಳನ್ನೇನೂ ತಡೆಯಲಿಲ್ಲ. ತನಗಾಗಲೀ, ಅಭಿಗಾಗಲೀ ಮೊದಲಿನಂತೆ ಕಳ್ಳಹೆಜ್ಜೆಯಿಡುತ್ತಾ ಗೋಡೆ ದಾಟುವ ಅಗತ್ಯವಿರಲಿಲ್ಲ. ದೊಡ್ಡಮ್ಮನಾಗಲೀ, ಅಮ್ನನಾಗಲೀ ತಮ್ಮನ್ನು ಆಚೆ ಮನೆಯ ಅಂಗಳದಲ್ಲಿ ನೋಡಿ, ಮುಂಗುಸಿಯನ್ನು ಕಂಡ ಹಾವಿನಂತೆ ಭುಸುಗುಟ್ಟುತ್ತಿರಲಿಲ್ಲ. ಪ್ರತೀ ವರ್ಷ ಮಳೆಗಾಲಕ್ಕೂ ಗೋಡೆ ಇಷ್ಟಿಷ್ಟಾಗಿ ಬೀಳುತ್ತಲೇ ಹೋಯಿತು. ಎರೆಡು ಮನೆಯವರೂ ಬಿದ್ದ ಇಟ್ಟಿಗೆಗಳನ್ನು ಎತ್ತಿ ಪಕ್ಕಕ್ಕೆಸೆದು ಮುನ್ನಡೆದರು, ಮತ್ತೆ ಕಟ್ಟುವ ಪ್ರಯತ್ನ ಮಾಡದೇ.

                    *****************

ಎರೆಡು ದಶಕಗಳು ಕಳೆದವು. ವಿಶಾಲನ ಮದುವೆಯಾಗಿ ವರ್ಷ ಕಳೆದಿತ್ತು. ವಾರದ ಹಿಂದಷ್ಟೇ ಅಭಿಯ ಮದುವೆಯೂ ಆಯಿತು. ಎರೆಡೂ ಮದುವೆಯಲ್ಲಿ, ಎರೆಡೂ ಮನೆಯವರು ಸಡಗರದಿಂದ ಓಡಾಡಿದರು. ಅದೊಂದು ಸಂಜೆ ಮದುಮಕ್ಕಳನ್ನು ಕಾರು ಹತ್ತಿಸಿ ವಿಶಾಲ್ ಮರಳಿ ಮನೆಯತ್ತ ನಡೆದ. ದೊಡ್ಡಪ್ಪನ ಮನೆಯಂಗಳದಿಂದ ತನ್ನ ಮನೆಯಂಗಳಕ್ಕೆ ದಾಟುವಾಗ ಕಾಲಿಗೆ ತಗುಲಿ ಇಟ್ಟಿಗೆಯೊಂದು ಧಡ್ಡೆಂದು ಉರುಳಿತು. ಅದನ್ನು ಎತ್ತಿ ಬದಿಗೆಸೆಯಲೆಂದು ಬಗ್ಗಿದವನ ಕಣ್ಣು ಗೋಡೆಯ ಮೇಲೆ ಬಿತ್ತು.

ಗೋಡೆ... ರಾತ್ರೋರಾತ್ರಿ ಎದ್ದುನಿಂತಿದ್ದ ಗೋಡೆ....  ಅಣ್ಣ-ತಮ್ಮಂದಿರ ಮನೆ-ಮನಗಳ ನಡುವೆ ಬೆಳೆದುಕೊಂಡಿದ್ದ ಗೋಡೆ..... ರಕ್ತ ಸಂಬಂಧವನ್ನೇ ಬೇರಾಗಿಸಿದ್ದ ಗೋಡೆ... ಎಳೆಯ ಸ್ನೇಹದ ನಡುವೆ ಬೇಲಿಯಾಗಿದ್ದ ಗೋಡೆ...

ಅದಿಂದು ಗೋಡೆಯಾಗಿಯೇ ಉಳಿದಿರಲಿಲ್ಲ!

ಅಲ್ಲೀಗ ಇದ್ದದ್ದು ಒಂದೇ ಸಾಲು..... ಅಂದು, ಆ ಕಲಹದ ಗಾಢಾಂಧಕಾರದಲ್ಲಿ ಕಟ್ಟಿದ್ದ ಮೊಟ್ಟಮೊದಲ ಸಾಲು... ಉರುಳಬೇಕಾದ ಕಟ್ಟಕಡೆಯ ಸಾಲು... ಅದನ್ನೇ ದಿಟ್ಟಿಸಿ ಮುಗುಳ್ನಕ್ಕ. 
"ದಾಯಾದಿಗಳ ಕಾಲ ಮುಗಿಯಿತು ಗೋಡೆಯೇ. ಇನ್ನೇನಿದ್ದರೂ ಅಣ್ಣ-ತಮ್ಮಂದಿರ ಕಾಲ. ನಮ್ಮ ನಡುವೆ ನೀನೆಂದಿಗೂ ಬೆಳೆಯಲಾರೆ!"
ಕಾಲು ಬೀಸಿ ಬಲವಾಗಿ ನಾಲ್ಕಾರು ಬಾರಿ ಒದ್ದ. ಗೋಡೆಯ ಅಂತಿಮ ಸಾಲಿನ ಇಟ್ಟಿಗೆಗಳೆಲ್ಲಾ ಧೊಪ್ಪೆಂದು ಒಡೆದುಹೋದವು....

                   *****************

"ಆ ಹಾಳು ಯಮ್ಮೇನ ಕಟ್ಟಿ ಹಾಕೋಕಾಗಲ್ವ ಅವರಿಗೆ? ಮತ್ತೆ ನಮ್ಮನೆ ಹಿತ್ಲಿಗೆ ನುಗ್ಗಿ ಗಿಡಾನೆಲ್ಲ ತಿಂದುಹಾಕಿದೆ ಧರಿದ್ರದ್ದು"
ಗಂಗಾಳ ಕೋಪ ಮೇರೆ ಮೀರಿತ್ತು.

"ಹೋಗ್ಲಿ ಬಿಡೇ. ಅವ್ರೇನು ಬೇಕಂತ ಬಿಟ್ಟಿದ್ದಾ? ಎಲ್ಲೋ ಅವರ ಕಣ್ತಪ್ಸಿ ಬಂದಿರತ್ತೆ"
ವಿಶಾಲ ತನ್ನ ಮಡದಿಗೆ ಸಮಾಧಾನ ಹೇಳಿದ.

"ನಿಮಗೇನು ಹೇಳಿ? ನಾನು ಮೊನ್ನೆಯಷ್ಟೇ ಅಮ್ಮನ ಮನೆಯಿಂದ ತಂದು ನೆಟ್ಟಿದ್ದ ಸೇವಂತಿಗೆ ಅದು.. ಬೇರು ಸಮೇತ ತಿಂದಿದೆ ಪಾಪಿ ಎಮ್ಮೆ!"
ಎನ್ನುತ್ತಾ ಒಳಗೆ ಹೋದಳು ಗಂಗಾ. ವಿಶಾಲ್ ನಕ್ಕು ಸುಮ್ಮನಾದ.

                   *****************

"ಅಯ್ಯೋ, ಛೀ! ಇಲ್ಲಿ ನೋಡ್ರಿ ಈ ಗಲೀಜನ್ನ"
ಅಭಿಯ ಮಡದಿ ಪದ್ಮ ಕೂಗಿಕೊಂಡಳು.

"ಬೆಳ್ಳಂಬೆಳಗ್ಗೇನೇ ಏನು ನೋಡಿದ್ಯೇ?" 
ಅಭಿ ಓಡಿಬಂದ.

"ಮತ್ತೆ ನಮ್ಮ ಅಂಗಳದಲ್ಲೇ ಗಲೀಜು ಮಾಡಿದೆ ಪಕ್ಕದ್ಮನೆಯ ಕೊಳಕು ನಾಯಿ!"
ಮೂಗು ಮುಚ್ಚಿಕೊಂಡೇ ಹೇಳಿದಳು.

"ಓಹ್ ಹೌದಲ್ಲಾ.. ಇರ್ಲಿ ಈ ಕಡೆ ಬಾ. ಚೆನ್ನಿ ಬಂದೋಳು ಕ್ಲೀನ್ ಮಾಡ್ತಾಳೆ"
ಅಭಿ ತಣ್ಣಗೆ ಉತ್ತರಿಸಿದ.

"ಸರಿಯಾಗಿ ನೋಡ್ಕೊಳ್ಳೋಕಾಗದ ಮೇಲೆ ನಾಯಿ ಯಾಕೆ ಸಾಕ್ಬೇಕು ಹೇಳಿ?"

"ಅಲ್ವೇ ಅವರೇನು ಹೇಳಿ ಕಳಿಸ್ತಾರೇನೇ ಅಲ್ಲೇ ಹೋಗಿ ಗಲೀಜು ಮಾಡು ಅಂತ? ಅದಕ್ಕಾಗಿ ಪ್ರತ್ಯೇಕ ಟಾಯ್ಲೆಟ್ ಕಟ್ಸೋಕಾಗುತ್ತಾ? ಏನೋ ಒಂದ್ಸಲ ಅಡ್ಜಸ್ಟ್ ಆಗ್ಬೇಕು ಬಿಡು"

"ನಂಗೆ ಗೊತ್ತೂರಿ. ನಿಮಗೆ ನನಗಿಂತ ನಿಮ್ಮಣ್ಣನೇ ಹೆಚ್ಚು ಪ್ರೀತಿ. ಎಷ್ಟೇ ಆದ್ರೂ ನಾನು ಹೊರಗಿನವಳಲ್ವಾ!"
ಧಡಧಡನೆ ನಡೆದುಹೋದವಳನ್ನು ನೋಡಿ ಒಳಗೇ ನಕ್ಕು ಸುಮ್ಮನಾದ ಅಭಿ.

                   *****************

"ಆ ಹೆಂಗ್ಸು ಯಾಕೆ ಅಂಗಾಡ್ತಾಳೆ ವಿಶಾಲಯ್ಯ?"
ರಂಗಿ ಮೂತಿ ಮುರಿಯುತ್ತಲೇ ಕೇಳಿದಳು.

"ಯಾರು ಹೆಂಗಾಡಿದರೇ ರಂಗಿ?"

"ಅವ್ಳೇ, ಅಭಿನಂದನಯ್ಯನ ಎಂಡ್ತೀ. ನಿಮ್ಮನೆಗೆ ತರೋ ಗೊಬ್ರ,  ದರಗನ್ನ ನಮ್ಮನೆ ಅಂಗ್ಳದಾಗ್ ಒತ್ಕಂಡು ಓಗ್ಬ್ಯಾಡ. ಆಕಡೆ ದಿಬ್ಬದಾಸಿ ತಕಂಡೋಗು. ನಮ್ ಅಂಗ್ಳ ಗಲೀಜಾಯ್ತದೆ ಅಂತಾಳೆ! ಆಮ್ಯಾಕೆ ಗುಡ್ಸಿ ಕಿಲೀನ್ ಮಾಡ್ತೀನಿ ಅಂದ್ರೂ ಕೇಳಾಕಿಲ್ಲ"

ವಿಶಾಲನ ಹುಬ್ಬು ಗಂಟಾಯಿತು.

                   *****************

"ಚಿಕ್ಕಯ್ಯ, ಹಿಂಗೆ ಹೇಳ್ತೀನಂತ ತಪ್ಪು ತಿಳೀಬ್ಯಾಡಿ. ಬ್ಯಾಣದಾಗೆ ಅಕೇಸ್ಯಾ ಹಾಕುವಾಗ ನಿಮ್ದೂ ಆರಡಿ ಜಾಗ ಸೇರ್ಸಿ ಒಳಗ್ಹಾಕವ್ರೆ ನಿಮ್ ಪಕ್ಕದ್ ಮನ್ಯೋರು. ನೀವಿಂಗೇ ಸುಮ್ಕಿದ್ರೆ ಸಿವಾ ಅನ್ಸ್ಬುಡ್ತಾರೆ ಆಟೇಯ."
ಸಿಂಗನ ಮಾತುಕೇಳಿ ಆ ಕ್ಷಣಕ್ಕೆ 'ಹೂಂ' ಎಂದು ಸುಮ್ಮನಾದ ಅಭಿಗೆ ನಂತರ ಮನಸ್ಸಿನೊಳಗೇನೋ ಒಂಥರಾ ಕಿರಿಕಿರಿ ಆರಂಭವಾಯಿತು. ಮೇಲೆ ಬ್ಯಾಣಕ್ಕೆ ಹೋಗಿ ನೋಡಿದರೆ ಸಿಂಗ ಹೇಳಿದ್ದು ನಿಜವೇ! ಸ್ವಲ್ಪ ಇವರ ಜಾಗವನ್ನೂ ಸೇರಿಸಿ ಗಿಡನೆಡಲಾಗಿದೆ!

ಅಸಮಾಧಾನವೊಂದು ಸಣ್ಣಗೆ ಹೊಗೆಯಾಡಲಾರಂಭಿಸಿತು.

                   *****************


ಕೆಲವು ದಿನಗಳ ನಂತರ ಮತ್ತೆ ವಿಶಾಲನ ಮನೆ ಹಿತ್ತಲಿಗೆ ನುಗ್ಗಿದ ಅಭಿಯ ಮನೆಯ ಎಮ್ಮೆ ಕಾಲ ಮೇಲೆ ಬರೆ ಬರುವಂತೆ ಹೊಡೆತ ತಿಂದು ಓಡಿಬಂತು. ಅಭಿಯ ಮನೆಯಲ್ಲಿ ಗಲೀಜು ಮಾಡುತ್ತಿದ್ದ ವಿಶಾಲನ ಮನೆ ನಾಯಿ ಬೆನ್ನಮೇಲೆ ಬಲವಾದ ಪೆಟ್ಟುತಿಂದು ವರಲಿದ್ದು ಎರೆಡೂಮನೆಗೂ ಸ್ಪಷ್ಟವಾಗಿ ಕೇಳಿತ್ತು. 

ಅದೊಂದು ಭಾನುವಾರ ಮಧ್ಯಾಹ್ನ. ಎರೆಡೂ ಮನೆಯಲ್ಲೂ ಊಟದ ನಂತರದ ವಿಶ್ರಾಂತಿಯ ಮೌನ. ಥಟ್ಟನೆ ಎಲ್ಲರೂ ಬೆಚ್ಚಿಬೀಳುವಂತಹಾ ಕೂಗು ಕೇಳಿಬಂತು:

"ಅಮ್ಮಾ... ನನ್ ತಲೇ...... ಊಊsss"
ಎಲ್ಲರೂ ಬೆಚ್ಚಿಬಿದ್ದೆದ್ದು ಓಡುತ್ತಾ ಅಂಗಳಕ್ಕೆ ಬಂದರು. ವಿಶಾಲನ ಮಗ ಶಶಾಂಕ ತಲೆ ಒತ್ತಿಹಿಡಿದುಕೊಂಡು ಅಳುತ್ತಿದ್ದ. ಅಭಿಯ ಮಗ ಪ್ರಣವ್ ಭಯಭೀತನಾಗಿ ನೋಡುತ್ತಾ ನಿಂತಿದ್ದ.

ಗಂಗಾ, ವಿಶಾಲ್ ತಮ್ಮ ಮಗನತ್ತ ಓಡಿದರು. 
"ಏನಾಯ್ತು ಚಿನ್ನಾ" ಎಂದು ತಲೆಯಮೇಲಿಂದ ಅವನ ಕೈ ತೆಗೆದಳು. ಕೈ ತುಂಬಾ ರಕ್ತ! 

"ಕಳ್ಳ-ಪೋಲೀಸ್ ಆಡ್ತಿದ್ವಿ.... ಅವನು ಓಡ್ತಿದ್ದ.....ಗುಲಾಬಿ ಮುಳ್ಳು ಚುಚ್ತೂ....."
ಪ್ರಣವ್ ಭಯದಿಂದ ತೊದಲುತ್ತಾ ವಿಶಾಲ್ ನತ್ತಲೇ ನೋಡಿದ. 

"ಅವತ್ತೇ ಹೇಳಿದ್ದೆ ಅವ್ರಿಗೆ, ನಮ್ಮಂಗಳಕ್ಕೆ ದಾಟೋ ಜಾಗದಲ್ಲಿ ಆ ಗುಲಾಬಿ ಗಿಡ ನೆಡ್ಬೇಡಿ ಅಂತ. ಕೇಳ್ಲೀಲ. ಈಗ ನೋಡು ಏನಾಯ್ತಂತ! ಹಿಂಗೆಲ್ಲಾ ಹೇಳಿದ್ರೆ ಅವ್ರಿಗೆ ಅರ್ಥ ಆಗಲ್ಲ. ಮಾಡ್ತೀನಿ ನೋಡ್ತಿರು"
ವಿಶಾಲನ ತಂದೆ ಗುಡುಗುತ್ತಾ ಅಲ್ಲೇ ಇದ್ದ ಕೈಗತ್ತಿ ಹಿಡಿದು ವಿಶಾಲ ಕರೆಯುತ್ತಿರುವಂತೆಯೇ ಅಭಿಯ ಅಂಗಳದಂಚಿನಲ್ಲಿದ್ದ ಗಿಡದತ್ತ ನುಗ್ಗಿದರು. 

"ಅಯ್ಯೋ, ಮುಟ್ಬೇಡಿ ಅದ್ನಾ...." ಎಂದು ಅಡ್ಡಬಂದ ಪದ್ಮಾಳನ್ನು ತಳ್ಳಿ, ಗಿಡದ ಮೇಲೆರಗಿದರು.
ಅದೆಲ್ಲಿದ್ದನೋ ಅಭಿ, ದೊಡ್ಡಪ್ಪನ ಮೇಲೆ ಲಂಘಿಸಿಯೇಬಿಟ್ಟ. ಅವರ ಕೈಲಿದ್ದ ಕತ್ತಿಯನ್ನು ಕಸಿದೆಸದು, ಅವರನ್ನು ಬಲವಾಗಿ ನೂಕಿಬಿಟ್ಟ.
"ವಿಶೂ...." ಎನ್ನುತ್ತಾ ನೆಲದಮೇಲೆ ಬಿದ್ದರು, ವಿಶಾಲನ ತಂದೆ.

ಕಣ್ಣೆದುರೇ ತನ್ನ ಅಪ್ಪನ ಮೇಲೆ ಕೈಮಾಡಿದ ಅಭಿಯತ್ತ ಛಂಗನೆ ನೆಗೆದ ವಿಶಾಲ್ ಅವನ ಕತ್ತುಪಟ್ಟಿ ಹಿಡಿದು ನೂಕಿದ. ಹಿಂದಕ್ಕೆ ಬಿದ್ದ ಅಭಿ ಅಷ್ಟೇ ವೇಗದಲ್ಲಿ ಮೇಲೆದ್ದುಬಂದು ವಿಶಾಲನ ಕೊರಳಪಟ್ಟಿ ಹಿಡಿದುಕೊಂಡ... 

ಒಬ್ಬರನ್ನೊಬ್ಬರು ಎಳೆದಾಡಿಕೊಂಡರು. ಜಗ್ಗಿ ಹೊಡೆದರು. ಲಂಘಿಸಿದರು. ವಿಶಾಲನ ಗುಂಡಿ ಕಿತ್ತು ಅಭಿಯ ಕೈಗೆ ಹೋಯ್ತು; ಅಭಿಯ ಜೇಬು ಹರಿದು ವಿಶಾಲನ ಕೈಗೆ ಬಂತು. 

ಅಂದು ಇದೇ ಕೈಗಳು ಪ್ರೀತಿಯಿಂದ ವಿನಿಮಯಮಾಡಿಕೊಂಡಿದ್ದ ಆಟಿಕೆಗಳು ನೆಲದಾಳದಲ್ಲೆಲ್ಲೋ ಸಣ್ಣಗೆ ನರಳಿದವು.

ಮನೆಯ ಹೆಂಗಸರು, ಕೆಲಸದವರೆಲ್ಲಾ ಬಂದು ಇಬ್ಬರನ್ನೂ ಬೇರೆಬೇರೆಯಾಗಿಸಿ ಎಳೆದೊಯ್ದರು. 

"ಕಟ್ರೋ ಗೋಡೆನ!"
ಅಂಗಳದಲ್ಲಿ ನಿಂತು ವಿಶಾಲ್ ಘರ್ಜಿಸಿದ.

"ಮುಚ್ಚಿ ಈ ದಾರೀನಾ!"
ಅತ್ತಕಡೆಯಿಂದ ಅಭಿ ಘೀಳಿಟ್ಟ.

ಅರೆಕ್ಷಣದಲ್ಲಿ ನಡೆದುಹೋದ ಕಾಳಗವನ್ನು ಎರೆಡು ಎಳೆಯ ಜೋಡಿ ಕಣ್ಣುಗಳು ಅತ್ಯಂತ ಭಯಾಶ್ಚರ್ಯಗಳಿಂದ ನೋಡುತ್ತಿದ್ದವು:
ವಿಶಾಲನ ಮಗ ಶಶಾಂಕ ಹಾಗೂ
ಅಭಿಯ ಮಗ ಪ್ರಣವ್....

(ತುಷಾರದಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...