ಶನಿವಾರ, ಜನವರಿ 19, 2019

ಸ್ವಾತಂತ್ರೋತ್ಸವದ ಪ್ರಭಾತ್ ಪೇರಿ...

ಸಮೀಪದಿಂದಲೇ ಕೇಳಿಬಂದ ಬ್ಯಾಂಡ್ಸೆಟ್ ನ ಸದ್ದಿಗೆ ಥಟ್ಟನೆ ಎಚ್ಚರಾಯಿತು. ಸಮಯ ಇನ್ನೂ ಏಳೂ ಮೊವ್ವತ್ತು. ಅಂದರೆ ಒಂದಿಡೀ ರಜಾದಿನ ನನ್ನ ಕಣ್ಮುಂದಿದೆ! ತುಂಬಾ ಖುಷಿಯಾಯ್ತು. ಈ ಆಫೀಸಿಗೆ ರಜೆ ಇದೆ ಅನ್ನೋ ಭಾವನೆ ತರುವ ಸಂಭ್ರಮ ಇದೆಯಲ್ಲಾ? ಅದಕ್ಕಿಂತ ಮಿಗಿಲಾದುದು ಇನ್ನೊಂದಿಲ್ಲ. ಹಾಗಂತ ಸಿಕ್ಕ ಈ ಅಮೂಲ್ಯ ರಜೆಯಲ್ಲಿ ಏನು ಕಡಿದು ಗುಡ್ಡೆ ಹಾಕ್ತೀಯಪ್ಪಾ ರಾಜಾ ಅಂದ್ರೆ ಏನೂ ಇಲ್ಲ. ವಾರವಿಡೀ ಬಚ್ಚಲಿನ ನ್ಯಾಲೆಯ ಮೇಲೆ ಕಡಿದಿಟ್ಟ ಕುರಿಯ ಮಾಂಸದಂತೆ ನೇತಾಡಿಕೊಂಡಿರುವ ಬಟ್ಟೆಗಳನ್ನು ತೊಳೆದು, ವಾರದಿಂದ ಹಿಡಿ ಕಾಣದ ಕೋಣೆಯ ಕಸ ಹೊಡೆದು, ಅಡ್ಡಬಂದ ಜಿರಳೆ-ಹಕ್ಳೆಗಳ ರುಂಡ ಚೆಂಡಾಡಿ, ಸ್ನಾನ ಮಾಡಿಕೊಂಡು ಪರಿಶುದ್ಧನಾಗಿ ಕೋಣೆಯಿಂದಾಚೆ ಬರುವಷ್ಟರಲ್ಲಿ ಸೂರ್ಯ ತನ್ನ ಮಧ್ಯಾಹ್ನದ ಲಂಚ್ ಬಾಕ್ಸ್ ತೆರೆಯುತ್ತಿರುತ್ತಾನೆ. ಸಿಕ್ಕ ಬಸ್ಸು ಹತ್ತಿಕೊಂಡು ಅಕ್ಕನ ಮನೆಗೋ, ಚಿಕ್ಕಮ್ಮನ ಮನೆಗೋ ಅಥವಾ ಗೆಳೆಯನ ಭೇಟಿಗೋ ಹೊರಟರೆ ಅಲ್ಲಿಗೆ ಆ ರಜಾ ದಿನ ಸಂಪನ್ನವಾದಂತೆ.
ಬಿಡಿ. ನಾನು ಹೇಳೋಕೆ ಹೊರಟಿದ್ದು ಅದಲ್ಲ. ಬೆಳ್ಳಂಬೆಳಗ್ಗೆ ನನ್ನನ್ನು ಎಚ್ಚರಗೊಳಿಸಿದ ಆ ಪೆಪ್ಪೆರೆ ಪೆಪ್ಪೆರೆ ಬ್ಯಾಂಡ್ ಸದ್ದು ಸಮೀಪದ ಎಂಇಎಸ್ ಶಾಲೆಯ ಸ್ವಾತಂತ್ರೋತ್ಸವದ ಪ್ರಭಾತ್ ಪೇರಿಯದು. ಹಳೆಯ ನೆನಪುಗಳು ಗರಿಗೆದರೋದಕ್ಕೆ ಅಷ್ಟೇ ಸಾಕು. ಏನು? ಸ್ವತಂತ್ರ ದಿನದಂದು ಧ್ವಜಾರೋಹಣದಲ್ಲಿ ಪಾಲ್ಗೊಳ್ಳೋದು ಬಿಟ್ಟು ಏನೇನೋ ಹರಟ್ತಿದೀಯಾ ಅಂತ ಕೇಳಿದ್ರಾ? ನೋಡಿ ಈ ವಿಷಯದಲ್ಲಿ ನೀವು ನನ್ನನ್ನು ದೂರುವ ಹಾಗೇ ಇಲ್ಲ. ಮೊದಲಿದ್ದ ಕಂಪನಿಯಲ್ಲಾದರೆ ತಪ್ಪದೇ ಧ್ವಝಾರೋಹಣ ಮಾಡುತ್ತಿದ್ದರು. ಕೂಡಿಕೊಂಡು ಹೋಗಲಿಕ್ಕೆ ಜೊತೆಗೊಂದಿಷ್ಟು ಜನ ಗೆಳೆಯರೂ ಇದ್ದರು. ಆದರೀಗ ನನ್ನ ಕಂಪನಿ ಬದಲಾಗಿ, ಇದ್ದ ಗೆಳೆಯರಲ್ಲಿ ಹಲವರಿಗೆ ಮದುವೆಯಾಗಿ, ಅವರೇ ತಮ್ಮ ಸ್ವತಂತ್ರ ಕಳೆದುಕೊಂಡು, ಹೆಂಡತಿ ಎನ್ನುವ ಎಲಿಜಬೆತ್ ರಾಣಿಯ ಆಳ್ವಿಕೆಯಲ್ಲಿ ಸಿಲುಕಿಕೊಂಡಿರುವಾಗ ನಾನಾದರೂ ಯಾರ ಜೊತೆಗೆ ಹೋಗಲಿ ಹೇಳಿ? ಅಷ್ಟಾಗಿಯೂ ಹಳೆಯ ಕಂಪನಿಗೆ ಹೋದರೆ ಒಂದು ಕಾಲದಲ್ಲಿ ನಾನೇ ಸಂಬಳದ ಚೆಕ್ ಬರೆದುಕೊಟ್ಟಿದ್ದ ಅದೇ ಸೆಕ್ಯುರಿಟಿಯವರಿಂದ 'ಒಳಗೆ ಪ್ರವೇಶವಿಲ್ಲ' ಅಂತನ್ನಿಸಿಕೊಳ್ಳಬೇಕಾಗೋದಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ? ಅದಕ್ಕೇ ನಾನು ಸ್ವತಂತ್ರ ದಿನಾಚರಣೆಯನ್ನು ಕೋಣೆಯಲ್ಲೇ ಆಚರಿಸುತ್ತೇನೆ.
ನೋಡಿ.. ಮಾತು ಮತ್ತೆ ದಾರಿ ತಪ್ತಿದೆ. ನಾನೇನು ಹೇಳ್ತಿದ್ದೆ? ನೆನಪುಗಳ ಬಗ್ಗೆ ಅಲ್ವಾ? ಹೌದು.. ಎಂಇಎಸ್ ಶಾಲೆಯ ಮೆರವಣಿಗೆಯ ಸದ್ದು ಕೇಳಿದಾಗ ಮೊದಲು ನೆನಪಾದದ್ದೇ ಶಾಲೆ. ಅರಳಸುರಳಿ ಶಾಲೆ. ಸುಮಾರು ಏಳು ವರ್ಷಗಳ ಕಾಲ ಈ ದಿನದಂದು ಬಾವುಟ ಹಾರಿಸಿ, ಮರವಣಿಗೆ ಹೋಗಿ, ಘೋಷಣೆ ಕೂಗಿ, ಭಾಷಣ ಕೇಳಿ, ಕೊನೆಯಲ್ಲಿ ಚಾಕ್ಲೇಟು ತಿಂದುಕೊಂಡು ಮನೆಗೆ ಬರುತ್ತಿದ್ದ ಸ.ಹಿ.ಪ್ರಾ. ಶಾಲೆ!
ಆಗಸ್ಟ್ ಹದಿನೈದಕ್ಕಿನ್ನೂ ಹತ್ತು-ಹದಿನೈದು ದಿನ ಇದ್ದಾಗಲೇ ಪಿಟಿ ಮೇಷ್ಟರ ಸುಪರ್ದಿಯಲ್ಲಿ ಬ್ಯಾಂಡ್ಸೆಟ್ ನ ಅಭ್ಯಾಸ ಆರಂಭವಾಗುತ್ತಿತ್ತು. ಸಂಜೆ ನಾಲ್ಕರ ಆಟದ ಸಮಯದಲ್ಲಿ ಆರು ಹಾಗೂ ಏಳನೇ ತರಗತಿಯ ಐದಾರೇಳು ಹುಡುಗರನ್ನು ಆಯ್ದು ಪ್ರಾಕ್ಟೀಸ್ ಕೊಡಲು ಆರಂಭಿಸುತ್ತಿದ್ದರು. ಶಾಲೆಯೆದುರು ಅಂಗಳದಲ್ಲಿ ಅಥವಾ ವಿಶಾಲವಾಗಿದ್ದ ಹಾಲ್ ರೂಮಿನಲ್ಲಿ ಅವರೆಲ್ಲ ಪೆಪ್ಪೆಪ್ಪೆ... ಪೆರೆಪೆರೆಪೆ.. ಪೇಪೆಪ್ಪೆಪ್ಪೆ... ಡುಂಡುಂಡುಂ ಎಂದು ಬಾರಿಸುತ್ತಾ ಅಭ್ಯಾಸ ಮಾಡುವುದನ್ನು ನಾವು ದೂರದಿಂದ ನೋಡುತ್ತಿದ್ದೆವು. ಪ್ರಭಾತ್ ಪೇರಿಯಲ್ಲಿ ಹಾಡಬೇಕಾದ ಹುಡುಗಿಯರು ಚೀಟಿಗಳಲ್ಲಿ ಬರೆದಿಟ್ಟುಕೊಂಡ ದೇಶಭಕ್ತಿಗೀತೆಗಳನ್ನು ರಾಗವಾಗಿ ಅಭ್ಯಾಸ ಮಾಡುತ್ತಿರುವ ಪಕ್ಕದ ಕೋಣೆಯತ್ತಲೂ ಒಂದು ಕಣ್ಣಿಟ್ಟಿರುತ್ತಿದ್ದೆವು.
ನೋಡನೋಡುತ್ತಿದ್ದಂತೆಯೇ ಆಗಸ್ಟ್ ಹದಿನೈದು ಓಡಿಕೊಂಡು ಬರುತ್ತಿತ್ತು. ಬೆಳಗ್ಗೆ ಆರೂ ಮೊವ್ವತ್ತಕ್ಕೇ ಎದ್ದು ಸ್ನಾನ ಮಾಡಿ, ಕಡುನೀಲಿಯ ಚಡ್ಡಿಗೆ ಆಕಾಶನೀಲಿಯ ಅಂಗಿಯನ್ನು ಇನ್ ಶರ್ಟ್ ಮಾಡಿಕೊಂಡು, ಕತ್ತಿಗೆ ಅದೇ ಬಣ್ಣದ ಟೈ ಕಟ್ಟಿಕೊಂಡು ಹೊರಡುತ್ತಿದ್ದೆವು. ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ನನ್ನಂತೆಯೇ ತಪ್ಪುತಪ್ಪಾಗಿ ಇನ್ಶರ್ಟ್ ಮಾಡಿಕೊಂಡಿರುವ ಇನ್ನಷ್ಟು ಹುಡುಗರೂ, ಆಕಾಶನೀಲಿ ಅಂಗಿ, ಕಡುನೀಲಿಯ ಲಂಗ ತೊಟ್ಟು, ಮಡಿಚಿದ ಜಡೆಗೆ ಕೆಂಪು ರಿಬ್ಬನ್ ಕಟ್ಟಿಕೊಂಡು ಬರುತ್ತಿರುವ ಹುಡುಗಿಯರೂ ಜೊತೆಯಾಗುತ್ತಿದ್ದರು. ಇವತ್ತು ಗ್ರಾಮ ಪಂಚಾಯತಿಯಲ್ಲಿ ಚಾಕ್ಲೇಟ್ ಕೊಡ್ತಾರೋ ಇಲ್ಲಾ ಸೋಂಪಾಪುಡಿ ಕೊಡ್ತಾರೋ ಎಂಬ ಘನಗಂಭೀರ ವಿಷಯವನ್ನು ಚರ್ಚಿಸುತ್ತಾ ಎಲ್ಲರೂ ಶಾಲೆಯತ್ತ ನಡೆಯುತ್ತಿದ್ದೆವು.
ಹೇಳೋಕೆ ಮರೆತೆ. ಈ ಸ್ವತಂತ್ರ ದಿನ, ಗಾಂಧೀಜಯಂತಿ, ಗಣರಾಜ್ಯ ದಿನಗಳಂದು ಚಕ್ಕರ್ ಹಾಕಿದರೂ ಒಂದು ಪಕ್ಷ ಪಾರಾಗಬಹುದಿತ್ತೇನೋ, ಆದರೆ ಯೂನಿಫಾಂ ಹಾಕದೇ ಬಂದರೆ ಮಾತ್ರ ಪಾರಾಗುವುದಕ್ಕೆ ಸಾಧ್ಯವೇ ಇರಲಿಲ್ಲ. ಕಾರ್ಯಕ್ರಮವೆಲ್ಲ ಮುಗಿದ ಮೇಲೆ ಅಂತಹಾ 'ವಿಶೇಷ ವಿದ್ಯಾರ್ಥಿ'ಗಳನ್ನು ಸ್ವತಃ ಹೆಡ್ ಮೇಷ್ಟರೇ, ತಮ್ಮ ಕೈಯಾರೆ ವಿಚಾರಿಸಿಕೊಳ್ಳುತ್ತಿದ್ದರು. "ಸ್ವಾತಂತ್ರ ದಿನಾಚರಣೆಗೆ ಯೂನಿಫಾಂ ಹಾಕ್ಕೊಂಡ್ಬೇರ್ಕಂತ ಗೊತ್ತಾಗಲ್ವೇನೋ ನಾನ್ ಸೆನ್ಸ್ ಫೆಲೋ" ಎಂಬ ಅವರ ಅಬ್ಬರವನ್ನು ಅವರ ರೂಲ್ ದೊಣ್ಣೆ ಮುಂದುವರಿಸುತ್ತಿತ್ತು. ಹಾಗಾಗಿ ನಾವು ಏನೇ ತಪ್ಪಿಸಿದರೂ ಯೂನಿಫಾಂ ತಪ್ಪಿಸುತ್ತಿರಲಿಲ್ಲ.
ಸ್ವತಂತ್ರ ದಿನದ ಇನ್ನೊಂದು ಸಂಭ್ರಮವೆಂದರೆ ಬಾವುಟ ಕೊಳ್ಳುವುದು! ಎರೆಡು ರೂಪಾಯಿಯದು, ಐದು ರೂಪಾಯಿಯದು, ಹತ್ತರದ್ದು... ಹೀಗೆ ನಾನಾ ಬೆಲೆಯ, ಬೆಲೆಗೆ ತಕ್ಕ ಗಾತ್ರದ ಬಾವುಟಗಳು ವಾರದ ಕೆಳಗೇ ಊರಿನ ಎಲ್ಲ ಅಂಗಡಿಗಳಿಗೂ ಬಂದು, ಪಥಸಂಚಲನಕ್ಕೆ ಹೊರಟ ಸೈನಿಕರಂತೆ ಸಾಲಾಗಿ ನಿಂತಿರುತ್ತಿದ್ದವು. ಬರೀ ಬಾವುಟ ಮಾತ್ರವಲ್ಲ, ಜೇಬಿಗೆ ಪಿನ್ನು ಚುಚ್ಚಿ ಸಿಕ್ಕಿಸಿಕೊಳ್ಳುವ ಎರೆಡಿಂಚಿನ ಮಿನಿ ಸ್ಟಿಕ್ಕರ್ ಬಾವುಟ, ಮಣಿಕಟ್ಟಿಗೆ ಹಾಕಿಕೊಳ್ಳಬಹುದಾದ ಕೇಸರಿ-ಬಿಳಿ-ಹಸಿರಿನ ಬಟ್ಟೆಯ ಬ್ಯಾಂಡ್, ಮುಂದಲೆಗಷ್ಟೇ ಹಾಕಬಲ್ಲ ಅದೇ ಬಣ್ಣಗಳ ಕಾಗದದ ಟೋಪಿ... ಹೀಗೆ ಬಾವುಟಗಳು ನಾನಾ ವಿಧ, ರೂಪ, ಆಕಾರಗಳಲ್ಲಿ ಬಂದು ನಮ್ಮ ಕೈಸೇರಿ ಕುಳಿತುಕೊಳ್ಳುತ್ತಿದ್ದವು. ಒಂದು ಸಲವಂತೂ ಅಪ್ಪನಿಗೆ ಅದೇನನ್ನಿಸಿತ್ತೋ ಏನೋ, ಹೆಚ್ಚೂ ಕಡಿಮೆ ಶಾಲೆಯಲ್ಲಿ ಹಾರಿಸುವಷ್ಟೇ ದೊಡ್ಡದಾದ ಬಟ್ಟೆಯ ಬಾವುಟವೊಂದನ್ನು ಹೇಳದೇ ಕೇಳದೇ ತಂದುಬಿಟ್ಟಿದ್ದರು! ಅದಕ್ಕೆ ದೊಣ್ಣೆಯೊಂದನ್ನು ತಾವೇ ಕೆತ್ತಿ ಸಿಕ್ಕಿಸಿ ಮನೆಯೆದುರಿನ ಕಂಬದಲ್ಲಿ ಧ್ವಜಾರೋಹಣ ಮಾಡಿದ್ದರು. ಅದು ಹಾರುವಷ್ಟು ಜೋರು ಗಾಳಿ ಬೀಸುತ್ತಿರಲಿಲ್ಲವಾದರೂ ಅದರ ಗಾತ್ರ ನೋಡಿದ ನನಗೆ ಎಲ್ಲಿಲ್ಲದ ಖುಷಿಯಾಗಿತ್ತು. ಹೋತೂಬಂತೂ ಅದನ್ನೇ ನೋಡುತ್ತಾ, ಕೋಲು ತಿರುಗಿಸಿ ಅದರ ದಿಕ್ಕು ಬದಲಿಸುತ್ತಾ ಸಂಭ್ರಮಿಸಿದ್ದೆ. ಆದರೆ 'ಬಿಸಿಲಿಗೆ ಹಾಳಾಗತ್ತೆ' ಎಂದು ತೆಗೆದು ಕೋಣೆಯೊಳಗಿಟ್ಟ ಆ ಬಾವುಟ ಯಾವುದೋ ಮೂಲೆಗೆ ಸೇರಿದ್ದು ಮತ್ತೆ ಸಿಗಲೇ ಇಲ್ಲ.

**********

"ಕ್ಲಾಸ್ ವಿಶ್ರಾಮ್... ಕ್ಲಾಸ್ ಸಾವ್ಧಾನ್..."
ಕಾಶ್ಶನ್ ಕೊಡುವ ಹುಡುಗನ ಸದ್ದಿಗೆ ತಕ್ಕಂತೆ ಶಾಲೆಯ ಆವರಣದಲ್ಲಿ ಸಾಲಾಗಿ ನಿಂತ ನಾವೆಲ್ಲ ಕಾಲನ್ನು ಎತ್ತಿಡುತ್ತಿದ್ದೇವೆ. ನಾಲ್ಕು ಹೆಜ್ಜೆ ಮುಂದಕ್ಕೆ ನಡೆದು ಬಂದ ಎಸ್ಡೀಎಂಸಿ ಅಧ್ಯಕ್ಷರು ಧ್ವಝಕಂಬದ ಮುಂದೆ ನಿಂತು ಹೆಡ್ ಮೇಷ್ಟರು ಬಿಚ್ಚಿಕೊಟ್ಟ ಹಗ್ಗವನ್ನು ಎಳೆಯುತ್ತಾರೆ. ಕಂಬದ ತುದಿಯಲ್ಲಿ ಕಟ್ಟಲ್ಪಟ್ಟ ಧ್ವಜ ಫಟ್ಟನೆ ಬಿಚ್ಚಿಕೊಳ್ಳುತ್ತದೆ.
"ಸಲಾಮ್ಯಾಂ ದೋ"
ಎಲ್ಲರೂ ಸೆಲ್ಯೂಟ್ ಹೊಡೆದು ತಲೆಯೆತ್ತಿ ಧ್ವಜದತ್ತಲೇ ನೋಡುತ್ತಾ ಮೊದಲು ಜನಗಣಮನವನ್ನೂ, ನಂತರ ವಂದೇ ಮಾತರಂ ಅನ್ನೂ ಹಾಡುತ್ತೇವೆ. ನಂತರ ಪ್ರಭಾತ್ ಪೇರಿ. ಬ್ಯಾಂಡ್ಸೆಟ್ಟಿನ ಹುಡುಗರೂ, ದೇಶಭಕ್ತಿಗೀತೆಯ ಹುಡುಗಿಯರೂ ಹಾಗೂ ಟೀಚರ್ (ಮೇಡಂ)ಗಳೂ ಮುಂದೆ ನಡೆಯುತ್ತಾರೆ. ಅವರ ಹಿಂದೆ ಹುಡುಗರು ಹಾಗೂ ಹುಡಿಗಿಯರು ಎಂಬ ಎರೆಡು ಪ್ರತ್ಯೇಕ ಸಾಲುಗಳಾಗಿ ಕವಲೊಡೆದ ನಾವೆಲ್ಲ ಹೆಜ್ಜೆ ಹಾಕುತ್ತೇವೆ. ಮೊದಲು ನಮ್ಮ ಮೆರವಣಿಗೆ ಗ್ರಾಮಪಂಚಾಯತಿಯತ್ತ ನಡೆಯುತ್ತದೆ. ಆರಂಭದ ಹತ್ತು ನಿಮಿಷ 'ಬೋಲೋ ಭಾರತ್ ಮಾತಾಕೀ.... ಜೈ', 'ವಂದೇ ಮಾತರಂ...', 'ಶಿಸ್ತು... ಶಾಂತಿ, ಶಾಂತಿ... ಶಿಸ್ತು', 'ಇಂಕಿಲಾಬ್... ಜಿಂದಾಬಾದ್', 'ಮಹಾತ್ಮಾ ಗಾಂಧೀಕೀ... ಜೈ' ಎಂಬೆಲ್ಲ ಘೋಷಣೆಗಳೊಂದಿಗೆ ಗಂಭೀರವಾಗಿಯೇ ಸಾಗುವ ನಮ್ಮ ನಡಿಗೆ ನಮ್ಮನ್ನು ನಿಯಂತ್ರಿಸುತ್ತಿರುವ ಮೇಷ್ಟ್ರು ಆಚೆ ಹೋಗುತ್ತಿದ್ದಂತೆಯೇ ಮಂಗನಾಟಕ್ಕೆ ತಿರುಗುತ್ತದೆ. ನಾನು ಅವನಿಗಿಂತ ಮುಂದೆ ಹೋಗ್ಬೇಕು, ನಾನು ಇವನ ಹಿಂದೆ ನಿಲ್ಬೇಕು ಎಂದೆಲ್ಲ ಪಂಥ ಕಟ್ಟುತ್ತಾ, ಜಗಳಾಡುತ್ತಾ ಸಾಲು ಬಿಟ್ಟು ಓಡುತ್ತೇವೆ. ಅಷ್ಟರಲ್ಲಿ ರಸ್ತೆಯ ಪಕ್ಕದಲ್ಲಿ ತನ್ನಪಾಡಿಗೆ ಮಲಗಿದ್ದ ನಾಯಿಯತ್ತ ಯಾರೋ ಕಲ್ಲೆಸೆಯುತ್ತಾರೆ. ಒದೆ ತಿಂದ ಅದು ಕಂಯ್ಯಯ್ಯೋ ಎಂದು ಕೂಗುತ್ತಾ ದಿಕ್ಕಾಪಾಲಾಗಿ ಓಡುತ್ತದೆ. ಬೆಚ್ಚಿಬಿದ್ದ ಮೇಷ್ಟ್ರು 'ಏಯ್ ಯಾರೋ ಅವ್ನೂ' ಎನ್ನುತ್ತಾ ಓಡಿಬರುತ್ತಾರೆ. ನಾವೆಲ್ಲ ಕಿಸಕ್ಕನೆ ನಕ್ಕು ಸುಮ್ಮನಾಗುತ್ತೇವೆ.
ಹೀಗೆ ನಮ್ಮ ಮೆರವಣಿಗೆ ಗ್ರಾಮಪಂಚಾಯಿತಿ ಕಛೇರಿಯನ್ನು ತಲುಪುತ್ತದೆ. ಮೊದಲೇ ಕಿರಿದಾದ ಅದರ ಅಂಗಳದಲ್ಲಿ ನಿಲ್ಲುವಾಗ ನಮ್ಮೊಳಗೇ ವಾದ-ವಿವಾದಗಳೇರ್ಪಡುತ್ತವೆ. ಮಳೆ ಬಂದು ಜಾರುಬಂಡಿಯಾಗಿರುವ ಆ ನೆಲದಲ್ಲಿ ಸಾಲಾಗಿ ಜಮೆಯಾಗುವಾಗ ಏನಿಲ್ಲವೆಂದರೂ ಸಾಲಿಗೆ ಇಬ್ಬರಂತೆ ಧಸಾಲ್ ಧಸಾಲ್ಲನೆ ಜಾರಿಬೀಳುತ್ತಾರೆ. ಉಳಿದವರು ಕಿಸಕ್ಕನೆ ನಗುತ್ತಲೇ ಸಾಲಾಗಿ ನಿಲ್ಲುತ್ತಾರೆ. ಅಲ್ಲೂ ಧ್ವಝಾರೋಹಣವಾಗಿ ಎಲ್ಲರ ನಿರೀಕ್ಷೆಯಂತೆ ಸೋಂಪಾಪುಡಿ ಹಂಚಲಾಗುತ್ತದೆ. ತಿಂದ ಕೈಯನ್ನು ಚಡ್ಡಿಗೂ, ಲಂಗಕ್ಕೂ ಒರೆಸಿಕೊಳ್ಳುತ್ತಾ ಎಲ್ಲರೂ ಮೆರವಣಿಗೆ ಮುಂದುವರಿಸುತ್ತೇವೆ. ಸುಬ್ರಹ್ಮಣ್ಯ ಸರ್ಕಲ್ ಗೊಂದು ಸುತ್ತುಹಾಕಿದ ನಮ್ಮ ಪ್ರಭಾತ್ ಪೇರಿಯ ಮೆರವಣಿಗೆ ಮತ್ತೆ ಶಾಲೆಯಂಗಳಕ್ಕೆ ಬಂದು ಸಮಾಪ್ತಿಯಾಗುತ್ತದೆ. ಈ ದಿನದ ಅತಿ ಮುಖ್ಯ ಕಾರ್ಯಕ್ರಮ ಆರಂಭವಾಗುವುದೇ ಈಗ. ಅದರ ಹೆಸರು:
ಭಾಷಣದ ಕಾರ್ಯಕ್ರಮ!

**********

"ಮಾನ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅವರೇ, ಎಸ್ಡಿಎಂಸಿ ಸದಸ್ಯರಾದ ಇವರೇ, ಮುಖ್ಯ ಅತಿಥಿಗಳಾದ ಮತ್ತೊಬ್ಬರೇ..... ಹಾಗೂ ನನ್ನ ಪುಟಾಣಿ ಮಕ್ಕಳೇ"
ಹೀಗೆ ಶುರುವಾಗುತ್ತವೆ ಎಲ್ಲರ ಭಾಷಣಗಳು. ನಾನು ಶಾಲೆಯಲ್ಲಿದ್ದಾಗ ಅತ್ಯಂತ ಬೇಸರ ತರಿಸುತ್ತಿದ್ದ ಭಾಗವೆಂದರೆ ಅದು ಈ ಭಾಷಣದ್ದು. ವಿಶಾಲವಾದ ಹಾಲ್ ರೂಂ ಕೊಠಡಿಯ ನೆಲದ ಮೇಲೆ ನಮ್ಮನ್ನೆಲ್ಲ "ಶ್.. ಮಾತಾಡಬಾರ್ದು. ಅಲ್ಲಾಡಬಾರ್ದು..." ಎಂಬೆಲ್ಲ ಬೆದರಿಕೆಗಳ ಜೊತೆಗೆ ಸಾಲಾಗಿ ಕೂರಿಸಿ, ಎದುರಿಗಿನ ವೇದಿಕೆಯೇರುತ್ತಿದ್ದ ಮೇಷ್ಟರು ಹಾಗೂ ಗಣ್ಯರೆಲ್ಲ ಸಭಾಕಾರ್ಯಕ್ರಮವನ್ನು ಆರಂಭಿಸುತ್ತಿದ್ದರು. ಸಭಾಕಾರ್ಯಕ್ರಮವೆಂದರೆ ಮತ್ತೇನಲ್ಲ. ವೇದಿಕೆಯ ಈ ತುದಿಯಿಂದ ಆ ತುದಿಯ ತನಕ ಖುರ್ಚಿಯಲ್ಲಿ ಸಾಲಾಗಿ ಕುಳಿತವರೆಲ್ಲ ನಿಮಿಷಗಟ್ಟಲೆ ಮಾಡುವ ಭಾಷಣ!
ನುರಿತ ಭಾಷಣಕಾರರಾದ ಪ್ರತಿಯೊಬ್ಬರೂ ಏನಿಲ್ಲವೆಂದರೂ ಇಪ್ಪತ್ತರಿಂದ ಮೊವ್ವತ್ತು ನಿಮಿಷ ಮಾತನಾಡುತ್ತಿದ್ದರು. ತಪ್ಪು ತಿಳೀಬೇಡಿ. ಭಾಷಣ ಮಾಡುವುದರ ಬಗ್ಗೆ ಈಗ ನನಗೆ ಯಾವ ದೂರೂ ಇಲ್ಲ. ಆದರೆ ಆಗಿನ ವಯಸ್ಸಿಗೆ ಹಾಗೆ ಅಲ್ಲಾಡದೆ, ಏನೂ ಕಿತಾಪತಿ ಮಾಡದೇ, ಪಕ್ಕದಲ್ಲಿರುವವನನ್ನು ಗೋಳು ಹೊಯ್ಯದೇ, ಎರೆಡು-ಎರೆಡೂವರೆ ಗಂಟೆ ಸುಮ್ಮನೆ ಕೂರುವುದೆಂದರೆ ಎಂತಹಾ ಕಷ್ಟ ಎಂಬುದನ್ನು ನೀವೇ ಯೋಚಿಸಿನೋಡಿ. ನಾವೂ ಅಷ್ಟೇ. ಮೊದಲ ಒಂದೋ ಎರೆಡೋ ಭಾಷಣವನ್ನು ಸುಮ್ಮನೆ ಆಲಿಸುತ್ತಿದ್ದೆವು. ಆದರೆ ಮೇಷ್ಟರು ಏನೇ ಬೆದರಕೆ ಹಾಕಿದರೂ ನಮ್ಮೀ ತಾಳ್ಮೆ ಇಪ್ಪತ್ತು-ಮೊವ್ವತ್ತು ನಿಮಿಷಕ್ಕಿಂತ ಹೆಚ್ಚಿಗೆ ನಿಲ್ಲುತ್ತಿರಲಿಲ್ಲ. ಕುಳಿತಲ್ಲೇ ಪಕ್ಕದವನ ಜೊತೆ ಯಾವುದೋ ಬಾನ್ಗಡಿ ಆರಂಭಿಸುತ್ತಿದ್ದೆವು.
ಹೀಗೆ ಕೈಯಲ್ಲಿ ಯಾವುದೇ ಸಾಮಗ್ರಿಯಿಲ್ಲದೆ, ಸಭೆಯಲ್ಲಿ ಗಂಭೀರವಾಗಿ ಕುಳಿತಿರುವಾಗ ಬೇಜಾರು ಕಳೆಯಲಿಕ್ಕೆ ನಾವು ಮಾಡುತ್ತಿದ್ದ ಚಟುವಟಿಕೆಗಳದೇ ಒಂಥರಾ ಗಮ್ಮತ್ತು. ಎದುರೆಲ್ಲೋ ಕುಳಿತವನಿಗೆ ಸುಮ್ಮನೆ ಚಿವುಟುವುದು, ಕಾಗದ ಚಿಕ್ಕ ಉಂಡೆ ಕಟ್ಟಿ ಯಾರದೋ ಮೇಲೆ ಎಸೆಯುವುದು, ಎಂಥದೋ ಕಸವನ್ನು ತೆಗೆದು ಎದುರಿಗಿನವನ ಅಂಗಿಯೊಳಗೆ ಹಾಕುವುದು, ಕೈಯನ್ನು ಗಸಗಸನೆ ಉಜ್ಜಿದಾಗ ಬರುವ ಬೆಂಕಿಕಡ್ಡಿಯ ವಾಸನೆಯನ್ನು ಮೂಸುವುದು, ಎದುರಿಗೆ ಮೇಷ್ಟರುಗಳ ದಂಡೇ ಇದೆಯೆನ್ನುವುದನ್ನೂ ಮರೆತು ದೊಡ್ಡ ದನಿಯಲ್ಲಿ ಮಾತನಾಡತೊಡಗುವುದು... ಇಷ್ಟೇ ಅಲ್ಲ, ಇವೆಲ್ಲವನ್ನೂ ಮೀರಿದ ನಿಶ್ಯಬ್ದ ಕೀಟಲೆಗಳನ್ನು ಮಾಡುವ ಅಸಾಸುರನೊಬ್ಬ ನನ್ನ ಗೆಳೆಯರ ಗುಂಪಿನಲ್ಲಿದ್ದ. ಅವನ ದೇಹದ ಅದ್ಯಾವ ಕ್ರೋಮೋಜೋಮ್ ನಲ್ಲಿ ವ್ಯತ್ಯಾಸವಾಗಿತ್ತೋ ಗೊತ್ತಿಲ್ಲ, ಕುಳಿತಲ್ಲೇ ಮುಖವನ್ನು ಹೇಗ್ಹೇಗೋ ಮಾಡಿ, ಬಾಯೊಳಗೆ ನಾಲಿಗೆಯನ್ನು ಹೇಗ್ಹೇಗೋ ಆಡಿಸುತ್ತಿದ್ದ. ಥಟ್ಟನೆ ಅವನ ಕಣ್ಣಿನಿಂದ ನೀರು ಜಾರುತ್ತಿತ್ತು! ಹಾಗೆ ಸುರಿದ ನೀರನ್ನು ಸೆಲೋ ಗ್ರಿಪ್ಪರ್ ಪೆನ್ ನ ಕ್ಯಾಪ್ನಲ್ಲಿ ಶೇಖರಿಸುವುದೇ ನಮ್ಮ ಆಟವಾಗಿತ್ತು. ಬಾಯಲ್ಲಿ ಹೆಹೆಹೆ ಎಂದು ನಗುತ್ತಾ, ಕಣ್ಣಲ್ಲಿ ಧಾರಾಕಾರವಾಗಿ ನೀರು ಸುರಿಸುತ್ತಾ ವಿಚಿತ್ರವಾಗಿ ಕಾಣುತ್ತಿದ್ದ ಅವನಿಗೆ ತನ್ನ ಕಣ್ಣೀರಿನಿಂದ ಒಂದು ಕ್ಯಾಪ್ ಭರ್ತಿ ಮಾಡುವುದೇ ಗುರಿಯಾಗಿರುತ್ತಿತ್ತು‌. ಪಕ್ಕದಲ್ಲಿ ಕುಳಿತ ನಾವೆಲ್ಲ ಪಿಸುಮಾತುಗಳ ಮೂಲಕವೇ ಅವನಿಗೆ ಬಕಾಪ್ ಹೇಳಿ ಮತ್ತಷ್ಟು ಕಣ್ಣೀರು ಸುರಿಸಲಿಕ್ಕೆ ಪ್ರೋತ್ಸಾಹಿಸುತ್ತಿದ್ದೆವು. ಸಭೆಯಲ್ಲಿ ಕುಳಿತು ಇಂತಹಾ ಕಪಿಚೇಷ್ಟೆ ಮಾಡಿದ್ದಕ್ಕೆ ನಮಗೆಲ್ಲ ಮಾರನೇ ದಿನ ಪ್ರತ್ಯೇಕ ಬಹುಮಾನಗಳು ಕಾದಿರುತ್ತಿದ್ದವಾದರೂ ಅದೆಲ್ಲ ನಾಳೆಯ ವಿಷಯವಾದ್ದರಿಂದ ಯಾರೂ ಅದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅಧ್ಯಕ್ಷರ ಭಾಷಣ ಮುಗಿದು ವಂದನಾರ್ಪಣೆ ಆರಂಭವಾಗುತ್ತಿದ್ದಂತೆಯೇ ಎಲ್ಲರಲ್ಲೂ ಹೊಸ ಉತ್ಸಾಹವೊಂದು ಸಂಚಾರವಾಗುತ್ತಿತ್ತು. ಇಷ್ಟು ಹೊತ್ತು ಪ್ರತಿಯೊಂದು ಭಾಷಣ ಮುಗಿದಾಗ ಮೂಕಿ ಚಿತ್ರದ ನಟರಂತೆ ಕೈತಟ್ಟುವ ನಟನೆ ಮಾಡುತ್ತಿದ್ದವರೆಲ್ಲ ಈಗ ಆದ್ಯಕ್ಷರ ಭಾಷಣ ಹಾಗೂ ವಂದನಾರ್ಪಣೆಗಳಿಗೆ, ಯಾರು ಯಾರಿಗೆ ವಂದನೆಗಳನ್ನು ಸಲ್ಲಿಸಿದರು ಎಂಬುದನ್ನೂ ಕೇಳಿಸಿಕೊಳ್ಳದೆ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದೆವು. ಪಕ್ಕದಲ್ಲೇ ಪ್ಲಾಸ್ಟಿಕ್ ಕವರ್ ಗಳೊಳಗೆ ಕುಳಿತಿರುತ್ತಿದ್ದ ಚಾಕ್ಲೇಟುಗಳು ನಮ್ಮೀ ಚಪ್ಪಾಳೆಗಳಿಂದ ಉತ್ಸಾಹಗೊಂಡು ಮತ್ತಷ್ಟು ಉಲ್ಲಾಸದಿಂದ ನಮ್ಮ ಕೈ ಸೇರಲಿಕ್ಕೆ ತಯಾರಾಗುತ್ತಿದ್ದವು.
-ವಿನಾಯಕ ಅರಳಸುರಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...